Thursday, April 16, 2009

’ನೋ ಚೇಂಜ್ ಕಥೆಗಳು’ - ೧೩..ಪರಿಹಾರಭ್ರಮೆಯ ವೆಂಕಷ್ಟರಮಣರು





















{ಹೊಸಸಂಜೆ ಪತ್ರಿಕೆಗಾಗಿ ಮಂಗಳೂರಿನ ಪತ್ರಕರ್ತ ಶ್ರೀ ಪದ್ಯಾಣ ಗೋಪಾಲಕೃಷ್ಣ (ಪ.ಗೋ.) ಅವರು ಬರೆದ ೨೪ ಅಂಕಣಗಳ ಕಂಕಣ" ನೋ ಚೇಂಜ್ ಕಥೆಗಳು". ಈ ಬರಹಗಳನ್ನು ಅವರ ಸ್ಮಾರಕಾರ್ಥವಾಗಿ ’ಗಲ್ಫ್ ಕನ್ನಡಿಗ’ ಪ್ರತಿ ಗುರುವಾರ ಪ್ರಕಟಿಸಲಾಗುತ್ತಿದ್ದು ಇದು ಹದಿಮೂರನೇ ಅಂಕಣ.}



ಪರಿಹಾರಭ್ರಮೆಯ ವೆಂಕಷ್ಟರಮಣರು


ಸಂಕಟ ಮತ್ತು ಸಂಕಷ್ಟ ಒಂದೇ ಅರ್ಥ ಕೊಡುವ ಎರಡು ಶಬ್ದಗಳು ಅಲ್ವಾ ಪಂಡಿತರೇ ?

ಆ ಪ್ರಶ್ನೆ ಹಾಕಲೆಂದೇ ನಿನ್ನೆ ಅವರ ಮನೆಗೆ ಹೋಗಿದ್ದೆ. ಅವರು ಮನೆಯಲ್ಲಿದ್ದ ಕಾರಣ, ಕೇಳಿದ್ದೆ.

“ಇರಬೇಕು, ಬಹುಶಃ ಸಂಕಷ್ಟದ ತದ್ಭವ ಸಂಕಟಾಂತ.....” ಪಂಡಿತರು ಕಡೆಗೆ ಯಾಕೆ ರಾಗ ಎಳೆದರು ಅಂತ ಗೊತ್ತಾಗಲಿಲ್ಲ. (ಇದು ಬರೇ ವಿಷಯ ತಿಳಿದುಕೊಳ್ಳಲು ಕೇಳಿದ ಪ್ರಶ್ನೆ ಅಲ್ಲ - ಏನೋ ಬೇರೆ ಕುಹಕ ಇದೆ ಅಂತ ನನ್ನ ಮುಖ ಎಲ್ಲಾದರೂ ತೋರಿಸಿತೆ ? ಆದರೂ, ನೋಡೋಣ.) “ನಾನು ಕೇಳಿದ್ದು ಬೇರೆ ಯಾವ ಉದ್ದೇಶದಿಂದಲೂ ಅಲ್ಲ - ಅವೆರಡೂ ಸಮಾನ ಅರ್ಥದ ಪದಗಳು ಅಂತಾದ್ರೆ, ಸಂಕಟ ಬಂದಾಗ ವೆಂಕಟರಮಣಾಂತ ಹೇಳುವ ಹಾಗೆ ಸಂಕಷ್ಟಕ್ಕೆ ವೆಂಕಷ್ಟರಮಣಾಂತಲೂ ಹೇಳ್ಬಹುದಾಂತ ತಿಳಕೊಳ್ಳಲಿಕ್ಕೆ ಕೇಳಿದೆ” ಎಂದು ವಿವರಿಸಿದೆ.

“ಭಾಷೆಗೆ -ಶಬ್ದಗಳಿಗೆ -ಯಾವುದೇ ಬೆಲೆ ಕೊಡದೆ ಸ್ವತಂತ್ರವಾಗಿ, ಇಷ್ಟಬಂದ ಹಾಗೆ ಮಾತನಾಡುವ, ಬರೆಯುವ ಈ ಕಾಲದಲ್ಲಿ ಹೇಗೆ ಹೇಳಿದರೂ ನಡೆಯುತ್ತದೆ.” (ಪಂಡಿತರ ಉದ್ವೇಗ ಹೆಚ್ಚುತ್ತಾ ಇದೆ. ಜಾಗ್ರತೆ!)

