Sunday, May 17, 2009

’ನೋ ಚೇಂಜ್ ಕಥೆಗಳು’ - ೧೭.ತೇಮಾನು ಮಂತ್ರ ಜಪಿಸುತ್ತೀರಮ್ಮಾ !














ಹೊಸಸಂಜೆ ಪತ್ರಿಕೆಗಾಗಿ ಹೆಸರಾಂತ ಪತ್ರಕರ್ತ ಶ್ರೀ ಪದ್ಯಾಣ ಗೋಪಾಲಕೃಷ್ಣ (ಪ.ಗೋ.) ಅವರು ಬರೆದ ೨೪ ಅಂಕಣಗಳ ಕಂಕಣ" ನೋ ಚೇಂಜ್ ಕಥೆಗಳು". ಈ ಬರಹಗಳನ್ನು ಅವರ ಸ್ಮಾರಕಾರ್ಥವಾಗಿ ಮರು ಪ್ರಕಟಿಸುವ ಭಾಗ್ಯ ’ಗಲ್ಫ್ ಕನ್ನಡಿಗ’ಕ್ಕೆ ಒದಗಿದ್ದು ಪ್ರತಿ ಗುರುವಾರ ಪ್ರಕಟಿಸಲಾಗುತ್ತಿದ್ದು ಇದು ಹದಿನೇಳನೇ ಅಂಕಣ.




ತೇಮಾನು ಮಂತ್ರ ಜಪಿಸುತ್ತೀರಮ್ಮಾ !
ಚಿಕ್ಕವನಾಗಿದ್ದಾಗಿನಿಂದಲೂ ನಾನು ಕೇಳುತ್ತಿದ್ದ ಒಂದು ಶಬ್ದ ಕಳೆದ ವಾರವೂ ಕೇಳಿಸಿತು. ಆ ಶಬ್ದದ ಮೂಲ ಅಂದೂ ಗೊತ್ತಿರಲಿಲ್ಲ. ಈಗಲೂ ಗೊತ್ತಿಲ್ಲದಿರಲು ಅದರ ಪರಿಚಯ ಗಂಡಸರಿಂದಲೂ ಹೆಚ್ಚಾಗಿ ಹೆಂಗಸರಿಗೇ ಇರುವುದು ಒಂದು ಕಾರಣ - ಆಗಿರಲೂ ಬಹುದೆನ್ನಿ.

ಶಬ್ದ ಯಾವುದು ಅಂತ ಕೇಳ್ತೀರಾ ? ಅಂಥಾ ದೊಡ್ಡ ಅಥವಾ ಕಠಿಣ ಶಬ್ದವೇನೂ ಅಲ್ಲ. ಬರೇ ಮೂರಕ್ಷರದ ಶಬ್ದ ಅದು. ತೇ -ಮಾ-ನು ಎಂಬ ಅಕ್ಷರಗಳು ಮಾತ್ರ ಅದರಲ್ಲಿ ಇರುವುದು.

ಆ ಮೂರಕ್ಷರ ಏನಾದರೂ ಕೇಳಿದರೆ ಬಂದ ಮೈನಡುಕ ಕಡಿಮೆಯಾಗಲು ಕಡಿಮೆ ಎಂದರೆ ಮೂರು ಗಂಟೆಗಳ ಹೊತ್ತು ಆದರೂ ಬೇಕು ಎಂಬುದು ನನ್ನ ಅನುಭವ. ಆದರೆ ನಾನು ಮೈನಡುಕ ಬರಿಸಿಕೊಂಡ ಸಂದರ್ಭಗಳು ಹೆಚ್ಚಿರಲಿಲ್ಲ - ಕಳೆದ ಮೂವತ್ತು ವರ್ಷಗಳಲ್ಲಿ ಮೂರು ಬಾರಿ ಮಾತ್ರ ಹಾಗಾಗಿತ್ತಷ್ಟೇ. ಇತ್ತೀಚೆಗೆ ಹಾಗಾದುದು, ಅದೇ ಹೇಳಿದೆನಲ್ಲಾ ಕಳೆದ ವಾರ.

