Thursday, June 18, 2009

’ನೋ ಚೇಂಜ್ ಕಥೆಗಳು’ -೨೨... ಹಳೆ ಕಾಗದಗಳ ರಾಶಿಯಲ್ಲಿ













ಹೊಸಸಂಜೆ ಪತ್ರಿಕೆಗಾಗಿ ಪತ್ರಕರ್ತ ಶ್ರೀ ಪದ್ಯಾಣ ಗೋಪಾಲಕೃಷ್ಣ (ಪ.ಗೋ.) ಅವರು ಬರೆದ ೨೪ ಅಂಕಣಗಳ ಕಂಕಣ" ನೋ ಚೇಂಜ್ ಕಥೆಗಳು". ಈ ಬರಹಗಳನ್ನು ಅವರ ಸ್ಮಾರಕಾರ್ಥವಾಗಿ ’ಗಲ್ಫ್ ಕನ್ನಡಿಗ’ ಪ್ರತಿ ಗುರುವಾರ ಪ್ರಕಟಿಸಲಾಗುತ್ತಿದ್ದು ಇದು ಇಪ್ಪತ್ತೆರಡನೇ ಅಂಕಣ.


ಹಳೆ ಕಾಗದಗಳ ರಾಶಿಯಲ್ಲಿ

ಅಜ್ಜಾ -ಅಜ್ಜಾ, ಒಂದು ಪೇಪರ್ ಕೊಡಬೇಕಂತೆ,ಬೇಗ ಕೊಡಿ.

ಯಾವ ಪೇಪರ್ ಮಗೂ ? ಈವತ್ತಿನದ್ದಾ, ನಾನು ಇನ್ನೂ ಓದಿಲ್ಲ. ಓದಿ ಆದ ನಂತರ ಕೊಡ್ತೇನೆ ಅಂತ ನಿನ್ನ ತಂದೆಗೆ ಹೇಳು.

ಛಿ ! ಛಿ ! ಈವತ್ತಿಂದು ಅಲ್ಲಾ ನಾನು ಕೇಳಿದ್ದು, ಹಳೇ ಪೇಪರ್ ತರ್‍ಲಿಕ್ಕೆ ಹೇಳಿದ್ದಾರೆ ನನ್ನ ಮಮ್ಮಿ -ಡ್ಯಾಡ್ ಅಲ್ಲ. ಕೊಡಿ, ಕೊಡಿ ಬೇಗ.

ಕೇಳಲು ಬಂದ ನೆರೆಮನೆಯ ಮಗುವಿನೊಂದಿಗೆ ಸಲಿಗೆ ಇತ್ತು. ಮಕ್ಕಳ ಮಾತು ಕೇಳುವುದರಲ್ಲಿ ಖುಷಿಯೂ ಇತ್ತು.

ಅವರನ್ನು ತಮಾಷೆಯಲ್ಲಿ ಸತಾಯಿಸುವ(ಇಳಿ?) ಪ್ರಾಯದ ಅಭ್ಯಾಸವೂ ಇತ್ತು.ಹಾಗಾಗಿ -

ನಿನ್ನ ಮಮ್ಮಿಗೆ ಈಗ ಯಾಕೋ ಹಳೇ ಪೇಪರ್ - ಏನಾದರೂ ಕಟ್ಟಲಿಕ್ಕೆ ಇದೆಯಾ ?

ಸರಿಯಾಗಲಿ ತಪ್ಪಾಗಲಿ - ನನ್ನ ಪ್ರಶ್ನೆಗಳಿಗೆ ಯಾವಾಗಲೂ ಸಟಕ್ಕಂತ ಉತ್ತರ ಕೊಡುತ್ತಾ ಇದ್ದ ಮಗು, ಸಾಯಿಲೆಂಟ್ ಯಾಕೆ ?

ನಾನೇ ಸ್ವಲ್ಪ ಹೊತ್ತು ಕಾದೆ. ಆಗಲೂ ಮಾತಿಲ್ಲ. ಏನಾಯಿತು ?

