Tuesday, May 12, 2009

’ನೋ ಚೇಂಜ್ ಕಥೆಗಳು’ --೧೬..ಅವರು ಬಿದ್ದರು - ಇವರು ನಕ್ಕರು....



















ಹೊಸಸಂಜೆ ಪತ್ರಿಕೆಗಾಗಿ ಹೆಸರಾಂತ ಪತ್ರಕರ್ತ ಶ್ರೀ ಪದ್ಯಾಣ ಗೋಪಾಲಕೃಷ್ಣ (ಪ.ಗೋ.) ಅವರು ಬರೆದ ೨೪ ಅಂಕಣಗಳ ಕಂಕಣ" ನೋ ಚೇಂಜ್ ಕಥೆಗಳು". ಈ ಬರಹಗಳನ್ನು ಅವರ ಸ್ಮಾರಕಾರ್ಥವಾಗಿ ಮರು ಪ್ರಕಟಿಸುವ ಭಾಗ್ಯ ’ಗಲ್ಫ್ ಕನ್ನಡಿಗ’ಕ್ಕೆ ಒದಗಿದ್ದು ಪ್ರತಿ ಗುರುವಾರ ಪ್ರಕಟಿಸಲಾಗುತ್ತಿದ್ದು ಇದು ಹದಿನಾರನೇ ಅಂಕಣ.

ಅವರು ಬಿದ್ದರು - ಇವರು ನಕ್ಕರು....




ನಿನ್ನೆ ಬೆಳಿಗ್ಗೆ, ಸುಮಾರು ಎಂಟೂವರೆ ಹೊತ್ತಿಗೆ, ಮೆಯಿನ್ ರೋಡಿನ ಬಸ್ ಸ್ಟಾಪ್ ಹತ್ತಿರ ಹೋಗಬೇಕಾಗಿ ಬಂತು. “ನಮ್ಮ ಅಣ್ಣ -ಅತ್ತಿಗೆ ಈವತ್ತು ಎಂಟೂಮುಕ್ಕಾಲರ ಬಸ್ಸಿನಲ್ಲಿ ಬರ್‍ತಾರೆ, ನೆನಪಿದೆಯಲ್ಲ ? ಹೋಗಿ ಕರ್‍ಕೊಂಡು ಬನ್ನಿ” ಅಂತ ಗೃಹಮಂತ್ರಿ ಆಜ್ಞೆಯಾಗಿತ್ತು. ತಪ್ಪಿಸಿಕೊಳ್ಳಲಾಗುತ್ತದೆಯೆ ? ಹೋಗಿದ್ದೆ.

ಅವರು ಊರಿಂದ ಬರುತ್ತಿದ್ದುದು ಕೆಂಪು ಬಸ್ಸಿನಲ್ಲಿ. ಹೇಗೂ ಆ ಬಸ್ ಲೇಟಾಗಿಯೇ ಬರುತ್ತದೆ ಅಂತ ಸ್ವಲ್ಪ ಧೈರ್ಯವಿದ್ದರೂ, ನನ್ನ ಗ್ರಹಚಾರಕ್ಕೆ ಈವತ್ತೆಲ್ಲಾದರೂ ಸಮಯಕ್ಕೆ ಸರಿಯಾಗಿ ಬಂದುಬಿಟ್ಟರೆ ಎಂಬ ಅಳುಕೂ ಇತ್ತು. ನನ್ನ (ಪ್ರಾಯಕ್ಕೆ ಸಲ್ಲದ) ಬೀಸುನಡಿಗೆಗೆ ಅದೇ ಕಾರಣ.

‘ಬೀಸ -ಬೀಸ’ ಹೋಗಬೇಕಾದರೂ,ಕತ್ತೆತ್ತಿ ನಡೆಯಲು ನನ್ನಿಂದ ಆಗುವುದಿಲ್ಲ. ಕತ್ತು ಬಗ್ಗಿಸಿ, ನನ್ನಷ್ಟಕ್ಕೆ ಹೋಗುತ್ತಿದ್ದೆ. ಇನ್ನೇನು ಬಸ್ ಸ್ಟಾಪ್ ಬಂತು ಅನ್ನುವಾಗ, ಯಾರೋ ‘ಢಾಬ್ಬೆಂ’ದು ಬಿದ್ದ ಶಬ್ದ -ಅದರ ಹಿಂದೆಯೇ ಹತ್ತಾರು ಮಕ್ಕಳ ನಗುವಿನ ಬೊಬ್ಬೆ -ಕೇಳಿ, ಪ್ರಯತ್ನಪಟ್ಟು ಕತ್ತೆತ್ತಿದೆ. ಬಿದ್ದ ಶಬ್ದ ಕೇಳಿದ ಕಡೆ ನೋಡಿದೆ.

