Thursday, April 23, 2009

’ನೋ ಚೇಂಜ್ ಕಥೆಗಳು’ - ೧೪.. ಅಪ್ಪಟ ಸತ್ಯ - ಘೋಷಕರ ಪರಂಪರೆ

ಹೊಸಸಂಜೆ ಪತ್ರಿಕೆಗಾಗಿ ಮಂಗಳೂರಿನ ಪತ್ರಕರ್ತ ಶ್ರೀ ಪದ್ಯಾಣ ಗೋಪಾಲಕೃಷ್ಣ (ಪ.ಗೋ.) ಅವರು ಬರೆದ ೨೪ ಅಂಕಣಗಳ ಕಂಕಣ" ನೋ ಚೇಂಜ್ ಕಥೆಗಳು". ಈ ಬರಹಗಳನ್ನು ಅವರ ಸ್ಮಾರಕಾರ್ಥವಾಗಿ ’ಗಲ್ಫ್ ಕನ್ನಡಿಗ’ ಪ್ರತಿ ಗುರುವಾರ ಪ್ರಕಟಿಸಲಾಗುತ್ತಿದ್ದು ಇದು ಹದಿನಾಲ್ಕನೇ ಅಂಕಣ.

ಅಪ್ಪಟ ಸತ್ಯ - ಘೋಷಕರ ಪರಂಪರೆ
ನಮ್ಮ ಮನೆಯ ಬಳಿ ಸಣ್ಣದೊಂದು ಗುಡ್ಡವಿದೆ. ಆ ಗುಡ್ಡ ಒಂದಾನೊಂದು ಕಾಲದಲ್ಲಿ ಕಾಡಾಗಿತ್ತು ಎಂತಲೂ ಕೆಲವರು (ನನ್ನಿಂದಲೂ) ಹಳಬರು ಹೇಳುತ್ತಾರೆ. ಕಡಿದ ಮರಗಳ ಬೊಡ್ಡೆಗಳು ಕೆಲವು ಈಗಲೂ ಅಲ್ಲಿ ಕಾಣಿಸುತ್ತವೆ. ಆದ್ದರಿಂದ - ಈಗ ಬೋಳಾಗಿರುವ - ಆ ಗುಡ್ಡದಲ್ಲಿ ಹಿಂದೆ ಕಾಡು ಬೆಳೆದಿತ್ತು ಎಂತ ಒಪ್ಪಿಕೊಳ್ಳಬಹುದು.

ಸಂಜೆ ಸ್ವಲ್ಪ ಹೊತ್ತು ಆ ಗುಡ್ಡದಲ್ಲಿರುವ ಒಂದು ದೊಡ್ಡ ಬಂಡೆಯ ನೆರಳಿನಲ್ಲಿ ಕುಳಿತು, ಅಲ್ಲಿಂದ ಕಾಣಿಸುವ ಮಂಗಳೂರು ನಗರದ ನೋಟಗಳನ್ನು ನೋಡುವುದು, ನಾನು ಮತ್ತು ನೆರೆಮನೆಯ ಪಂಡಿತರು ಬೆಳೆಸಿಕೊಂಡ ಇತ್ತೀಚಿನ ಅಭ್ಯಾಸ.

ಒಂದು ಕಡೆಗೆ ದೃಷ್ಟಿ ಹಾಯಿಸುವುದು, ಹರಡಿರುವ ಹಸಿರಿನ ನಡುವೆ ಯಾವುದಾದರೂ ಒಂದು ದೊಡ್ಡ ಕಟ್ಟಡದ ತಲೆ ಕಂಡರೆ - ಆ ಸ್ಥಳ ಯಾವುದು ? ಕಟ್ಟಡ ಯಾವುದಿರಬಹುದು ? ಎಂದೆಲ್ಲಾ ಗುರುತಿಸಲು ಯತ್ನಿಸುವುದು - ಇಬ್ಬರೊಳಗೆ ಭಿನ್ನಾಭಿಪ್ರಾಯ ಬಂದರೆ - ಚರ್ಚೆಯನ್ನು ಮರುದಿನಕ್ಕೆ ಬಾಕಿಯಾಗಿಟ್ಟು ಮುಂದುವರಿಸುವುದು ನಮ್ಮ ವಾಡಿಕೆ.