ಭಾರೀ ಅರ್ಜೆಂಟ್ ಆಗ ಮಾಡಿದಿ.ಈಗ ಯಾಕೋ ಮಾತಾಡೋದಿಲ್ಲ. ನಿನಗೆ ಪೇಪರ್ ಬೇಕೂಂತಾದ್ರೆ ಮಾತಾಡು, ಎಂದೆ.

ಮಗು ತಲೆ ಕೆಳಗೆ ಹಾಕಿತ್ತು. ಎಂದೂ ಇಲ್ಲದ ನಾಚಿಕೆ ತೋರಿತ್ತು. ಕೊನೆಗೂ ಕಷ್ಟಪಟ್ಟು ‘ಕಾಯಿ ಹೋಳಿಗೆ ಕಟ್ಟಿ ಕೊಡ್ಲಿಕ್ಕೆ’ ಎಂಬ ಗುಟ್ಟನ್ನು ಹೊರ ಬಿಟ್ಟಾಗ ಬಿಳೀಯ ಮುಖ ಕೆಂಪಾಗಿ ಹೋಗಿತ್ತು.

ಯಾವಾಗಿನ ಅಭ್ಯಾಸದ ಹಾಗೆ, ತಿಂಡಿಯ ಹೆಸರೆತ್ತಿದರೆ ನನಗೂ ಕೊಡ್ತೀಯಾ ಎನ್ನುತ್ತಾನೆ ಈ ಮುದುಕ. ಈಗೇನು ಮಾಡಲಿ ? ಎಂಬ ಯೋಚನೆಯೇ ಮಗುವಿನ ಮೌನಕ್ಕೆ ಕಾರಣ ಎಂದು ತಿಳಿದೆ) ಹ್ಹೊ ! ಅಷ್ಟೆಯಾ, ಈಗ ಕೊಡ್ತೇನೆ. ಬಾ ಎಂದೆ. ನಾವು ಪೇಪರ್ ರಾಶಿ ಹಾಕುತ್ತಿದ್ದ ಸಣ್ಣ ಕೋಣೆಗೆ ಕರೆದೊಯ್ದೆ.

ತನ್ನ ಎತ್ತರಕ್ಕಷ್ಟೇ ಬಿದ್ದಿದ್ದ ಪೇಪರ್ ರಾಶಿ ನೋಡಿದ ಮಗುವಿಗೆ, ನೆಲದಲ್ಲಿದ್ದ ಕೆಲವು ವರ್ಣಮಯ ಪತ್ರಿಕೆಗಳೂ ಕಾಣಿಸಿದವು. ಓ ಇದನ್ನು ತೆಗೀಲಾ ? ಎಂದು ಒಂದು ಪತ್ರಿಕೆಯನ್ನು ತೋರಿಸಿ ಮಗು ಕೇಳಿಯೂ ಬಿಟ್ಟಿತು. ಕೇಳಿ ಎತ್ತಿಕೊಂಡೂ ಬಿಟ್ಟಿತು.

ಪತ್ರಿಕೆಯಲ್ಲಿದ್ದ ಕಾಮಿಕ್ಸ್ ನೋಡುತ್ತಾ ನೆಲದಲ್ಲೇ ಕುಳಿತುಬಿಟ್ಟಿದ್ದ ಮಗಿವಿನ ಸಂತೋಷಕ್ಕೆ - ತಾಯಿಗೆ ಅರ್ಜೆಂಟಾಗಿ ಬೇಕಾದ ಪೇಪರಿನ ನೆನಪು ಮಾಡಿ - ಭಂಗ ತರಲು ಯಾಕೋ ಮನಸ್ಸಾಗಲಿಲ್ಲ. ಅದರ ಪ್ರಸ್ತಾಪ ಹೇಗೆ ಮಾಡಲಿ ಎಂದು ಯೋಚಿಸುತ್ತಾ ಇರುವಾಗ ‘ಇಷ್ಟು ಹೊತ್ತಾದರೂ ಬಾರದೆ ಇದ್ದ’ ಮಗುವನ್ನು ಹುಡಿಕಿಕೊಂಡು ಮಗುವಿನ ತಾಯಿಯೇ ಬಂದಳು.ನಮ್ಮ ಮಗು ಎಲ್ಲಿ ? ಎಂದು ಗೃಹಮಂತ್ರಿಯವರನ್ನು ಪ್ರಶ್ನಿಸಿ ನನ್ನ ಯೋಚನೆಗೇ ಭಂಗ ತಂದಳು.

