Thursday, July 2, 2009

’ನೋ ಚೇಂಜ್ ಕಥೆಗಳು’- ೨೪... ನೋವಾದರೆ ಬೇರೆಯವರಿಗೆ ಹೇಳಿ !
















ಹೊಸಸಂಜೆ ಪತ್ರಿಕೆಗಾಗಿ ಹೆಸರಾಂತ ಪತ್ರಕರ್ತ ಶ್ರೀ ಪದ್ಯಾಣ ಗೋಪಾಲಕೃಷ್ಣ (ಪ.ಗೋ.) ಅವರು ಬರೆದ ೨೪ ಅಂಕಣಗಳ ಕಂಕಣ" ನೋ ಚೇಂಜ್ ಕಥೆಗಳು". ಈ ಬರಹಗಳನ್ನು ಅವರ ಸ್ಮಾರಕಾರ್ಥವಾಗಿ ’ಗಲ್ಫ್ ಕನ್ನಡಿಗ’ ಪ್ರತಿ ಗುರುವಾರ ಪ್ರಕಟಿಸಲಾಗುತ್ತಿದ್ದು ಇದು ಇಪ್ಪತ್ನಾಲ್ಕನೇ ಅಂಕಣ ಹಾಗೂ ಈ ಲೇಖನ ಮಾಲಿಕೆಯ ಕೊನೆಯ ಅಂಕಣ.


ನೋವಾದರೆ ಬೇರೆಯವರಿಗೆ ಹೇಳಿ !

ಕಳೆದ ಶನಿವಾರ. ಬಿಡುವಾಗಿದ್ದೆ. ಬೆಳಗಿನ ಹೊತ್ತೇ ತ್ರಿಪಾಠಿಯವರು ಬಂದು ಹರಟೆ ಹೊಡೆಯಲು ತೊಡಗಿದ್ದು, ಬಿಡುವಿಗೆ ಹೆಚ್ಚಿನ ಗೆಲುವು ಒದಗಿಸಿತ್ತು.

ನಮ್ಮ ಹರಟೆಗೆ ವಿಷಯ ಹುಡುಕುವ ಪ್ರಮೇಯ ಯಾವಾಗಲೂ ಇರುವುದಿಲ್ಲ. ವಿಷಯ ಯಾವುದೂ ಆಗುತ್ತದೆ. ಮಾತು ಆಡುತ್ತಾ ಆಡುತ್ತಾ, ವಿಷಯಕ್ಕೆ ಕಾವೇರಿದಾಗ ನಮ್ಮ ಇಬ್ಬರ ಧ್ವನಿಗಳೂ ಏರುತ್ತವೆ. ಆಗ ಒಂದೋ ನಮ್ಮ ಗೃಹಮಂತ್ರಿಯವರು, ಅಲ್ಲವಾದರೆ ಶ್ರೀಮತಿ ತ್ರಿಪಾಠಿಯವರು ನಾವಿದ್ದಲ್ಲಿಗೆ ಬರುತ್ತಾರೆ. “ಏನು ನಿಮ್ಮ ಗಲಾಟೆ ? ಆಚೆ ಮನೆ ಮಕ್ಕಳ ಓದಿಗೆ ತೊಂದರೆಯಾಗ್ತಾ ಇದೆ” ಅಂತ ದಬಾಯಿಸ್ತಾರೆ. (ಇಬ್ಬರ ದಬಾವಣೆಯೂ ಒಂದೇ ರೀತಿ ಇರುವುದೊಂದು ಆಶ್ಚರ್ಯ !)

