Thursday, April 2, 2009

’ನೋ ಚೇಂಜ್ ಕಥೆಗಳು’ - ೧೧ .. ಕಡಿತ ಬೆಲೆಯ ಕರಾಮತ್ತು














ಹೊಸಸಂಜೆ ಪತ್ರಿಕೆಗಾಗಿ ಮಂಗಳೂರಿನ ಪತ್ರಕರ್ತ ಶ್ರೀ ಪದ್ಯಾಣ ಗೋಪಾಲಕೃಷ್ಣ (ಪ.ಗೋ.)ಅವರು ಬರೆದ ೨೪ ಅಂಕಣಗಳ ಕಂಕಣ" ನೋ ಚೇಂಜ್ ಕಥೆಗಳು". ಈ ಬರಹಗಳನ್ನು ಅವರ ಸ್ಮಾರಕಾರ್ಥವಾಗಿ ’ಗಲ್ಫ್ ಕನ್ನಡಿಗ’ ಪ್ರತಿ ಗುರುವಾರ ಪ್ರಕಟಿಸಲಾಗುತ್ತಿದ್ದು ಇದು ಹನ್ನೊಂದನೇ ಅಂಕಣ.


ಕಡಿತ ಬೆಲೆಯ ಕರಾಮತ್ತು

“ಏನಮ್ಮಾ ಊಟ ಆಯಿತಾ?”

ಮಧ್ಯಾಹ್ನ ಕಳೆದು ಮೂರು ಗಂಟೆ ಆಗಿತ್ತು. ಈ ಹೊತ್ತಿಗೆ ಊಟ ಮಾಡಿದ್ದೀರಾ ಎನ್ನುವವರು ಯಾರಪ್ಪಾ ಎಂದುಕೊಂಡೆ. ಹೊರಗೆ ಇಣಿಕಿ ನೋಡಿದೆ.

ವಿಚಾರಿಸಿದ್ದು ನನ್ನನ್ನಲ್ಲ, ನಮ್ಮ ಗೃಹಮಂತ್ರಿಯವರನ್ನು ಅಂತ ಗೊತ್ತಿತ್ತು. ಬಾಗಿಲು ಮೆಟ್ಟಲಲ್ಲೆ ಕುಳಿತಿದ್ದ ಅವಳು ಉತ್ತರ ಕೂಡಾ ಕೊಡುತ್ತಾಳೆ ಎಂದೂ ತಿಳಿದಿತ್ತು. ಆದರೂ (ಏನೂ ಕೆಲಸ ಇಲ್ಲದೆ ಕಾಲ ಕಳೆಯುವ) ಇಳಿವಯಸ್ಸಿನ ಕುತೂಹಲ ನೋಡಿ, ಮನಸ್ಸು ಕೇಳಿರಲಿಲ್ಲ. ಇಣಿಕಿ ನೋಡಿದರೆ,

ಊಟದ ವಿಚಾರಣೆ ನೆಪದಲ್ಲಿ ಮಾತುಕತೆಗೆ (ಹೆಂಗಸರ ಹರಟೆಗೆ ಎನ್ನಬಾರದಲ್ಲ ) ಬಂದಿದ್ದವರು ಶ್ರೀಮತಿ ‘ತ್ರಿಪಾಠಿ’! ಹಿಡಿದುಕೊಂಡು ಬಂದಿದ್ದ ಒಂದು ಕಟ್ಟನ್ನು ನಿಧಾನವಾಗಿ ಬಿಚ್ಚಿ ನನ್ನವಳಿಗೆ ತೋರಿಸಲು ತೊಡಗಿದ್ದರು.

ಆಗ, ನಾನೇನಾದರೂ ಅವರಿಬ್ಬರ ಎದುರು ಕಾಣಿಸಿಕೊಂಡರೆ, ನನ್ನ ಕಿಸೆಗೆ ಕತ್ತರಿ ಬೀಳದೆ ಉಳಿಯುವುದಿಲ್ಲವೆಂದು ಗೊತ್ತೇ ಇತ್ತು. ಮಾತು ಕೇಳಿಸಿಕೊಂಡು ಮರೆಯಾಗಿಯೇ ಉಳಿದೆ. ( ಕಟ್ಟಿನೊಳಗೊಂದು ಸೀರೆಯೇ ಇದೆ, ಬೇರೇನೂ ಅಲ್ಲವೆಂದು ಖಚಿತವಾಗಿತ್ತು.)