ಅರ್ಜೆಂಟಿನಲ್ಲೂ ಅಷ್ಟು ಹೊತ್ತು ಆ ಕಿರುಕೋಣೆಯಲ್ಲಿ ಕಳೆದುದಕ್ಕೆ ನಮ್ಮಿಬ್ಬರನ್ನೂ -ಮಗುವನ್ನು ಜೋರಾಗಿ ನನ್ನನ್ನು ಸ್ವಲ್ಪ ಮೆಲ್ಲಗೆ - ದಬಾಯಿಸಿ ಒಂದು ಇಡೀ ಪೇಪರನ್ನೂ ಮಗುವನ್ನೂ ಒಟ್ಟಿಗೇ ಎಳೆದುಕೊಂಡು ಬಿರುಗಾಳಿಯ ಹಾಗೆ ಹೊರಟು ಹೋಗಲು, ಇಷ್ಟನ್ನು ಹೇಳುವ ಹೊತ್ತು ಕೂಡಾ ಆ ತಾಯಿಗೆ ತಗಲಲಿಲ್ಲ.

ನನ್ನ ಅಮೌಲ್ಯ (ಅಮೂಲ್ಯವಲ್ಲ,ನೆನಪಿರಲಿ) ಪೇಪರ್ ರಾಶಿಯನ್ನೇ ನೋಡುತ್ತಾ ನಿಂತಿದ್ದ ನನಗೆ ಅವಳ ದಬಾವಣೆಯ ಮಾತುಗಳ ಕಡೆಗೆ ಗಮನವೂ ಇರಲಿಲ್ಲ.

‘ಏನ್ರೀ ಸಂಗ್ತಿ ? ಯಾಕೆಹೀಗೆ ನಿಂತಿದ್ದೀರಿ ? ಹೊರಗೆ ಬರೋದಿಲ್ವಾ ?’ ಇತ್ಯಾದಿ ಇತ್ಯಾದಿ ಪ್ರಶ್ನೆಗಳು ನಮ್ಮ ಹೋಮ್ ಮಿನಿಸ್ಟರ್ರಿಂದ ಬರತೊಡಗಿದಾಗ ನಾನೆಲ್ಲಿದ್ದೇನೆ ಎಂಬುದು ನೆನಪಾಯಿತು. ‘ಏನು ನೆನಪಾಗ್ತಿದೆ?’ ಎಂದು ಯಜಮಾನಿಯ ಪ್ರಶ್ನೆ ಹೊರಟಾಗ ಹಳೇ ಕಾಗದ ಪುಸ್ತಕಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳುವವರ ನೆನಪುಗಳೂ ಮೂಡಿದವು.

‘ಏನು ನೆನಪಾಯಿತು ಅಂತ ಹೇಳ್ತೇನೆ ಬಾ’ ಎಂದೆ. ಕೋಣೆಯಿಂದ ಹೊರಗೆ ಬಂದು, ಆರಾಮವಾಗಿ ಕುಳಿತು, ನೆನಪಿನ ಕಥೆಗಳನ್ನು ಮನದಾಳದಿಂದ ಹೊರಗೆ ತೆಗೆದೆ.

(ನನ್ನ ಮನೆಯಾಕೆಗೆ ನಾನು ಕೇಳಿದ ಹಾಗೆ)