ಈ ಶಬ್ದ ಎಲ್ಲಿಂದ ಬಂತು ? ಯಾವ ಭಾಷೆಯಲ್ಲಿ ಹುಟ್ಟಿಕೊಂಡು ಕರಾವಳಿ ಕನ್ನಡದಲ್ಲಿ ಬಂದು ನೆಲೆಸಿತು ? ಎಂದು
ತಿಳಿಯಲೇಬೇಕೆಂಬ ಹಠ ಮೂರನೆ ಬಾರಿ ಅದನ್ನು ಕೇಳಿಸಿಕೊಂಡಾಗ ಮೂಡಿತು. ಬೇರೆಲ್ಲಿ ಅಲ್ಲವಾದರೂ ಕಿಟೆಲ್ ಶಬ್ದಕೋಶದಲ್ಲಿ ಅದು ಇರಬಹುದು. ಆ ಕಿಟೆಲ್ ಡಿಕ್ಷನರಿ ಇನ್ನೆಲ್ಲಿಯೂ ಇಲ್ಲವಾದರೂ ನಮ್ಮ ಪಂಡಿತರಲ್ಲಿ ಇದ್ದೇ ಇದ್ದೀತು. ಅದನ್ನು ನೋಡಲೇಬೇಕು ಎಂದೆ. ಪಂಡಿತರಲ್ಲಿಗೆ ಓಡಿದೆ -ಅಲ್ಲ ಧಾವಿಸಿದೆ.

ಅವರಲ್ಲಿನನ್ನ ಡಿಕ್ಷನರಿಯ ಅಗತ್ಯವನ್ನು ಹೇಳಿಕೊಂಡೆ, ‘ಯಾವ ಶಬ್ದದ ಅರ್ಥ ಬೇಕಾಗಿದೆ ನಿಮಗೆ ?’ ಎಂದವರು ಸಹಜವಾಗಿ ಕೇಳಿದರೂ ಉತ್ತರ ಕೊಡದೆ “ಡಿಕ್ಷನರಿ ಇದ್ದರೆ ಕೊಡಿ ಸ್ವಾಮಿ, ಶಬ್ದ ಆಮೇಲೆ ಹೇಳ್ತೇನೆ” ಎಂದು ಬಿಗುಮಾನ ತೋರಿಸಿದೆ. ಪಾಪ ! ಹುಡುಕಿ ತಂದುಕೊಟ್ಟರು. ಸ್ವಾಭಾವಿಕ ಕುತೂಹಲದಿಂದ ನನ್ನೆದುರಿನ ಕುರ್ಚಿಯಲ್ಲೇ ಕುಳಿತು ನನ್ನತ್ತ ನೋಡುತ್ತಲೇ ಉಳಿದರು.

ಅವಸರವಸರವಾಗಿ ಪುಟ ಮಗುಚಿದೆ. ೧೮೯೪ರಲ್ಲಿ ಪ್ರಕಟವಾಗಿದ್ದ ಪುಸ್ತಕದ ೧೯೯೪ರ ಮರು ಮುದ್ರಣದ ಆವೃತ್ತಿಯ ೭೪೭ನೇ ಪುಟದಲ್ಲಿ ಅದನ್ನು ಕಂಡೊಡನೆ ‘ಹೋ ಸಿಕ್ಕಿತು !’ ಎಂದು ಕೂಗಿಕೊಂಡೆ.

“ಸಿಕ್ಕಿದ್ದಾದರೂ ಏನು ಮಹರಾಯರೆ ? ಸ್ವಲ್ಪ ಬಿಡಿಸಿ ಹೇಳಿ” ಎಂದು ಕೇಳಿಕೊಂಡ ಪಂಡಿತರಿಗೆ -

“ಬಿಡಿಸಿದ್ದೇನೆ -ಪುಸ್ತಕ. ಈಗ ಹೇಳುತ್ತೇನೆ-ಓದಿ” ಎಂದು ಹೆಮ್ಮೆಯಿಂದ ಹೇಳಿ, ಓದಿದ್ದೇನು ? ಕೇಳಿ.