ಆ ಕೂಡಲೆ ನಾವು ನಮ್ಮ ನಮ್ಮ ಬೊಬ್ಬೆ ಕಡಿಮೆ ಮಾಡುತ್ತೇವೆ. ಅವರೂ ಸುಮ್ಮನಾಗುತ್ತಾರೆ. ತಮ್ಮ ಕೆಲಸದ ಮೇಲೆ ಹೊರಟು ಹೋಗುತ್ತಾರೆ. ಪುನಃ ಸ್ವಲ್ಪ ಹೊತ್ತಿನಲ್ಲೇ, ನಮ್ಮ ಚರ್ಚೆ ಪಿಸುಮಾತಿನಲ್ಲಿ ಆರಂಭವಾಗಿ ಕ್ರಮೇಣ ಕಾವೇರುತ್ತದೆ. ಗೃಹಮಂತ್ರಿಣಿಯವರ ಪೈಕಿ ಯಾರಾದರೂ ಒಬ್ಬರು ಮತ್ತೆ ಬಂದು ಜೋರು ಮಾಡುವುದೂ ನಡೆಯುತ್ತದೆ. ಎಲ್ಲರಿಗೂ ಹಸಿವಾಗುವವರೆಗೂ. ಕಳೆದ ಶನಿವಾರವೂ ಹಾಗೇ ಆಗಬೇಕಿತ್ತು. ಆಗಲಿಲ್ಲ.

ಶ್ರೀಮತಿ ತ್ರಿಪಾಠಿಯವರು “ಏನು ನಿಮ್ಮ-” ಎನ್ನುವಾಗಲೇ - ಶ್ರೀ ತ್ರಿಪಾಠಿ “ನೋಡಿ, ನೋಡಿ, ಸುಮ್ಮನೆ ಜೋರು ಮಾಡುತ್ತಾ ಇದ್ದಾಳೆ -ಒಳ್ಳೆ ಗ್ಯಾಸ್ ಅಂಡೆ ಅಂಗಡಿಯವರ ಹಾಗೆ” ಎಂದೇ ಬಿಟ್ಟರು. “ಇವಳಿಗೆ ಈಚೆಗೆ ಬಂದ ಹೊಸ ಅಭ್ಯಾಸ ಇದು” ಎಂದೂ ಸೇರಿಸಿದರು.

ಕೂಡಲೆ ಶ್ರೀಮತಿಯವರ ಮುಖ ಕೆಂಪಾಯಿತು. ಅವರಿಬ್ಬರೂ ಮನೆಯಲ್ಲಿ ಮಾಡಿಕೊಳ್ಳುವ ಜಗಳ ಇದ್ದರೆ, ಅದು ನಮ್ಮಲ್ಲೇ ಆಗಿ ಮುಗಿಯುವುದು ಬೇಡ ಅಂತ “ತ್ರಿಪಾಠಿಜಿ! ಅದೇನು ಇದ್ದಕ್ಕಿದ್ದ ಹಾಗೆ ಗ್ಯಾಸ್ ಅಂಡೆ ಅಂಗಡಿ ಸುದ್ದಿ ಬಂತು ? ಭಾಬಿಯ ಕೋಪಕ್ಕೂ ಗ್ಯಾಸ್ ಅಂಗಡಿಗೂ ಏನು ಸಂಬಂಧ ?” ಎಂದು ಕೇಳಿದೆ.

ಸಿಟ್ಟಿನಲ್ಲಿದ್ದ ತಮ್ಮ ಶ್ರೀಮತಿ, ನಮ್ಮಲ್ಲಿಂದ ಹೊರಟು ಹೋಗುವವರೆಗೂ ಬಾಯಿಮುಚ್ಚಿ ಕುಳಿತಿದ್ದ ಆ ಮಹಾನುಭಾವ “ಹೇಗಾದರೂ ಮಾಡಿ, ಗ್ಯಾಸ್‍ನವರ ಪ್ರಸ್ತಾಪ ನಿಮ್ಮ ಹತ್ತಿರ ಎತ್ತಬೇಕೂಂತ ಇತ್ತು. ಬೇರೆ ಸಂದರ್ಭ ಸಿಕ್ಕಿರಲಿಲ್ಲ. ಅವಳ ದಬಾವಣೆ, ಅವಕಾಶ ಒದಗಿಸಿತು” ಎಂದು ಹೇಳಿ ಸತ್ಯಸಂಧರಾದರು.