ಪಾಪ ! ಯಾರೋ ಒಬ್ಬ ಠಾಕೋಠೀಕ್ ದಿರುಸು ಹಾಕಿಕೊಂಡಿದ್ದ ತರುಣ. ನಡುರಸ್ತೆಯಲ್ಲಿ ಎಸೆದಿದ್ದ ಬಾಳೆಹಣ್ಣಿನ ಸಿಪ್ಪೆಯ ಮೇಲೆ ಕಾಲಿಟ್ಟು ಜಾರಿಬಿದ್ದವನು, ಮೆಲ್ಲನೆ ಏಳಲು ಪ್ರಯತ್ನಿಸುತ್ತಿದ್ದ. ಬಿದ್ದ ರಭಸಕ್ಕೆ ಕೈಯಿಂದ ಹಾರಿಹೋಗಿದ್ದ ಬ್ರೀಫ್‍ಕೇಸನ್ನು ಎಳೆಯುವ ಮತ್ತು ಬಟ್ಟೆಗೆ ಮೆತ್ತಿದ್ದ ಮಣ್ಣನ್ನು ಕೊಡವುವ ಕೆಲಸವೂ ಒಟ್ಟೊಟ್ಟಿಗೆ ನಡೆದಿತ್ತು

ಅವನ ಒದ್ದಾಟದ ಸಮಯವಿಡೀ, ರಸ್ತೆಯಾಚೆಯ ಶಾಲೆಯ ಮಕ್ಕಳು ಗಹಗಹಿಸಿ ನಗುತ್ತಲೇ ಇದ್ದರು. ಎಲ್ಲರಿಗಿಂತ ಜೋರಾಗಿ ನಗುತ್ತಿದ್ದ ಒಬ್ಬ ‘ಲೀಡರ್’ ಹುಡುಗನೇ ಬಾಳೆಹಣ್ಣಿನ ಸಿಪ್ಪೆಯನ್ನು ‘ತಮಾಷೆ ನೋಡಲು’ ಅಲ್ಲಿ ಎಸೆದಿದ್ದನೆಂಬುದು ಸ್ಪಷ್ಟವಾಗಿ ಗೊತ್ತಾಗುತ್ತಿತ್ತು.

ನಾನು ರಸ್ತೆ ದಾಟಿ ಮಕ್ಕಳಿದ್ದ ಕಡೆ ತಲಪುವ ಹೊತ್ತಿಗೆ, ಮಕ್ಕಳ ನಗುವಿನ ಅಟ್ಟಹಾಸ - ಆ ಶಾಲೆಯ ಸಿಸ್ಟರ್ ಅಲ್ಲಿ ಬಂದ ಕಾರಣ - ಒಮ್ಮೆಲೇ ನಿಂತಿತು. “ಯಾರಾದರೂ ಜಾರಿ ಬಿದ್ದರೆ ಅವರ ಸಹಾಯಕ್ಕೆ ಹೋಗುವುದು ಬಿಟ್ಟು, ಅವರನ್ನು ನೋಡಿ ನಗುತ್ತೀರಾ ? ನಾಟೀ ಬಾಯ್ಸ್ !” ಎಂದು ಅವರು ಮಕ್ಕಳಿಗೆ ಹೇಳುತ್ತಿದ್ದ ಬುದ್ಧಿವಾದವೂ ಕೇಳಿಸಿದ್ದರಿಂದ, ಅದನ್ನು ಕೇಳಿದ ಹುಡುಗರ ಮುಂದಿನ ವರ್ತನೆಯ ಬಗ್ಗೆ ಕುತೂಹಲ ಮೂಡಿತು. ಅವರೆದುರಿನಲ್ಲೇ ನಿಂತುಕೊಂಡೆ.

