Tuesday, May 5, 2009

’ನೋ ಚೇಂಜ್ ಕಥೆಗಳು’ --೧೫.. ಮಾಮೂಲಿನ ಮಾಮೂಲು ಸುದ್ದಿ




















ಹೊಸಸಂಜೆ ಪತ್ರಿಕೆಗಾಗಿ ಮಂಗಳೂರಿನ ಪತ್ರಕರ್ತ ಶ್ರೀ ಪದ್ಯಾಣ ಗೋಪಾಲಕೃಷ್ಣ (ಪ.ಗೋ.) ಅವರು ಬರೆದ ೨೪ ಅಂಕಣಗಳ ಕಂಕಣ" ನೋ ಚೇಂಜ್ ಕಥೆಗಳು". ಈ ಬರಹಗಳನ್ನು ಅವರ ಸ್ಮಾರಕಾರ್ಥವಾಗಿ ’ಗಲ್ಫ್ ಕನ್ನಡಿಗ’ ಪ್ರತಿ ಗುರುವಾರ ಪ್ರಕಟಿಸಲಾಗುತ್ತಿದ್ದು ಇದು ಹದಿನೈದನೇ ಅಂಕಣ.


ಮಾಮೂಲಿನ ಮಾಮೂಲು ಸುದ್ದಿ



ಮಾಮೂಲು ಬಿಚ್ಚದೆ ಯಾವ ಕೆಲಸವೂ ಆಗುವುದಿಲ್ಲ ಅಂದವರು ಯಾರು ?



ಕೂಡಲೇ ನೆನಪಾಗಲಿಲ್ಲ, ತಲೆ ತುರಿಸಿಕೊಂಡೆ. ತಲೆಯಲ್ಲಿ ಇನ್ನೂ ಸ್ವಲ್ಪ ಕೂದಲು ಉಳಿದಿತ್ತು. ತುರಿಸಿಕೊಳ್ಳಲು ಏನೂ ತೊಂದರೆಯಾಗಲಿಲ್ಲ. ಒಂದು ಮೂರಾನಲ್ಕು ಬಾರಿ ತುರಿಸಿಕೊಳ್ಳುವಾಗ -


ನನಗೆ ಯಾವುದಾದರೂ ಒಂದು ವಿಷಯ ಮರೆತು ಹೋಗುವುದೂ ಅದನ್ನು ನೆನಪು ಮಾಡಲು ನಾನು ತಲೆ ತುರಿಸಿಕೊಳ್ಳುವುದೂ ಮಾಮೂಲು ಕ್ರಮ ಎಂದಾಗಿಬಿಟ್ಟಿದೆ. ತುರಿಸುವುದು ಹೆಚ್ಚಾದ ಹಾಗೆ ತಲೆಯಲ್ಲಿ ಇರುವ ಅಲ್ಪ ಸ್ವಲ್ಪ ಅರೆ ಬಿಳಿ ಕೂದಲು ಉದುರುತ್ತಾ ಹೋಗುವುದೂ ಮಾಮೂಲಾಗಿ ಹೋಗಿದೆ,ಎಂದೆಲ್ಲಾ ನೆನಪಾಯಿತು.