ಓಹ್! ಎಷ್ಟು ಚೆನ್ನಾಗಿದೆ, ಎಲ್ಲಿಂದ ತಂದಿರಿ ? ಎಷ್ಟು ಕೊಟ್ಟಿರಿ ? ಪ್ರಶ್ನಾವಳಿ ‘ನಮ್ಮ’ ಕಡೆಯಿಂದ ಬಂದೇ ಬಂತು. ಉತ್ತರ ಅಸ್ಪಷ್ಟವಾಗಿತ್ತು. ಆದರೆ ಮತ್ತೆ ಹೊರಟ ಸಿಡಿಗುಂಡುಗಳು ಉತ್ತರದ ಸ್ಪಷ್ಟ ರೂಪ ಕೊಟ್ಟವು.

ಛೆ -ಛೆ -ಛೆ ! ಆ‍ ‍ಆಷ್ಟು ಕೊಟ್ರಾ..... ಬಹಾಳ ಜಾಸ್ತಿಯಾಯಿತು. ನಾನು ಓ ಮೊನ್ನೆ ಇದೇ ಬಾರ್ಡರ್ -ಅದೇ ಸೆರಗು -ಕಲರ್‍ನಲ್ಲಿ ಸ್ವಲೂಪ ವ್ಯತ್ಯಾಸ - ಇದ್ದದ್ದು ತೆಕ್ಕೊಂಡಿದ್ದೇನೆ. ಬರೇ ೧೯೭ ರೂಪಾಯಿಗೆ. ಈಗ ಪೆಟ್ಟಿಗೆಯಲ್ಲುಂಟು, ಬೇಕಾದರೆ ತಂದು ತೋರಿಸುತ್ತೇನೆ. ನೀವು ಅದರ ಡಬ್ಬಲ್ ಕೊಟ್ರಲ್ಲಾ...

ಗುಂಡುಗಳು ಗುರಿ ಮುಟ್ಟುತ್ತಾ ಇದ್ದವು. ಇನ್ನೊಮ್ಮೆ ಇಣುಕಿದೆ.

ನೆರೆಮನೆಯಾಕೆಯ ಪೆಚ್ಚುಮುಖ ಕಾಣಿಸಿ ‘ ಪಾ......ಪ’ ನನ್ನನ್ನು ಮೆಟ್ಟಿಲ ಬಳಿ ಎಳೆದೊಯ್ಯಿತು.

ಸೀರೆ ಖರೀದಿಯ ಪ್ರಕರಣದ ಬಗ್ಗೆ ನಾನೇನಾದರೂ ಮಾತೆತ್ತಿದರೆ, ನಮ್ಮಿಬ್ಬರೊಳಗೆ ಖಂಡಿತವಾಗಿಯೂ ಜಗಳ ಹುಟ್ಟಿಕೊಳ್ಳುತ್ತದೆ ಅಂತ ಗೊತ್ತಿದ್ದರೂ -

ಗಂ-ಹೆಂ ಜಗಳ ಪರ್ಮನೆಂಟ್ ಅಲ್ಲ ಅನ್ನುವ ಧೈರ್ಯದಿಂದ “ಮನೆಯೊಳಗೆ ಬಂದು ಮಾತನಾಡಿಯಮ್ಮ” ಆಹ್ವಾನವನ್ನು ಶ್ರೀಮತಿ ತ್ರಿಪಾಠಿಯವರಿಗಿತ್ತೆ.

