Friday, April 10, 2009

’ನೋ ಚೇಂಜ್ ಕಥೆಗಳು’ - ೧೨..ಪ್ರಯೋಗಪಶು ಪರಂಪರೆ














ಹೊಸಸಂಜೆ ಪತ್ರಿಕೆಗಾಗಿ ಮಂಗಳೂರಿನ ಪತ್ರಕರ್ತ ಶ್ರೀ ಪದ್ಯಾಣ ಗೋಪಾಲಕೃಷ್ಣ (ಪ.ಗೋ.) ಅವರು ಬರೆದ ೨೪ ಅಂಕಣಗಳ ಕಂಕಣ" ನೋ ಚೇಂಜ್ ಕಥೆಗಳು". ಈ ಬರಹಗಳನ್ನು ಅವರ ಸ್ಮಾರಕಾರ್ಥವಾಗಿ ’ಗಲ್ಫ್ ಕನ್ನಡಿಗ’ ಪ್ರತಿ ಗುರುವಾರ ಪ್ರಕಟಿಸಲಾಗುತ್ತಿದ್ದು ಇದು ಹನ್ನೆರಡನೇ ಅಂಕಣ.

ಪ್ರಯೋಗಪಶು ಪರಂಪರೆ


ನೆರೆಮನೆ ಪಂಡಿತರು, ಯಾರ ಸುದ್ದಿಗೂ ಹೋಗದೆ ತನ್ನಷ್ಟಕ್ಕೆ ತಾನಿರಲು ತೊಡಗಿ, ಹಲವಾರು ದಿನಗಳು ಕಳೆದಿದ್ದವು.

ಹಾಗೆಂದು ನಾನು ಸುಮ್ಮನಿರಲಾಗುತ್ತದೆಯೆ ? ಲೋಕದ ಡೊಂಕು ತಿದ್ದುವ ಮಹತ್ಕಾರ್ಯ - ಮಾಡಲು ಬೇರೇನೂ ಕೆಲಸವಿಲ್ಲದ ನಿವೃತ್ತ ಮುದುಕರ ಹೊರತು - ಬೇರೆ ಯಾರಿಂದ ಸಾಧ್ಯ ?

ಪಂಡಿತರಲ್ಲಿಗೇ ಹೋದೆ. ಯಾವುದೊ ಪುಸ್ತಕ ಓದುತ್ತಿದ್ದ ಅವರನ್ನು ಮಾತಿಗೆ ಎಳೆದೆ. (ಪ್ರಾಥಮಿಕ ಶಿಕ್ಷಣವಂತೂ ಅವರ ಪ್ರೀತಿಯ ವಿಷಯವೆಂದು ಗೊತ್ತೇ ಇತ್ತು.)

ಪಂಡಿತ್‍ಜಿ! ನಿಮ್ಮ ವಿದ್ಯಾಭ್ಯಾಸ ಶುರುವಾದ್ದೆಲ್ಲಿ - ಐಗಳ ಮಠದಲ್ಲೋ ? ಎಂಬ (ಅವರ ಮಟ್ಟಿಗೆ) ಅನಿರೀಕ್ಷಿತ ಪ್ರಶ್ನೆಯಿಂದ ಮಾತು ತೊಡಗಿದೆ.

‘ಛೆ -ಛೆ, ಇಲ್ಲಪ್ಪ ! ನಮ್ಮ ಕಾಲಕ್ಕೆ ಐಗಳ ಮಠ ಅಳಿದೇ ಹೋಗಿತ್ತು. ನಾವೆಲ್ಲ ಹಳ್ಳಿ ಶಾಲೆಗಳಲ್ಲಿ ವಿದ್ಯೆ ಕಲಿತವರು - ಗುರುಭಕ್ತಿಯನ್ನೂ ಬೆಳೆಸಿಕೊಂಡವರು’

‘ಅಂದರೆ, ಹೊಯಿಗೆಯಲ್ಲೊ ಅಕ್ಕಿಯಲ್ಲೊ ಸರಸ್ವತಿ ಪೂಜೆಯ ದಿನ ಬೆರಳು ಆಡಿಸಿ ಆರಂಭಿಸಿದ್ದ ‘ಅರ -ಆಡು’ ಕಾಲದವರು ಎನ್ನಿ’
ಹೌದೌದು, ನೀವೂ ಅದೇ ಕಾಲದವರಲ್ವಾ ?