ಅದು ಸರಿ, ಆಗ ಹೇಳಿದ ಮಾಮೂಲಿನ ಮಾತೆತ್ತಿದವರು ಯಾರು ? ಹೇಳುತ್ತೇನೆ. ಕಳೆದ ಶನಿವಾರ -


ನಮ್ಮ ನೆರೆಯ ‘ಉದ್ಗಾರಿ ನಂಬರ್ ವನ್’ ರವರ ಮನೆ ಗೇಟಿನ ಎದುರು ಮಹಾನಗರಪಾಲಿಕೆಯ ಕಂದಾಯ ಅಧಿಕಾರಿ ಒಬ್ಬರು ಬಂದು ನಿಂತರಂತೆ.ಅಲ್ಲಿಂದಲೇ, ಮನೆ ಮಾಲಿಕರನ್ನು ಕರೆದು “ನಿಮ್ಮ ಮನೆ ಎಷ್ಟು ಚದರ ಅಡಿ ವಿಸ್ತಾರದ್ದು ? ಎಷ್ಟು ಕೋಣೆಗಳಿವೆ ? ಎಷ್ಟು ಬಾಡಿಗೆ ಬರುತ್ತಿತ್ತು - ಈಗೆಷ್ಟು ಬರುತ್ತದೆ ?” ಎಂದೆಲ್ಲಾ ಪ್ರಶ್ನೆ ಕೇಳಿ,ಅವರ ಉತ್ತರಕ್ಕೂ ಕಾಯದೆ, ಏನೇನನ್ನೋ ತನ್ನ ನೋಟ್‍ಬುಕ್‍ನಲ್ಲಿ ಬರೆದುಕೊಂಡು ಹೋದರಂತೆ.


ತಾನು ಯಾರೆಂದು ಅವರು ಮೊದಲೇ ಹೇಳಿದ್ದಾರೆ -ಇನ್ನು ಮುಂದೆ ಏನಾಗುತ್ತದೆ ಅಂತ ನಾನು ಈಗಲೇ ತಲೆಕೆಡಿಸಿಕೊಳ್ಳಬೇಕಾಗಿಲ್ಲ ಎಂದುಕೊಂಡು ಸುಮ್ಮನಿದ್ದ ಮನೆಯವರಿಗೆ - ಮುಂದಿನ ವಾರದಲ್ಲೇ ಶ್ಯೋಕ್ ಆಯಿತು.
ಅದುವರೆಗೂ ಬರೇ ಇಪ್ಪತ್ತನಾಲ್ಕು ರೂ. ಇದ್ದ ಮನೆ ತೆರಿಗೆಯನ್ನು ಏಕ್‍ದಂ ನೂರ ಇಪ್ಪತ್ತೇಳಕ್ಕೆ ಏರಿಸಿದ ನೋಟಿಸ್ ಅವರಿಗೆ ಜಾರಿಯಾಗಿತ್ತು. (ಆಗ, ನಾನೂ ಅವರ ಮನೆಯಲ್ಲಿದ್ದೆ. ಆದ್ದರಿಂದ ಅದು ನನಗೆ ಗೊತ್ತು).


ನೋಟಿಸ್ ಕೈಯಲ್ಲಿ ಹಿಡಿದು, ಅವರು ಹೇಳಿದ್ದು “ಈಗ ಮಾಮೂಲು ಬಿಚ್ಚದೆ ಏನೂ ನಡಿಯೋದಿಲ್ಲಾ” ಅಂತ.
ಆ ಅಧಿಕಾರಿ ನಿಮ್ಮಲ್ಲಿ ಏನೂ ಮಾತನಾಡಿಲ್ಲ. ಬರೇ ಬರ್‍ಕೊಂಡು ಹೋದರೂಂತ ಹೇಳ್ತೀರಿ. ಹಾಗಾದ್ರೆ ಮಾಮೂಲಿನ ಮಾತು ಅಲ್ಲಿ ಹೇಗೆ ಬರ್‍ತದೆ ? ಎಂದು ಅವರಲ್ಲಿ ಆಗ ಕೇಳಿದ್ದೆ.


ಅದನ್ನೆಲ್ಲಾ ಈಗ ನನ್ನ ಬಾಯಿಯಿಂದ ಹೊರಡಿಸುವ ಕೆಲಸ ನಿಮಗೆ ಬೇಡ. ಅದೆಲ್ಲ ಹೇಗೆ ನಡೆಯುತ್ತದೆ ಅನ್ನುವುದು ನಿಮಗೆ - ಪೇಪರಿನವರಿಗೆ ಚೆನ್ನಾಗಿ ಗೊತ್ತು. ನಿಜಾ ಹೇಳಿ, ಈ ಮಾಮೂಲು ವ್ಯವಹಾರಗಳ ಕೆಲವು ಕಥೆಗಳಾದರೂ ನಿಮ್ಮ ಸ್ಟಾಕ್‍ನಲ್ಲಿ ಇವೆಯೋ ಇಲ್ಲವೋ ? ಎಂದು ಅವರು ಹೇಳಿದ ಸತ್ಯವನ್ನು ಒಪ್ಪಿ ಹೌದೆಂದು ತಲೆಯಾಡಿಸಿದ್ದೆ.