ಕೆಲವೊಮ್ಮೆ -ದೂರದಲ್ಲಿ ಕಾಣುವ ರಾಷ್ಟೀಯ ಹೆದ್ದಾರಿ (ನ್ಯಾಷನಲ್ ಹೈವೇ)ಯ ಒಂದು ಭಾಗವನ್ನೇ ನೋಡುತ್ತಾ ಕುಳಿತು, ಆ ರಸ್ತೆಯ ಕಡೆಯಿಂದ ಕೇಳಿ ಬರುವ ಶಬ್ದಗಳನ್ನು ಗುರುತಿಸಲೂ ಹೊರಡುತ್ತೇವೆ. ಗುರುಗುಟ್ಟುವ ಲಾರಿ -ಬಸ್‍ಗಳ ಶಬ್ದವನ್ನಂತೂ ಸುಲಭವಾಗಿ ಗುರುತಿಸುತ್ತೇವೆ.

ಸದ್ದು ಗುರುತಿಸಲು ಸಾಧ್ಯವಾಗುತ್ತದೆ. ಆದರೆ ಸದ್ದು ಹೊರಡಿಸುವ ಮೂಲವನ್ನು ಕಾಣಲು ಸಾಧ್ಯವಾಗುವುದಿಲ್ಲ. (ಇಬ್ಬರಿಗೂ ಇರುವ ದೃಷ್ಟಿಮಾಂದ್ಯದಿಂದಾಗಿ ಆ ತೊಂದರೆ ಎಂದು ಒಪ್ಪಿಕೊಳ್ಳಲು ಇಬ್ಬರಿಗೂ ಮನಸ್ಸಿಲ್ಲ !) ಹಾಗಾಗಿ ಶಬ್ದವನ್ನು ಕಿವಿಯಿಂದ ಗುರುತಿಸುವ ಕೆಲಸಕ್ಕೇ ಹೆಚ್ಚಿನ ಒತ್ತು ಕೊಡುತ್ತೇವೆ. ಎಷ್ಟೋ ಬಾರಿ ಚಲಿಸುವ ವಾಹನಗಳಿಂದ ಕೇಳಿಬರುವ ಕ್ಯಾಸೆಟ್ ಸಂಗೀತವನ್ನೂ ಗುರುತಿಸಲು ನಮಗೆ ಸಾಧ್ಯವಾಗಿದೆ.

ನಾಲ್ಕು ದಿನಗಳ ಮೊದಲು ಒಂದು ಬಾರಿ “ಬನ್ನಿರಿ ! ನೋಡಿರಿ ! ಆನಂದಿಸಿರಿ ! ಈ ದಿನ ನೆಹರೂ ಮೈದಾನದಲ್ಲಿ ಏರ್ಪಡಿಸಿದ ಅಮೋಘ......” ಎಂಬ ಒಂದು (ಅರ್ಧ ?) ಮಾತು ‘ಮೈಕಿನಲ್ಲಿ’ ಹೆದ್ದಾರಿ ಕಡೆಯಿಂದ ಕೇಳಿಸಿತ್ತು. ಶಬ್ದ ಹೊರಡಿಸಿದ್ದ ಮೈಕ್ರೋಫೋನ್ ಕಟ್ಟಿದ ಕಾರ್ ಚಲಿಸಿ ಹೋದ ಕಾರಣ, ಘೋಷಣೆಯ ವಾಕ್ಯ ಸಂಪೂರ್ಣವಾಗಿ ಕೇಳಿಸಿರಲಿಲ್ಲ.

