Wednesday, May 27, 2009

’ನೋ ಚೇಂಜ್ ಕಥೆಗಳು’ -- ೧೯...ನಿಸ್ವಾರ್ಥ ಸೇವೆ ಅಂದರೇನ್ರಿ ?


















ಹೊಸಸಂಜೆ ಪತ್ರಿಕೆಗಾಗಿ ಮಂಗಳೂರಿನ ಪತ್ರಕರ್ತ ಶ್ರೀ ಪದ್ಯಾಣ ಗೋಪಾಲಕೃಷ್ಣ (ಪ.ಗೋ.) ಅವರು ಬರೆದ ೨೪ ಅಂಕಣಗಳ ಕಂಕಣ" ನೋ ಚೇಂಜ್ ಕಥೆಗಳು". ಈ ಬರಹಗಳನ್ನು ಅವರ ಸ್ಮಾರಕಾರ್ಥವಾಗಿ ’ಗಲ್ಫ್ ಕನ್ನಡಿಗ’ ಪ್ರತಿ ಗುರುವಾರ ಪ್ರಕಟಿಸಲಾಗುತ್ತಿದ್ದು ಇದು ಹತ್ತೊಂಬತ್ತನೇ ಅಂಕಣ.



ನಿಸ್ವಾರ್ಥ ಸೇವೆ ಅಂದರೇನ್ರಿ ?

ಯಾರು ಹಾಗೆ ಕೇಳಿದವರು ? ಹಾಂ ನೆನಪಾಯಿತು. ಬೇರೆ ಇನ್ಯಾರೂ ಅಲ್ಲ. ಅವಳು, ನಮ್ಮ ಉದ್ಗಾರಿ ನಂಬರ್ ವನ್‍ರವರ ಮೊಮ್ಮಗಳು. ಅದೇ ಹೆಲ್ಮೆಟ್ ಹಾಕಿ ಟಿ.ವಿ.ಎಸ್. ಹಾರಿಸುವ ಕಾಲೇಜ್ ಕನ್ಯೆ, ಅವಳು ತನ್ನ ಫ್ರೆಂಡ್ ಕೈಯಲ್ಲಿ ಕೇಳಿದ ಪ್ರಶ್ನೆ ಅದು.

ಅಪರೂಪಕ್ಕೊಮ್ಮೆ ಅವಳೂ ಅವಳ ಸ್ನೇಹಿತೆಯೂ ಆ ಟಿ.ವಿ.ಎಸ್.ನಲ್ಲಿ ಡಬಲ್ ರೈಡ್ ಸವಾರಿ ಮಾಡುವ ಅಭ್ಯಾಸವಿದೆ. ಹಾಗೇ ಮೊನ್ನೆಯೂ ಹೋಗುತ್ತಾ ಇದ್ದರು - ನಮ್ಮ ಮನೆ ಎದುರಿನಿಂದಲೇ. ವಿಷಯ ಬಹಳ ಸೀರಿಯಸ್ಸಾಗಿತ್ತೂಂತ ಕಾಣುತ್ತದೆ. ಇಲ್ಲವಾದರೆ ಮನೆ ಗೇಟಿನ ಮುಂದೆಯೇ ನಿಂತು ರಸ್ತೆ ನೋಡುತ್ತಾ ಇದ್ದ ಈ ‘ಅಂಕಲ್’ಗೆ “ಹಲ್ಲೋ” ಕೂಡಾ ಹೇಳದೆ, ಹೋಗಲಿ ನನ್ನತ್ತ ತಿರುಗಿ ಕೂಡಾ ನೋಡದೆ, ಹೇಗೆ ಹೊರಟು ಹೋದಳು ?

ಅದೇ ಸಂಜೆ, ಗೇಟಿನ ಎದುರಿಗೇ ನಿಂತಿದ್ದೆ. ಬೆಳಗಿನ ಅದೇ ವಿಷಯವನ್ನು ಯೋಚಿಸುತ್ತಾ ಇದ್ದೆ. (ಮಾಡಲು ಬೇರೆ ಕೆಲಸವೇನೂ ಇಲ್ಲವಲ್ಲ ?)