ಹಾಗಾದರೆ, ಬರಲಿ ಒಂದೆರಡು ಕಥೆಯಾದ್ರೂ - ಹೇಗೂ ನನಗೆ ಈಗ ಪುರುಸೊತ್ತು ಇದೆ, ಎಂದು ಅವರ ಅಪ್ಪಣೆಯಾಯಿತು.
ಹಾಗೆಲ್ಲ, ಕೇಳಿದ ಕೂಡಲೆ ಕಥೆ ಹೇಳ್ಲಿಕ್ಕೆ ನಾನೇನು ಚೀಪ್ ರೇಟ್ ಜರ್ನಲಿಸ್ಟ್ ಅಂತ ತಿಳ್ಕೊಂಡಿದ್ದೀರಾ ? ಇಲ್ಲ -ಇಲ್ಲ, ನನ್ನ ರೇಟ್ ತುಂಬಾ ಜಾಸ್ತಿ. ಮತ್ತೆ, ಯಾವಾಗಾದ್ರೂ ಬಿಡುವಾದರೆ ಹೇಳ್ತೇನೆ, ಎಂದು ಅಲ್ಲಿಂದ ಜಾರಿಕೊಂಡಿದ್ದೆ.


ಅದೇ ಈವತ್ತು, ಮಾಮೂಲಿನ ಕಥೆಯನ್ನು ಅವರಿಗೆ ಮಾತ್ರ ಯಾಕೆ ಹೇಳಬೇಕು ? ಪತ್ರಿಕೆಯಲ್ಲಿ ಪ್ರಕಟಿಸಿದರೆ ಅವರಲ್ಲದೆ ಮತ್ತೂ ಕೆಲವರಿಗೆ ಗೊತ್ತಾಗುತ್ತದೆ. ನನಗೂ ಏನಾದರೂ ‘ಪ್ರಯೋಜನ’ ಆಗುತ್ತದೆ, ಎಂಬ ಯೋಚನೆ ಮನಸ್ಸಿನ ಆಳದಲ್ಲಿ ಮೂಡಿತ್ತು. ಅದು ಬರಹದಲ್ಲಿ ಬರುವ ಹೊತ್ತಿಗೆ ಸರಿಯಾಗಿ ನೆನಪು ಕೈಕೊಟ್ಟ ಕಾರಣ, ತಲೆ ತುರಿಕೆ ಆರಂಭವಾಗಿತ್ತು.


ಈಗ ಎಲ್ಲಾ ಸರಿಹೋಯಿತು, ಇನ್ನು ಆರಂಭ ಮಾಡೋಣ.


ನಗರವಾಸಿಗಳಿಗೆ ತೆರಿಗೆ ಒಂದು ಅನಿವಾರ್ಯ ಕಿರುಕುಳ. ಮನೆ ಕಟ್ಟಿಕೊಂಡು ಬದುಕುವವರಿಗಾದರೂ ವ್ಯಾಪಾರದಿಂದ ಬಾಳು ನಡೆಸುವವರಿಗಾದರೂ,ಮುನಿಸಿಪಾಲಿಟಿ ತೆರಿಗೆಯಿಂದ ತಪ್ಪಿಸಿಕೊಳ್ಳಲಿಕ್ಕೆ ಸಾಧ್ಯವೇ ಇಲ್ಲ. ಹೆಚ್ಚೆಂದರೆ ಬೀಳುವ ತೆರಿಗೆಯಲ್ಲಿ ಒಂದಷ್ಟು ಕಡಿತ ಮಾಡಿಸಿಕೊಳ್ಳಬಹುದು. ಅಷ್ಟೆ, ಗೊತ್ತಲ್ಲ ?