ನಾನಂತೂ ಅಂಥ ಸ್ವಾತಂತ್ರ್ಯ ವಹಿಸುವವರ ಕಾಲದವನಲ್ಲ, ನಿಮಗೆ ಗೊತ್ತಲ್ಲ ? ನನಗೆ ಈಗ ಒಂದು ಸಮಸ್ಯೆ ಹುಟ್ಟಿದೆ, ಸಂಕಷ್ಟ ಬಂದಾಗ ದಾರಿಯೇ ಕಾಣದೆ ದೇವರ ಮೊರೆಹೋಗುವವರು ಇದ್ದಾರೆ, ನಿಜ. ಆದರೆ, ನಿಮ್ಮ ಸಂಕಷ್ಟ ಪರಿಹರಿಸುತ್ತೇವೆ ಎಂದು ಕಷ್ಟಕ್ಕೆ ಒಳಗಾದವರನ್ನು ನಂಬಿಸುವ, ಆ ನಂಬಿಕೆ ಬೆಳೆಸಲು ಭರ್ಜರಿ ಪ್ರಚಾರವನ್ನೂ ಮಾಡುವ ಮನುಷ್ಯರು ಇದ್ದಾರಲ್ಲಾ ಅವರನ್ನು ಯಾವ ಹೆಸರಿನಿಂದ ಕರೀಬೇಕು ಅಂತ ಗೊತ್ತಾಗುತ್ತಾ ಇಲ್ಲ, ಆದ್ದರಿಂದ ನಿಮ್ಮಲ್ಲಿ ಆ ಪ್ರಶ್ನೆ ಎತ್ತಿದ್ದು.

“ಸರಿ, ಈಗ ಒಪ್ಪಿದೆ, ನಿಮಗೆ ಸಾಧ್ಯವಿದ್ದರೆ, ಅವರಿಗೆ ವೆಂಕಷ್ಟರಮಣರು ಅಂತಲೇ ನಾಮಕರಣ ಮಾಡಿ. ನನ್ನದೇನೂ ಅಭ್ಯಂತರವಿಲ್ಲ” ಎಂದರು. ಅವರ ಆ ಅನುಮತಿ ಸಿಕ್ಕಿದ ಕೂಡಲೆ ಅಲ್ಲಿಂದ ಹೊರಡಲು ತಯಾರಾದೆ.

ಓಯ್ -ಓಯ್ ಸ್ವಲ್ಪ ನಿಲ್ಲಿ -ಅಷ್ಟು ಅವಸರ ಬೇಡ. ಈ ನಿಮ್ಮ ವೆಂಕಷ್ಟರಮಣರ ಒಂದೆರಡು ಕಥೆಯನ್ನಾದರೂ ಹೇಳದೆ ಹಾಗೇ ಹೊರಟು ಹೋಗುವುದು ಯಾವ ನ್ಯಾಯ ? ಎಂದು ಅವರು ನನ್ನನ್ನು ನಿಲ್ಲಿಸಿದಾಗ -

ಹೇಗೂ ಇವರು ನನ್ನ ಖಾಯಂ ಓದುಗರಲ್ಲಿ ಒಬ್ಬರು.ಇನ್ನೆಷ್ಟೋ ದಿನ ಕಳೆದು ಕಥೆ ಪೇಪರಿನಲ್ಲಿ ಬರುವವರೆಗೆ, ಅವರನ್ನು ಯಾಕೆ ಕಾಯಿಸಬೇಕು, ಎಂದು ಕಥೆ ಆರಂಭಿಸಿದೆ.

ತ್ರಿಕ್ಕರಪುರದ ನೀರಿನ ಮಂತ್ರವಾದಿಯ ಕಥೆಯನ್ನು ಮೊದಲಾಗಿ ಕೇಳಿ.