ಶ್ರೀಮಾನ್‍ ಜೀ, ನೀವು ಅನುಭವಿಸಿದ ನೋವನ್ನು ಬೇರೆಯವರೊಡನೆ ಹಂಚಿಕೊಂಡರೆ ಮನಸ್ಸಿನ ಭಾರ ಇಳಿಯುತ್ತದೆ, ಮನಸ್ಸಿಗೆ ಹಿತವೂ ಆಗುತ್ತದೆ ಎನ್ನುತ್ತಾರೆ ಅನುಭವಿಗಳು. ಆ ಥಿಯರಿಯ ಸತ್ಯಪರೀಕ್ಷೆ ಮಾಡೋಣ. ಹೇಳಿ ನಿಮ್ಮ ಕಥೆ -ಎಂದೆ.

ನಮ್ಮ ಮನೆಗೆ ಗ್ಯಾಸ್ ಸಪ್ಲೈ ಮಾಡುವ ಅಂಗಡಿಗೆ ನಿನ್ನೆ ಹೋಗಿದ್ದೆ. ಹದಿನೇಳು ದಿವಸ ಹಿಂದೆ ಬುಕ್ ಮಾಡಿದ್ದ ಗ್ಯಾಸ್, ಯಾವಾಗ ಸಿಗ್ತದೆ ಅಂತ ಕೇಳಿದ್ದಕ್ಕೆ, ಆ ಮನುಷ್ಯ ನನಗೆ ಸೀದಾ ಉತ್ತರ ಕೊಡಲಿಲ್ಲ. ಅಲ್ಲಿದ್ದ ಎಲ್ಲರೆದುರಿನಲ್ಲೇ ದಬಾಯಿಸಿ ಬಿಟ್ಟ. ಬಹಳ ಬೇಜಾರಾಯಿತು. ಬೇಜಾರಿನಲ್ಲೇ ಮನೆಗೆ ಬಂದೆ. ಬಂದ ಕೂಡಲೆ “ಗ್ಯಾಸ್ ಯಾವಾಗ ಬರ್‍ತದೆ ?” ಅಂತ ಇವಳ ವಿಚಾರಣೆಯ ಜೋರೂ ನಡೆಯಿತು. ಬೇಜಾರು ಇನ್ನೂ ಹೆಚ್ಚಾಯಿತು.........(ತ್ರಿಪಾಠಿಯವರ ಸ್ವರ ನಡುಗತೊಡಗಿತೆ?)

ಆ ಕೂಡಲೆ, ಸಮಾಧಾನದ ಪೀಠಿಕೆ ನನ್ನಿಂದ ಆಗದಿದ್ದರೆ, ಮನುಷ್ಯ ಅತ್ತೇ ಬಿಡಬಹುದು ಎಂಬ ಭಯವಾಯಿತು. ಅದಕ್ಕೆ “ತ್ರಿಪಾಠಿಯವರೇ, ಇದೊಂದು ಸರ್ವಸಾಮಾನ್ಯ ಸಮಸ್ಯೆ. ಅಂಥಾದ್ದಕ್ಕೆಲ್ಲ ಪರಿಹಾರ ಕಂಡುಕೊಳ್ಳುವ ಶಕ್ತಿ ನಮ್ಮಂಥ ಸಣ್ಣ ಮನುಷ್ಯರಿಗೆ ಇಲ್ಲ.