ಮುನ್ಸಿಪಾಲ್ಟಿ ಕಂದಾಯ ಇಲಾಖೆಯ ಗುಟ್ಟು ಹಾಗೆ. ಅದೇ ಮುನ್ಸಿಪಾಲ್ಟಿ ಆರೋಗ್ಯ ಇಲಾಖೆಯ ವಿಧಾನ ಇನ್ನೊಂದು. ತಮ್ಮ ಗಿರಾಕಿಗಳ ಆರೋಗ್ಯ ರಕ್ಷಣೆಗೆ ಕೈಗೊಳ್ಳಲೇ ಬೇಕಾದ ಶುಚಿತ್ವದ ನಿಯಮಗಳನ್ನು ಹೋಟೆಲುಗಳು ಜಾರಿಗೆ ತರಲೇ ಬೇಕು. ಇಲ್ಲವಾದರೆ ಅವುಗಳ ಲೈಸನ್ಸ್ ರದ್ದು ಮಾಡುವುದಲ್ಲದೆ ದಂಡವನ್ನೂ ವಿಧಿಸುವ ಅಧಿಕಾರ ಆ ಇಲಾಖೆಗೆ ಇದೆ.


ಇವೆರಡು ಇಲಾಖೆಗಳೂ, ತಮ್ಮ ನಿಯಮಗಳನ್ನು ಪಾಲಿಸಲೂ ಸಾಧ್ಯವಿದೆ. ಬೇರೆಯವರು ಪಾಲಿಸದೆ ಪಾರಾಗುವಂತೆ ನೋಡಿಕೊಳ್ಳಲೂ ಸಾಧ್ಯವಿದೆ. ಎರಡು ಇಲಾಖೆಗಳಿಗೂ ಇರುವ ದಾರಿ ಒಂದೇ.


ಅದೇ, ನಮ್ಮ ‘ಮಾಮೂಲು’ ದಾರಿ, ಮೊದಲಿನಿಂದಲೂ ದಾರಿ ಹಾಗೇ ಇತ್ತು. ಈಗಲೂ ಇದೆ.ಮಾಮೂಲಿನ ರೇಟ್ ಮಾತ್ರ ಸ್ವಲ್ಪ ಹೆಚ್ಚಾಗಿದೆ. ಅದೇನೂ ಅಂಥಾ ದೊಡ್ಡ ವಿಷಯ ಅಲ್ಲ. ಹೋಟೆಲಿನವರು ರೇಟಿನ ಹೊರೆಯನ್ನು ಗಿರಾಕಿಗಳ ನೊರೆಗೆ ಸೇರಿಸಿ ಸರಿಮಾಡಿಕೊಳ್ಳುತ್ತಾರೆ. ಮನೆಗಳವರು ಹೇಗಾದರೂ ‘ಅಡ್ಜಸ್ಟ್’ ಮಾಡಿಕೊಳ್ಳುತ್ತಾರೆ.


ಆ ದಾರಿಯಲ್ಲಿ, ೧೯೫೮ರ ಸಮಯ, ಮಂಗಳೂರು ಮುನಿಸಿಪಾಲಿಟಿಯ ಒಬ್ಬರು ಉನ್ನತ ಅಧಿಕಾರಿ, ನಗರದ ಹಲವು ಹೋಟೆಲುಗಳಿಂದ ಪ್ರತಿ ತಿಂಗಳೂ ಮೂವತ್ತರಿಂದ ಹಿಡಿದು ನೂರ ಇಪ್ಪತ್ತು ರೂಪಾಯಿಗಳ ವರೆಗೆ ವಸೂಲು ಮಾಡುತ್ತಿದ್ದರು. ಆ ಮೇಲೆ ‘ಸಂಬಂಧಿಸಿದ’ ಇಲಾಖೆಗಳ ಸಹೋದ್ಯೋಗಿಗಳಿಗೆ ‘ಕ್ರಮದಲ್ಲಿ’ ವಿತರಿಸುತ್ತಿದ್ದರು. ಎಲ್ಲ ಕಡೆಯಿಂದಲೂ ಬರುವ ಮಾಮೂಲು ಒಂದೇ ಜಾಗದಲ್ಲಿ ಬಂದು ಸೇರುತ್ತಿದ್ದ ಕಾರಣ, ಯಾರಿಗೂ ತೊಡಕಾಗುವ ಪ್ರಶ್ನೆ ಇರಲಿಲ್ಲ.