ಮುದ್ರಿಸಿದ ವಸ್ತುಗಳು ಸಿಗುವುದೇ ಅಪರೂಪವಾಗಿದ್ದ ಕಾಲದಲ್ಲಿ ಮುದ್ರಿತ ಸಾಮಗ್ರಿಗಳನ್ನೆಲ್ಲ ಸಂಗ್ರಹಿಸಿ ಇಡುವ ಅಭ್ಯಾಸ ಆರಂಭವಾಯಿತು. ಕೆಲವು ಗ್ರಂಥಗಳನ್ನಂತೂ ಉಳಿಸಿ ಇಟ್ಟುಕೊಳ್ಳಲೇ ಬೇಕಾಯಿತು. ಜೋಪಾನವಾಗಿಟ್ಟ ಗದುಗಿನ ಭಾರತ, ಭಗವದ್ಗೀತೆಗಳ ಪ್ರತಿಗಳನ್ನು ಕೆಲವು ಪತ್ರಿಕೆಗಳನ್ನು ಸಂಗ್ರಹಿಡುವ ಅಭ್ಯಾಸ ಬಂತು. ಆಗ ಪತ್ರಿಕೆಗಳ ಸಂಖ್ಯೆಯೂ ಕಡಿಮೆ. ಅವುಗಳಲ್ಲೂ ಹೆಚ್ಚಿನವು ವಾರಪತ್ರಿಕೆಗಳು, ಅದರಿಂದಾಗಿ ಸಂಗ್ರಹ ಬೆಳೆದು ದೊಡ್ಡ ರಾಶಿಯಾಗುವ ಯಾವ ಅಪಾಯವೂ ಇರಲಿಲ್ಲ. ಸಂಗ್ರಹಿಸಿದ್ದ ಹಳೆಯ ಪತ್ರಿಕೆಗಳ ಮಾರಾಟ(ಈಗಿನ ಹಾಗೆ) ಕಷ್ಟವಾಗಿರಲಿಲ್ಲ.

ಏನನ್ನಾದರೂ ಕಟ್ಟುವುದಕ್ಕೆ ಅಥವಾ ಸುತ್ತುವ ಕೆಲಸಕ್ಕೆ ದೊಡ್ಡ ಸೈಜಿನ ಕಾಗದವೇ ಬೇಕಾಗುತ್ತಿತ್ತು. ಅದರಿಂದ ಹಳೇ ಪೇಪರ್ ಕೊಳ್ಳುವವರ ತಂಡಗಳು ಎಲ್ಲ ಊರುಗಳಂತೆ ಮಂಗಳೂರಿನಲ್ಲೂ ಹುಟ್ಟಿಕೊಂಡವು. ಹಳೇ ಪೇಪರ್ ಮಾರುವವರ ಸಂಖ್ಯೆ ಹೆಚ್ಚಿದ ಹಾಗೆ ತಂಡಗಳು ಮೇಲುಗೈ ಸಾಧಿಸಿಕೊಂಡವು. ಒಂದೇ ರೀತಿಯ ಕಾಗದದಲ್ಲಿ ಮುದ್ರಣವಾಗಿದ್ದರೂ ಇಂಗ್ಲಿಷ್ ಪೇಪರಿಗೆ ಹೆಚ್ಚು ಬೆಲೆ -ಕನ್ನಡದ್ದಕ್ಕೆ ಕಡಿಮೆ ಎನ್ನುವ ಭೇದ ನೀತಿ ಜಾರಿಗೆ ಬಂತು. ಸಿಕ್ಕಿದಷ್ಟು ಸಾಕು ಎನ್ನುವವರು ಹೆಚ್ಚಾದರು. ರದ್ದಿ ಕಾಗದದ ಬೆಲೆಯನ್ನು ವ್ಯಾಪಾರಿಗಳು ಕುಗ್ಗಿಸುತ್ತಾ ಹೋದಾಗ ಬಾಯಿ ಬಡಿದುಕೊಂಡರು.

ಅಂಥ ಕಾಲದಲ್ಲೂ ಸಂಗ್ರಹಕ್ಕಾಗಿ ತಂದ ಯಾವ ಕಾಗದ ಚೂರನ್ನೂ ಮಾರುವುದಿಲ್ಲ ಎಂದು ಗಟ್ಟಿಯಾಗಿ ನಿಂತ ನಾಡಕರ್ಣಿ ಎಂಬ ಮಹಾಶಯರು ಮಂಗಳೂರಿನಲ್ಲಿ ಇದ್ದರು. ಮುದ್ರಣವಾದ ಪುಸ್ತಕ, ಪತ್ರಿಕೆ ಅಥವಾ ಬರೇ ಒಂದು ಕರಪತ್ರ( ಹ್ಯಾಂಡ್‍ಬಿಲ್) ಏನೇ ಇದ್ದರೂ ಅವರ ಸಂಗ್ರಹಕ್ಕೆ ಸೇರಿತೆಂದರೆ ಅವರ ಮನೆಯ ದೊಡ್ಡ ಕೋಣೆಯಿಂದ ಹೊರಬೀಳುವ ಪ್ರಶ್ನೆಯೇ ಇರಲಿಲ್ಲ. ಯಾವ ಅಪೂರ್ವ ದಾಖಲೆಯಾದರೂ ಅವರಲ್ಲಿ ಖಂಡಿತವಾಗಿಯೂ ಇದೆ ಎಂಬ ಪ್ರತೀತಿ ಇತ್ತು.