“....... ತೇಮಾನ - Waste from rubbing especially metals (ತೇಗಡೆ) loss in assaying metals (ತೇಯ್ಮಾನ) the state of being wasted,above work..afraid of work or lazy (hesitation, delay,sluggishness, ತೇಯ್ಮಾನಕ್ಕಾರ, a mean, penurious man,fond of living at other people's cost) ತೇಮಾನದಿನ್ದ ಹೋಮಾ ಮಾಡಿ, ಗುಮಾನ ಪಟ್ಟ (ಗಾದೆ) ಎಂದೆಲ್ಲ ಏಳು ಪಂಕ್ತಿಯಿಡೀ ಬರದಿದ್ದುದೆಲ್ಲವನ್ನೂ ಪಟಪಟನೆ ಓದಿದೆ. ಕೂಡಲೇ ಕೇಳಿಸಿದ ಪಂಡಿತರ ‘ಪಕ-ಪಕ-ಪಕ-ಪಕ’ ನಗುವಲ್ಲದಿದ್ದರೆ ನನ್ನ ‘ಪಟ ಪಟ’ ಮತ್ತೂ ಮುಂದುವರಿಯುತ್ತಿತ್ತು. ನಗು ಕೇಳಿಸಿತು - ಆದ್ದರಿಂದ ನನ್ನ ಪಟ ಪಟ (ಅಥವಾ ಪಿಟಿಪಿಟಿ ಅಂದುಕೊಳ್ಳಿ) ನಿಂತಿತು.

ನಗುವನ್ನು ಕಷ್ಟಪಟ್ಟು ತಡೆದುಕೊಂಡ ಪಂಡಿತರು “ನಿಮ್ಮ ಗಡಿಬಿಡಿ ಇಷ್ಟಕ್ಕೆಯೋ ? ನನ್ನತ್ರ ಕೇಳಿದ್ದರೆ ಆಗಲೇ ಹೇಳ್ತಿದ್ದೆ. ನಮ್ಮವರೊಟ್ಟಿಗೆ ನಿಮ್ಮವರೂ ಸೇರಿ, ನಮಗಿಬ್ಬರಿಗೂ ತೇಮಾನಿನ ಬಿಸಿ ಮುಟ್ಟಿಸಿದ್ದಾರೆ. ನಿಮ್ಮ ತಲೆಗೆ ಹೊಳೀಲಿಕ್ಕೆ ಅದಕ್ಕೆ ಏಳು ದಿನ ಬೇಕಾಯಿತಾ ?” ಎಂದೇ ಬಿಟ್ಟರು.

ಅವರು ಹೇಳಿದ್ದು ನಿಜ. ಹಾಗಾಗಿ ನನ್ನ ಎಂದಿನ ಅಭ್ಯಾಸ ಬದಲಾಯಿಸಿ, “ತೇಮಾನು -ಬಿಸಿ ಕಥೆ ಯಾವುದಾದರೂ ನೆನಪಿದ್ದರೆ ಹೇಳಿ ಪಂಡಿತರೇ. ಏನಾದ್ರೂ ಹೋಲಿಕೆ ಸಿಕ್ಕೀತೋ ಅಂತ ನೋಡ್ತೇನೆ” ಎಂದೆ ದೈನ್ಯವಾಗಿ.

“ಪ. ಗೋಪಾಲಕೃಷ್ಣರೇ...... (ಹೂಂ, ತಮಾಷೆ ಮಾಡಿ !) ಈ ತೇಮಾನು ಶಬ್ದಕ್ಕೂ ಹೆಂಗಸರಿಗೂ, ಇರುವ ನಂಟು ಬಹಳ ಹಳೆಯ ಕಾಲದ್ದು, ನನಗೆ ಗೊತ್ತಿದ್ದ ಹಾಗೆ ನಮ್ಮ ಅಜ್ಜಿಯ ಕಾಲದಲ್ಲೇ ಅದು ಇತ್ತು. ತೇಮಾನು ಎಲ್ಲದರಲ್ಲೂ ಸಾಮಾನ್ಯವಾಗಿ ಬರುತ್ತದಂತೆ. ಎಣ್ಣೆಗೆ ಕೊಟ್ಟ ಕೊಬ್ಬರಿಯಲ್ಲೂ ಬೀಸಿದ ಗೋದಿಯಲ್ಲೂ. ಆದರೆ ಅದನ್ನು ನಮ್ಮಂಥವರು ಗಣ್ಯ ಮಾಡುವುದಿಲ್ಲ. ಹೆಂಗಸರು ಗಣ್ಯ ಮಾಡಿದರೂ ಹೇಳುವುದಿಲ್ಲ. ಅದನ್ನು ಸಹಿಸಿಕೊಳ್ತಾರೆ. ನಮ್ಮ ವಿಚಾರ ಎಲ್ಲಾ ಹೊಟ್ಟೆಗೆ ಹೋಗಿ ಮಾಯವಾಗ್ತದೆ. ಆದ್ರಿಂದ ಮರ್‍ತು ಹೋಗ್ತದೆ. ಅವರದಾದ್ರೆ ಕುತ್ತಿಗೆ, ಕೈಕಿವಿಗಳಲ್ಲಿ ಮೆರೀತಾ ಇರ್‍ತದೆ. ಹಾಗೆಯೇ ಯಾವಾಗಲೂ ಮೆರೀಬೇಕು ಅನ್ನುವ ಆಸೆ ಅವರಿಗೆ ಇದೆ. ಹಾಗಾಗಿ, ತೇಮಾನು ಮಂತ್ರವನ್ನು ಅವರು ಯಾವಾಗಲೂ ಗುಟ್ಟಾಗಿ ಜಪಿಸುತ್ತಾ ಇರುತ್ತಾರೆ”