ನಿರೀಕ್ಷಿಸಿದ್ದಂತೆ ಒಂದು ಕೆಂಗಣ್ಣು ನೋಟ ಯಜಮಾನಿಯಿಂದ ನನ್ನ ಕಡೆಗೆ ಹಾರಿತು.(ನಾನೂ ಕೇರ್ ಮಾಡದವನ ಹಾಗೆ ನಟಿಸಿದೆ.) ಆದರೆ ಶ್ರೀಮತಿ ತ್ರಿ ಒಳಗೆ ಬಂದದ್ದರಿಂದ ಹೆಚ್ಚಿನ ಅನಾಹುತವೇನೂ ಆಗಲಿಲ್ಲ ಬಿಡಿ.

ನೋಡಿಯಮ್ಮಾ, ಇವಳು ೧೯೭ ರೂಪಾಯಿಗೆ ಸೀರೆ ತಂದದ್ದೇನೋ ನಿಜ. ಅದನ್ನು ಪೆಟ್ಟಿಗೆಯಿಂದ ತೆಗೆದು ಉಪಯೋಗಿಸಲು ಸಾಧ್ಯವಿಲ್ಲವೆನ್ನುವ ಸತ್ಯ ಕೂಡಾ ನಿಮಗೆ ಹೇಳಿದ್ದಾಳಾ ? ಎಂದ ಕೇಳಿಯೇ ಬಿಟ್ಟೆ.

“ಇಲ್ಲ -ಇಲ್ಲ, ನಾನು ಹೇಳಿಲ್ಲ, ಹೇಳುವುದೂ ಇಲ್ಲ. ನೀವೇ ಎಲ್ಲ ಗೊತ್ತಿದ್ದವರಲ್ವಾ, ಹೇಳಿ ಬಿಡಿ” ಮುನಿಸಿನ ಗುಂಡು ಇನ್ನೊಮ್ಮೆ ಸಿಡಿಯಿತು.

ಅವಳ ಮಾತು ಕೇಳಿಸಿಯೇ ಇಲ್ಲವೆನ್ನುವವನ ಹಾಗೆ -

“ಆ ಸೀರೆ ‘ಸೇಲ್’ ನಲ್ಲಿ ಖರೀದಿ ಮಾಡಿದ್ದು. ಸೀರೆ ‘ಕುಂಬು’ ಆಗಿದೆ -ಡ್ಯಾಮೇಜ್ ಆಗಿದೆ - ಬಣ್ಣ ಕೂಡಾ ಉಳಿಯುವುದು ಸಂಶಯ ಅಂತೆಲ್ಲ ಅವಳಿಗೆ ಗೊತ್ತಾದ್ದು ಮನೆಗೆ ಬಂದು ಗಡದ್ದಾಗಿ ಉಟ್ಟು ಟ್ರಯಲ್ ನೋಡಿದ ಮೇಲೆ -

(ಯಜಮಾನಿ ಅವಡುಗಚ್ಚುತ್ತಾ ಇದ್ದಳು)

-ಕುರ್ಚಿಯಲ್ಲಿ ಕುಳಿತುಕೊಳ್ಳುವಾಗ ‘ಪರ್ರ್’ ಶಬ್ದ ಕೇಳಿದ ನಂತರ ”-

“ಹೌದಾ ? ? ?” ಬಂದವರು ಕೇಳಿದ್ದು ಪ್ರಶ್ನೆಯಲ್ಲ. ಮಾಡಿದ್ದು ಅಚ್ಚರಿಯ ಉದ್ಗಾರ.

“ಕಡಿತ ಬೆಲೆಯ” ಮಾರಾಟದ ಸುದ್ದಿ ಕೇಳಿದರೂ ಸಾಕು. ಅಂಗಡಿಗೆ ಓಡುವ ಅಭ್ಯಾಸ - ಎಲ್ಲಾ ಊರುಗಳ ಮಹಿಳೆಯರಿಗೂ ಇದೆ. ಮಂಗಳೂರಿನವರಿಗೂ ಇರಲೇಬೇಕಲ್ಲ! ಇತ್ತು.