ನಿರೀಕ್ಷಿಸಿದಂತೆ ಆ ಹೊತ್ತಿಗೇ, ಟಿ.ವಿ.ಎಸ್. ನಮ್ಮ ರಸ್ತೆಗೆ ಬಂತು. ಅನಿರೀಕ್ಷಿತವಾಗಿ ನನ್ನ ಮುಂದೆಯೇ ನಿಂತಿತು. (ಹಾಗಾದರೆ, ಮಗು ನಾನು ಬೆಳಗ್ಗೆ ನಿಂತಿದ್ದುದನ್ನು ಗಮನಿಸಿದ್ದಾಳೆ!)

ಮೊದಲು, ಅವಳ ಹಿಂದೆ ಅವಳ ಫ್ರೆಂಡ್ ಕುಳಿತಿಲ್ಲ ಎಂಬುದನ್ನು ಖಚಿತಪಡಿಸಿಕೊಂಡೆ. ಧೈರ್ಯವಾಗಿ “ಏನ್ರೀ, ಏನು ಸಮಾಚಾರ?” ಅಂತ ಕೇಳಿಯೂ ಬಿಟ್ಟೆ.

“ವ್ಹಾಟ್ ಅಂಕಲ್? ನಾನು ರೀ... ಅಂತ ಹೇಳಿದ್ದಕ್ಕೆ ತಮಾಷೆ ಮಾಡ್ತೀರಾ?” ಎಂಬ ಪ್ರಶ್ನಾ-ಉತ್ತರದ ಜೊತೆಗೆಯೇ “ಅವಳು ಬೆಂಗ್ಳೂರಿನವಳು. ಹಾಗಾಗಿ ರೀ ಅಂತ ಸೇರಿಸ್ದೆ. ಅಷ್ಟೆ, ಬೇರೇನೂ ಇಲ್ಲ” ಎಂಬ ವಿವರಣೆಯೂ ಸೇರಿತು.

ಸರಿಯಮ್ಮಾ ಗೊತ್ತಾಯಿತು. ಆದರೆ, ನಾನು ಕೇಳಬೇಕೂಂತ ಇದ್ದದ್ದು ಅದನ್ನಲ್ಲ, ನಿನ್ನ ‘ನಿಸ್ವಾರ್ಥ’ದ ಪ್ರಶ್ನೆಗೆ ಉತ್ತರ ಸಿಕ್ಕಿತೋಂತ ಕೇಳುವ ಅಂದಾಜು ಮಾಡಿದ್ದೆ.

ಬಿಡಿ ಅಂಕಲ್, ಅದೆಲ್ಲ ಟೆಕ್ಸ್‍ಟ್ ಬುಕ್ಸ್ ಒಳಗಿನ ಬದನೆಕಾಯಿ. ಏನೂ ಫಲ ನಿರೀಕ್ಷಿಸದೆ ಸೇವೆ ಮಾಡುವವರು ಯಾರಿದ್ದಾರೆ ಈ ಕಾಲದಲ್ಲಿ ? ಸುಮ್ಮನೆ ನಿಸ್ವಾರ್ಥ ಸೇವೆ ಅಂತ ಬಾಯಲ್ಲಿ ಬಡಾಯಿ ಕೊಚ್ಚಿಕೊಳ್ಳುವವರು ಮಾತ್ರ ಇರುವುದು.

ಅಂಥಾದ್ದೇನಾದ್ರೂ ಅನುಭವ ಆಗಿದೆಯಾ ನಿನಗೆ ?

ಅವಳು “ಇಲ್ಲ -ಇಲ್ಲ -ಇಲ್ಲ” ಎಂದಾಗಲೇ ಅರ್ಥವಾಯಿತು.“ಅದನ್ನು ಬೇಕಾದರೆ ಇನ್ನು ಯಾವಾಗಲಾದರೂ ಹೇಳು. ಆದರೆ, ನಿಸ್ವಾರ್ಥವಾಗಿ ಸೇವೆ ಸಲ್ಲಿಸುವವರು ಇಲ್ಲವೇ ಇಲ್ಲ ಅಂತ ಮಾತ್ರ ಹೇಳಬೇಡ”

-ಹೋ,ಗೊತ್ತಾಯಿತು. ಮುಂದಿನ ಸೆಂಟೆನ್ಸ್ ‘ಅಂಥವರು ಹಿಂದೆ ಇದ್ದರು,ಆ ನಂತರವೂ ಇದ್ದರು. ಈಗ್ಲೂ ಇದ್ದಾರೆ’ ಅಂತ ಅಲ್ವಾ ?