ಹೋಟೆಲುಗಳ ಕೊಳೆಯ ಹೊಳೆ ಹರಿದು ಗಿರಾಕಿಗಳ ಹೊಟ್ಟೆಯೊ, ಚರಂಡಿಗಳ ‘ಮನುಷ್ಯರಂಧ್ರ’ (ಮ್ಯಾನ್ ಹೋಲ್)ದ ಬದಿಯೋ ಸೇರುತ್ತಲೇ ಇತ್ತು.ಮಾಮೂಲು ಕಿಸೆಗಳು ತುಂಬುತ್ತಲೇ ಇದ್ದುವು.


ಮತ್ತೆ, ೧೯೭೨ರ ಹೊತ್ತಿಗೆ, ಆ ಮಾಮೂಲು ದಾರಿಗೆ ಕಾರ್ಮಿಕ ಇಲಾಖೆಯೂ ಸೇರಿಕೊಂಡ ಸೂಚನೆ ಸಿಕ್ಕಿತು. ಇರುವ ಕೆಲಸಗಾರರ ದಾಖಲೆಗಳನ್ನು ತಮಗೆ ಬೇಕಾದ ಹಾಗೆ ತಿರುಚಿ, ಕಾನೂನಿನ ದಾರಿ ತಪ್ಪಿಸುವ ಕ್ರಮವನ್ನು ಕೆಲವು ಹೋಟೆಲುಗಳು ಅನುಸರಿಸುತ್ತಾ ಇದ್ದಾಗ, ಅದಕ್ಕೇ ಹೊಂಚು ಹಾಕುತ್ತಿದ್ದ ಕಾರ್ಮಿಕ ನಿರೀಕ್ಷಕರೊಬ್ಬರು ‘ತಿಂಗಳ ಮಾಮೂಲು ಕೊಟ್ಟರೆ ಸರಿ, ನಾನು ಬೇಕಾದರೆ ಕಣ್ಣು ಮುಚ್ಚಿ ರಿಪೋರ್ಟಿಗೆ ಸೈನ್ ಮಾಡ್ತೇನೆ’ ಎಂದು ಎಲ್ಲಾ ಹೋಟೆಲುಗಳಿಗೂ ಸೂಚನೆ ಮುಟ್ಟಿಸಿದರು.


ಸೂಚನೆಯನ್ನು ಕ್ರಮಬದ್ಧವಾಗಿ ಹಲವು ಹೋಟೆಲುಗಳವರು ಪಾಲಿಸಲೂ ತೊಡಗಿದರು. ತಿಂಡಿ-ತೀರ್ಥಗಳ ಬೆಲೆಯನ್ನು ಆಗಲೇ ಏರಿಸಿದ್ದರಿಂದ ಅವರಿಗೆ ಮಾಮೂಲು ಒಂದು ಹೆಚ್ಚಿನ ಹೊರೆ ಎಂದು ಕಾಣಿಸಲೇ ಇಲ್ಲ. ‘ಆರೋಗ್ಯ ಹೇಗೂ ಕಾಪಾಡಿಕೊಳ್ಳಬೇಕು. ಕಾರ್ಮಿಕ ರಕ್ಷೆಯನ್ನೂ ಕಾಪಾಡಿಕೊಳ್ಳೋಣ’ ಎಂದು ಅವರು ಸುಮ್ಮನಿದ್ದುಬಿಟ್ಟರು.