ನಮಗೆ ಅತೀ ಅಗತ್ಯವಿರುವ ವಸ್ತುಗಳನ್ನು ಒದಗಿಸುವ ಕೆಲಸ, ವ್ಯಾಪಾರಿಗಳಿಂದಲೇ ಆಗಬೇಕು. ನೋಡಿ, ಅಂಥಾ ವಸ್ತುಗಳ - ಉದಾಹರಣೆಗೆ ಅಕ್ಕಿ, ಅದನ್ನು ಬೇಯಿಸಲು ಕಟ್ಟಿಗೆ ಸೀಮೆ‍ಎಣ್ಣೆ ಅಥವಾ ಗ್ಯಾಸ್ - ಪೂರೈಕೆಗೆ ತೊಂದರೆ ಬಂದಾಗ, ಸರಕಾರದ ಮಧ್ಯಪ್ರವೇಶವಾಗುತ್ತದೆ. ವಸ್ತುಗಳನ್ನು ನಮಗೆ ನ್ಯಾಯಬೆಲೆಯಲ್ಲಿ ಒದಗಿಸುವ ವ್ಯವಸ್ಥೆಯನ್ನು ಸರಕಾರ ಯಾರಿಗಾದರೂ ವಹಿಸಿಕೊಡುತ್ತದೆ.

ನ್ಯಾಯ ಬೆಲೆ ಅಂದಾಗ ’ಯಾರಿಗೆ ನ್ಯಾಯ?’ ಎಂಬ ಪ್ರಶ್ನೆ ಕೇಳದೆ, ಊರಿನ ಬೇರೆ ಅಂಗಡಿಗಳಿಗಿಂತ ಸ್ವಲ್ಪ ಕಡಿಮೆ ಬೆಲೆಗೆ ಸಾಮಾನು ಸಿಕ್ಕುತ್ತದೆ ಎಂಬ ಸಮಾಧಾನಕ್ಕಾಗಿಯಾದರೂ ನ್ಯಾ. ಬೆ. ಅಂಗಡಿಗಳಿಗೆ ಜನರು ಹೋಗಲೇ ಬೇಕಾಗುತ್ತದೆ. ಕೆಲವೊಮ್ಮೆ ಕಡ್ಡಾಯವಾಗಿಯೂ ಹೋಗಬೇಕಾಗುತ್ತದೆ. ಹಾಗಾಗಿ, ಅಂಗಡಿಗಳವರು ‘ಇವನಿಗೆ ನಮ್ಮನ್ನು ಬಿಟ್ಟು ಬೇರೆ ಗತಿಯಿಲ್ಲ’ ಎಂಬ ವರ್ತನೆ ತೋರಿಸುವುದಕ್ಕೆ ಹೆಚ್ಚು ಸಮಯ ಹಿಡಿಯುವುದಿಲ್ಲ. ತಾವು ಏನು ಕೊಟ್ಟರೂ, ಹೇಗೆ ಕೊಟ್ಟರೂ, ಜನ ಬಾಯಿಮುಚ್ಚಿಕೊಂಡು ತೆಗೆದುಕೊಂಡು ಹೋಗುತ್ತಾರೆ ಎಂಬ ಧೈರ್ಯ ಬರುವುದಕ್ಕೂ ಹೆಚ್ಚು ದಿನ ಬೇಕಾಗುವುದಿಲ್ಲ.

ಇತರರಿಗೆ ‘ಇಲ್ಲವೇ ಇಲ್ಲ’ ಎಂದು ಹೇಳಿದ ವಸ್ತುಗಳನ್ನು, ತಮಗೆ ಬೇಕಾದವರಿಗೆ ಸುಲಭವಾಗಿ ಒದಗಿಸುವ ಅಥವಾ ‘ಇಲ್ಲ’ವೆಂದು ಹೇಳಿಸಿಕೊಂಡವರು ದಮ್ಮಯ್ಯ ಹಾಕಿದಾಗ ಹೆಚ್ಚಿಸಿದ ಬೆಲೆಯಲ್ಲಿ ಅವರಿಗೆ ವಸ್ತು ಒದಗಿಸುವ -ಅಭ್ಯಾಸಗಳೆಲ್ಲ ‘ಸಾಮಾನ್ಯ’ ವೆಂಬ ಹಾಗೆ ಮೈಗೂಡುತ್ತವೆ.