ನಿಜ ಮರೀ, ಸರಿಯಾಗಿಯೇ ಹೇಳಿದೆ. ಯಾರಾದ್ರೂ ಅಂಥವರ ಕಥೆ ಗೊತ್ತಾ? ನಿನಗೆ ಗೊತ್ತಿರಲಾರದು -ಅನ್ನುವುದು ನನಗೂ ಗೊತ್ತು. ಕೇಳ್ತೀಯಾ ಒಂದೆರಡನ್ನು ?

.......... ಯಾವುದೇ ಪ್ರತಿಫಲದ ಅಪೇಕ್ಷೆ ಇಲ್ಲದೆ ತನ್ನ ಫೋಟೊ ಅಥವಾ ಹೆಸರಾದ್ರೂ ಪೇಪರಿನಲ್ಲಿ ಬರಲಿ ಎನ್ನುವ ಆಸೆಯೂ ಇಲ್ಲದೆ, ಸಲ್ಲಿಸಿದ್ದ ಕಿರುಸೇವೆಗಳ ಕಥೆ -

ಸುಮಾರು ೧೯೫೯ರಲ್ಲಿ ಪಟ್ಟಣ ಪರಿಸರದಲ್ಲಿ ಒಬ್ಬ ಭಿಕ್ಷುಕನ ದಿನನಿತ್ಯ ಸಂಚಾರ ಇತ್ತು. ಅವನಿಗೆ ಎರಡು ಕಾಲುಗಳೂ ಇರಲಿಲ್ಲ. ಒಂದು ಸಣ್ಣ ಹಲಿಗೆಗೆ ನಾಲ್ಕು ಹಳೆ ಬೇರಿಂಗ್‍ಗಳು ಜೋಡಿಸಿದ್ದ ಒಂದು ತಳ್ಳುಗಾಡಿ ಮಾತ್ರ ಅವನ ಆಸ್ತಿ.ಅದರಲ್ಲಿ ಕುಳಿತು,ಕೈಗಳನ್ನು ನೆಲಕ್ಕೆ ಊರಿ ತಳ್ಳಿದರೆ ಸಾಕು ‘ಗಾಡಿ’ ಸರಾಗವಾಗಿ ಓಡುತ್ತಾ ಇತ್ತು. ಅದರಲ್ಲಿ ಕುಳಿತೇ ಅವನ ಭಿಕ್ಷಾಟನೆ.

ಒಂದು ದಿನ ಅವನ ಸಂಚಾರದ ವೇಳೆಯಲ್ಲಿ ಆಕಸ್ಮಿಕವಾಗಿ ರಸ್ತೆ ಬದಿಯಿಂದ ನಡು ರಸ್ತೆಗೆ ಬಂದ ಒಂದು ಮಗು ಬಸ್ಸಿನ ಅಡಿಗೆ ಬೀಳಲಿರುವುದನ್ನು ಗಮನಿಸಿದ ಆ ಭಿಕ್ಷುಕ. ತನ್ನ ಪ್ರಾಣಾಪಾಯವನ್ನೂ ಲೆಕ್ಕಿಸದೆ ರಸ್ತೆಯ ನಡುವಿಗೆ ತನ್ನ ಗಾಡಿ ಚಲಾಯಿಸಿ, ಮಗುವನ್ನು ‘ಸೆಳೆದುಕೊಂಡು’ ತನ್ನ ಗಾಡಿಗೆ ಏರಿಸಿ, ಇನ್ನೇನು ಬಸ್ ಮೈಮೇಲೆ ಹರಿಯಿತು ಎನ್ನುವ ಮೊದಲು ಫುಟ್‍ಪಾತಿಗೆ ತಂದುಬಿಟ್ಟ. ಕೂಡಲೆ ಬ್ರೇಕ್ ಹಾಕಿದ್ದ ಬಸ್ಸಿನ ಡ್ರೈವರ್ ಸಹಿತ ಇದ್ದ ಎಲ್ಲರೂ, ಆಚೆಗೆ ಮಗುವಿನ ಹೆತ್ತವರೂ ಕಣ್ಣು ಬಾಯಿ ಬಿಟ್ಟು ನೋಡುತ್ತಿದ್ದ ಹಾಗೆ, ಮಗುವನ್ನು ಅದರ ತಂದೆ ತಾಯಿಗಳಿಗೆ ಒಪ್ಪಿಸಿದ. ತಂದೆ, ಬಹುಮಾನವಾಗಿ ಕೊಡಲು ಎರಡು ರೂಪಾಯಿಯ ಒಂದು ನೋಟನ್ನು ಮುಂದೆ ಚಾಚಿದಾಗ “ಇದು ದುಡ್ಡಿಗಾಗಿ ಮಾಡಿದ ಕೆಲಸವಲ್ಲ, ಮನುಷ್ಯನಾಗಿ ಮಾಡಿದ್ದು,” ಎಂದು (ತುಳುವಿನಲ್ಲಿ) ಹೇಳಿ, ಬಹುಮಾನವನ್ನು ನಿರಾಕರಿಸಿ ಹೊರಟು ಹೋದ.