ಆದರೆ ಅವರು ‘ಇನ್ನಿಲ್ಲ’ ಎಂದಾದ ಮೇಲೆ ಅವರ ಕುಟುಂಬದವರು ಸಂಗ್ರಹವನ್ನೆಲ್ಲ ಹಳೇಪೇಪರ್ ಖಾಲಿ ಬಾಟ್ಲಿಯವರಿಗೆ ಸಿಕ್ಕಿದಷ್ಟಕ್ಕೆ ಮಾರಿದರು ಎನ್ನುತ್ತಾರೆ. ಅವರು ಅದನ್ನು ಉಳಿಸಿಕೊಂಡಿದ್ದರೆ, ಮಹಾತ್ಮಾಗಾಂಧಿಯವರ ಭಗವದ್ಗೀತೆಗೆ ಸಿಕ್ಕಿದ ಹಾಗೆ ಏಲಂ ಹಣವೇನೂ ಸಿಕ್ಕಲಾರದು ಎಂದು ಅವರು ಭಾವಿಸಿರಬೇಕು. ಅದರಿಂದಾಗಿ ಲಾಭ ಕೆಲವರಿಗೆ ಆಯಿತು, ನಷ್ಟ ಸಮಾಜಕ್ಕಾಯಿತು.

ಅಂತಹದೇ ಇನ್ನೊಂದು ಪ್ರಸಂಗ ಇತ್ತೀಚಿನ ದಶಕಗಳಲ್ಲಿ ನಡೆಯಿತು. ರೆಡಿಮೇಡ್ ಬಟ್ಟೆಗಳ ವ್ಯಾಪಾರ ಮಾಡುತ್ತಿದ್ದರೂ ಸಾಹಿತ್ಯ -ಪತ್ರಿಕೋದ್ಯಮ ಇವುಗಳಲ್ಲಿ ಆಸಕ್ತಿ ಉಳಿಸಿ ಕೊಂಡಿದ್ದ ಮಾಜಿ ಉಪಾಧ್ಯಾಯರೊಬ್ಬರು ಬಹಳ ವರ್ಷಗಳ ಕಾಲ ಒಳ್ಳೆಯ ವಾರಪತ್ರಿಕೆ - ಮಾಸಪತ್ರಿಕೆಗಳನ್ನು ಸಂಗ್ರಹಿಸಿ ಇಟ್ಟಿದ್ದರು. ಆರಂಭದ ಸಂಚಿಕೆಯಿಂದ ಹಿಡಿದು ಇತ್ತೀಚಿನ ಸಂಚಿಕೆವರೆಗೂ ಅವರ ಸಂಗ್ರಹ ಬೆಳೆದಿತ್ತು. ಕ್ರಮವಾಗಿ ಇಟ್ಟುಕೊಂಡಿದ್ದ ಸಂಗ್ರಹಕ್ಕೆ ಇರುವ ಕಪಾಟುಗಳು ಸಾಲದೆನ್ನುವ ಸ್ಥಿತಿಗೆ ಬಂದಾಗ ಒಂದು ದಿನ ಇದ್ದಕ್ಕಿದ್ದಂತೆ ಅವರ ಸಂಗ್ರಹಕ್ಕೆ ಮನೆಯವರು ‘ಗಿರಾಕಿ’ ಹುಡುಕಿ, ಪತ್ರಿಕೆಗಳ ರಾಶಿಗಳನ್ನು ತೂಗಿಸಿ ಹೊರಹಾಕಿದರು. ಅವರು ಖರ್ಚು ಮಾಡಿದ್ದ ಒಟ್ಟು ಹಣದ ಹತ್ತನೇ ಒಂದಂಶವಾದರೂ ತಿರುಗಿ ಬಂತೋ ಇಲ್ಲವೋ - ಅದು ಬೇರೆ ಮಾತು.

