Sunday, January 3, 2010

ಪ.ಗೋ.ಪತ್ರಗಳು-೧

ಪ.ಗೋ.ಪತ್ರಗಳು
ನಿವೇದನೆ...

ಕಳೆದ ಹತ್ತು ತಿಂಗಳುಗಳಿಂದ ಕನ್ನಡ ಸಾರಸ್ವತ ಲೋಕದಲ್ಲಿ ಬಹಳಷ್ಟು ಅಭಿಮಾನಿಗಳನ್ನು ಹೊಂದಿರುವ ಈ ಕನಸು.ಕಾಂ ಹೊಸ ಪ್ರತಿಭೆಗಳಿಗೆ ವೇದಿಕೆಯನ್ನೊದಗಿಸುತ್ತಾ, ಬರಹಗಾರರನ್ನು ಪ್ರೋತ್ಸಾಹಿಸುತ್ತಾ, ಭಿನ್ನ ವಿಭಿನ್ನ ಸುದ್ದಿ, ವೈವಿಧ್ಯ, ವೈಶಿಷ್ಠ್ಯತೆಗಳೊಂದಿಗೆ , ಹೆಸರಾಂತ ಬರಹಗಾರರ ಬರಹಗಳೊಂದಿಗೆ ತನ್ನದೇ ಆದಂತಹ ಛಾಪು ಹೊಂದಿರುವುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರ.

ಕರ್ನಾಟಕ ರಾಜ್ಯದ ಮಂಗಳೂರಿನ ಮೊದಲ ಕನ್ನಡ ಅಂತರ್ಜಾಲ ಪತ್ರಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾದ ಈ ಕನಸು.ಕಾಂ ಈಗಾಗಲೇ ಅನೇಕ ಹೊಸತನಗಳನ್ನು ತನ್ನ ಓದುಗರಿಗೆ ಒದಗಿಸಿದೆ ಎಂದು ಹೇಳಲು ಸಂತೋಷವಾಗುತ್ತಿದೆ.

ಇದೀಗ `ಆದರ್ಶಪತ್ರಕರ್ತರ ಅಂತರಂಗದ ಧ್ವನಿ' ಎಂಬ ಹೊಸತೊಂದು ಪ್ರಯತ್ನವನ್ನು ಈ ಕನಸು.ಕಾಂ ನಡೆಸುತ್ತಿದೆ. ಕರಾವಳಿ ಕರ್ನಾಟಕದ ಹಿರಿಯ ಪತ್ರಕರ್ತರಾಗಿದ್ದು, ಆದರ್ಶ, ಸರಳ ಪತ್ರಕರ್ತರೆನಿಸಿಕೊಂಡಿದ್ದ ಶ್ರೀಯುತ ಪದ್ಯಾಣ ಗೋಪಾಲಕೃಷ್ಣ ಅವರು ಆದರ್ಶಪತ್ರಕರ್ತರ ಅಂತರಂಗದ ಧ್ವನಿಯ ಮೊದಲ ಆಯ್ಕೆ ಎಂದು ಹೇಳಲು ಸಂತೋಷಪಡುತ್ತಿದ್ದೇವೆ.

ಶ್ರೀ ಪ.ಗೋ ಅವರು ಪತ್ರಕರ್ತ ಶ್ರೀ ಎಚ್.ಆರ್.ನಾಗೇಶ ರಾವ್ ಅವರೊಂದಿಗಿನ ಒಡನಾಟವನ್ನು ಈ ಅಂಕಣದಲ್ಲಿ ತಮೆಗೆಲ್ಲ ತಿಳಿಸಲು ಸಂತೋಷ ಪಡುತ್ತೇವೆ. `ಪ.ಗೋ.ಪತ್ರಗಳು' ಎಂಬ ಶಿರೋನಾಮೆಯಲ್ಲಿ ಈ ಲೇಖನ ಮಾಲೆ ಪ್ರತೀ ಸೋಮವಾರದಂದು ನಿಮಗೆ ಲಭ್ಯವಾಗಲಿದೆ.