ಹಾಗಿರುವಾಗ ಒಂದು ದಿನ, ಒಂದು ಹೋಟೆಲಿನಲ್ಲಿ-


ಗಲ್ಲಾದಲ್ಲಿದ್ದವರು ಮಾಲೀಕರ ತಮ್ಮ. ಮಾಮೂಲು(ಬೇಟೆ ಮತ್ತು) ಭೇಟಿ-ಗೆ ಬಂದ ಕಾರ್ಮಿಕ ನಿರೀಕ್ಷಕರ ಗುರುತು ಅವರಿಗೆ ಇರಲಿಲ್ಲ. ಗುರುತು ಹೇಳಿದ ಮೇಲೆ ಸಲ್ಲಿಸಬೇಕಾದ ಕಾಣಿಕೆಯ ಮೊತ್ತವೂ ಗೊತ್ತಿರಲಿಲ್ಲ. ಅದರೊಟ್ಟಿಗೆ, “ಅಣ್ಣನವರು ಇಲ್ಲ. ಇನ್ನೊಮ್ಮೆ ಬನ್ನಿ” ಎಂದು ಹೇಳುವ ಧೈರ್ಯವೂ ಇರಲಿಲ್ಲ, ಹಾಗೂ ಹೀಗೂ ಜಗ್ಗಾಡಿ, ಇಪ್ಪತ್ತು ರೂಪಾಯಿಯ ನೋಟು (ಹತ್ತರ ಎರಡು) ಮಾತ್ರ ಕೊಟ್ಟು, ನಿರೀಕ್ಷಕರನ್ನು ಒಮ್ಮೆಗೆ ಸಾಗಹಾಕಿದರು. (ಅಡ್ಜಸ್ಟ್‍ಮೆಂಟ್ ಮತ್ತೆ ಆದುದು, ಬೇರೆಯೇ ಸುದ್ದಿ).


ಇಂಥಾ ಮಾಮೂಲು ಕ್ರಮ ಈಗಲೂ ಇಲ್ಲವೆ ? ಇರಲೇ ಬೇಕು. ಎಲ್ಲಿದೆ ? ಹೇಳಿ ತೋರಿಸು ಅನ್ನುತ್ತೀರಾ ? ಹೇಳುತ್ತೇನೆ. ನೆನಪಾಗಲಿ ಅಂತ ತಲೆ ತುರಿಸುತ್ತಾ ‍ಇದ್ದೇನೆ. ಅದಕ್ಕೆ ಮೊದಲು, ನಿಮಗೇ ನೆನಪಾದರೆ ನೀವೂ ಹೇಳಬಹುದು. ನನ್ನಿಂದ ಅಡ್ಡಿಯಿಲ್ಲ.



ಶ್ರೀ ಪದ್ಯಾಣ ಗೋಪಾಲಕೃಷ್ಣ ( ಪ.ಗೋ.)

ಶ್ರೀ ಪದ್ಯಾಣ ಗೋಪಾಲಕೃಷ್ಣ ( ಪ.ಗೋ. ೧೯೨೮ - ೧೯೯೭ ) - ಹುಟ್ಟೂರು ಗಡಿಯಂಚಿ ನಲ್ಲಿರುವ ಅಡ್ಯನಡ್ಕ. ೧೯೫೬ ರಿಂದ ೧೯೯೭ನೇ ಇಸವಿಯವರೆಗೆ ನಾಲ್ಕು ದಶಕಗಳಷ್ಟು ಧೀರ್ಘ ಕಾಲಾವಧಿಯಲ್ಲಿ ಹಲವು ಕನ್ನಡ ಪತ್ರಿಕೆಗಳ ಉಪಸಂಪಾದಕ, ವರದಿಗಾರರಾ ಗಿದ್ದ ಪ.ಗೋ.ರವರು ೧೯೬೩ರಿಂದ ಸುಮಾರು ಎರಡು ವರ್ಷಗಳ ಕಾಲ ಮಂಗಳೂರಿನಿಂದ ತಮ್ಮ ಸ್ವಂತ ಕನ್ನಡ ದಿನ ಪತ್ರಿಕೆ "ವಾರ್ತಾಲೋಕ"ದ ವರದಿಗಾರ, ಮುದ್ರಕ ಮತ್ತು ಪ್ರಕಾಶಕರಾಗಿ ನಡೆಸಿ ಪತ್ರಿಕೋದ್ಯಮದ ಎಲ್ಲಾ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದವರು. ಜೊತೆಗೆ ೧೩ ಪತ್ರಿಕೆಗಳಿಗೆ ಆಗಾಗ "ಕಾಲಂಕಾರ"ರಾಗಿ ಸುಮಾರು ನಾಲ್ಕು ಸಾವಿರ ಪುಟಗಳಿಗೂ ಮಿಕ್ಕಿದ ಕಾಲಂ ಸಾಹಿತ್ಯ ಪ್ರಸ್ತುತ ಪಡಿಸಿದ ಪ. ಗೋ. ಅವರಿಗೆ ಇದ್ದುದನ್ನು ಸರಳವಾಗಿ ಹೇಳುವ ರೂಢಿಯೇ ಇಲ್ಲ. ಅವರದೆಲ್ಲವೂ ವ್ಯಂಗ್ಯ ದಿಂದಲೇ ಪ್ರಾರಂಭ, ವ್ಯಂಗ್ಯದಿಂದಲೇ ಕೊನೆ! ಅವರು ಕೊಡುವ ಉದಾಹರಣೆಗಳು ಹಳೆಯ ನೀತಿ ಪದ್ಯಗಳನ್ನು ತಿರುಚಿಕೊಂಡು ಹುಟ್ಟಿಸುವ ವ್ಯಂಗ್ಯ ಮಾರ್ಮಿಕವಾದುದು.