ಅವುಗಳ ತಿಳುವಳಿಕೆ ಇಲ್ಲದ ನಮ್ಮಂಥ ಅಜ್ಞಾನಿಗಳು ‘ನ್ಯಾಯವಾಗಿ ನಮಗೆ ಸಿಗಬೇಕಾದ’ ವಸ್ತುಗಳನ್ನು ಪಡೆಯಲು ಹೋಗಿ, ಅವರ ಉದ್ಧಟತನದ ಬಲಿಪಶುಗಳಾಗಿ, ಬಾಯಿಮುಚ್ಚಿಕೊಂಡು ಹಿಂದೆ ಬರುತ್ತೇವೆ.

ರೇಶನ್ ಅಂಗಡಿಗಳು ಖಾಸಗಿಯವರ ಕೈಯಲ್ಲಿದ್ದರೂ ಒಂದೇ, ಸಹಕಾರಿ ಸೊಸೈಟಿಗಳ ಅಧೀನವಿದ್ದರೂ ಅಷ್ಟೆ. ಖಾಸಗಿಯವರಿಗೆ ಒಬ್ಬಿಬ್ಬರಾದರೂ ಹೇಳುವವರು -ಕೇಳುವವರು ಇದ್ದರೂ ಇರಬಹುದು. ಸೊಸೈಟಿಯವರಿಗೆ ಅವರೂ ಇಲ್ಲ -ಇವರೂ ಇಲ್ಲ. ಅಂಥಾದ್ದೊಂದು ಸೊಸೈಟಿಯ ದರ್ಬಾರು ಹಂಪನಕಟ್ಟೆಯಲ್ಲಿ ೧೯೫೮ರಿಂದ ಸುಮಾರು ಹತ್ತು ವರ್ಷ ನಡೆಯುತ್ತಿದ್ದುದನ್ನು ನಾನೇ ನೋಡಿದ್ದೇನೆ. ಆ ದರ್ಬಾರನ್ನು ಈಗಲೂ ನೀವು ಬೇರೆ ಬೇರೆ ಕಡೆಗಳಲ್ಲಿ ನೋಡಬಹುದು. ಹಿಂದೆ ಅಲ್ಲಿ ಆಗಿದ್ದ ಹಾಗೆ - ಸೊಸೈಟಿಗಳ ಕೆಲವು ಅಧಿಕಾರಸ್ಥರು ರಾತ್ರೆ ಬೆಳಗಾಗುವುದರೊಳಗೆ - ಶ್ರೀಮಂತರಾದ್ದನ್ನು ಕಾಣಬಹುದು.

ಹಸಿವೆಯ ಅನ್ನಕ್ಕೆ ಅಕ್ಕಿ ಪಡಿ ನೀಡುವವರ ಕಥೆ ಹಾಗೆ. ಅಕ್ಕಿ ಬೇಯಿಸಲು ಸೀಮೆ ಎಣ್ಣೆ ಕೊಡುವವರೂ ಅವರೇ. ಆದ್ದರಿಂದ, ಕಥೆಯ ಇನ್ನೊಂದು ತುಂಡು ಇಲ್ಲಿ ಬೇಡ. ಅದನ್ನು ಅಲ್ಲಿಗೇ ಬಿಟ್ಟು, ಸೀಮೆ ಎಣ್ಣೆ ಬದಲಿಗೆ (ಕಳೆದ ೧೬ ವರ್ಷಗಳಿಂದ) ಉರಿಸಲು ಗ್ಯಾಸ್ ಕೊಡುತ್ತಾ ಇರುವವರ ಕಥೆಯನ್ನು ಕೇಳಿ.