ಕಣ್ಣು -ಕಿವಿ - ಮನಸ್ಸು ಎಲ್ಲವೂ ಅಲ್ಲೇ ನೆಟ್ಟಿತ್ತು. ಬೇರೆ ಎಲ್ಲಾ ವಿಚಾರವೂ ಮರೆತು ಹೋಗಿತ್ತು. “ನೋಡು -ನೋಡು ಭಾವನ ಬಸ್ ಸ್ಟಾಂಡ್ ಇಲ್ಲಿಯೇ ಇದೆ” ಎಂಬ ಮಾತಿನ ಧ್ವನಿ ಕೇಳುವ, ಬೆನ್ನಿಗೆ ಬಿದ್ದ ಒಂದು ಪ್ರೀತಿಯ ಹೊಡೆತ ಬೀಳುವ-ವರೆಗೆ.
“ಅಲ್ಯಾಕೆ ನಿಂತಿದ್ದಿರಿ ಭಾವಾ ?” ಎಂಬ ಪ್ರಶ್ನೆ ಬಂದಿಳಿದ ಭಾವ -ಅಂದರೆ ಗೃಹಮಂತ್ರಿಯವರ ಅಣ್ಣ -ನಿಂದ ನಾವೆಲ್ಲ ಮೆಯಿನ್ ರೋಡ್ ದಾಟಿದ ಮೇಲೆ ಬಂತು.

ಆ ಮೊದಲು ಆಗಿದ್ದುದನ್ನು ವಿವರಿಸಿ, “ನಾನು ಕೂಡಾ ನನ್ನ ಪ್ರಾಯದಲ್ಲಿ ‘ನಾಟಿಬಾಯ್’ ಆಗಿದ್ದುದು ನೆನಪಾಯಿತು. ಕಾಲ ಬದಲಿದ್ದು ಕೂಡಾ ಗೊತ್ತಾಗದ ಹಾಗೆ” ಎಂದೆ, ಯಾವ ಮುಚ್ಚುಮರೆಯೂ ಇಲ್ಲದೆ.

ಕಾಲವೇನೋ ಬದಲಿದೆ. ಬದಲಾವಣೆ ಆಗದಿರುವುದು ಮನುಷ್ಯ ಸ್ವಭಾವದಲ್ಲಿ ಅನ್ನಿ. ಅಲ್ಲಾ, ನಿಮ್ಮ ನೆನಪಿನಲ್ಲಿ ಅಷ್ಟೊಂದು ಆಳವಾಗಿ ಉಳಿದಿದ್ದ ಘಟನೆ ಯಾವುದು ? ಎಂಬ ಪ್ರಶ್ನೆಗೆ ನನ್ನ ಅತಿಥಿ ದಂಪತಿಯಿಂದ ಒಟ್ಟಿಗೇ ಬಂತು. ಕಥೆ ಹೇಳಲೇಬೇಕಾಯಿತು.

“ಎದ್ದೂ ಬಿದ್ದೂ ನಡೆಯಲು ಕಲಿಯುವ ಪ್ರಾಯದಲ್ಲಿ”, ಇನ್ನೊಬ್ಬರು ಬಿದ್ದು ಎದ್ದರೆ ಅಥವಾ ಬೇರೇನಾದರೂ ತೊಂದರೆ ಅನುಭವಿಸಿದರೆ ಅದನ್ನು ನೋಡಿ ನಗುವ ಅಭ್ಯಾಸ ಸಹಜವಾಗಿ ಬಂದಿರುತ್ತದೆ. ಆ ಅಭ್ಯಾಸ ಬೆಳೆಸಿಕೊಂಡವರು ಮುಂದೆ ಪ್ರಾಯಸ್ಥರಾದಾಗ, ನಗುವನ್ನು ಪಡೆದುಕೊಳ್ಳಲು ಕಲಿಯುತ್ತಾರೆ. ಹಾಗೆ ನಗುವುದು ತಪ್ಪು ಎಂದು ಕೆಲವರು ತಿಳಿದುಕೊಳ್ಳಲು ಕಲಿಯುತ್ತಾರೆ. ಹಾಗೆ ನಗುವುದು ತಪ್ಪು‍ಎಂದು ಕೆಲವರು ತಿಳಿದುಕೊಳ್ಳುವುದೂ ಇದೆ.