ಸುಮಾರು ೧೯೩೬ ರಲ್ಲಿ ಒಂದು ದಿನ -‘......ರು ಮಂತ್ರಿಸಿ ಕೊಟ್ಟ ನೀರಿಗೆ ಯಾವ ರೋಗವನ್ನಾದರೂ ಗುಣಪಡಿಸುವ ಶಕ್ತಿ ಇದೆ. ಸ್ನಾನ ಮಾಡಿ ಶುದ್ಧದಲ್ಲಿ ಮೂರು ಹೊತ್ತು ಸೇವಿಸಿದರೆ ಸಾಕು’ ಎಂಬ ಸುದ್ದಿ ಊರಿಂದೂರಿಗೆ ಹಬ್ಬಿತು. ಸುದ್ದಿಯನ್ನು ‘ಕೇಳಿದ್ದ’ವರು ಇನ್ನೊಬ್ಬರಿಗೆ ಅದನ್ನು ‘ಹೇಳುವಾಗ’ ಸೇರಿಸುತ್ತಾ ಹೋದ ತಲೆ - ಬಾಲಗಳಿಂದಾಗಿ ‘ಯಾವ ವೈದ್ಯರಿಂದಲೂ ಗುಣಪಡಿಸಲು ಸಾಧ್ಯವಾಗದ ರೋಗವೂ ಆ ನೀರಿನಿಂದ ಗುಣವಾಗುತ್ತದೆ’ ಎನ್ನುವ ಖ್ಯಾತಿಯನ್ನೂ ಪಡೆಯಿತು.

‘ನಮ್ಮ ಒಬ್ಬ ಸಂಬಂಧಿಕರ ಸಂಧಿವಾತ ಆ ನೀರಿನಿಂದಾಗಿ ಸಂಪೂರ್ಣ ವಾಸಿಯಾಗಿದೆ’ - ‘ನನ್ನ ನೆರೆಮನೆಯವರ ಗೂರಲು ಈಗ ಗುಣವಾಗಿದೆ’ -‘ಯಾವಾಗಲೂ ಅಲುಗಾಡುತ್ತಲೇ ಇದ್ದ ನಮ್ಮ ಚಿಕ್ಕಮ್ಮನ ತಲೆ ಆ ತೀರ್ಥದ ನೀರು ಕುಡಿದ ಮೇಲೆ ಅಲುಗಾಟ ನಿಲ್ಲಿಸಿದೆ’ ಎಂಬ ಪ್ರಶಂಸಾವಾಕ್ಯಗಳೂ ಬಹುಬೇಗ ಕೇಳಿಬರತೊಡಗಿದವು.

ದಕ್ಷಿಣ ಕನ್ನಡದ ಪುತ್ತೂರು -ಕಾಸರಗೋಡು ತಾಲೂಕುಗಳಿಂದ ಕೇರಳದ ತ್ರಿಕ್ಕರಪುರಕ್ಕೆ ಸಾವಿರ ಸಂಖ್ಯೆಯಲ್ಲಿ ಜನಯಾತ್ರೆ ಆರಂಭವಾಗಲು ಹೆಚ್ಚು ದಿನ ಹಿಡಿಯಲಿಲ್ಲ. ‘ನೀರು ಪಡೆಯಲು ಬಾಟ್ಲಿಗಳು ಅಲ್ಲಿ ಸಿಕ್ಕುವುದಿಲ್ಲವಂತೆ’ ಎಂಬ ವದಂತಿಯಿಂದ, ಊರಿನಿಂದಲೇ ಔಷಧದ ಬಾಟ್ಲಿಗಳನ್ನು ಒಯ್ದವರು ಎಷ್ಟೋ ಮಂದಿ. ತ್ರಿಕ್ಕರಪುರದ ಬಾಟ್ಲಿ ಅಂಗಡಿಗಳವರಿಗಂತೂ ಹಣದ ಸುಗ್ಗಿ. ಬಸ್ಸಿನ ಸೌಕರ್ಯ ಹೆಚ್ಚಿಲ್ಲದ ಆ ಕಾಲದಲ್ಲಿ ಕಾಲ್ನಡಿಗೆ ಪ್ರಯಾಣ ಮಾಡಿದವರು, ಅನಿವಾರ್ಯವಾಗಿ ಆಶ್ರಯಿಸುತ್ತಿದ್ದ ದಾರಿಬದಿಯ ಹೋಟೆಲು (ಅಥವಾ ಆಹಾರವಸ್ತು ವ್ಯಾಪಾರಿ)ಗಳಿಗೆ ಹಣದ ಹೊಳೆ. ಎಲ್ಲರ ಬಾಯಲ್ಲೂ ‘ತ್ರಿಕ್ಕರಪುರದ ಪವಾಡ ತೀರ್ಥ’ ಸುಮಾರು ಒಂದು ತಿಂಗಳವರೆಗೆ ಹರಿಯತ್ತಲೇ ಇತ್ತು.