ಈಗಿನ ನಮ್ಮ ಸಂಗ್ರಹದ ಪಾಡೇನು ? ಈಗ ಯಾವುದನ್ನು ಕಟ್ಟಲೂ ಕಾಗದ ಬೇಡ. ಇದು ಪ್ಲಾಸ್ಟಿಕ್ ಯುಗ. ಕೊಟ್ಟರೆ ತೆಕ್ಕೊಳ್ಳುವವರಿಲ್ಲ. ಇಟ್ಟುಕೊಳ್ಳಲು ಸಾಧ್ಯವಿಲ್ಲ. ಅಂಥಾದ್ರಲ್ಲಿ - ಹೋಳಿಗೆ ಕಟ್ಲಿಕ್ಕೆ ಕಾಗದ ಕೊಡಿ ಎಂದು ಆ ಮಗು ಕೇಳಿದಾಗ ಎಷ್ಟು ಸಂತೋಷವಾಯಿತು ಗೊತ್ತೆ ? ನಿಮಗೆ ಹೇಗೆ ಗೊತ್ತಾಗಬೇಕು ?






ಶ್ರೀ ಪದ್ಯಾಣ ಗೋಪಾಲಕೃಷ್ಣ ( ಪ.ಗೋ.)







ಶ್ರೀ ಪದ್ಯಾಣ ಗೋಪಾಲಕೃಷ್ಣ ( ಪ.ಗೋ. ೧೯೨೮ - ೧೯೯೭ ) - ಹುಟ್ಟೂರು ಗಡಿಯಂಚಿನಲ್ಲಿರುವ ಅಡ್ಯನಡ್ಕ. ೧೯೫೬ ರಿಂದ ೧೯೯೭ನೇ ಇಸವಿಯವರೆಗೆ ನಾಲ್ಕು ದಶಕಗಳಷ್ಟು ಧೀರ್ಘ ಕಾಲಾವಧಿಯಲ್ಲಿ ಹಲವು ಕನ್ನಡ ಪತ್ರಿಕೆಗಳ ಉಪಸಂಪಾದಕ, ವರದಿಗಾರರಾಗಿದ್ದ ಪ.ಗೋ.ರವರು ೧೯೬೩ರಿಂದ ಸುಮಾರು ಎರಡು ವರ್ಷಗಳ ಕಾಲ ಮಂಗಳೂರಿನಿಂದ ತಮ್ಮ ಸ್ವಂತ ಕನ್ನಡ ದಿನ ಪತ್ರಿಕೆ "ವಾರ್ತಾಲೋಕ"ದ ವರದಿಗಾರ, ಮುದ್ರಕ ಮತ್ತು ಪ್ರಕಾಶಕರಾಗಿ ನಡೆಸಿ ಪತ್ರಿಕೋದ್ಯಮದ ಎಲ್ಲಾ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದವರು. ಜೊತೆಗೆ ೧೩ ಪತ್ರಿಕೆಗಳಿಗೆ ಆಗಾಗ "ಕಾಲಂಕಾರ"ರಾಗಿ ಸುಮಾರು ನಾಲ್ಕು ಸಾವಿರ ಪುಟಗಳಿಗೂ ಮಿಕ್ಕಿದ ಕಾಲಂ ಸಾಹಿತ್ಯ ಪ್ರಸ್ತುತ ಪಡಿಸಿದ ಪ. ಗೋ. ಅವರಿಗೆ ಇದ್ದುದನ್ನು ಸರಳವಾಗಿ ಹೇಳುವ ರೂಢಿಯೇ ಇಲ್ಲ. ಅವರದೆಲ್ಲವೂ ವ್ಯಂಗ್ಯ ದಿಂದಲೇ ಪ್ರಾರಂಭ, ವ್ಯಂಗ್ಯದಿಂದಲೇ ಕೊನೆ! ಅವರು ಕೊಡುವ ಉದಾಹರಣೆಗಳು ಹಳೆಯ ನೀತಿ ಪದ್ಯಗಳನ್ನು ತಿರುಚಿಕೊಂಡು ಹುಟ್ಟಿಸುವ ವ್ಯಂಗ್ಯ ಮಾರ್ಮಿಕವಾದುದು.