ಪಂಡಿತರೇ, ಮೊನ್ನೆ ಆ ರಸ್ತೆಯಿಂದ ಕೇಳಿ ಬಂದ ಘೋಷಣೆ ಏನಿದ್ದೀತು? ಎಂದು ನಾಲ್ಕು ದಿನ ಕಳೆದು ಪ್ರಶ್ನೆ ಹಾಕಿದ್ದೆ.

ಏನಿದ್ದೀತು ಸುಡುಗಾಡು ? ಯಾವುದೋ ಆಟ ಅಥವಾ ಎಕ್ಸಿಬಿಷನ್ ನ ಎಡ್ವಟೈಸ್‍ಮೆಂಟು ಇರಬೇಕು - ಎತ್ತರದಿಂದ ಹೇಳಿದರೆ ಎಲ್ಲರಿಗೂ ಕೇಳ್ತದೆ ಅಂತ ಹೇಳಿರಬೇಕು..... ಪಂಡಿತರು ತೋರಿಸಿದ ಅತೃಪ್ತಿ ಯಾಕೆಂದು ಅರ್ಥವಾಗಲಿಲ್ಲ. ಏನಾಯ್ತು ಪಂಡಿತರೆ ? ಯಾಕಿಷ್ಟು ನಿರಾಶೆ ? ಎಂದೆ.

ಮತ್ತಿನ್ನೇನು? ಕಾರ್ ಒಂದು ಕಡೆ ನಿಲ್ಲಿಸಿ ಹೇಳುವುದನ್ನೆಲ್ಲಾ ಹೇಳಿ ಮುಂದೆ ಹೋಗಬಾರದೆ ? ಸುಮ್ಮನೆ ಮೂಕರ ಎದುರಿಗೆ ಮೂಗು ತುರಿಸಿ ಹೋದ ಹಾಗೆ ಮಾಡಿದರೆ ಏನು ಪ್ರಯೋಜನ ? ಎಂದರು.

ಅವರು ಎಲ್ಲಾ ಕಡೆಯೂ ಹಾಗೆ ಮಾಡುವುದಿಲ್ಲ. ಹೆಚ್ಚಾಗಿ, ಕಾರ್ ಅಥವಾ ರಿಕ್ಷಾವನ್ನು ಒಂದು ಕಡೆ ನಿಲ್ಲಿಸಿ - ಹೊಡೆಸುವ ಬೊಬ್ಬೆಯನ್ನು ಸಂಪೂರ್ಣ ಹೊಡೆಸಿದ ನಂತರವೇ, ಮುಂದೆ ಹೋಗುತ್ತಾರೆ. ನಮ್ಮ ಕೃಷ್ಣಪ್ಪಣ್ಣ ಮಾಡುತ್ತಿದ್ದರಲ್ಲಾ,ಹಾಗೆ -ಎಂದ ಕೂಡಲೆ “ಯಾವ ಕೃಷ್ಣಪ್ಪಣ್ಣ ? ಆ ಎಡ್ವಟೈಸ್ ಕೃಷ್ಣಪ್ಪನ ಕಥೆಯೋ ನೀವು ಹೇಳುವುದು ?” ಪ್ರಶ್ನೆ ಸಿಡಿದುಬಂತು.

ಹೌದೌದು ಅವರನ್ನು ನೀವು ನೋಡಿದ್ದೀರಾ ? (ಇಲ್ಲ, ನೋಡಿಲ್ಲ - ಬೇರೆಯವರು ಹೇಳಿದ್ದನ್ನು ಕೇಳಿದ್ದು ಮಾತ್ರ.)