ಆ ಮೇಲೆ ಪವಾಡ ಪ್ರಸ್ತಾಪ ತನ್ನಿಂದ ತಾನೇ ನಿಂತುಹೋಯಿತು. ಕಾಯಿಲೆ ಗುಣವಾದವರ ಸರ್ಟಿಫಿಕೇಟ್‍ಗಳೂ ಇಲ್ಲವಾದುವು. ನೀರಿನ ಜಾತ್ರೆಗಾಗಿಯೇ ತ್ರಿಕ್ಕರಪುರದಲ್ಲಿ ಡೇರೆ ಹೊಡೆದಿದ್ದ ಸಂತೆಯಂಗಡಿಗಳೂ ಗಂಟುಮೂಟೆ ಕಟ್ಟಿದವು......

ಅದಕ್ಕಿಂತಲೂ ಆಧುನಿಕ ರೀತಿಯ ಒಂದು ಪವಾಡಶಕ್ತಿಯ ಪ್ರದರ್ಶನ ಮಂಗಳೂರು ನಗರದ ನೆಹರೂ ಮೈದಾನದಲ್ಲಿ ೧೯೭೩ ರಲ್ಲಿ ನಡೆದಿತ್ತು.

ಮತಧರ್ಮ ಪ್ರಚಾರಕ್ಕಾಗಿ ಪ್ರವಾಸ ಮಾಡುತ್ತಿದ್ದ ಒಬ್ಬ ವ್ಯಕ್ತಿ, ಮಾನಸಿಕ ಭರವಸೆ ಚಿಕಿತ್ಸೆಯ (ಫೆಯಿತ್ ಹೀಲಿಂಗ್) ಮೂಲಕ ‘ಯಾವ ರೋಗವನ್ನೂ ಗುಣಪಡಿಸುವ ಶಕ್ತಿಯನ್ನು ದೇವಮೂಲದಿಂದ ನಾನು ಪಡೆದಿದ್ದೇನೆ’ ಎಂದು ಸಾರಿ ‘ರೋಗಿಗಳೆಲ್ಲರೂ ನನ್ನ ಪ್ರವಚನದ ಸ್ಥಳಕ್ಕೆ ಬನ್ನಿ - ನಿಮ್ಮ ವ್ಯಾಧಿಗಳಿಂದ ಮುಕ್ತಿ ಪಡೆಯಿರಿ’ ಎಂದು ಇತ್ತ ಬಹಿರಂಗ ಆಹ್ವಾನ, ವ್ಯಾಪಕವಾಗಿ ಪ್ರಚಾರ ಪಡೆಯಿತು.

ಆ ಪ್ರಚಾರದ ಆಕರ್ಷಣೆ, ಎಷ್ಟೋ ಮಂದಿಯನ್ನು ಆ ದಿನಗಳಲ್ಲಿ ನೆಹರೂ ಮೈದಾನದತ್ತ ಸೆಳೆಯಿತು. ತನ್ನ ಜೊತೆಯಲ್ಲೇ ಪ್ರಾರ್ಥನೆ ಸಲ್ಲಿಸಿ, ತಾನಿತ್ತ ಭರವಸೆಯನ್ನು ಏನೂ ಶಂಕೆಯಿಲ್ಲದೆ ನಂಬಿದವರು ಸಂಪೂರ್ಣ ಗುಣ ಹೊಂದುತ್ತಾರೆ ಎಂಬ ಆ ವ್ಯಕ್ತಿಯ ಮಾತಿನಂತೆ ನಡೆದುಕೊಂಡವರ ಸಂಖ್ಯೆ ನೂರಾರು. ಲಕ್ವ (ಪಾರಾಲಿಸಿಸ್ ಸ್ಟ್ರೋಕ್) ಹೊಡೆದು ಬಳಲಿದ್ದ, ಕೇಂದ್ರ ಸರಕಾರದ ಅಧೀನ ಸಂಸ್ಥೆಯೊಂದರ ಒಬ್ಬ ಹಿರಿಯ ಅಧಿಕಾರಿಯೂ ಆ ನೂರಾರು ಮಂದಿಯಲ್ಲಿ ಒಬ್ಬರು.