...... ಸಾಮಾನ್ಯ ೧೯೭೨ರಲ್ಲಿ ಒಂದು ಬಾರಿ ಫಳ್ನೀರ್ ರಸ್ತೆ (ಮಳೆಯಿಂದಾಗಿ) ಹೊಂಡ ಬಿದ್ದು ಕುಲಗೆಟ್ಟು ಹೋಗಿತ್ತು. ಮೋತಿ ಮಹಲ್ ಎದುರಿಗೆ ಇದ್ದ ಹೊಂಡಗಳಲ್ಲಿ ಕೆಲವು ಯುವಕರು ಬಾಳೆಸಸಿ (ಯಾಕಾಗಿ ಅಂತ ಅಂದಾಜು ಇದೆಯಲ್ಲ ?) ನೆಡುತ್ತಾ ಇದ್ದುದನ್ನು ತಿಳಿದ ಒಬ್ಬ ಪೇಪರಿನವರು ಅದರ ಫೋಟೋ ತೆಗೆಸಿದರು. ಆದರೆ ಫೋಟೋದಲ್ಲಿ ಹೊಂಡಗಳ ‘ಗಾತ್ರ’ ತೋರಿಸಲು ಸಾಧ್ಯವಾಗುತ್ತಿರಲಿಲ್ಲ. ಅದಕ್ಕಾಗಿ ಒದ್ದಾಡುತ್ತಿದ್ದುದನ್ನು ಗಮನಿಸಿದ ಒಬ್ಬರು ‘ಫಿಯೆಟ್’ ಕಾರ್ ಮಾಲಕರು, ತನ್ನ ಕಾರನ್ನೇ ಒಂದು ಹೊಂಡಕ್ಕೆ ಇಳಿಸಿ ಒಳಕ್ಕೆ ಸಿಕ್ಕಿಸಿ “ಮಿಸ್ಟರ್ ಈಗ ಒಂದು ಫೋಟೋ ತೆಗೆಯಿರಿ” ಎಂದರು. ಚಿತ್ರ ತೆಗೆದಾದ ಮೇಲೆ, ಕಾರನ್ನು ಮೇಲಕ್ಕೆತ್ತಲು ಸುಮಾರು ಅರ್ಧ ಗಂಟೆ ಬೇಕಾಯಿತು. ಆಗ, ಅವರಿಗಾದ ಅನಾನುಕೂಲಕ್ಕಾಗಿ ವಿಷಾದ ವ್ಯಕ್ತಪಡಿಸಿದಾಗ “ಛೆ ! ಅದರಲ್ಲಿ ಏನಿದೆ, ನೀವು ಮಾಡುತ್ತಾ ಇರುವುದು ಪಬ್ಲಿಕ್ ಸರ್ವಿಸ್ ಅಂತ ಗೊತ್ತು. ಈ ಫೋಟೋ ಪೇಪರಿನಲ್ಲಿ ಬಂದ ಕಾರಣದಿಂದಲಾದರೂ ಈ ರೋಡ್ ಸರಿ ಆದರೆ ಸಾಕು” ಎಂದು ಹೇಳಿ, ಕಾರ್ ಮೇಲಕ್ಕೆತ್ತಿದ ನಂತರ ಹೊರಟು ಹೋದರು. (ಫೋಟೋ ಪೇಪರಿನಲ್ಲಿ ಪ್ರಕಟವಾದ ಮೇಲೆ ಅದೇ ರಸ್ತೆ ಕಾಂಕ್ರೀಟ್ ಲೇಪ ಆಯಿತೆನ್ನುವುದು ಮತ್ತಿನ ಸುದ್ದಿ).