ಎಚ್.ಆರ್.ನಾಗೇಶ ರಾವ್ ಅವರ ಸುಪುತ್ರ ಹಾಲ್ದೊಡ್ಡೇರಿ ಸುಧೀಂದ್ರ, ಅವರು ಸಂಗ್ರಹಿಸಿಟ್ಟ ಪ.ಗೋ.ಪತ್ರಗಳನ್ನು , ಪ.ಗೋ. ಅವರ ಸುಪುತ್ರ ಪ.ರಾಮಚಂದ್ರ ಈ ಕನಸಿಗಾಗಿ ದೊರಕಿಸಿಕೊಟ್ಟಿದ್ದಾರೆ. ಇವರೆಲ್ಲರಿಗೂ ಈ ಕನಸು.ಕಾಂ ವತಿಯಿಂದ ಕೃತಜ್ಞತೆಗಳು.

ಓದುಗ ಮಿತ್ರರು ನಮ್ಮೀ ಪ್ರಯತ್ನಕ್ಕೆ ಪ್ರೋತ್ಸಾಹ ನೀಡುತ್ತೀರೆಂಬ ಸದಾಶಯದೊಂದಿಗೆ ಮೊದಲ ಕಂತನ್ನು ನಿಮ್ಮ ಮುಂದಿರಿಸುತ್ತೇವೆ. ಪ್ರೀತಿಯಿಂದ ಸ್ವೀಕರಿಸಿ.

- ಸಂಪಾದಕ.
----------

ಪರಿಚಯ
ಶ್ರೀ ಪದ್ಯಾಣ ಗೋಪಾಲಕೃಷ್ಣ ( ಪ.ಗೋ). ಹುಟ್ಟೂರು ದಕ್ಷಿಣ ಕನ್ನಡ ಮತ್ತು ಈಗಿನ ಕಾಸರಗೋಡು ಜಿಲ್ಲೆಗಳ ಗಡಿಯಂಚಿನಲ್ಲಿರುವ ಅಡ್ಯನಡ್ಕ. ೧೯೨೮ರಲ್ಲಿ ಜನಿಸಿದ ಪ.ಗೋ ೧೯೫೬ರಲ್ಲಿ ಕನ್ನಡ ದಿನ ಪತ್ರಿಕೆ ವಿಶ್ವ ಕರ್ನಾಟಕ ಮುಖಾಂತರ ಬೆಂಗಳೂರಿನಲ್ಲಿ ಪತ್ರಿಕೋದ್ಯಮಕ್ಕೆ ಪ್ರವೇಶ.ಮುಂದೆ ತಾಯಿನಾಡು , ಕಾಂಗ್ರೆಸ್ ಸಂದೇಶ ಮತ್ತು ಸಂಯುಕ್ತ ಕರ್ನಾಟಕ ಪತ್ರಿಕೆಗಳಲ್ಲಿ ಬೆಂಗಳೂರಿನಲ್ಲಿ ಸೇವೆ ಸಲ್ಲಿಸಿದರು. ಮಡಿಕೇರಿಯಿಂದ ಪ್ರಕಟವಾಗುತ್ತಿದ್ದ "ಶಕ್ತಿ " ಪತ್ರಿಕೆಯ ಬೆಂಗಳೂರಿನ ವರದಿಗಾರರಾಗಿದ್ದವರು ಶ್ರೀ. ಪ. ಗೋ.

೧೯೫೯ರ ಸುಮಾರಿಗೆ ಮಂಗಳೂರಿಗೆ ಬಂದು ನೆಲಸಿ ನವಭಾರತ, ಕನ್ನಡವಾಣಿ ಪತ್ರಿಕೆಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿ ನಂತರ ಇಂಡಿಯನ್ ಎಕ್ಸಪ್ರೆಸ್, ಕನ್ನಡ ಪ್ರಭ, ಸಂಯುಕ್ತ ಕರ್ನಾಟಕ, ಟೈಮ್ಸ್ ಆಫ್ ಡೆಕ್ಕನ್ ಪತ್ರಿಕೆಗಳ ಮಂಗಳೂರು ವರದಿಗಾರರಾಗಿ ಮುಂದುವರಿದರು. ೧೯೬೩ -೧೯೬೪ ರಲ್ಲಿ ಮಂಗಳೂರಿನಲ್ಲಿ ತಮ್ಮ ಸ್ವಂತ ಕನ್ನಡ ದಿನ ಪತ್ರಿಕೆ "ವಾರ್ತಾಲೋಕ"ದ ವರದಿಗಾರ, ಮುದ್ರಕ ಮತ್ತು ಪ್ರಕಾಶಕರಾಗಿ ನಡೆಸಿ ಪತ್ರಿಕೋದ್ಯಮದ ಎಲ್ಲಾ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದವರು. ೧೯೯೪ರಲ್ಲಿ ಕಾರ್ಯನಿರತ ಪತ್ರಿಕೋದ್ಯಮದಿಂದ ನಿವೃತಿ ಹೊಂದುವ ಮೊದಲು ತಮ್ಮ ಒಂಬತ್ತು ವರ್ಷಗಳನ್ನು ಇಂಗ್ಲಿಷ್ ಪತ್ರಿಕಾರಂಗದ ' ಟೈಮ್ಸ್ ಆಫ್ ಇಂಡಿಯಾ'ಕ್ಕೆ ಸಲ್ಲಿಸಿ ಪತ್ರಿಕಾರಂಗಕ್ಕೆ ವಿದಾಯ ಹೇಳಿದರೂ ಅಂಕಣ ಸೃಷ್ಟಿಯನ್ನು ಕೊನೆ ತನಕ ಮುಂದುವರಿಸಿ ದಿನಾಂಕ ೧೦ - ೮- ೧೯೯೭ರಂದು ಈ ಪ್ರಪಂಚಕ್ಕೆ ವಿದಾಯ ಹೇಳಿದರು.