ಗ್ಯಾಸ್‍ನವನದು ಮೋನೋಪಲಿ-ಅಥವಾ ನನ್ನಂಥವರು ಹೇಳುವ ಹಾಗೆ - ಏಕಸ್ವಾಮ್ಯದ ವ್ಯವಹಾರ. ಏಕಸ್ವಾಮ್ಯ ಅಂದರೆ ಗೊತ್ತಲ್ಲ. ಅವರು ಆ ವಸ್ತುವಿನ ವಿತರಣೆಗೆ ಮಾತ್ರವೇ ಸ್ವಾಮಿಗಳಲ್ಲ. ಅದನ್ನು ಕೊಳ್ಳುವವರ ಸ್ವಾಮಿ (ಅಂದರೆ ಒಡೆಯರು ಅಥವಾ ಯಜಮಾನರು)ಗಳು ಕೂಡಾ.

ಏನು ಕೇಳಿದರೂ ಇಲ್ಲ, ಆಗುವುದಿಲ್ಲ, ಸಾಧ್ಯವಿಲ್ಲ ಎನ್ನುವುದು ಅವರಿಗೆ ಬೀರ್ ಕುಡಿದಷ್ಟೇ ಸುಲಭ. ಬಳಕೆದಾರರೊಂದಿಗಿನ ಒರಟು ವರ್ತನೆಯೂ ಕುಡಿದದ್ದನ್ನು ಖಾಲಿ ಮಾಡಿದಷ್ಟೇ ಸುಲಭ. ಗ್ಯಾಸ್ ಅಂಡೆ ನಿನ್ನ ಮನೆಗೆ ತಂದು ಕೊಡಲು ಸಾಧ್ಯವಿಲ್ಲ. ಬೇಕಾದರೆ ಇಲ್ಲಿಗೆ ಬಂದು ತೆಗೆದುಕೊಂಡು ಹೋಗು ಎಂದು ಜಬರಿಸಲು ಅವರಿಗೆ ಯಾವ ಸಂಕೋಚವೂ ಇಲ್ಲ -

“ಸಾಕು ಸಾಕು ನಿಲ್ಲಿಸು ಮಹರಾಯ !” ತ್ರಿಪಾಠಿಯವರ ಕೂಗು ಕೇಳಿ ಬಂತು. ಹಿಂದಿನ ದಿನದ ನೆನಪು ಕುಕ್ಕಿತ್ತೋ ಏನೊ, ಪಾಪ, ಮುಖ ಮತ್ತೊಮ್ಮೆ ಸಪ್ಪೆಯಾಗಿತ್ತು. ಆದರೂ ಒಮ್ಮೆ ಸಾವರಿಸಿಕೊಂಡು “ಹಾಗಾದರೆ ನಮ್ಮಂಥವರ ಈ ಸಮಸ್ಯೆಗೆ, ಏನೇನೂ ಪರಿಹಾರವಿಲ್ಲ. ಇಲ್ಲವೇ ಇಲ್ಲ. ಅಲ್ಲವೆ ?” ಎಂದು ಹೊರಡುವ ಮೊದಲು ಕೇಳಿಯೇ ಬಿಟ್ಟರು. ಧೈರ್ಯ ಎಲ್ಲಿಂದ ಬಂದಿತ್ತೊ, ಪಾಪ !

ಒಂದು ಪರಿಹಾರ ಇದೆ ಸ್ವಾಮಿ, ನಾವು ಕೈಲಾಗದರು ತಾನೆ ? ಮೈಯಾದರೂ ಪರಚಿಕೊಳ್ಳಬಹುದಲ್ಲ ? ಮಾಡೋಣವೆ? ಎಂದೆ.

ನೀವಾಗಿದ್ದರೆ ಆಗ, ಏನು ಹೇಳುತ್ತಿದ್ದಿರೋ, ನೀವೇ ಹೇಳುವವರೆಗೆ ಗೊತ್ತಾಗುವುದಿಲ್ಲ.
----

ಶ್ರೀ ಪದ್ಯಾಣ ಗೋಪಾಲಕೃಷ್ಣ ( ಪ.ಗೋ.)