ಪೂರ್ತಿಯಾಗಿ ಅಲ್ಲ. ಐದಾರು ವರ್ಷ ನಂತರದವನು. ಆದರೆ ಈಗಿನ ಪ್ರಶ್ನೆ ಅದಲ್ಲ. ಮಕ್ಕಳಿಗೆ ವಿದ್ಯೆ ಹೇಳಿಕೊಡುವ ವಿಧಾನ ರೂಪಿಸಿದವರು ಯಾರು ?

“ನಮ್ಮನ್ನು ಆಳುತ್ತಿದ್ದ ಬ್ರಿಟಿಷರೇ. ಮತ್ಯಾರು ?”

“ನಿಜ. ಬ್ರಿಟಿಷರು ತಮಗೆ ಬೇಕಾದ ಅಗ್ಗದ ಆಳುಗಳನ್ನು ತಯಾರಿಸಿಕೊಳ್ಳಲಿಕ್ಕೆ ಆ ವಿಧಾನವನ್ನು ನಮ್ಮ ಮೇಲೆ ಹೇರಿದರು.ಒಪ್ಪಿದೆ. ಆದರಿಂದ ಒಳ್ಳೆಯದಾದರೂ ಕೆಟ್ಟದಾದರೂ ಅದನ್ನು ಆಳುವವರ ಗಮನಕ್ಕೆ ತರುವವರು ಯಾರು ಇರಲಿಲ್ಲ ಎನ್ನುವುದೂ ಒಪ್ಪಬೇಕಾದ ಮಾತು.”

“ಆದರೆ ಸ್ವಾತಂತ್ರ್ಯ ಬಂದ ಮೇಲೆ ಬ್ರಿಟಿಷ್ ವಿಧಾನ ಸರಿಯಾದ್ದಲ್ಲ ಎಂಬ ತಿಳುವಳಿಕೆ ಮೂಡಿತ್ತಲ್ಲ -? ಆದರಿಂದ ಏನಾದರೂ ಪ್ರಯೋಜನವಾಯಿತೇ ?”

“ಆಗಲಿಲ್ಲ ಎನ್ನುತ್ತೀರಾ ?” ಪಂಡಿತರ ಧ್ವನಿ ಏರತೊಡಗಿತು. ದಾರಿಗೆ ಬರುತ್ತಿದ್ದಾರೆ ಎಂದುಕೊಂಡು, ಕೆಣಕು ಮಾತು ಮುಂದುವರಿಸಿದೆ.

.... ಹಿಂದಿನದು ಸರಿಯಲ್ಲ. ಅದನ್ನು ಬದಲಾಯಿಸಲೇಬೇಕು ಎಂದವರು ನಮ್ಮನ್ನು ಆಳುವ ವರ್ಗಕ್ಕೆ ಏರಿದ್ದವರು. ಅವರ ಅಪ್ಪಣೆ ಪಾಲಿಸಲು ಹೊರಟ ಅಧಿಕಾರಿಗಳು ಹಿಂದಿನ ಪೀಳಿಗೆಯವರು. ಆಳುವವರು ಹೇಳಿದ್ದ ಪ್ರಯೋಗವನ್ನು ಅನುಷ್ಠಾನಗೊಳಿಸಬೇಕೆಂಬ ಆಜ್ಞೆಯನ್ನು ರಾಜ್ಯಗಳಿಗೆ ಕಳುಹಿಸಿದ್ದರಿಂದ ಅಮಾಯಕ ಹಸುಳೆಗಳನ್ನು ಪ್ರಯೋಗಪಶುಗಳಾಗಿ ಮಾಡುವ ಪರಂಪರೆಗೆ ನಾಂದಿಯಾಯಿತು.

“ಹೂಂ. ಮುಂದುವರಿಯಲಿ ನಿಮ್ಮ ಕಥೆ - ನನಗೂ ವಿಷಯ ನೆನಪಾಗ್ತದೊ ನೋಡುವ”