೧೯೫೬ ರಿಂದ ೧೯೯೭ ನೆ ಇಸವಿವರೆಗೆ ನಾಲ್ಕು ದಶಕಗಳಷ್ಟು ದೀರ್ಘ ಕಾಲವದಿಯಲ್ಲಿ ಹಲವಾರು ಪತ್ರಿಕೆಗಳಲ್ಲಿ ಅಗಾಗ ಕಾಲಂಕಾರರಾಗಿ ಪ.ಗೋ. ಬರೆದ ಕಾಲಂ ಸಾಹಿತ್ಯ ಸುಮಾರು ನಾಲ್ಕು ಸಾವಿರ ಪುಟಗಳಿಗೂ ಮಿಕ್ಕಿದೆ. ಬೆಳ್ಳಿಯ ಸೆರಗು ಎಂಬ ಸಾಮಾಜಿಕ ಕಾದಂಬರಿ, ಗನ್ ಬೋ ಸ್ಟ್ರೀಟ್ ಎಂಬ ಮತ್ತು ಓ. ಸಿ. ೬೭ ಎಂಬ ಪತ್ತೇದಾರಿ ಕಾದಂಬರಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಅರ್ಪಿಸಿದ ಹೆಗ್ಗಳಿಕೆ ಅವರದ್ದು.

ಶ್ರೀಹೆಚ್.ಆರ್.ನಾಗೇಶರಾವ್
ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ ಮಧುಗಿರಿಯಲ್ಲಿ ದಿನಾಂಕ ೨೦ ಅಕ್ಟೋಬರ್ ೧೯೨೭ರಂದು ಜನಿಸಿದ ಶ್ರೀ. ಹೆಚ್.ಆರ್.ನಾಗೇಶರಾವ್ ಅವರು ತಮ್ಮ ವಿದ್ಯಾಭ್ಯಾಸವನ್ನು ತುಮಕೂರಿನಲ್ಲಿ ಮುಂದುವರಿಸಿದರು. ವಿಜ್ಞಾನ ವಿಭಾಗದ ವಿದ್ಯಾರ್ಥಿ ಶ್ರೀ. ನಾಗೇಶರಾವ್ ತುಮಕೂರು ಇಂಟರ್‌ಮೀಡಿಯಟ್ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿದ್ದ ಶ್ರೀ. ಜಿ.ಪಿ.ರಾಜರತ್ನಂರ ಪ್ರೋತ್ಸಾಹದಿಂದ ಲೇಖನವೃತ್ತಿಗೆ ಪ್ರವೇಶ ಪಡೆದದ್ದು೧೯೪೪ನೇ ಇಸವಿಯಲ್ಲಿ.