ಯಾವ ಚಿಕಿತ್ಸೆಯಿಂದಲೂ ಗುಣ ಸಿಗಲಿಲ್ಲ. ಇದರಿಂದಲಾದರೂ ಸಿಗುವುದಾದರೆ ಸಿಗಲಿ ಎಂಬ ‘ಕೊನೆಯ ಆಸೆ’ ಪೀಡಿತರಲ್ಲಿ ಇರುವುದು ಸ್ವಾಭಾವಿಕ. ಆ ಆಸೆಯ ಲಾಭ ಪಡೆಯಲು ಹೊಂಚುಹಾಕುವ ಜನರೂ ‘ಸ್ವಾಭಾವಿಕ’ ವಾಗಿಯೇ ಇದ್ದಾರೆ. ಬಹಳ ಹಿಂದಿನಿಂದಲೂ ಇದ್ದರು - ಇನ್ನು ಮುಂದೆಯೂ ಇರುತ್ತಾರೆ.

ಹುಡುಕುತ್ತಾ ಹೋದರೆ, ಅಂಥ ‘ಚಿಕಿತ್ಸಾರಹಿತ ರೋಗನಿರ್ಮೂಲನ’ ಕೇಂದ್ರಗಳನ್ನು ಹಲವಾರು ಕಡೆಗಳಲ್ಲಿ ನೀವು ಇಂದೂ ಕಾಣಬಹುದು. “ಅವನ್ನೆಲ್ಲ ಹೆಸರಿಸುವ ಕೆಲಸ ನನ್ನ ವ್ಯಾಪ್ತಿಗೆ ಮೀರಿದ್ದು, ಇನ್ನು ಹೊರಡುವ ಅಪ್ಪಣೆ ಕೊಡ್ತೀರಾ ?”

-ಎಂದು ಅಪ್ಪಣೆಗೂ ಕಾಯದೆ, ಪಂಡಿತರಲ್ಲಿಂದ ನಾನು ಹೊರಬಿದ್ದಾಗ “ನಂಬಿ ಕೆಡದವರಿಲ್ಲವೋ....” ಎಂದು ತಾಳಬದ್ಧವಾಗಿ ಪಂಡಿತರು ಹಾಡಲು ಆರಂಭಿಸಿದ್ದು -ಯಾವ ದಾಸರ ಪದ ? ಗೊತ್ತೇ ಆಗಲಿಲ್ಲ.



ಶ್ರೀ ಪದ್ಯಾಣ ಗೋಪಾಲಕೃಷ್ಣ ( ಪ.ಗೋ.)




ಶ್ರೀ. ಪದ್ಯಾಣ ಗೋಪಾಲಕೃಷ್ಣ ( ಪ.ಗೋ. ೧೯೨೮ - ೧೯೯೭ ) - ಹುಟ್ಟೂರು ಗಡಿಯಂಚಿ ನಲ್ಲಿರುವ ಅಡ್ಯನಡ್ಕ. ೧೯೫೬ ರಿಂದ ೧೯೯೭ನೇ ಇಸವಿಯವರೆಗೆ ನಾಲ್ಕು ದಶಕಗಳಷ್ಟು ಧೀರ್ಘ ಕಾಲಾವಧಿಯಲ್ಲಿ ಹಲವು ಕನ್ನಡ ಪತ್ರಿಕೆಗಳ ಉಪಸಂಪಾದಕ, ವರದಿಗಾರರಾ ಗಿದ್ದ ಪ.ಗೋ.ರವರು ೧೯೬೩ರಿಂದ ಸುಮಾರು ಎರಡು ವರ್ಷಗಳ ಕಾಲ ಮಂಗಳೂರಿನಿಂದ ತಮ್ಮ ಸ್ವಂತ ಕನ್ನಡ ದಿನ ಪತ್ರಿಕೆ "ವಾರ್ತಾಲೋಕ"ದ ವರದಿಗಾರ, ಮುದ್ರಕ ಮತ್ತು ಪ್ರಕಾಶಕರಾಗಿ ನಡೆಸಿ ಪತ್ರಿಕೋದ್ಯಮದ ಎಲ್ಲಾ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದವರು. ಜೊತೆಗೆ ೧೩ ಪತ್ರಿಕೆಗಳಿಗೆ ಆಗಾಗ "ಕಾಲಂಕಾರ"ರಾಗಿ ಸುಮಾರು ನಾಲ್ಕು ಸಾವಿರ ಪುಟಗಳಿಗೂ ಮಿಕ್ಕಿದ ಕಾಲಂ ಸಾಹಿತ್ಯ ಪ್ರಸ್ತುತ ಪಡಿಸಿದ ಪ. ಗೋ. ಅವರಿಗೆ ಇದ್ದುದನ್ನು ಸರಳವಾಗಿ ಹೇಳುವ ರೂಢಿಯೇ ಇಲ್ಲ. ಅವರದೆಲ್ಲವೂ ವ್ಯಂಗ್ಯ ದಿಂದಲೇ ಪ್ರಾರಂಭ, ವ್ಯಂಗ್ಯದಿಂದಲೇ ಕೊನೆ! ಅವರು ಕೊಡುವ ಉದಾಹರಣೆಗಳು ಹಳೆಯ ನೀತಿ ಪದ್ಯಗಳನ್ನು ತಿರುಚಿಕೊಂಡು ಹುಟ್ಟಿಸುವ ವ್ಯಂಗ್ಯ ಮಾರ್ಮಿಕವಾದುದು.