ನಾವು ಶಾಲೆಗೆ ಹೋಗುತ್ತಿದ್ದಾಗ ಒಂದು ದಿನ, ಶಾಲೆಯ ಮಕ್ಕಳೆಲ್ಲ ಎದುರಿನ ರಸ್ತೆಬದಿಯ ಎತ್ತರದ ಸ್ಥಳದಲ್ಲಿ ಸಾಲಾಗಿ ನಿಂತುಕೊಂಡಿದ್ದೆವು. ರಸ್ತೆಯಲ್ಲಿ ಸತ್ತುಬಿದ್ದಿದ್ದ ಒಂದು ಕೇರೆಹಾವಿನ ಮರಿಯನ್ನು ನೋಡಿ ಹರಟುತ್ತಾ ಇದ್ದೆವು. ದಾರಿಹೋಕರು ಒಬ್ಬರು ಬರುವುದನ್ನು ಕಂಡಾಗ ಹರಟೆ ನಿಲ್ಲಿಸಿ, ಮೌನವಾದೆವು. ದಾರಿ ಸಾಗುವವರು ಅವರ ಪಾಡಿಗೆ ವೇಗವಾಗಿ ನಡೆದು ಹೋಗುತ್ತಾ ಇದ್ದರು. ಸತ್ತ ಹಾವಿನ ಮರಿಯನ್ನು ಅವರು ತುಳಿಯುತ್ತಾರೊ ಇಲ್ಲವೊ ಎಂಬ ಕುತೂಹಲ ನಮಗೆ. ಆದ್ದರಿಂದಲೇ ಸದ್ದು ಮಾಡದೆ ನಾವು ನಿಂತುಕೊಂಡಿದ್ದುದು.

ನಾವು ನಿರೀಕ್ಷಿಸಿದ ಹಾಗೆ, ಅವರು ಅದನ್ನು ತುಳಿದೇ ಬಿಟ್ಟರು. ಅನಿರೀಕ್ಷಿತವಾಗಿ ತುಳಿದು, ತುಳಿದ ಮತ್ತೆ ‘ವಿಷಜಂತು’ವನ್ನು ನೋಡಿ, ಬೆಚ್ಚಿಬಿದ್ದರು. ನಮ್ಮೆಲ್ಲರ ಪರಿಹಾಸದ ನಗು ಕೇಳಿಸಿತು. ನಮ್ಮತ್ತ ತಲೆ ಎತ್ತಿ ನೋಡಿ “ನೀವು ಶಾಲೆ ಮಕ್ಕಳು ಕಲ್ತ ಬುದ್ಧಿ ಇದುವೆಯೋ ?” ಎಂದು ಬೈದು ಹೊರಟುಹೋದರು...

“ಅಂದು ನನ್ನ(ಮ್ಮ)ಲ್ಲಿದ್ದ ಮನೋಭಾವವೇ ಇಂದೂ ಆ ಮಕ್ಕಳಲ್ಲಿ ಕಾಣಿಸಿ ನನ್ನ ನೆನಪನ್ನು ಕೆದಕಿತು” ಎಂದು ವಿವರಿಸಿದೆ.
“ಆ ಪ್ರಾಯದಲ್ಲಿ ನಾವು ಕೂಡಾ ಹಾಗೆಯೇ ಇದ್ದೆವು ಭಾವಾ.ನಮ್ಮ ಮನೆ ಎದುರಿನ ಮಾರ್ಗದಲ್ಲಿ ಒಂದು ದಿನ, ಒಂದು ‘ಪೆರ್ಚಿ’ದನ ಮೋಟರ್ ಸೈಕಲಿನಲ್ಲಿ ಹೋಗುತ್ತಿದ್ದ ಒಬ್ಬರನ್ನು ಅಡ್ಡಗಟ್ಟಿ ಬೀಳಿಸಿದ್ದಾಗ ನಾವೆಲ್ಲ ದೂರನಿಂತು ನೋಡಿ ನಗುತ್ತಾ ಇದ್ದೆವು. ಬಿದ್ದವರ ಸಹಾಯಕ್ಕೆ ಹೋಗುವ ಮನಸ್ಸು ಯಾರಿಗೂ ಬರಲಿಲ್ಲ. ಮನಸ್ಸು ಮಾಡಿದ್ದರೆ,ಬಿದ್ದವರನ್ನು, ಅಲ್ಲಿದ್ದ ನಾವು ಹತ್ತು ಮಂದಿ ಹುಡುಗರು ಎತ್ತಬಹುದಿತ್ತು. ದನವನ್ನೂ ಅಲ್ಲಿಂದ ಓಡಿಸಬಹುದಿತ್ತು. ನಮಗೆ ಆ ತಮಾಷೆ ನೋಡುವುದೇ ಮುಖ್ಯವಾಗಿತ್ತಲ್ಲ ? ಕೊನೆಗೆ, ಬಿದ್ದ ಮೋಟರ್ ಸೈಕಲಿನವರನ್ನು ಎಬ್ಬಿಸಿ ರಸ್ತೆ ಬದಿಗೆ ತಂದು ಪ್ರಥಮ ಚಿಕಿತ್ಸೆ ಮಾಡಿದ ಹಿರಿಯರು ಒಬ್ಬರು ನಮಗೆ ಛೀಮಾರಿ ಹಾಕಿದಾಗ ಎಷ್ಟು ಸಿಟ್ಟು ಬಂದಿತ್ತು ಗೊತ್ತೇ ?”