“ಹಾಂ... ಹಾಂ... ಈಗ ನೆನಪಾಯಿತು ನಮ್ಮ ತಾಯಿ ಕೂಡಾ ಹೇಳ್ತಾ ಇದ್ದರು. ಅಕ್ಕಸಾಲಿಗರಲ್ಲಿ ಹೋದರೆ, ಅವರು ಹೇಳುವ ಚಿನ್ನ ತೇಮಾನಿನ ಲೆಕ್ಕವನ್ನು ಒಪ್ಪಲೇ ಬೇಕಾಗುತ್ತದೆ ಅಂತ. ಆದರೆ ಒಂದು ಪ್ರಶ್ನೆ. ಈ ತೇಮಾನು ಬಿಸಿನೆಸ್ಸು ಹೊಸತಾಗಿ ಖರೀದಿ ಮಾಡಿದ ಚಿನ್ನದ ಆಭರಣಗಳಿಗೆ ಕೂಡಾ ಲಗಾವಾಗ್ತದಾ ಹೇಗೆ ?”

“ಖಂಡಿತಾ ಆದೀತು ಸ್ವಾಮೀ - ಹೊಸ ಆಭರಣ ಹದಿನೈದು ದಿನ ಮೈಮೇಲೆ ಇದ್ರೆ ಸಾಕು. ತೇಮಾನು ಅದಕ್ಕೆ ಬಂದೇ ಬರ್‍ತದೆ. ಆ ಮಾತಿಗೆ ಬಾಗಿಲಿನಾಚೆ ನಿಂತುಕೊಂಡು ನಮ್ಮ ಹರಟೆ ಕಿವಿ ಕೊಡುತ್ತಾ ಇರುವ ನನ್ನ ಗೃಹಲಕ್ಷ್ಮಿಯೇ ಸಾಕ್ಷಿ. ಅವಳ ಅವಲಕ್ಕಿ ಮಾಲೆಯಲ್ಲಿ ಖರೀದಿ ಮಾಡಿದ ಹದಿನಾಲ್ಕು ದಿನಗಳಲ್ಲಿ ಏನೋ ಕಲೆ ಕಾಣಿಸಿತು. ಅದನ್ನು ತೆಗೆದುಕೊಂಡ ಅಂಗಡಿಯಲ್ಲೇ ‘ಕ್ಲೀನು’ ಮಾಡಲಿಕ್ಕೆ ಕೊಟ್ಟಳು. ವಾಪಾಸು ತರಲಿಕ್ಕೆ ಹೋದಾಗ, ಕ್ಲೀನ್ ಮಾಡಿದ ಮಜೂರಿ ಕೊಟ್ಟು ತೂಗಿಸಿದಳು. ಕಡಿಮೆಯಾಗಿ ಕಂಡ ‘ಗುಲಗಂಜಿ ತೂಕ’ ಯಾಕೇಂತ ವಿಚಾರಿದ್ದಕ್ಕೆ ಅದು ತೇಮಾನಮ್ಮಾ ಅನ್ನುವ ಉತ್ತರ ಸಿಕ್ಕಿತು. ಬಾಯ್ಮುಚ್ಚಿ ಕೇಳಿಕೊಂಡು ಬಂದಿದ್ದಾಳೆ”

(ಪಂಡಿತರ ಮಾತಿನ ಕೊನೆಗೆ ಒಳಗಿನಿಂದ ಒಂದು ಹೂಂಕಾರ ಯಾಕೆ ಕೇಳಿಸಿತು ?)