ಸಂಗ್ರಹ ತೀರಿಸುವ ಮಾರಾಟ (ಸ್ಟಾಕ್ ಕ್ಲಿಯರಿಂಗ್ ಸೇಲ್) ಅಂತ ಪೇಪರ್‍ನಲ್ಲಿ ದೊಡ್ಡ ಎಡ್ವಟಾಯಿಸ್‍ಮೆಂಟ್ ಕಂಡ ಕೂಡಲೇ ಅಂಗಡಿಗೆ ಓಡುವ ಅಭ್ಯಾಸ ೧೯೬೨ ರ ಚೀನೀ ಧಾಳಿಯ ಸಮಯದಲ್ಲೇ ಇವಳಿಗಿತ್ತು.

ಸೇಲ್ ಶುರುವಾಗುವ ಹಿಂದಿನ ರಾತ್ರಿ, ೧೩೦ ರೂಪಾಯಿ ಬೆಲೆಯ ಬಟ್ಟೆಗೆ ೩೭೦ ರ ಚೀಟಿ ಅಂಟಿಸಿ, ಬೆಲೆಯನ್ನು ೧೪೫ ಕ್ಕೆ ಇಳಿಸಿದ ಹಾಗೆ ತಿದ್ದುವ ಅಂಗಡಿಯವರ ಕ್ರಮ, ಅಂದಿನದು.

ಹಾಗೆಯೇ, ಸೇಲ್‍ನ ಸಮಯದಲ್ಲಿ ಅಂಗಡಿಯಲ್ಲಿ ತುಂಬಿದ್ದ ಹೆಂಗಸರ ಗುಂಪುಗಳ ಫೋಟೊ ಪೇಪರ್‍ನ ಜಾಹಿರಾತಿನಲ್ಲಿ ಬಂದರೆ ‘ನಾನೆಲ್ಲಿ ಇದ್ದೇನೆ ಈ ಫೋಟೊದಲ್ಲಿ ?’ ಎಂದು ಹುಡುಕುವ ಅಭ್ಯಾಸವೂ ಆ ಸಮಯದ್ದೇ.

ಕಡಿತ ಮಾರಾಟದ ಖರೀದಿಗೆ ಬಂದವರು ಖರೀದಿಸಿದ ವಸ್ತುವಿನ ಜೊತೆಗೆ ‘ಬಹುಮಾನ’ ಕೊಡುವ ಕ್ರಮ ಮುಂದಿನ ವರ್ಷಗಳಲ್ಲಿ ಜಾರಿಗೆ ಬಂತು. ಆಗಲೂ ‘ಸೇಲ್’ ನಲ್ಲಿ ಬಟ್ಟೆಕೊಳ್ಳುವುದು, ಕೊಂಡ ಮೇಲೆ ‘ಮೋಸವಾಯಿತೆಂದು’ ಪರಿತಪಿಸುವುದೂ ನಡೆದೇ ಇತ್ತು.

ಈಗಂತೂ ಬೆಲೆ ಕಡಿತದ ಮಾರಾಟಕ್ಕೆ ದೂರದೂರದ ಊರುಗಳ ವ್ಯಾಪಾರಿಗಳೇ ಮಂಗಳೂರಿಗೆ ಬರುತ್ತಾರೆ. (ಸ್ಥಳೀಯರನ್ನು ಮೀರಿಸುವ ರೀತಿಯ ವ್ಯಾಪಾರವನ್ನೂ ಮಾಡುತ್ತಾರೆ.)

‘ಮಿಲ್ಲಿನ ಗೋದಾಮಿಗೆ ಮಳೆ ಸುರಿದು ಹಾಳಾದ ಬಟ್ಟೆಯ ಸಂಗ್ರಹ’ - ‘ಆದಾಯ ತೆರಿಗೆಯ ಹೊರೆ ತೀರಿಸಲು ನಷ್ಟದಲ್ಲಿ ನಡೆಸುವ ವ್ಯಾಪಾರ’ - ‘ಪಾಲುದಾರರ ಬಾಕಿ ತೀರಿಸುವ ಒಂದೇ ದಾರಿ’ - ಎಂದೆಲ್ಲಾ ಹೇಳಿ ಶೇ. ೭೫ರ ಬೆಲೆ ಕಡಿತವೂ ಇದೆ ಎನ್ನುತ್ತಾರೆ. ಕೊಂಡ ಕಳಪೆ ಮಾಲಿನ ಬಗ್ಗೆ ದೂರುವ ಗಿರಾಕಿ ಬರುವ ಮೊದಲೇ ಊರನ್ನೂ ಬಿಟ್ಟಿರುತ್ತಾರೆ.