ಹಾಗಾದರೆ, ಅವರ ಕಥೆಯನ್ನೂ ಕೇಳಿ. ನೋಡಿ, ಸರಿ ಸುಮಾರು ೧೯೫೦ ರಲ್ಲಿ ಹಂಪನಕಟ್ಟೆ ,ಬಾವಟೆಗುಡ್ಡೆ ಇತ್ಯಾದಿ ಸ್ಥಳಗಳಲ್ಲಿ ಡಬ್ಬಿಯಿಂದ ಮಾಡಿದ ಒಂದು ‘ಸ್ಪೀಕರ್’ ಹಿಡಿದುಕೊಂಡು, “ಬನ್ನಿರಿ ನೋಡಿರಿ - ಆನಂದ ಪಡೆಯಿರಿ, ಎಲ್ಲಿ ಗೊತ್ತೆ? ಸೆಂಟ್ರಲ್ ಮೈದಾನಿನಲ್ಲಿ !” ಎಂದು ಆ ‘ಸ್ಪೀಕರ್’ ಒಳಗಿನಿಂದಲೇ ಬೊಬ್ಬೆ ಹೊಡೆದು ಹೇಳುತ್ತಾ ತಿರುಗುತ್ತಿದ್ದ ಕೃಷ್ಣಪ್ಪ ಎಂಬವರ ಜಾಹೀರಾತು ವೈಖರಿಯ ನೆನಪು ನನಗೆ ಚೆನ್ನಾಗಿ ಇದೆ.

ತಮ್ಮ ಅಂಗಡಿಯ ಜಾಹೀರಾತುಗಳನ್ನು ಪತ್ರಿಕೆಯಲ್ಲಿ ಪ್ರಕಟಿಸುವ ಅಭ್ಯಾಸ ಹೆಚ್ಚಿನ ಅಂಗಡಿಗಳವರಿಗೆ ಆಗ ಇರಲಿಲ್ಲ. ಅಂಥವರು ಕೂಡಾ ದಿನಗೂಲಿ ನಿರ್ಧರಿಸಿ, ತಮ್ಮ ಜಾಹೀರಾತನ್ನು ಕೃಷ್ಣಪ್ಪನವರ ಮೂಲಕವೇ ಮಾಡಿಸುತ್ತಾ ಇದ್ದರು.

ಕ್ರಮೇಣ ಜಾಹೀರಾತಿನ ಹೊಸ ಹೊಸ ವಿಧಾನಗಳು, ಸೌಕರ್ಯಗಳು ಬಳಕೆಗೆ ಬಂದವು. ಕೃಷ್ಣಪ್ಪನೂ ತೀರಿ ಹೋದರು. ಪತ್ರಿಕೆಗಳಿಗೆ ಜಾಹೀರಾತು ಕೊಡುವುದೂ ಅಭ್ಯಾಸವಾಯಿತು. ಟೇಪ್‍ರೆಕಾರ್ಡರಿಗೆ ಮೈಕ್ ಜೋಡಿಸಿ ವಾಹನಗಳಿಂದ ಜಾಹೀರಾತು ಗೀತೆಗಳ ಪ್ರಸಾರ, ವಾಹನದಲ್ಲೇ ಕುಳಿತು ಜಾಹೀರು ಘೋಷಣೆ ಇತ್ಯಾದಿಗಳೆಲ್ಲ ಬಂದುವು. ಈಗಲೂ ಬರುತ್ತಿವೆ....

ಅದೆಲ್ಲ,ಜಾಹೀರಾತು ಚರಿತ್ರೆ ಸರಿ. ನೀವು ಈ ವಿಷಯದ ಪ್ರಸ್ತಾಪ ಯಾಕೆ ಮಾಡಿದಿರಿ ?

ಮತ್ಯಾಕೂ ಇಲ್ಲ. ಜಾಹೀರು ಮಾಡುವ ಯಾರಲ್ಲೂ ಸತ್ಯ ಹೇಳುವ ಪ್ರವೃತ್ತಿ ಮಾತ್ರ ಇರುವುದಿಲ್ಲ ಅನ್ನುವ ಭಾವನೆ ಬೆಳೆಸಿಕೊಂಡಿದ್ದೆ. ಆ ಬಗ್ಗೆ ಕೃಷ್ಣಪ್ಪಣ್ಣನಲ್ಲೂ ಒಮ್ಮೆ ಪ್ರಶ್ನಿಸಿದ್ದೆ. “ಅದೇನು ಕೇಳ್ತೀರಿ ರಾಯರೆ ? ನಮ್ಮ ಕೂಲಿ ನಮಗೆ ಸಿಕ್ಕಿದ ಕೂಡಲೆ ನಾವು ಸತ್ಯಹರಿಶ್ಚಂದ್ರರೇ ಆಗುತ್ತೇವೆ, ಗೊತ್ತಲ್ಲ ?” ಎಂಬ ಉತ್ತರವೂ ಸಿಕ್ಕಿತು.