“ಬಂಗಾರ ಮೈಮೇಲೆಯೇ ಇದ್ದರೆ ಸ್ವಲ್ಪಸ್ವಲ್ಪವಾಗಿ ಕರಗುತ್ತಾ ಇರ್‍ತದೆ ಅಂತ ನಮ್ಮವಳೂ ಹೇಳುವುದನ್ನು ಕೇಳಿದ್ದೇನೆ ಪಂಡಿತರೇ. ಅದು, ಅವಳು ಎಲ್ಲಿಂದ ಸಂಪಾದಿಸಿದ ಇನ್‍ಫಾರ್ಮೇಶನ್ ಅಂತ ಇಷ್ಟರವರೇಗೆ ಗೊತ್ತಿರಲಿಲ್ಲ. ಈಗ ಗೊತ್ತಾಯಿತು. ಮೈಮೇಲೆ ಚಿನ್ನ ಕರಗುತ್ತದೋ, ಇಲ್ಲವೋ, ಅದು ಬೇರೆ ಮಾತು. ಚಿನ್ನದ ಡಿಮಾಂಡ್ ಪೂರೈಸುವವನ ಕಿಸೆಯಂತೂ ಕರಗುವುದರಲ್ಲಿ ಯಾವ ಸಂದೇಹವೂ ಇಲ್ಲ”

ಬೇಗನೆ (ಮಾತು ಮುಗಿಸಿ ಶ್ರೀಮತಿ ಪಂಡಿತರು ಒಗ್ಗರಣೆ ಸೌಟು ಹಿಡಿದುಕೊಂಡು ಬಾಗಿಲಿನಿಂದ ಈಚೆಗೆ ಬರುವ ಮೊದಲೇ ಅಲ್ಲಿಂದ ಹೊರಗೆ ಓಡಿ -ಅಲ್ಲಲ್ಲ ಧಾವಿಸಿ) ಬಂದು ಮನೆಮುಟ್ಟಿದ ನಂತರ -

ತೇಮಾನೂ ಮಂತ್ರವ ಜಪಿಸೀ ಮಾನಿನಿಯರೆ ! ಜಪಿಸುತ್ತ ! ಹೇಮಾವಿಕ್ರಯ ಬೆಳೆಸೀ ! ! ಎಂಬ ಪದ್ಯದ ಮೊದಲ ಸಾಲು ಬರೆದಿಟ್ಟೆ. ಒಂದು ಚೆಂಬು ನೀರು ಕುಡಿದು ಸುಮ್ಮನೆ ಕುಳಿತೆ. ( ಮುಂದಿನ ಸಾಲು ನೀವು ಬರೆಯುತ್ತೀರಾ ? ಬರೆಯಿರಿ - ಸಂತೋಷ).




ಶ್ರೀ ಪದ್ಯಾಣ ಗೋಪಾಲಕೃಷ್ಣ ( ಪ.ಗೋ.)