ಆದರೂ ಇವಳಿಗೆ ‘ಸೇಲ್’ ಖರೀದಿಯ ಅಭ್ಯಾಸ ಬಿಟ್ಟಿಲ್ಲ. ನಿಮಗೆ ಹೇಗೆ ? ಅಭ್ಯಾಸವೇನಾದರೂ ಇದೆಯಾ ?

“ ಇಲ್ಲಪ್ಪ - ನಾನು ಹಾಗೆಲ್ಲಾ ಹೋಗುವುದೇ ಇಲ್ಲ” ಎಂದ ಶ್ರೀಮತಿ ತ್ರಿಪಾಠಿಯವರ ಉತ್ತರ ಅರ್ಧಸತ್ಯವೆ ? ಇನ್ನೊಮ್ಮೆ ಕಂಡಾಗ ಅವರನ್ನೇ ಕೇಳಬೇಕು. (ಅದಕ್ಕೆ ಮೊದಲು ನಮ್ಮ ಗಂ. ಹೆಂ. ಜಗಳವೂ ಗುಟ್ಟಿನಲ್ಲಿ ರಾಜಿಯಾಗಬೇಕು).


-----------------

ಶ್ರೀ ಪದ್ಯಾಣ ಗೋಪಾಲಕೃಷ್ಣ ( ಪ.ಗೋ.)

ಶ್ರೀ ಪದ್ಯಾಣ ಗೋಪಾಲಕೃಷ್ಣ ( ಪ.ಗೋ. ೧೯೨೮ - ೧೯೯೭ ) - ಹುಟ್ಟೂರು ಗಡಿಯಂಚಿ ನಲ್ಲಿರುವ ಅಡ್ಯನಡ್ಕ. ೧೯೫೬ ರಿಂದ ೧೯೯೭ನೇ ಇಸವಿಯವರೆಗೆ ನಾಲ್ಕು ದಶಕಗಳಷ್ಟು ಧೀರ್ಘ ಕಾಲಾವಧಿಯಲ್ಲಿ ಹಲವು ಕನ್ನಡ ಪತ್ರಿಕೆಗಳ ಉಪಸಂಪಾದಕ, ವರದಿಗಾರರಾ ಗಿದ್ದ ಪ.ಗೋ.ರವರು ೧೯೬೩ರಿಂದ ಸುಮಾರು ಎರಡು ವರ್ಷಗಳ ಕಾಲ ಮಂಗಳೂರಿನಿಂದ ತಮ್ಮ ಸ್ವಂತ ಕನ್ನಡ ದಿನ ಪತ್ರಿಕೆ "ವಾರ್ತಾಲೋಕ"ದ ವರದಿಗಾರ, ಮುದ್ರಕ ಮತ್ತು ಪ್ರಕಾಶಕರಾಗಿ ನಡೆಸಿ ಪತ್ರಿಕೋದ್ಯಮದ ಎಲ್ಲಾ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದವರು. ಜೊತೆಗೆ ೧೩ ಪತ್ರಿಕೆಗಳಿಗೆ ಆಗಾಗ "ಕಾಲಂಕಾರ"ರಾಗಿ ಸುಮಾರು ನಾಲ್ಕು ಸಾವಿರ ಪುಟಗಳಿಗೂ ಮಿಕ್ಕಿದ ಕಾಲಂ ಸಾಹಿತ್ಯ ಪ್ರಸ್ತುತ ಪಡಿಸಿದ ಪ. ಗೋ. ಅವರಿಗೆ ಇದ್ದುದನ್ನು ಸರಳವಾಗಿ ಹೇಳುವ ರೂಢಿಯೇ ಇಲ್ಲ. ಅವರದೆಲ್ಲವೂ ವ್ಯಂಗ್ಯ ದಿಂದಲೇ ಪ್ರಾರಂಭ, ವ್ಯಂಗ್ಯದಿಂದಲೇ ಕೊನೆ! ಅವರು ಕೊಡುವ ಉದಾಹರಣೆಗಳು ಹಳೆಯ ನೀತಿ ಪದ್ಯಗಳನ್ನು ತಿರುಚಿಕೊಂಡು ಹುಟ್ಟಿಸುವ ವ್ಯಂಗ್ಯ ಮಾರ್ಮಿಕವಾದುದು.