ಪ. ಗೋಪಾಲಕೃಷ್ಣ ಸ್ಮಾರಕ ಸೇವಾ ಟ್ರಸ್ಟಿನ ವತಿಯಿಂದ ೨೦೦೨ನೆ ಇಸವಿಯಲ್ಲಿ ಮಂಗಳೂರಿನಿಂದ ಪ್ರಕಟಣೆಗೊಂಡ ಲೇಖನ ಮಾಲಿಕೆ "ನೋ ಚೇಂಜ್ ಕಥೆಗಳು". ಈ ೨೪ ಅಂಕಣಗಳ ಕಂಕಣವನ್ನು ಮರು ಪ್ರಕಟಿಸಲು ಅನುಮತಿಯನ್ನು ಇತ್ತ ಟ್ರಸ್ಟಿನ ಅಧ್ಯಕ್ಷರಾದ, ಪ.ಗೋ ರವರ ಸಹೋದ್ಯೋಗಿ, ಮಂಗಳೂರಿನ ಹಿರಿಯ ಪತ್ರಕರ್ತ ಶ್ರೀ. ಯು.ನರಸಿಂಹ ರಾವ್ ಮತ್ತು ಹುಟ್ಟೂರಿನ ಆಪ್ತ ಮಿತ್ರ, ಟ್ರಸ್ಟಿನ ಸ್ಥಾಪಕರಾದ ಬೆಂಗಳೂರಿನ ವೈದ್ಯ, ಲೇಖಕ ಡಾ. ಎಂ. ಬಿ. ಮರಕಿಣಿಯವರಿಗೆ ವಂದನೆಗಳು.
------------
ಸಮೂಹ ಮಾಧ್ಯಮದ ಬೆಂಗಳೂರಿನ ಮಿತ್ರನ ಪ್ರತಿಸ್ಪಂದನ


ಎಂದಿಗೂ ಚೇಂಜ್ ಆಗದ ಪ.ಗೋ

ಒಬ್ಬರು ಗೋಪಾಲಕೃಷ್ಣ. ಇನ್ನೊಬ್ಬರು ನರಸಿಂಹರಾಯರು. ಪತ್ರಿಕಾಗೋಷ್ಠಿಯಲ್ಲಿ ಕುಳಿತರಂತೂ ಇಬ್ಬರೂ ಹುಲಿಗಳೇ. ಇವರಿಬ್ಬರೂ ಇದ್ದಾರೆ ಎಂದರೆ ಪತ್ರಿಕಾ ಗೋಷ್ಠಿ ನಡೆಸುವವರಿಗೂ ಆತಂಕ. ಏಕೆಂದರೆ ಸುಳ್ಳು ಮಾತನಾಡುವಂತಿಲ್ಲ. ತಪ್ಪು ಅಂಕಿ ಸಂಖ್ಯೆ ಮುಂದಿಡುವಂತಿಲ್ಲ. ತಿಂಡಿ ಕಾಫಿ ಸಹಾ ಮುಟ್ಟುವುದಿಲ್ಲ. ಗಿಫ್ಟ್ ತೆಗೆದುಕೊಳ್ಳುವ ಮಾತೇ ಇಲ್ಲ.