ಶ್ರೀ ಪದ್ಯಾಣ ಗೋಪಾಲಕೃಷ್ಣ ( ಪ.ಗೋ. ೧೯೨೮ - ೧೯೯೭ ) - ಹುಟ್ಟೂರು ಗಡಿಯಂಚಿನಲ್ಲಿರುವ ಅಡ್ಯನಡ್ಕ. ೧೯೫೬ ರಿಂದ ೧೯೯೭ನೇ ಇಸವಿಯವರೆಗೆ ನಾಲ್ಕು ದಶಕಗಳಷ್ಟು ಧೀರ್ಘ ಕಾಲಾವಧಿಯಲ್ಲಿ ಹಲವು ಕನ್ನಡ ಪತ್ರಿಕೆಗಳ ಉಪಸಂಪಾದಕ, ವರದಿಗಾರರಾಗಿದ್ದ ಪ.ಗೋ.ರವರು ೧೯೬೩ರಿಂದ ಸುಮಾರು ಎರಡು ವರ್ಷಗಳ ಕಾಲ ಮಂಗಳೂರಿನಿಂದ ತಮ್ಮ ಸ್ವಂತ ಕನ್ನಡ ದಿನ ಪತ್ರಿಕೆ "ವಾರ್ತಾಲೋಕ"ದ ವರದಿಗಾರ, ಮುದ್ರಕ ಮತ್ತು ಪ್ರಕಾಶಕರಾಗಿ ನಡೆಸಿ ಪತ್ರಿಕೋದ್ಯಮದ ಎಲ್ಲಾ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದವರು. ಜೊತೆಗೆ ೧೩ ಪತ್ರಿಕೆಗಳಿಗೆ ಆಗಾಗ "ಕಾಲಂಕಾರ"ರಾಗಿ ಸುಮಾರು ನಾಲ್ಕು ಸಾವಿರ ಪುಟಗಳಿಗೂ ಮಿಕ್ಕಿದ ಕಾಲಂ ಸಾಹಿತ್ಯ ಪ್ರಸ್ತುತ ಪಡಿಸಿದ ಪ. ಗೋ. ಅವರಿಗೆ ಇದ್ದುದನ್ನು ಸರಳವಾಗಿ ಹೇಳುವ ರೂಢಿಯೇ ಇಲ್ಲ. ಅವರದೆಲ್ಲವೂ ವ್ಯಂಗ್ಯ ದಿಂದಲೇ ಪ್ರಾರಂಭ, ವ್ಯಂಗ್ಯದಿಂದಲೇ ಕೊನೆ! ಅವರು ಕೊಡುವ ಉದಾಹರಣೆಗಳು ಹಳೆಯ ನೀತಿ ಪದ್ಯಗಳನ್ನು ತಿರುಚಿಕೊಂಡು ಹುಟ್ಟಿಸುವ ವ್ಯಂಗ್ಯ ಮಾರ್ಮಿಕವಾದುದು.

ಪ. ಗೋಪಾಲಕೃಷ್ಣ ಸ್ಮಾರಕ ಸೇವಾ ಟ್ರಸ್ಟಿನ ವತಿಯಿಂದ ೨೦೦೨ನೆ ಇಸವಿಯಲ್ಲಿ ಮಂಗಳೂರಿನಿಂದ ಪ್ರಕಟಣೆಗೊಂಡ ಲೇಖನ ಮಾಲಿಕೆ "ನೋ ಚೇಂಜ್ ಕಥೆಗಳು". ಈ ೨೪ ಅಂಕಣಗಳ ಕಂಕಣವನ್ನು ಮರು ಪ್ರಕಟಿಸಲು ಅನುಮತಿಯನ್ನು ಇತ್ತ ಟ್ರಸ್ಟಿನ ಅಧ್ಯಕ್ಷರಾದ, ಪ.ಗೋ ರವರ ಸಹೋದ್ಯೋಗಿ, ಮಂಗಳೂರಿನ ಹಿರಿಯ ಪತ್ರಕರ್ತ ಶ್ರೀ. ಯು.ನರಸಿಂಹ ರಾವ್ ಮತ್ತು ಹುಟ್ಟೂರಿನ ಆಪ್ತ ಮಿತ್ರ, ಟ್ರಸ್ಟಿನ ಸ್ಥಾಪಕರಾದ ಬೆಂಗಳೂರಿನ ವೈದ್ಯ, ಲೇಖಕ ಡಾ. ಎಂ. ಬಿ. ಮರಕಿಣಿಯವರಿಗೆ ವಂದನೆಗಳು.
------
ಶೀರ್ಷಿಕೆಯ ೧೯೯೦ರ ದಶಕದ ಛಾಯಚಿತ್ರ:

ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಡಾ. ಬಿ. ಎ.ವಿವೇಕ ರೈ ಅವರು ತುಳು ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರು ಶ್ರೀ. ದೇವರಾಜ್ ಜೊತೆ ದಿನಾಂಕ ೨೦ ಜುಲೈ ೧೯೯೪ ರಂದು ಮಂಗಳೂರಿನಲ್ಲಿ ಏರ್ಪಡಿಸಿದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಪ್ರಥಮ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡ ಮಂಗಳೂರಿನ ಪತ್ರಕರ್ತರೊಂದಿಗೆ ಶ್ರೀ. ಪ. ಗೋಪಾಲಕೃಷ್ಣ.
-----
ಕೃಪೆ: ಗಲ್ಫ್ ಕನ್ನಡಿಗ
ಲಿಂಕ್ : http://www.gulfkannadiga.com/news-6278.html

No comments:

Visitors to this page