ಪ. ಗೋಪಾಲಕೃಷ್ಣ ಸ್ಮಾರಕ ಸೇವಾ ಟ್ರಸ್ಟಿನ ವತಿಯಿಂದ ೨೦೦೨ನೆ ಇಸವಿಯಲ್ಲಿ ಮಂಗಳೂರಿನಿಂದ ಪ್ರಕಟಣೆಗೊಂಡ ಲೇಖನ ಮಾಲಿಕೆ "ನೋ ಚೇಂಜ್ ಕಥೆಗಳು". ಈ ೨೪ ಅಂಕಣಗಳ ಕಂಕಣವನ್ನು ಮರು ಪ್ರಕಟಿಸಲು ಅನುಮತಿಯನ್ನು ಇತ್ತ ಟ್ರಸ್ಟಿನ ಅಧ್ಯಕ್ಷರಾದ, ಪ.ಗೋ ರವರ ಸಹೋದ್ಯೋಗಿ, ಮಂಗಳೂರಿನ ಹಿರಿಯ ಪತ್ರಕರ್ತ ಶ್ರೀ. ಯು.ನರಸಿಂಹ ರಾವ್ ಮತ್ತು ಹುಟ್ಟೂರಿನ ಆಪ್ತ ಮಿತ್ರ, ಟ್ರಸ್ಟಿನ ಸ್ಥಾಪಕರಾದ ಬೆಂಗಳೂರಿನ ವೈದ್ಯ, ಲೇಖಕ ಡಾ. ಎಂ. ಬಿ. ಮರಕಿಣಿಯವರಿಗೆ ವಂದನೆಗಳು.

------

ಶೀರ್ಷಿಕೆಯ ೧೯೯೦ರ ದಶಕದ ವರ್ಣಚಿತ್ರ:

ದ.ಕ.ಟೆಲಿಕಾಂ ಜನರಲ್ ಮ್ಯಾನೇಜರ್ ಶ್ರೀ. ಕೆ. ರಾಮ ಅವರ ಸಮ್ಮುಖದಲ್ಲಿ ಸಮೀಪದಿಂದ 'ದೂರ'ವಾಣಿಯಲ್ಲಿ ಪತ್ರಿಕಾ ಸಹೋದ್ಯೋಗಿ ಶ್ರೀ.ಎ.ವಿ.ಮಯ್ಯ ಅವರ ಜೊತೆ ಶ್ರೀ ಪ.ಗೋಪಾಲಕೃಷ್ಣರ ಮೊದಲ ಸಂಭಾಷಣೆಯೊಂದಿಗೆ ನೂತನ ತಂತ್ರಜ್ಞಾನದ ನವೀಕೃತಗೊಂಡ ಮಂಗಳೂರಿನ ದೂರವಾಣಿ ಕೇಂದ್ರವೊಂದರ ಪ್ರಾರಂಭ.

------

ಕೃಪೆ: ಗಲ್ಫ್ ಕನ್ನಡಿಗ

ಲಿಂಕ್ : http://www.gulfkannadiga.com/news-5678.html

No comments:

Visitors to this page