ಶ್ರೀ ಪದ್ಯಾಣ ಗೋಪಾಲಕೃಷ್ಣ ( ಪ.ಗೋ. ೧೯೨೮ - ೧೯೯೭ ) - ಹುಟ್ಟೂರು ಗಡಿಯಂಚಿನಲ್ಲಿರುವ ಅಡ್ಯನಡ್ಕ. ೧೯೫೬ ರಿಂದ ೧೯೯೭ನೇ ಇಸವಿಯವರೆಗೆ ನಾಲ್ಕು ದಶಕಗಳಷ್ಟು ಧೀರ್ಘ ಕಾಲಾವಧಿಯಲ್ಲಿ ಹಲವು ಕನ್ನಡ ಪತ್ರಿಕೆಗಳ ಉಪಸಂಪಾದಕ, ವರದಿಗಾರರಾಗಿದ್ದ ಪ.ಗೋ.ರವರು ೧೯೬೩ರಿಂದ ಸುಮಾರು ಎರಡು ವರ್ಷಗಳ ಕಾಲ ಮಂಗಳೂರಿನಿಂದ ತಮ್ಮ ಸ್ವಂತ ಕನ್ನಡ ದಿನ ಪತ್ರಿಕೆ "ವಾರ್ತಾಲೋಕ"ದ ವರದಿಗಾರ, ಮುದ್ರಕ ಮತ್ತು ಪ್ರಕಾಶಕರಾಗಿ ನಡೆಸಿ ಪತ್ರಿಕೋದ್ಯಮದ ಎಲ್ಲಾ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದವರು. ಜೊತೆಗೆ ೧೩ ಪತ್ರಿಕೆಗಳಿಗೆ ಆಗಾಗ "ಕಾಲಂಕಾರ"ರಾಗಿ ಸುಮಾರು ನಾಲ್ಕು ಸಾವಿರ ಪುಟಗಳಿಗೂ ಮಿಕ್ಕಿದ ಕಾಲಂ ಸಾಹಿತ್ಯ ಪ್ರಸ್ತುತ ಪಡಿಸಿದ ಪ. ಗೋ. ಅವರಿಗೆ ಇದ್ದುದನ್ನು ಸರಳವಾಗಿ ಹೇಳುವ ರೂಢಿಯೇ ಇಲ್ಲ. ಅವರದೆಲ್ಲವೂ ವ್ಯಂಗ್ಯ ದಿಂದಲೇ ಪ್ರಾರಂಭ, ವ್ಯಂಗ್ಯದಿಂದಲೇ ಕೊನೆ! ಅವರು ಕೊಡುವ ಉದಾಹರಣೆಗಳು ಹಳೆಯ ನೀತಿ ಪದ್ಯಗಳನ್ನು ತಿರುಚಿಕೊಂಡು ಹುಟ್ಟಿಸುವ ವ್ಯಂಗ್ಯ ಮಾರ್ಮಿಕವಾದುದು.
ಪ. ಗೋಪಾಲಕೃಷ್ಣ ಸ್ಮಾರಕ ಸೇವಾ ಟ್ರಸ್ಟಿನ ವತಿಯಿಂದ ೨೦೦೨ನೆ ಇಸವಿಯಲ್ಲಿ ಮಂಗಳೂರಿನಿಂದ ಪ್ರಕಟಣೆಗೊಂಡ ಲೇಖನ ಮಾಲಿಕೆ "ನೋ ಚೇಂಜ್ ಕಥೆಗಳು". ಈ ೨೪ ಅಂಕಣಗಳ ಕಂಕಣವನ್ನು ಮರು ಪ್ರಕಟಿಸಲು ಅನುಮತಿಯನ್ನು ಇತ್ತ ಟ್ರಸ್ಟಿನ ಅಧ್ಯಕ್ಷರಾದ, ಪ.ಗೋ ರವರ ಸಹೋದ್ಯೋಗಿ, ಮಂಗಳೂರಿನ ಹಿರಿಯ ಪತ್ರಕರ್ತ ಶ್ರೀ. ಯು.ನರಸಿಂಹ ರಾವ್ ಮತ್ತು ಹುಟ್ಟೂರಿನ ಆಪ್ತ ಮಿತ್ರ, ಟ್ರಸ್ಟಿನ ಸ್ಥಾಪಕರಾದ ಬೆಂಗಳೂರಿನ ವೈದ್ಯ, ಲೇಖಕ ಡಾ. ಎಂ. ಬಿ. ಮರಕಿಣಿಯವರಿಗೆ ವಂದನೆಗಳು.