ಮಕ್ಕಳು ಮಧ್ಯಾಹ್ನವೇ ಮನೆಗೆ ಹೋಗಬೇಕಾದರೆ ಬೆಳಗ್ಗೆ ಎಂಟು ಗಂಟೆಗೆ ಶಾಲೆಗೆ ಬರಬೇಕು - ಮಧ್ಯಾಹ್ನದ ನಂತರ ಬೇಸಾಯವೊ ಅಥವಾ ಇನ್ನೊಂದು ಕಸುಬೊ ಕಲಿತು ಹೆತ್ತವರಿಗೆ ಸಹಾಯ ಮಾಡಬೇಕು ಎನ್ನುವ ಪ್ರಯೋಗ, ಚಕ್ರವರ್ತಿ ರಾಜಗೋಪಾಲಾಚಾರಿಯವರು ಸ್ವಲ್ಪ ಸಮಯ ಮುಖ್ಯಮಂತ್ರಿಯಾಗಿದ್ದಾಗ ನಡೆದಿತ್ತು ಎನ್ನುವುದನ್ನು ಮೊದಲು ನೆನಪು ಮಾಡಿಕೊಳ್ಳಿ. ಆ ನಂತರ ಆಗುತ್ತಾ ಬಂದ ಪ್ರಯೋಗಗಳು ನೆನಪು ಆಗುವುದಾದರೆ ಮತ್ತೆ ಹೇಳಿ.

“ಹಾಂ ! ನೆನಪಾಯಿತು. ಆ ನಂತರದ್ದು ಒಂದನೆ ಕ್ಲಾಸಿನಿಂದ ಎಂಟರವರೆಗೂ ಇದ್ದ ಪಠ್ಯಪುಸ್ತಕಗಳ ಬದಲಾವಣೆ ಅಲ್ವೊ ?”

ಹೌದು, ಒಂದನೆ ತರಗತಿಯ ಅಕ್ಷರ ಕಲಿಸುವ ಪುಸ್ತಕದಲ್ಲಿ ‘ಅರ’ -‘ಆಡು’ ಗಳು ಚಿತ್ರಗಳ ಸಮೇತ ಬರುತ್ತಿದ್ದುವು. ಇತರ ಎಲ್ಲಾ ಪಾಠಗಳ ಬೋಧನೆಯ ಕ್ರಮದಲ್ಲೂ ವ್ಯತ್ಯಾಸ ಮಾಡಲಾಗಿತ್ತು.

ಪ್ರಯೋಗಗಳನ್ನು ಪದೇಪದೇ ಬದಲಾಯಿಸುವ ‘ರೋಗ’ ತಗಲಲು ಹೆಚ್ಚು ಸಮಯ ಕಾಯಬೇಕಾಗಿರಲಿಲ್ಲ. ಯಾರ ತೀಟೆ ತೀರಿಸಲಿಕ್ಕೊ ಏನೋ ? ವಿಧಾನಗಳು ಬದಲಾಗತೊಡಗಿದವು.

ಅಕ್ಷರ ಮಾಲೆಯಲ್ಲಿ ಆಟ -ಊಟ -ಓಟಗಳಿಗೆ ಪ್ರೋತ್ಸಾಹ ದೊರೆಯಿತು. ಅದೇ ಮತ್ತೆ ಕಮಲ -ಬಸವರ ಕಡೆಗೆ ವಾಲಿತು.
ಈಗ ಏನಿದೆಯಪ್ಪಾ ಎಂದು ಯಾರಾದರೊಬ್ಬ ಪಟ್ಟಣಿಗ (ಎಳೆಯ ) ಹುಡುಗನನ್ನು ವಿಚಾರಿಸಿದರೆ ಅವನ ಬೆನ್ನಿನ ಕತ್ತೆಮೂಟೆಯನ್ನು ಸರಿಮಾಡಿಕೊಳ್ಳುತ್ತಾನೆ. “ಅದೇನೊ ಎಲ್ಕೇಜಿಯಲ್ಲಿ ಹೇಳ್ತಾ ಇದ್ರು,ಈಗ ಮರ್ತು ಹೋಗಿದೆ” ಎನ್ನುವ ಉತ್ತರ ಕೊಟ್ಟರೂ ಆಶ್ಚರ್ಯವಿಲ್ಲ.

“ಅದರ ಎಡೆಯಲ್ಲಿ, ಐವತ್ತು ವರ್ಷ ಹಳೆಯ ಪಾಠಮಾಲೆಯನ್ನೇ ಹೊಸ ಹೆಸರು ಹಾಕಿ ಹುಡುಗರ ಮೇಲೆ ಪ್ರಯೋಗ ಮಾಡಿದ್ದನ್ನು ನೆನಪು ಮಾಡಿ”

ಅಷ್ಟೇ ಅಲ್ಲ ಪಂಡಿತರೇ. ಆದರಿಂದ ಹೆಚ್ಚಿನ ಪ್ರಯೋಜನಗಳೂ ಆಗಿವೆ -ಆಗುತ್ತಾ ಇವೆ.