ಬೆಂಗಳೂರಿನ ಅಂದಿನ ಜನಪ್ರಿಯ ದೈನಿಕ "ತಾಯಿನಾಡು" ಪತ್ರಿಕೆಯ ಉಪಸಂಪಾದಕರಾಗಿ ೪ ಜನವರಿ ೧೯೪೬ ರಂದು ನೇಮಕಗೊಂಡ ಶ್ರೀ. ನಾಗೇಶರಾವ್ ಅವರು ೧೨ ವರ್ಷ ತಾಯಿನಾಡು ಪತ್ರಿಕೆಯ ವಿವಿಧ ಕಾರ್ಯಭಾರವನ್ನುನಿರ್ವಹಿಸಿದರು.ತಾಯಿನಾಡು ಪತ್ರಿಕೆಯಲ್ಲಿಅಂದು ಜನಪ್ರಿಯವಾಗಿದ್ದ"ನಾರದ ಉವಾಚ" ಎಂಬ ದೈನಂದಿನ ಹಾಸ್ಯ - ಟೀಕಾಂಕಣವನ್ನು ಅವರು ಬರೆಯುತ್ತಿದ್ದರು. ನಿತ್ಯ ಸಂಪಾದಕೀಯಗಳನ್ನು ಬರೆಯುವುದರ ಜತೆಗೆ ’ಪುಸ್ತಕ ಪ್ರಿಯ’ ಹೆಸರಿನಲ್ಲಿ ವಾರಕ್ಕೊಮ್ಮೆ ಗ್ರಂಥ ವಿಮರ್ಶೆಯನ್ನು ಮಾಡುತ್ತಿದ್ದರು. ಹಾಗೆಯೇ ‘ತಾಯಿನಾಡು’ವಿನ ಸಹೋದರ ಪತ್ರಿಕೆಯಾಗಿದ್ದ ‘ಚಿತ್ರಗುಪ್ತ’ ಸಾಪ್ತಾಹಿಕಕ್ಕೆ ಹಾಸ್ಯಲೇಖನಗಳನ್ನು ಬರೆಯುತ್ತಿದ್ದರು. ‘ಕಿಡಿ’ ಪತ್ರಿಕೆ ಸೇರಿದಂತೆ ಅಂದಿನ ಹಲವಾರು ಪ್ರಮುಖ ಸಾಪ್ತಾಹಿಕಗಳಿಗೆ ರಾಜಕೀಯ ವಿಶ್ಲೇಷಣೆ, ಅಂಕಣಗಳನ್ನು ಬರೆಯುತ್ತಿದ್ದರು.

ಹುಬ್ಬಳಿಯ ಜನಪ್ರಿಯ ದೈನಿಕ "ಸಂಯುಕ್ತ ಕರ್ನಾಟಕ" ಪತ್ರಿಕೆ ಬೆಂಗಳೂರಿನಲ್ಲಿ ಹೊಸದಾಗಿ ಪ್ರಾರಂಭಿಸಿದ ಆವೃತ್ತಿಯ ಹಿರಿಯ ಉಪಸಂಪಾದಕರಾಗಿ ೧ ಸೆಪ್ಟೆಂಬರ್ ೧೯೫೮ ರಂದು ನಿಯುಕ್ತಿಗೊಂಡ ಶ್ರೀ. ನಾಗೇಶರಾವ್ ಅವರು ೩೧ ಅಕ್ಟೋಬರ್ ೧೯೮೫ ರಂದು "ಸಂಯುಕ್ತ ಕರ್ನಾಟಕ" ಪತ್ರಿಕೆಯ ಸ್ಥಾನಿಕ ಸಂಪಾದಕತ್ವದ ಹೊಣೆಗಾರಿಕೆಯಿಂದ ನಿವೃತ್ತಿ ಹೊಂದಿದರು. ಹಲವಾರು ವರ್ಷ ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟಣೆಗೊಂಡ ಟೀಕಾಂಕಣ "ಚಿಟಿಕೆ-ಚಪ್ಪರ" ಮತ್ತು "ಸುದ್ದಿಜೀವಿ" ಅಭಿದಾನದ ವಾರ್ತಾವಲೋಕನ ಶ್ರೀ ನಾಗೇಶರಾವ್ ಅವರ ಜನಪ್ರಿಯವಾಗಿದ್ದ ಅಂಕಣಗಳಲ್ಲಿ ಹಲವು. ೧೯೪೮ರಲ್ಲಿ ಪ್ರಾರಂಭಿಸಿದ ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ ಸ್ಥಾಪಕ ಸದಸ್ಯರಾದ ಶ್ರೀಯುತರು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘಟನೆಯ ಪ್ರವರ್ತಕರು. ಶ್ರೀ. ನಾಗೇಶರಾವ್ ಅವರು ೩ ಆಗಸ್ಟ್ ೨೦೦೩ ರಂದು `ಕಾಲ'ನ ಕರೆಗೆ ಓಗೊಡುವ ತನಕ ತಮ್ಮ ಬರಹವನ್ನು ಮುಂದುವರಿಸಿದ್ದರು.