ಪ. ಗೋಪಾಲಕೃಷ್ಣ ಸ್ಮಾರಕ ಸೇವಾ ಟ್ರಸ್ಟಿನ ವತಿಯಿಂದ ೨೦೦೨ನೆ ಇಸವಿಯಲ್ಲಿ ಮಂಗಳೂರಿನಿಂದ ಪ್ರಕಟಣೆಗೊಂಡ ಲೇಖನ ಮಾಲಿಕೆ "ನೋ ಚೇಂಜ್ ಕಥೆಗಳು". ಈ ೨೪ ಅಂಕಣಗಳ ಕಂಕಣವನ್ನು ಮರು ಪ್ರಕಟಿಸಲು ಅನುಮತಿಯನ್ನು ಇತ್ತ ಟ್ರಸ್ಟಿನ ಅಧ್ಯಕ್ಷರಾದ, ಪ.ಗೋ ರವರ ಸಹೋದ್ಯೋಗಿ, ಮಂಗಳೂರಿನ ಹಿರಿಯ ಪತ್ರಕರ್ತ ಶ್ರೀ. ಯು.ನರಸಿಂಹ ರಾವ್ ಮತ್ತು ಹುಟ್ಟೂರಿನ ಆಪ್ತ ಮಿತ್ರ, ಟ್ರಸ್ಟಿನ ಸ್ಥಾಪಕರಾದ ಬೆಂಗಳೂರಿನ ವೈದ್ಯ, ಲೇಖಕ ಡಾ. ಎಂ. ಬಿ. ಮರಕಿಣಿಯವರಿಗೆ ವಂದನೆಗಳು.



ಶೀರ್ಷಿಕೆಯ ೧೯೯೦ರ ದಶಕದ ವರ್ಣಚಿತ್ರ:

ಮಂಗಳೂರು ನಗರದ ಮೂರನೆಯ ದೂರವಾಣಿ ಎಲೆಕ್ಟ್ರೋನಿಕ್ ವಿನಿಮಯ ಕೇಂದ್ರ - ಕಂಕನಾಡಿಯ "ತಾಂತ್ರಿಕ ವರ್ಗಾವಣೆ" ಕಾರ್ಯಾರಂಭದ ಸಂಕೇತವಾಗಿ ದೀಪ ಬೆಳಗಿಸಿದ ದಕ್ಷಿಣ ಕನ್ನಡ ದೂರವಾಣಿ ಸಲಹಾ ಸಮಿತಿಯ ಸದಸ್ಯ, ಮಂಗಳೂರು ಟೈಮ್ಸ್ ಆಫ್ ಇಂಡಿಯಾ ಪ್ರತಿನಿಧಿ ಶ್ರೀ ಪ.ಗೋಪಾಲಕೃಷ್ಣ ಜೊತೆ ದ.ಕ.ಟೆಲಿಕಾಂ ಜನರಲ್ ಮ್ಯಾನೇಜರ್ ಶ್ರೀ. ಕೆ. ರಾಮ ಮತ್ತು ದ.ಕ. ಟೆಲಿಕಾಂ ಅಸಿಸ್ಟೆಂಟ್ ಇಂಜಿನಿಯರ್ ಶ್ರೀ ಟಿ. ಮಹಾಬಲ ಭಟ್ .

------

ಕೃಪೆ: ಗಲ್ಫ್ ಕನ್ನಡಿಗ

ಲಿಂಕ್ : http://www.gulfkannadiga.com/news-4481.html


Visitors to this page