ನಾವು ನಡೆಸುವುದು ಮಾತ್ರವೇ ಅಮೋಘ ಪ್ರದರ್ಶನ ಎಂದು ಹೇಳುವುದಾಗಲಿ, ಈವತ್ತಿನದ್ದೇ ಕಡೇ ಆಟ ಎನ್ನುವುದಾಗಲಿ, ನಮ್ಮಲ್ಲಿಯ ಮಾಲು ಲೋಕದಲ್ಲೇ ಅತ್ಯುತ್ತಮ ಎಂದು ಸಾರುವುದಾಗಲಿ, ನಾವು ಏಳು ವರ್ಷಗಳ ಗ್ಯಾರಂಟಿ ಸೇವೆ ಕೊಡುತ್ತೇವೆ ಎಂಬ ಆಶ್ವಾಸನೆಯೇ ಆಗಲಿ -

ಜಾಹೀರಾಗಿ ಬರುವಾಗ, ಅದರಲ್ಲಿ ಸತ್ಯದ ಅಂಶ ಶೇಕಡಾ ಹದಿನೈದು -ಉಳಿದ ಎಂಬತ್ತೈದು ಉತ್ಪ್ರೇಕ್ಷೆ - ಎಂಬ ತೀರ್ಮಾನಕ್ಕೆ ನಾನು ನಲ್ವತ್ತೈದು ವರ್ಷಗಳ ಹಿಂದೆ ಬಂದಾಗ, ನನ್ನಿಂದಲೂ ಹಿಂದಿನವರು ಆ ಮಾತನ್ನು ಹೇಳುವುದನ್ನು ಕೇಳಿದ್ದೆ.

ಉತ್ಪ್ರೇಕ್ಷೆಯೇ ಇಲ್ಲದೆ ಮಾಡುವ ವ್ಯವಹಾರ ಯಾವುದೂ ಇಲ್ಲ ಎನ್ನುತ್ತೀರಾ ಹಾಗಾದರೆ ? ಎಂಬ ನಿರೀಕ್ಷಿತ ಪ್ರಶ್ನೆ ಪಂಡಿತರಿಂದ ಬಂದೇ ಬಂತು.

ಇರಬಹುದು ಪಂಡಿತರೇ, ಬೇಕಾದರೆ ‘ಇದೆ’ ಎಂದೇ ಹೇಳೋಣ. ಅಂಥಾ ಕ್ರಮ ಕೋರ್ಟು ಕಚೇರಿ ವ್ಯವಹಾರಕ್ಕೆ ಸಂಬಂಧಿಸಿದ ಅಥವಾ ಇತರ ಅಧಿಕೃತ ಮೂಲಗಳ ಪ್ರಕಟಣೆಗಳಿಗೆ ಮಾತ್ರ ಸೀಮಿತವಾಗಿ ಇರುತ್ತದೆ. ವಾಣಿಜ್ಯ ವ್ಯವಹಾರದ ಪ್ರಕಟಣೆಗಳಿಗೆ ಅನ್ವಯವಾಗುವುದಿಲ್ಲ.