“ಹುಡುಗರ ಸ್ವಭಾವವೇ ಹಾಗೆ” ಎಂದು ಇದ್ದಕ್ಕಿದ್ದ ಹಾಗೆ ಮೌನವಾಗಿ ದಾರಿ ಸವೆಸುತ್ತುದ್ದ ನಮ್ಮ ತಂಡದ ಮಹಿಳಾಸದಸ್ಯೆಯಿಂದ ಬಂದ ಮಾತು, ಗಂಭೀರ ಚರ್ಚೆಯನ್ನು ಲಘು ಧಾಟಿಗೆ ತಿರುಗಿಸಿತು.

“ಮತ್ತೆ ಹುಡುಗಿಯರ ಸ್ವಭಾವ ಹೇಗಿರುತ್ತದಮ್ಮಾ, ಹೇಳ್ತೀಯಾ ?” ಎಂದು ಅವಳನ್ನು ಕೇಳಿದೆ.

ಅವಳು ಉತ್ತರ ಕೊಡುವ ಮೊದಲೇ ನಮ್ಮ ಮನೆ ಸಮೀಪಿಸಿತ್ತು. ಬಾಗಿಲಲ್ಲೇ ಕಾಯುತ್ತಿದ್ದ ಹೋಮ್ ಮಿನಿಸ್ಟರ್ ಕೂಡಾ ಕಾಣಿಸಿದರು. ಹತ್ತಿರ ಬರುತ್ತಿದ್ದ ಹಾಗೆ “ಏನು ಭಾರಿ ನಿಧಾನವಾಗಿ ಬರುತ್ತಾ ಇದ್ದೀರಿ ? ಇಲ್ಲಿಗೆ ಬರುವ ಮೊದಲು ಬೇರೆಲ್ಲಿಗಾದರೂ ಹೋಗಿಬಂದಿರಾ, ಹ್ಯಾಗೆ ?” ಕಮೆಂಟೂ ಕೇಳಿಸಿತು.

ಬಾಯ್ಮುಚ್ಚಿಕೊಂಡು ಕರೆತಂದಿದ್ದವರನ್ನು ಮನೆಯೊಳಗೆ ಕಳುಹಿಸಿದೆ.

ಶ್ರೀ ಪದ್ಯಾಣ ಗೋಪಾಲಕೃಷ್ಣ ( ಪ.ಗೋ.)