ಇಂಥಾದ್ದೇ ‘ನಿಸ್ವಾರ್ಥ’ ಘಟನೆಗಳು ಇಂದಿಗೂ ನಡೆಯುತ್ತಾ ಇಲ್ವಾ ?

“ಇದೆ ಅಂಕಲ್” ಎಂದ ಹುಡುಗಿ, ತನ್ನ ಅನುಭವವನ್ನು ಹೇಳಲು ಸಂಕೋಚಪಟ್ಟವಳ ಹಾಗೆ ವರ್ತಿಸಿ, ನಿಧಾನವಾಗಿ ಟಿ.ವಿ.ಎಸ್. ತಳ್ಳಿಕೊಂಡು ಹೋಗುವ ಮೊದಲು, ರಸ್ತೆಯಲ್ಲಿ ಬಿದ್ದಿದ್ದ ಬಾಟ್ಲಿ ತುಂಡು ಒಂದನ್ನು ಹೆಕ್ಕಿ ಬದಿಯ ಚರಂಡಿಗೆ ಎಸೆದುದು ಕಂಡಿತು.

---
ಶ್ರೀ ಪದ್ಯಾಣ ಗೋಪಾಲಕೃಷ್ಣ ( ಪ.ಗೋ.)


ಶ್ರೀ ಪದ್ಯಾಣ ಗೋಪಾಲಕೃಷ್ಣ ( ಪ.ಗೋ. ೧೯೨೮ - ೧೯೯೭ ) - ಹುಟ್ಟೂರು ಗಡಿಯಂಚಿನಲ್ಲಿರುವ ಅಡ್ಯನಡ್ಕ. ೧೯೫೬ ರಿಂದ ೧೯೯೭ನೇ ಇಸವಿಯವರೆಗೆ ನಾಲ್ಕು ದಶಕಗಳಷ್ಟು ಧೀರ್ಘ ಕಾಲಾವಧಿಯಲ್ಲಿ ಹಲವು ಕನ್ನಡ ಪತ್ರಿಕೆಗಳ ಉಪಸಂಪಾದಕ, ವರದಿಗಾರರಾಗಿದ್ದ ಪ.ಗೋ.ರವರು ೧೯೬೩ರಿಂದ ಸುಮಾರು ಎರಡು ವರ್ಷಗಳ ಕಾಲ ಮಂಗಳೂರಿನಿಂದ ತಮ್ಮ ಸ್ವಂತ ಕನ್ನಡ ದಿನ ಪತ್ರಿಕೆ "ವಾರ್ತಾಲೋಕ"ದ ವರದಿಗಾರ, ಮುದ್ರಕ ಮತ್ತು ಪ್ರಕಾಶಕರಾಗಿ ನಡೆಸಿ ಪತ್ರಿಕೋದ್ಯಮದ ಎಲ್ಲಾ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದವರು. ಜೊತೆಗೆ ೧೩ ಪತ್ರಿಕೆಗಳಿಗೆ ಆಗಾಗ "ಕಾಲಂಕಾರ"ರಾಗಿ ಸುಮಾರು ನಾಲ್ಕು ಸಾವಿರ ಪುಟಗಳಿಗೂ ಮಿಕ್ಕಿದ ಕಾಲಂ ಸಾಹಿತ್ಯ ಪ್ರಸ್ತುತ ಪಡಿಸಿದ ಪ. ಗೋ. ಅವರಿಗೆ ಇದ್ದುದನ್ನು ಸರಳವಾಗಿ ಹೇಳುವ ರೂಢಿಯೇ ಇಲ್ಲ. ಅವರದೆಲ್ಲವೂ ವ್ಯಂಗ್ಯ ದಿಂದಲೇ ಪ್ರಾರಂಭ, ವ್ಯಂಗ್ಯದಿಂದಲೇ ಕೊನೆ! ಅವರು ಕೊಡುವ ಉದಾಹರಣೆಗಳು ಹಳೆಯ ನೀತಿ ಪದ್ಯಗಳನ್ನು ತಿರುಚಿಕೊಂಡು ಹುಟ್ಟಿಸುವ ವ್ಯಂಗ್ಯ ಮಾರ್ಮಿಕವಾದುದು.