ಅತಿರಂಜಿತ ಪ್ರಕಟಣೆಗಳು ಮಾತ್ರವೇ ಜನರನ್ನು ಆಕರ್ಷಿಸುತ್ತವೆ ಎಂದು ಧೃಢವಾಗಿ ನಂಬಿರುವ ಒಂದು ವರ್ಗ ಬಹಳ ಹಿಂದಿನಿಂದಲೂ ಇದೆ. ಹಾಗೆಯೇ ಅಂಥಾ ಪ್ರಕಟಣೆಗಳನ್ನು ಸಾರಾಸಗಟಾಗಿ ನಂಬಬಾರದು -ಜೊಳ್ಳಿನಿಂದ ಕಾಳು ಪ್ರತ್ಯೇಕಿಸಲೇಬೇಕು ಎಂದೂ ನಂಬಿರುವ ಇನ್ನೊಂದು ವರ್ಗವೂ ಇದೆ.

“ಅವರವರ ನಂಬಿಕೆಗಳಲ್ಲಿ ಯಾವುದೇ ಬದಲಾವಣೆ ಆಗಿಲ್ಲ - ಆಗುವುದೂ ಇಲ್ಲ”

ಆ ಮಾತು ಗುಡ್ಡದಿಂದ ಇಳಿದು ಬರುವಾಗ ಆಡಿದ್ದು.

ಪಂಡಿತರ ಪ್ರತಿಕ್ರಿಯೆ - ಇಳಿಯವಾಗ ಹಿಂತಿರುಗಿ ನೋಡಿದರೆ ಕಾಲು ಜಾರಿ ಬಿದ್ದೇನು ಭಯದಿಂದಾಗಿ, ನೋಡುವ ಧೈರ್ಯ ಬಾರದ ಕಾರಣ, ಕೂಡಲೇ ಗೊತ್ತಾಗಲಿಲ್ಲ.

ಅವರು ನನ್ನ ಮಾತನ್ನು ಒಪ್ಪಿದ್ದಿರಲೇಬೇಕು.

ನೀವೂ ! !
------
ಶ್ರೀ ಪದ್ಯಾಣ ಗೋಪಾಲಕೃಷ್ಣ ( ಪ.ಗೋ.)



ಶ್ರೀ ಪದ್ಯಾಣ ಗೋಪಾಲಕೃಷ್ಣ ( ಪ.ಗೋ. ೧೯೨೮ - ೧೯೯೭ ) - ಹುಟ್ಟೂರು ಗಡಿಯಂಚಿ ನಲ್ಲಿರುವ ಅಡ್ಯನಡ್ಕ. ೧೯೫೬ ರಿಂದ ೧೯೯೭ನೇ ಇಸವಿಯವರೆಗೆ ನಾಲ್ಕು ದಶಕಗಳಷ್ಟು ಧೀರ್ಘ ಕಾಲಾವಧಿಯಲ್ಲಿ ಹಲವು ಕನ್ನಡ ಪತ್ರಿಕೆಗಳ ಉಪಸಂಪಾದಕ, ವರದಿಗಾರರಾ ಗಿದ್ದ ಪ.ಗೋ.ರವರು ೧೯೬೩ರಿಂದ ಸುಮಾರು ಎರಡು ವರ್ಷಗಳ ಕಾಲ ಮಂಗಳೂರಿನಿಂದ ತಮ್ಮ ಸ್ವಂತ ಕನ್ನಡ ದಿನ ಪತ್ರಿಕೆ "ವಾರ್ತಾಲೋಕ"ದ ವರದಿಗಾರ, ಮುದ್ರಕ ಮತ್ತು ಪ್ರಕಾಶಕರಾಗಿ ನಡೆಸಿ ಪತ್ರಿಕೋದ್ಯಮದ ಎಲ್ಲಾ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದವರು. ಜೊತೆಗೆ ೧೩ ಪತ್ರಿಕೆಗಳಿಗೆ ಆಗಾಗ "ಕಾಲಂಕಾರ"ರಾಗಿ ಸುಮಾರು ನಾಲ್ಕು ಸಾವಿರ ಪುಟಗಳಿಗೂ ಮಿಕ್ಕಿದ ಕಾಲಂ ಸಾಹಿತ್ಯ ಪ್ರಸ್ತುತ ಪಡಿಸಿದ ಪ. ಗೋ. ಅವರಿಗೆ ಇದ್ದುದನ್ನು ಸರಳವಾಗಿ ಹೇಳುವ ರೂಢಿಯೇ ಇಲ್ಲ. ಅವರದೆಲ್ಲವೂ ವ್ಯಂಗ್ಯ ದಿಂದಲೇ ಪ್ರಾರಂಭ, ವ್ಯಂಗ್ಯದಿಂದಲೇ ಕೊನೆ! ಅವರು ಕೊಡುವ ಉದಾಹರಣೆಗಳು ಹಳೆಯ ನೀತಿ ಪದ್ಯಗಳನ್ನು ತಿರುಚಿಕೊಂಡು ಹುಟ್ಟಿಸುವ ವ್ಯಂಗ್ಯ ಮಾರ್ಮಿಕವಾದುದು.