ಪ. ಗೋಪಾಲಕೃಷ್ಣ ಸ್ಮಾರಕ ಸೇವಾ ಟ್ರಸ್ಟಿನ ವತಿಯಿಂದ ೨೦೦೨ನೆ ಇಸವಿಯಲ್ಲಿ ಮಂಗಳೂರಿನಿಂದ ಪ್ರಕಟಣೆಗೊಂಡ ಲೇಖನ ಮಾಲಿಕೆ "ನೋ ಚೇಂಜ್ ಕಥೆಗಳು". ಈ ೨೪ ಅಂಕಣಗಳ ಕಂಕಣವನ್ನು ಮರು ಪ್ರಕಟಿಸಲು ಅನುಮತಿಯನ್ನು ಇತ್ತ ಟ್ರಸ್ಟಿನ ಅಧ್ಯಕ್ಷರಾದ, ಪ.ಗೋ ರವರ ಸಹೋದ್ಯೋಗಿ, ಮಂಗಳೂರಿನ ಹಿರಿಯ ಪತ್ರಕರ್ತ ಶ್ರೀ. ಯು.ನರಸಿಂಹ ರಾವ್ ಮತ್ತು ಹುಟ್ಟೂರಿನ ಆಪ್ತ ಮಿತ್ರ, ಟ್ರಸ್ಟಿನ ಸ್ಥಾಪಕರಾದ ಬೆಂಗಳೂರಿನ ವೈದ್ಯ, ಲೇಖಕ ಡಾ. ಎಂ. ಬಿ. ಮರಕಿಣಿಯವರಿಗೆ ವಂದನೆಗಳು.
-----
ಶೀರ್ಷಿಕೆಯ ಛಾಯಚಿತ್ರ:




೧೯೭೦ರ ದಶಕದ ಮಂಗಳೂರಿನ ಕಾರ್ಯನಿರತ ಪತ್ರಕರ್ತರು: ನವಭಾರತ ಪತ್ರಿಕೆಯ ವರದಿಗಾರ ಶ್ರೀ. ಮಂಜುನಾಥ ಭಟ್ , ಪ್ರಜಾವಾಣಿ ಮಂಗಳೂರು ಪ್ರತಿನಿಧಿ ಶ್ರೀ.ಆರ್.ಪಿ.ಜಗದೀಶ್, ಪಿ. ಟಿ.ಐ ಮಂಗಳೂರು ಪ್ರತಿನಿಧಿ ಶ್ರೀ. ಟಿ.ಪಿ. ಶಂಕರ್, ಸಂಯುಕ್ತ ಕರ್ನಾಟಕ ಮಂಗಳೂರು ಪ್ರತಿನಿಧಿ ಶ್ರೀ. ಪ. ಗೋಪಾಲಕೃಷ್ಣ, "ದಿ.ಹಿಂದೂ" ಮಂಗಳೂರು ಪ್ರತಿನಿಧಿ ಶ್ರೀ.ಯು. ನರಸಿಂಹ ರಾವ್ ,ಉದಯವಾಣಿ ಮಂಗಳೂರು ವರದಿಗಾರ ಶ್ರೀ. ಎ.ವಿ.ಮಯ್ಯರು. ಚಿತ್ರದ ಬಲ ತುದಿಯಲ್ಲಿ ಹೊಸದಿಗಂತ ಪತ್ರಿಕೆಯ ಮಂಗಳೂರು ಪ್ರತಿನಿಧಿ ಶ್ರೀ. ಪಲಿಮಾರು ವಸಂತ ನಾಯಕ್.
----



ಕೃಪೆ: ಗಲ್ಫ್ ಕನ್ನಡಿಗ










No comments:

Visitors to this page