ಹಾಲ್ದೊಡ್ಡೇರಿ ಸುಧೀಂದ್ರ, ಬೆಂಗಳೂರು.

ನಾಡಿನ ಹಿರಿಯ ಪತ್ರಕರ್ತ ’ಸುದ್ದಿಜೀವಿ’ ಶ್ರೀ. ಹೆಚ್.ಆರ್.ನಾಗೇಶರಾವ್ ಅವರ ಪುತ್ರ ಶ್ರೀ. ಹಾಲ್ದೊಡ್ಡೇರಿ ಸುಧೀಂದ್ರ. ಇಪ್ಪತ್ತೆರಡು ವರ್ಷಗಳ ಕಾಲ ಡಿ.ಆರ್.ಡಿ.ಓ.ದಲ್ಲಿ ವಿಜ್ಞಾನಿಯಾಗಿ ವಿಮಾನ ಎಂಜಿನ್ ‍ ಕ್ಷೇತ್ರದಲ್ಲಿ ಕಾರ್ಯಭಾರ ಸಲ್ಲಿಸಿದ ಶ್ರೀಯುತರು ಪ್ರಸ್ತುತ ಎಚ್.ಎ.ಎಲ್.ನ ವಿಮಾನ ಸಂಧೋಧನೆ ಮತ್ತು ವಿನ್ಯಾಸ ಕೇಂದ್ರದಲ್ಲಿ ವಿಮಾನ ಎಂಜಿನ್ ಹಾಗೂ ಇಂಧನ ಪೂರೈಕೆ ವ್ಯವಸ್ಥೆ ವಿಭಾಗದ ಉಪ ಮಹಾಪ್ರಬಂಧಕ ಹಾಗೂ ಮುಖ್ಯಸ್ಥರು . ವಿಜ್ಞಾನ, ತಂತ್ರಜ್ಞಾನ ವಿಷಯಗಳ ಬಗ್ಗೆ ಲೇಖನ, ಅಂಕಣ ಅವರ ಹವ್ಯಾಸಗಳಲ್ಲಿ ಒಂದು.

ತಂತ್ರಜ್ಞಾನ ಕುರಿತು ಹಲವಾರು ಪ್ರಬಂಧಗಳನ್ನು ಮತ್ತು ಉಪನ್ಯಾಸಗಳನ್ನು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ವಿಜ್ಞಾನ ಸಮ್ಮೇಳನಗಳಲ್ಲಿ ಮಂಡಿಸಿದ ಶ್ರೀಯುತರು ಕನ್ನಡ ಭಾಷೆಯಲ್ಲಿ ವಿಜ್ಞಾನ-ತಂತ್ರಜ್ಞಾನ ಕುರಿತು ಪ್ರಜಾವಾಣಿ, ಸುಧಾ, ವಿಜಯ ಕರ್ನಾಟಕ ಮೊದಲಾದ ಕನ್ನಡ ಪತ್ರಿಕೆಗಳಲ್ಲಿ ಹಲವಾರು ಲೇಖನಗಳನ್ನು ಬರೆದಿದ್ದಾರೆ.

ಪ.ಗೋ.ಪತ್ರಗಳು...

ಈಗ ಬರೆದಿದ್ದೇನೆ, ಏನು ವಿಶೇಷ?

ಗೆಳೆಯ ನಾಗೇಶರಾಯರಿಗೆ - ನಮಸ್ಕಾರಗಳು.

ಅತ್ತ ಕಡೆ ಬರಲೂ ಇಲ್ಲ - ಪತ್ರವನ್ನೂ ಬರೆಯಲಿಲ್ಲ ಎಂಬ ಸಿಟ್ಟು ಸಹಜವಾಗಿ ಇರಬಹುದು. ಈಗ ಬರೆದಿದ್ದೇನೆ, ಏನು ವಿಶೇಷ?

ವಾರ್ತಾಲೋಕ - ಇದೆ. ನಾನು ಇದ್ದೇನೆ. ಶ್ರೀ ಅನಂತಸುಬ್ಬರಾಯರಿಗೆ ನಮಸ್ಕಾರ ತಿಳಿಸಿ, ದಯವಿಟ್ಟು.