ಶ್ರೀ ಪದ್ಯಾಣ ಗೋಪಾಲಕೃಷ್ಣ ( ಪ.ಗೋ. ೧೯೨೮ - ೧೯೯೭ ) - ಹುಟ್ಟೂರು ಗಡಿಯಂಚಿನಲ್ಲಿರುವ ಅಡ್ಯನಡ್ಕ. ೧೯೫೬ ರಿಂದ ೧೯೯೭ನೇ ಇಸವಿಯವರೆಗೆ ನಾಲ್ಕು ದಶಕಗಳಷ್ಟು ಧೀರ್ಘ ಕಾಲಾವಧಿಯಲ್ಲಿ ಹಲವು ಕನ್ನಡ ಪತ್ರಿಕೆಗಳ ಉಪಸಂಪಾದಕ, ವರದಿಗಾರರಾಗಿದ್ದ ಪ.ಗೋ.ರವರು ೧೯೬೩ರಿಂದ ಸುಮಾರು ಎರಡು ವರ್ಷಗಳ ಕಾಲ ಮಂಗಳೂರಿನಿಂದ ತಮ್ಮ ಸ್ವಂತ ಕನ್ನಡ ದಿನ ಪತ್ರಿಕೆ "ವಾರ್ತಾಲೋಕ"ದ ವರದಿಗಾರ, ಮುದ್ರಕ ಮತ್ತು ಪ್ರಕಾಶಕರಾಗಿ ನಡೆಸಿ ಪತ್ರಿಕೋದ್ಯಮದ ಎಲ್ಲಾ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದವರು. ಜೊತೆಗೆ ೧೩ ಪತ್ರಿಕೆಗಳಿಗೆ ಆಗಾಗ "ಕಾಲಂಕಾರ"ರಾಗಿ ಸುಮಾರು ನಾಲ್ಕು ಸಾವಿರ ಪುಟಗಳಿಗೂ ಮಿಕ್ಕಿದ ಕಾಲಂ ಸಾಹಿತ್ಯ ಪ್ರಸ್ತುತ ಪಡಿಸಿದ ಪ. ಗೋ. ಅವರಿಗೆ ಇದ್ದುದನ್ನು ಸರಳವಾಗಿ ಹೇಳುವ ರೂಢಿಯೇ ಇಲ್ಲ. ಅವರದೆಲ್ಲವೂ ವ್ಯಂಗ್ಯ ದಿಂದಲೇ ಪ್ರಾರಂಭ, ವ್ಯಂಗ್ಯದಿಂದಲೇ ಕೊನೆ! ಅವರು ಕೊಡುವ ಉದಾಹರಣೆಗಳು ಹಳೆಯ ನೀತಿ ಪದ್ಯಗಳನ್ನು ತಿರುಚಿಕೊಂಡು ಹುಟ್ಟಿಸುವ ವ್ಯಂಗ್ಯ ಮಾರ್ಮಿಕವಾದುದು.



ಪ. ಗೋಪಾಲಕೃಷ್ಣ ಸ್ಮಾರಕ ಸೇವಾ ಟ್ರಸ್ಟಿನ ವತಿಯಿಂದ ೨೦೦೨ನೆ ಇಸವಿಯಲ್ಲಿ ಮಂಗಳೂರಿನಿಂದ ಪ್ರಕಟಣೆಗೊಂಡ ಲೇಖನ ಮಾಲಿಕೆ "ನೋ ಚೇಂಜ್ ಕಥೆಗಳು". ಈ ೨೪ ಅಂಕಣಗಳ ಕಂಕಣವನ್ನು ಮರು ಪ್ರಕಟಿಸಲು ಅನುಮತಿಯನ್ನು ಇತ್ತ ಟ್ರಸ್ಟಿನ ಅಧ್ಯಕ್ಷರಾದ, ಪ.ಗೋ ರವರ ಸಹೋದ್ಯೋಗಿ, ಮಂಗಳೂರಿನ ಹಿರಿಯ ಪತ್ರಕರ್ತ ಶ್ರೀ. ಯು.ನರಸಿಂಹ ರಾವ್ ಮತ್ತು ಹುಟ್ಟೂರಿನ ಆಪ್ತ ಮಿತ್ರ, ಟ್ರಸ್ಟಿನ ಸ್ಥಾಪಕರಾದ ಬೆಂಗಳೂರಿನ ವೈದ್ಯ, ಲೇಖಕ ಡಾ. ಎಂ. ಬಿ. ಮರಕಿಣಿಯವರಿಗೆ ವಂದನೆಗಳು.

-----

ಶೀರ್ಷಿಕೆಯ ೧೯೮೦ರ ದಶಕದ ಛಾಯಚಿತ್ರ:

ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ದ ಯಾತ್ರ ಸ್ಥಳ ಶ್ರೀ ಮಂಜುನಾಥ ಕ್ಷೇತ್ರದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಮಂಗಳೂರಿನ ಪತ್ರಕರ್ತ ಶ್ರೀ. ಪ. ಗೋಪಾಲಕೃಷ್ಣರಿಗೆ ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ .ವೀರೇಂದ್ರ ಹೆಗ್ಗಡೆಯವರಿಂದ ಸನ್ಮಾನ.
-----
ಕೃಪೆ: ಗಲ್ಫ್ ಕನ್ನಡಿಗ
ಲಿಂಕ್ : http://www.gulfkannadiga.com/news-6060.html

No comments:

Visitors to this page