ಪ. ಗೋಪಾಲಕೃಷ್ಣ ಸ್ಮಾರಕ ಸೇವಾ ಟ್ರಸ್ಟಿನ ವತಿಯಿಂದ ೨೦೦೨ನೆ ಇಸವಿಯಲ್ಲಿ ಮಂಗಳೂರಿನಿಂದ ಪ್ರಕಟಣೆಗೊಂಡ ಲೇಖನ ಮಾಲಿಕೆ "ನೋ ಚೇಂಜ್ ಕಥೆಗಳು". ಈ ೨೪ ಅಂಕಣಗಳ ಕಂಕಣವನ್ನು ಮರು ಪ್ರಕಟಿಸಲು ಅನುಮತಿಯನ್ನು ಇತ್ತ ಟ್ರಸ್ಟಿನ ಅಧ್ಯಕ್ಷರಾದ, ಪ.ಗೋ ರವರ ಸಹೋದ್ಯೋಗಿ, ಮಂಗಳೂರಿನ ಹಿರಿಯ ಪತ್ರಕರ್ತ ಶ್ರೀ. ಯು.ನರಸಿಂಹ ರಾವ್ ಮತ್ತು ಹುಟ್ಟೂರಿನ ಆಪ್ತ ಮಿತ್ರ, ಟ್ರಸ್ಟಿನ ಸ್ಥಾಪಕರಾದ ಬೆಂಗಳೂರಿನ ವೈದ್ಯ, ಲೇಖಕ ಡಾ. ಎಂ. ಬಿ. ಮರಕಿಣಿಯವರಿಗೆ ನಮ್ಮ ವಂದನೆಗಳು.

----
ಶೀರ್ಷಿಕೆಯ ೧೯೭೦ರ ದಶಕದ ಛಾಯಚಿತ್ರ:

ದಿನಾಂಕ ೧೨ ಜುಲೈ ೧೯೭೮ರಂದು ಡ್ರೆಜಿಂಗ್ ಕಾರ್ಪೋರೇಶನ್ ಆಫ್ ಇಂಡಿಯಾದ ಮ್ಯಾನೇಜಿಂಗ್ ಡೈರೆಕ್ಟರ್ ಕ್ಯಾಪ್ಟನ್. ಎಸ್. ಕೆ. ಸೋಮಯಾಜುಲು ಅವರು ನವ ಮಂಗಳೂರು ಬಂದರಿನಲ್ಲಿ ಕಾರ್ಯ ನಿರ್ವಹಿಸುತಿದ್ದ " ಎಂ. ಒ. ಟಿ.- VIII ಡ್ರೆಜ್ "ನಲ್ಲಿ ಆಯೋಜಿಸಿದ ಪತ್ರಿಕಾ ಗೋಷ್ಠಿಯಲ್ಲಿ ಪಾಲ್ಗೊಂಡ ನವ ಮಂಗಳೂರು ಬಂದರಿನ ಚೀಫ್ ಎಂಜಿನಿಯರ್ ಶ್ರೀ. ಪಂಡಿತಾರಾದ್ಯ ಅವರೊಂದಿಗೆ ಅಂದಿನ " ಸಂಯುಕ್ತ ಕರ್ನಾಟಕ" ಪತ್ರಿಕೆಯ ಮಂಗಳೂರು ಪ್ರತಿನಿಧಿ ಶ್ರೀ. ಪ. ಗೋಪಾಲಕೃಷ್ಣ.

----
ಕೃಪೆ: ಗಲ್ಫ್ ಕನ್ನಡಿಗ
ಲಿಂಕ್ : http://www.gulfkannadiga.com/news-6804.html

---

No comments:

Visitors to this page