ಪ. ಗೋಪಾಲಕೃಷ್ಣ ಸ್ಮಾರಕ ಸೇವಾ ಟ್ರಸ್ಟಿನ ವತಿಯಿಂದ ೨೦೦೨ನೆ ಇಸವಿಯಲ್ಲಿ ಮಂಗಳೂರಿನಿಂದ ಪ್ರಕಟಣೆಗೊಂಡ ಲೇಖನ ಮಾಲಿಕೆ "ನೋ ಚೇಂಜ್ ಕಥೆಗಳು". ಈ ೨೪ ಅಂಕಣಗಳ ಕಂಕಣವನ್ನು ಮರು ಪ್ರಕಟಿಸಲು ಅನುಮತಿಯನ್ನು ಇತ್ತ ಟ್ರಸ್ಟಿನ ಅಧ್ಯಕ್ಷರಾದ, ಪ.ಗೋ ರವರ ಸಹೋದ್ಯೋಗಿ, ಮಂಗಳೂರಿನ ಹಿರಿಯ ಪತ್ರಕರ್ತ ಶ್ರೀ. ಯು.ನರಸಿಂಹ ರಾವ್ ಮತ್ತು ಹುಟ್ಟೂರಿನ ಆಪ್ತ ಮಿತ್ರ, ಟ್ರಸ್ಟಿನ ಸ್ಥಾಪಕರಾದ ಬೆಂಗಳೂರಿನ ವೈದ್ಯ, ಲೇಖಕ ಡಾ. ಎಂ. ಬಿ. ಮರಕಿಣಿಯವರಿಗೆ ವಂದನೆಗಳು.
----------
ಶೀರ್ಷಿಕೆಯ ೧೯೯೦ರ ದಶಕದ ಛಾಯಾಚಿತ್ರ:

ದಿನಾಂಕ ೨೩ ಡಿಸೆಂಬರ್ ೧೯೯೩ ರಂದು ದಕ್ಷಿಣ ಕನ್ನಡ ಟೆಲಿಕಾಂ ಜಿಲ್ಲೆ ವಿಭಾಗದ ಮಂಗಳೂರಿನಲ್ಲಿ ಆಯೋಜಿಸಿದ ಪತ್ರಿಕಾ ಗೋಷ್ಠಿಯಲ್ಲಿ ಬಾಗವಹಿಸಿದ ಮಾಧ್ಯಮ ಪ್ರತಿನಿಧಿಗಳೊಂದಿಗೆ ಶ್ರೀ. ಪ. ಗೋಪಾಲಕೃಷ್ಣ. ಅಂದಿನ ಹಿರಿಯ ಪತ್ರಕರ್ತ ಶ್ರೀ. ಪ.ಗೋ ಅವರ ಸಮೀಪದಲ್ಲಿ ಕುಳಿತಿರುವ, ಅವರ ಶೈಲಿಯನ್ನು ಅನುಕರಿಸುತ್ತಿರುವವರು ಶ್ರೀ. ಚಿದಂಬರ ಬೈಕಂಪಾಡಿ
-----
ಕೃಪೆ: ಗಲ್ಫ್ ಕನ್ನಡಿಗ

No comments:

Visitors to this page