-----
ಶೀರ್ಷಿಕೆಯ ೨೦೦೫ರ ವರ್ಣಚಿತ್ರ :
೨೦೦೫ರ ಮಾರ್ಚ್ ನಲ್ಲಿ ಮಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಪಾಲ್ಗೊಂಡ ಶ್ರೀ.ಪ.ಗೋ ಅವರ ಪತ್ನಿ ಶ್ರೀಮತಿ ಸಾವಿತ್ರಿ ಗೋಪಾಲಕೃಷ್ಣ , ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀ. ರವೀಂದ್ರ ಶೆಟ್ಟಿ ಮತ್ತು ಮಂಗಳೂರಿನ ಹಿರಿಯ ಪತ್ರಕರ್ತ ಶ್ರೀ. ಯು.ನರಸಿಂಹ ರಾವ್ ಅವರ ಉಪಸ್ಥಿತಿಯಲ್ಲಿ ನಿಟ್ಟೆ ವಿದ್ಯಾ ಸಮೂಹ ಸಂಸ್ಥೆಯ ಅಧ್ಯಕ್ಷ ಶ್ರೀ. ಎನ್ .ವಿನಯ ಹೆಗ್ಡೆ ಅವರಿಂದ ೨೦೦೪ರ ಪ.ಗೋ. ಸಂಸ್ಮರಣ ಉತ್ಕೃಷ್ಟ ಗ್ರಾಮೀಣ ವರದಿಗಾರಿಕೆ ಪ್ರಶಸ್ತಿ ಸ್ವೀಕರಿಸುತ್ತಿರುವ ಉದಯೋನ್ಮುಖ ಪತ್ರಕರ್ತ ಶ್ರೀ ಗುರುವಪ್ಪ ಎನ್.ಟಿ.ಬಾಳೇಪುಣಿ.
ಶ್ರೀ. ಪ.ಗೋಪಾಲಕೃಷ್ಣ ಅವರ ಸ್ಮಾರಕಾರ್ಥವಾಗಿ ಟ್ರಸ್ಟಿನ ವತಿಯಿಂದ ೧೯೯೯ರಲ್ಲಿ ಪ್ರಾರಂಭಿಸಿದ ಉದಯೋನ್ಮುಖ ಯುವ ಪತ್ರಕರ್ತರ ಉತ್ಕೃಷ್ಟ ಗ್ರಾಮೀಣ ವರದಿಗೆ ನೀಡುವ ಪ.ಗೋ. ಸಂಸ್ಮರಣ ಗ್ರಾಮೀಣ ವರದಿಗಾರಿಕೆ ಪ್ರಶಸ್ತಿಯನ್ನು ಈಗ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮುನ್ನಡೆಸುವ ನಿರ್ಣಯವನ್ನು ಹಮ್ಮಿಕೊಂಡಿದೆ.
----
ಕೃಪೆ: ಗಲ್ಫ್ ಕನ್ನಡಿಗ

Visitors to this page