ನಿಮ್ಮ
ಪ.ಗೋಪಾಲಕೃಷ್ಣ
10.4.64
ಇ-ಮೇಲ್, ಬ್ಲಾಗ್ ಯುಗದ ನಮ್ಮಂಥವರೂ ಸಹಾ ಕೇವಲ ಇಪ್ಪತ್ತು ವರ್ಷಗಳ ಹಿಂದೆ ಅಂಚೆಯ ಮೂಲಕವೇ communicate ಮಾಡುತ್ತಿದ್ದೆವು. ನಮ್ಮ ಹಿಂದಿನ ತಲೆಮಾರಿನವರು ಅಂಚೆ ಕಾರ್ಡಿನಲ್ಲಿ ಬರೆಯುತ್ತಿದ್ದರು. ಗೌಪ್ಯತೆಗೆ ಅಲ್ಲಿ ಅವಕಾಶವೇ ಇಲ್ಲ. ಕಚೇರಿ ಅಥವಾ ಮನೆಯ ವಿಳಾಸಕ್ಕೆ ಬಂದ ಕಾರ್ಡು ಕೈ ದಾಟಿದವರೆಲ್ಲರಿಂದಲೂ ಓದಿಸಿಕೊಳ್ಳುತ್ತಿತ್ತು. ಕೆಲವು ಪೋಸ್ಟ್-ಮ್ಯಾನ್ ಗಳು ಅಂಚೆ ಕಾರ್ಡುಗಳನ್ನು ಓದುವುದು ತಮ್ಮ ಹಕ್ಕೆಂದೇ ಭಾವಿಸುತ್ತಿದ್ದರು.
ಆ ಮಾತು ಬದಿಗಿರಲಿ. ನನ್ನಪ್ಪ (ಸಂ.ಕ.ದ ನಿವೃತ್ತ ಸ್ಥಾನಿಕ ಸಂಪಾದಕ ಹೆಚ್.ಆರ್.ನಾಗೇಶರಾವ್) ನನಗೆ ಆಲದ ಮರದ ಬದಲು ಖನಿಜಭರಿತ ಗಣಿಯೊಂದನ್ನು ಬಿಟ್ಟು ಹೋಗಿದ್ದಾರೆ. ಅಕ್ರಮವೊ, ಸಕ್ರಮವೊ ಗೊತ್ತಿಲ್ಲ, ಉತ್ಖನನ ಮಾಡುತ್ತಿದ್ದೇನೆ. ಸಿಕ್ಕ ದಾಖಲೆಗಳನ್ನು ಯಾವುದೋ ಸಂದರ್ಭದಲ್ಲಿ ಅವರೊಂದಿಗೆ ನಡೆಸಿದ ಮಾತುಕತೆಯನ್ನು ನನ್ನ ನೆನಪಿನ ಗಣಿಯಿಂದ ಹೆಕ್ಕಿ ತೆಗೆದು ಜೋಡಣೆ ಮಾಡ ಹೊರಟಿದ್ದೇನೆ.
ರವಿ ಹೆಗಡೆಯಂಥ ನನ್ನ ಮಾಜಿ ಕಂ ಹಾಲಿ ಮಿತ್ರರು (ಅವರ ಪ್ರಕಾರ ಆಲ್‍ಮೋಸ್ಟ್ ಮಾಜಿ, ನನ್ನ ಪ್ರಕಾರ ಇನ್ನೂ ಹಾಲಿ) ತಮ್ಮ Internet Inspectorಗಳ ನೆರವಿನಿಂದ ತನಿಖೆ ಆರಂಭಿಸಿ ಪತ್ತೆ ಹಚ್ಚುವ ಮೊದಲೇ ನನ್ನ ಆಸ್ತಿ declare ಮಾಡುತ್ತಿದ್ದೇನೆ!