ದಕ್ಷಿಣ ಕನ್ನಡ ಕಂಡ ಇಬ್ಬರು ನಿಜಕ್ಕೂ ಮಹನೀಯ ಪತ್ರಕರ್ತರು ಇವರು. ಪ ಗೋಪಾಲಕೃಷ್ಣ ಟೈಮ್ಸ್ ಆಫ್ ಇಂಡಿಯಾ ಪ್ರತಿನಿಧಿಯಾದರೆ, ನರಸಿಂಹ ರಾಯರು ದಿ ಹಿಂದೂ ಪ್ರತಿನಿಧಿ. 'ಪಾಕೀಟು ಪತ್ರಿಕೋದ್ಯಮ' ದ ಜನಪ್ರಿಯವಾಗಿದ್ದ ದಿನಗಳಲ್ಲಿ ಪತ್ರಕರ್ತರ ನೀತಿ ಸಂಹಿತೆ ಉಳಿಯಲು ತಮ್ಮದೇ ಉದಾಹರಣೆಯ ಮೂಲಕ ಬಡಿದಾಡಿದವರು.

ಈ ಇಬ್ಬರಲ್ಲಿ ಗೋಪಾಲಕೃಷ್ಣರದ್ದು ತುಂಟ ಮನಸ್ಸು. ಎಷ್ಟು ಖಡಕ್ ಆಗಿ ಇರುತ್ತಿದ್ದರೋ ಅಷ್ಟೇ ನಗು ಉಕ್ಕಿಸುವಷ್ಟು ಹಾಸ್ಯ ಚಟಾಕಿ ಹಾರಿಸುತ್ತಿದ್ದರು. ಕಥೆಗಳನ್ನೂ ಬರೆದವರು. ತಮ್ಮ ಪತ್ರಿಕಾ ವೃತ್ತಿಯ ಅನುಭವದ ಬಗೆಗೂ ಅಂಕಣ ಬರೆದರು.

ಈ ಎಲ್ಲಾ ನೆನಪಿಗೆ ಬಂದದ್ದು "ಗಲ್ಫ್ ಕನ್ನಡಿಗ"ದಲ್ಲಿ ಮರು ಪ್ರಕಟಿಸುತಿರುವ ಪ.ಗೋ. ಅವರು ಬರೆದ ೨೪ ಅಂಕಣಗಳ ಪುಸ್ತಕ "ನೋ ಚೇಂಜ್ ಕಥೆಗಳು" ಅಂತರ್ಜಾಲದ ಲಿಂಕ್-ನಿಂದ.
- ಜಿ.ಎನ್. ಮೋಹನ್, ಬೆಂಗಳೂರು.














ಶ್ರೀ. ಜಿ.ಎನ್. ಮೋಹನ್ ಅವರು ಪ್ರಸ್ತುತ "ಮೇಫ್ಲವರ್ ಮೀಡಿಯ ಹೌಸ್" ಬೆಂಗಳೂರು ಇದರ ಮುಖ್ಯ ಕಾರ್ಯಕಾರಿ ಅಧಿಕಾರಿಯಾಗಿದ್ದು, ಈ ಮೊದಲು " ಈ ಟೀವಿ - ಕನ್ನಡ"ದ ಕಾರ್ಯನಿರ್ವಹಣೆ ವಿಭಾಗದ ಪ್ರಮುಖರು ಆಗಿದ್ದರು. ಶ್ರೀಯುತರು ಪ್ರಜಾವಾಣಿ ಕನ್ನಡ ದಿನ ಪತ್ರಿಕೆಯ ವರದಿಗಾರರಾಗಿ ಮಂಗಳೂರು, ಬೆಂಗಳೂರು ಹಾಗೂ ಗುಲ್ಬರ್ಗ ವಿಭಾಗಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ತಮ್ಮ ಒಂಬತ್ತು ವರ್ಷದ ಅವಧಿಯ 'ಪ್ರಜಾವಾಣಿ -ಮಂಗಳೂರು ಪ್ರತಿನಿಧಿ'ಯಾಗಿದ್ದ ಶ್ರೀ. ಮೋಹನ್ ರವರು ಶ್ರೀ. ಪ.ಗೋ. ಅವರನ್ನು ಸಮೀಪದಿಂದ ಬಲ್ಲವರು.
-------
ಕೃಪೆ: ಗಲ್ಫ್ ಕನ್ನಡಿಗ
ಲಿಂಕ್ : http://www.gulfkannadiga.com/news-5058.html

No comments:

Visitors to this page