ಪ್ರಯೋಗಗಳಿಂದ ಆಗಬಹುದಾದ ದೀರ್ಘಕಾಲದ ಪರಿಣಾಮಗಳನ್ನು ತಿಳಿದುಕೊಳ್ಳುವ ಯಾವ ವ್ಯವಸ್ಥೆಯೂ ನಮ್ಮಲ್ಲಿ ಇಲ್ಲವಾಗಿದೆ. ಮೂಲಭೂತ ಬದಲಾವಣೆಯೇ ಬೇಡವಾದಂಥ ಧೋರಣೆ ರೂಪಿಸುವ ಗಟ್ಟಿ ‘ಬೆನ್ನೆಲುಬೂ’ ಕಾಣೆಯಾಗಿದೆ.

“ಹಾಗಾದರೆ ನಮ್ಮ ಎಳೆ ಮಕ್ಕಳೆಲ್ಲ ಪ್ರಯೋಗಪಶುಗಳಾಗಿಯೇ ಬದುಕಬೇಕೆ ? ಬೇರೆ ಯಾವ ದಾರಿಯೂ ಇಲ್ಲವೆ ?”

ಸದ್ಯಕ್ಕಂತೂ ಕಾಣಿಸುತ್ತಿಲ್ಲ, ಮುಂದಿನ ಚುನಾವಣೆಯ ಹೊತ್ತಿಗಾದರೂ ಕಾಣಿಸುವ ಸಾಧ್ಯತೆ ? ಅದೂ ಇದ್ದಂತಿಲ್ಲ. (ಕೊನೆಯ ವಾಕ್ಯ ನನ್ನದು.)



ಶ್ರೀ ಪದ್ಯಾಣ ಗೋಪಾಲಕೃಷ್ಣ ( ಪ.ಗೋ.)

ಶ್ರೀ ಪದ್ಯಾಣ ಗೋಪಾಲಕೃಷ್ಣ ( ಪ.ಗೋ. ೧೯೨೮ - ೧೯೯೭ ) - ಹುಟ್ಟೂರು ಗಡಿಯಂಚಿ ನಲ್ಲಿರುವ ಅಡ್ಯನಡ್ಕ. ೧೯೫೬ ರಿಂದ ೧೯೯೭ನೇ ಇಸವಿಯವರೆಗೆ ನಾಲ್ಕು ದಶಕಗಳಷ್ಟು ಧೀರ್ಘ ಕಾಲಾವಧಿಯಲ್ಲಿ ಹಲವು ಕನ್ನಡ ಪತ್ರಿಕೆಗಳ ಉಪಸಂಪಾದಕ, ವರದಿಗಾರರಾ ಗಿದ್ದ ಪ.ಗೋ.ರವರು ೧೯೬೩ರಿಂದ ಸುಮಾರು ಎರಡು ವರ್ಷಗಳ ಕಾಲ ಮಂಗಳೂರಿನಿಂದ ತಮ್ಮ ಸ್ವಂತ ಕನ್ನಡ ದಿನ ಪತ್ರಿಕೆ "ವಾರ್ತಾಲೋಕ"ದ ವರದಿಗಾರ, ಮುದ್ರಕ ಮತ್ತು ಪ್ರಕಾಶಕರಾಗಿ ನಡೆಸಿ ಪತ್ರಿಕೋದ್ಯಮದ ಎಲ್ಲಾ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದವರು. ಜೊತೆಗೆ ೧೩ ಪತ್ರಿಕೆಗಳಿಗೆ ಆಗಾಗ "ಕಾಲಂಕಾರ"ರಾಗಿ ಸುಮಾರು ನಾಲ್ಕು ಸಾವಿರ ಪುಟಗಳಿಗೂ ಮಿಕ್ಕಿದ ಕಾಲಂ ಸಾಹಿತ್ಯ ಪ್ರಸ್ತುತ ಪಡಿಸಿದ ಪ. ಗೋ. ಅವರಿಗೆ ಇದ್ದುದನ್ನು ಸರಳವಾಗಿ ಹೇಳುವ ರೂಢಿಯೇ ಇಲ್ಲ. ಅವರದೆಲ್ಲವೂ ವ್ಯಂಗ್ಯ ದಿಂದಲೇ ಪ್ರಾರಂಭ, ವ್ಯಂಗ್ಯದಿಂದಲೇ ಕೊನೆ! ಅವರು ಕೊಡುವ ಉದಾಹರಣೆಗಳು ಹಳೆಯ ನೀತಿ ಪದ್ಯಗಳನ್ನು ತಿರುಚಿಕೊಂಡು ಹುಟ್ಟಿಸುವ ವ್ಯಂಗ್ಯ ಮಾರ್ಮಿಕವಾದುದು.