ಆತ್ಮೀಯ ಜಿ.ಎನ್.ಮೋಹನ್ ಪ.ಗೋ. ಬಗ್ಗೆ ಬರೆದಾಗಿನಿಂದ ಗುಂಗಿಹುಳವೊಂದು ನನ್ನನ್ನು ಕಾಡುತ್ತಿತ್ತು. ಪ.ಗೋ. ಬಗ್ಗೆ ನನ್ನ ತಂದೆ ಎಲ್ಲೋ, ಏನೋ ಹೇಳಿದ್ದ ನೆನಪು. ಡೀಟೇಲ್ಸ್, ರೆಫೆರೆಸ್ನ್ ಯಾವುದೂ ಸಿಕ್ತಾ ಇರ್ಲಿಲ್ಲ. ಜತೆಗೆ ಕಚೇರಿಯಲ್ಲಿ ಎಡೆಬಿಡದ ಕೆಲಸದ ಒತ್ತಡ, ಭಾನುವಾರವೂ ಸೇರಿದಂತೆ. ನಡುವೆ ಪಯಣದ ರೇಜಿಗೆ. ಒಂದು ಸಂಜೆ ಟ್ರಂಕಿನಲ್ಲಿ ಕಾಗದಗಳ ಬಂಚಿನ ನಡುವೆ ಸಿಕ್ಕದ್ದು ಪ.ಗೋ. ಅವರ ವಿವಾಹದ ಆಮಂತ್ರಣ ಪತ್ರಿಕೆ. ತಮಗೆ ಆತ್ಮೀಯರೆನಿಸಿದ್ದ ಪತ್ರಕರ್ತರೆಲ್ಲರ ವಿವಾಹ ಪತ್ರಿಕೆಗೆಳನ್ನು ಅಪ್ಪ ಸಂಗ್ರಹಿಸಿಟ್ಟಿದ್ದಾರೆ. ಇದರ ಬಗ್ಗೆ ಮುಂದೆಂದಾದರೂ ಬರೆಯುತ್ತೇನೆ. ಅದನ್ನೇ ಸ್ಕ್ಯಾನ್ ಮಾಡಿ ಹಾಕಲೆ, ಬೇಡವೆ? ಎಂಬ ತಾಕಲಾಟವಿತ್ತು. Value Addition ಇಲ್ಲ ಎಂದು ಸುಮ್ಮನಾಗಿಬಿಟ್ಟೆ.
ನಿನ್ನೆ ಸಂಜೆ ಯಾವುದೋ ರಟ್ಟಿನ ಡಬ್ಬ ಬುಡಮೇಲು ಮಾಡುತ್ತಿದ್ದಾಗ ಸಿಕ್ಕ ಒಂದು ಕವರಿನ ಮೇಲ್ಗಡೆ P.Gopalakrishna ಎಂಬ ಉಲ್ಲೇಖವಿತ್ತು. ತೆಗೆದರೆ ಹತ್ತು ಹದಿನೈದು ಪತ್ರಗಳ ಸರಮಾಲೆ. ಕೆಲವು ಅಂಚೆ ಕಾರ್ಡುಗಳು - ಮತ್ತೆ ಕೆಲವು ಸುದೀರ್ಘ ಇನ್‍ಲೆಂಡ್ ಲೆಟರುಗಳು. ಬಾಕಿಯಿದ್ದ ಕಚೇರಿ ಕೆಲಸದ ನಡುವೆ ಎರಡು ಪತ್ರಗಳನ್ನು ಓದಿದೆ. ಹಾಗೆಯೇ ಒಂದೆರಡು ಚಿತ್ರಗಳನ್ನು ತೆಗೆದೆ. ಎಪ್ಪತ್ತರ ದಶಕದ ಆರಂಭದಲ್ಲಿನ ಪತ್ರಿಕೋದ್ಯಮದ ಬಗ್ಗೆ ಒಂದಷ್ಟು ಹೊಳಹು ಸಿಕ್ಕಿತು. ಕಣ್ಣೆಳೆಯುತ್ತಿತ್ತು ಮೇಜಿನ ಮೇಲೆ ಎಲ್ಲವನ್ನೂ ಹರಡಿ ಮಲಗಿದೆ.
ಕತ್ತಲೆ ಹರಿಯದ ಮುಂಜಾವು, ಕಚೇರಿಗೆ ಹೊರಡಲು ಅವಸರ. ತೋಚಿದಷ್ಟೇ ಗೀಚುತ್ತಿದ್ದೇನೆ. ಸುದೀರ್ಘ ಪ್ರಸ್ತಾವನೆ, ಮುಂದೆ ಕಾದಿದೆ. ಪ.ಗೋ. ಪತ್ರಗಳಿಂದ ಹೆಕ್ಕಿ ತೆಗೆದ ಮಾಹಿತಿಯಿಂದ.
- ಹಾಲ್ದೊಡ್ಡೇರಿ ಸುಧೀಂದ್ರ, ಬೆಂಗಳೂರು.

No comments:

Visitors to this page