ಪ. ಗೋಪಾಲಕೃಷ್ಣ ಸ್ಮಾರಕ ಸೇವಾ ಟ್ರಸ್ಟಿನ ವತಿಯಿಂದ ೨೦೦೨ನೆ ಇಸವಿಯಲ್ಲಿ ಮಂಗಳೂರಿನಿಂದ ಪ್ರಕಟಣೆಗೊಂಡ ಲೇಖನ ಮಾಲಿಕೆ "ನೋ ಚೇಂಜ್ ಕಥೆಗಳು". ಈ ೨೪ ಅಂಕಣಗಳ ಕಂಕಣವನ್ನು ಮರು ಪ್ರಕಟಿಸಲು ಅನುಮತಿಯನ್ನು ಇತ್ತ ಟ್ರಸ್ಟಿನ ಅಧ್ಯಕ್ಷರಾದ, ಪ.ಗೋ ರವರ ಸಹೋದ್ಯೋಗಿ, ಮಂಗಳೂರಿನ ಹಿರಿಯ ಪತ್ರಕರ್ತ ಶ್ರೀ. ಯು.ನರಸಿಂಹ ರಾವ್ ಮತ್ತು ಹುಟ್ಟೂರಿನ ಆಪ್ತ ಮಿತ್ರ, ಟ್ರಸ್ಟಿನ ಸ್ಥಾಪಕರಾದ ಬೆಂಗಳೂರಿನ ವೈದ್ಯ, ಲೇಖಕ ಡಾ. ಎಂ. ಬಿ. ಮರಕಿಣಿಯವರಿಗೆ ನಮ್ಮ ವಂದನೆಗಳು.
----

ಶೀರ್ಷಿಕೆಯ ೧೯೮೦ರ ದಶಕದ ಛಾಯಾಚಿತ್ರ:

ಕರ್ನಾಟಕ ಕಲಾ ಕೇಂದ್ರ ಮಂಗಳೂರು ಮತ್ತು ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘ ಜಂಟಿಯಾಗಿ ಆಯೋಜಿಸಿದ ಪತ್ರಿಕೋದ್ಯಮ ತರಬೇತಿ ಶಿಬಿರದ ಉದ್ಘಾಟನ ಕಾರ್ಯಕ್ರಮದಲ್ಲಿ ದೀಪ ಬೆಳಗಿಸಿದ ಉದಯವಾಣಿ ಹಿರಿಯ ವರದಿಗಾರರಾದ ಶ್ರೀ. ಎ. ವಿ. ಮಯ್ಯರ ಜೊತೆ ಸಮಾರಂಭದಲ್ಲಿ ಪಾಲ್ಗೊಂಡ ಮುಖ್ಯ ಅತಿಥಿ ಖ್ಯಾತ ಕೊಂಕಣಿ ಕವಿ, ಸಾಹಿತಿ ,ಸಂಗೀತಕಾರ ಶ್ರೀ ಎರಿಕ್ ಓಸಾರಿಯೋ , ಕರ್ನಾಟಕ ಕಲಾ ಕೇಂದ್ರದ ಸಂಚಾಲಕ ಶ್ರೀ. ಹೆನ್ರಿ ಡಿ'ಸೋಜ ಹಾಗೂ ಉದಯವಾಣಿ ವರದಿಗಾರ ಶ್ರೀ. ಎಂ. ಮನೋಹರ ಪ್ರಸಾದ್ ಅವರೊಂದಿಗೆ ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀ ಪ.ಗೋಪಾಲಕೃಷ್ಣ.

-----
ಕೃಪೆ: ಗಲ್ಫ್ ಕನ್ನಡಿಗ

ಲಿಂಕ್: http://www.gulfkannadiga.com/news-4773.html

No comments:

Visitors to this page