Thursday, June 11, 2009

’ನೋ ಚೇಂಜ್ ಕಥೆಗಳು’ -- ೨೧... ಹೊಟ್ಟೆ ಹುಣ್ಣಾಗಿಸುವುದು ಅಂದರೆ..


















ಹೊಸಸಂಜೆ ಪತ್ರಿಕೆಗಾಗಿ ಹೆಸರಾಂತ ಪತ್ರಕರ್ತ ಶ್ರೀ ಪದ್ಯಾಣ ಗೋಪಾಲಕೃಷ್ಣ (ಪ.ಗೋ.) ಅವರು ಬರೆದ ೨೪ ಅಂಕಣಗಳ ಕಂಕಣ" ನೋ ಚೇಂಜ್ ಕಥೆಗಳು". ಈ ಬರಹಗಳನ್ನು ಅವರ ಸ್ಮಾರಕಾರ್ಥವಾಗಿ ’ಗಲ್ಫ್ ಕನ್ನಡಿಗ’ ಪ್ರತಿ ಗುರುವಾರ ಪ್ರಕಟಿಸಲಾಗುತ್ತಿದ್ದು ಇದು ಇಪ್ಪತ್ತೊಂದನೆ ಅಂಕಣ.


ಹೊಟ್ಟೆ ಹುಣ್ಣಾಗಿಸುವುದು ಅಂದರೆ..

ಹೊಟ್ಟೆಯೊಳಗೆ ಹೇಗೆ ಹುಣ್ಣಾಗುತ್ತದೆ? ಹುಣ್ಣು “ಆಗಿಸುತ್ತಾರೆ” ಅಂತಾರಲ್ಲಾ ಅದಾದರೂ ಹೇಗೆ ಸಾಧ್ಯ? ನಮ್ಮ ಹೊಟ್ಟೆಯೊಳಗೆ ಬೇರೆಯವರು ಹುಣ್ಣು ಉಂಟು ಮಾಡುತ್ತಾರೆ ಎಂದಾದರೆ, ಆ ವಿಧಾನವಾದರೂ ಯಾವುದು?

ಏನಿದು? ಒಂದರ ಮೇಲೊಂದು ಪ್ರಶ್ನೆ, ಅಂತ ಗಾಬರಿಯಾಗಬೇಡಿ.

ನಗಿಸಿ ನಗಿಸಿ ಹೊಟ್ಟೆ ಹುಣ್ಣು ಮಾಡಿಸಿಬಿಡುತ್ತಾ ಇದ್ದರೂ ಅಂತ ಮೊನ್ನೆ ನಾನು ಒಬ್ಬರ ಸುದ್ದಿಯನ್ನು ಮನೆಗೆ ಬಂದ ಇಬ್ಬರ ಎದುರು ವರ್ಣಿಸುತ್ತಾ ಇದ್ದಾಗ -

ಆ ಇಬ್ಬರಲ್ಲಿ ಒಬ್ಬ (ಚಿದಾನಂದಾಂತ ಹೆಸರು ಬೇರೆ ಹೇಳಬೇಕೆ?) ಕೇಳಿಯೇ ಬಿಟ್ಟ - ಪ್ರಶ್ನೆಗಳು ಅವು. ನೀನು ಹೇಳಿದ್ದು ಸರಿಯಲ್ಲ, ಅಥವಾ ಸತ್ಯವೆಂದು ಕಾಣುವ ಹಾಗೆ ವರ್ಣಿಸಲು ನೀನು ತಿಳಿದಿಲ್ಲ ಎನ್ನುವ ಆಪಾದನೆಗಳೆಲ್ಲ ಅವನ ಪ್ರಶ್ನೆಗಳಲ್ಲಿ ಅಡಕವಾಗಿದ್ದವು.

ಕಳೆದ ವರ್ಷವಾಗಿದ್ದರೆ, ಅವನ ಪ್ರಶ್ನೆಗಳಿಗೆ ಒಂದೇ ಮಾತಿನ ಒರಟು ಉತ್ತರ ಕೊಡುತ್ತಿದ್ದೆ. ಮೊನ್ನೆ ಅಂಥ ಧೈರ್ಯ ಇರಲಿಲ್ಲ.

“ಅಣ್ಣಾ, ನಾನು ವರ್ಣಿಸುತ್ತಾ ಇದ್ದದ್ದು ತಮ್ಮ ಹಾಸ್ಯಪ್ರವೃತ್ತಿಯಿಂದ ಜನರನ್ನು ನಗಿಸುತ್ತಾ ಇದ್ದವರ ಥಾಕತ್ತನ್ನು. ವಿಚಾರವಾದದ ವೈಜ್ಞಾನಿಕ ಅಸತ್ಯವನ್ನಲ್ಲ” ಎಂದೆ.

ಇವನ್ಯಾಕೆ ಮೆತ್ತಗಾಗಿದ್ದಾನೆ, ದಬಾಯಿಸುವುದು ಸರಿಯಲ್ಲ (ಪಾಪ ಬದುಕಿಕೊಳ್ಳಲಿ) ಎನ್ನುವ ಭಾವನೆ ಚಿದ್ದನಲ್ಲಿ ಮೂಡಿರಬೇಕು. “ಓಹೋ ಹಾಗೋ ! ಸಾವಿರ ಜನರ ಸಭೆಯಲ್ಲೂ ಹಾಸ್ಯದ ಮನೋರಂಜನೆ ಒದಗಿಸಿ, ಸೇರಿದ್ದವರೆಲ್ಲರನ್ನೂ ‘ಹೊಟ್ಟೆ ಹುಣ್ಣಾಗುವಷ್ಟು’ ನಗಿಸುವ ಸಮರ್ಥರ ಸುದ್ದಿಯೋ ನೀವು ಹೇಳುವುದು ?” ಎಂದ ಚಿದ್ದ ‘ದಾರಿಗೆ ಬಂದ’

ಸಾವಿರ -ಗೀವಿರ ಜನರ ಸಭೆಯ ವಿಷಯ ಗೊತ್ತಿಲ್ಲ. ಆದರೆ ಕೆಲವು ನೂರು ಜನರ ಸಭೆಯ ‘ಸ್ಟೇಜ್’ನ ಮೇಲೆ ಇದ್ದಷ್ಟೂ ಹೊತ್ತು ನಗಿಸುತ್ತಾ ಇದ್ದವರ ಸುದ್ದಿಯಪ್ಪ ನಾನು ಹೇಳುವುದು, ಎಂದೆ.

ಚಿದಾನಂದನಲ್ಲಿ ಮೂಡಿದ್ದ ಕರುಣೆ ಒಂದು ಕ್ಷಣ ಮಾಯವಾಯಿತೆ? “ಅದೇನು ಮಹಾ ! ಹತ್ತು ಸಾವಿರ ಪ್ರೇಕ್ಷಕರಿದ್ದರೂ ಅವರೆಲ್ಲರನ್ನೂ ಏಕಕಾಲಕ್ಕೆ ನಗಿಸುವ ಪ್ರಸಿದ್ಧ ಯಕ್ಷಗಾನ ಹಾಸ್ಯಪಟುಗಳು ಈಗಲೂ ಇದ್ದಾರಲ್ಲ” ಎಂದಾಗ ‘ನೀಡಿದ್ದ ಬೆಂಬಲವನ್ನು ಹಿಂತೆಗೆದುಕೊಳ್ಳುವ’ ರಾಜಕಾರಣಿಯನ್ನು ಅವನಲ್ಲಿ ನಾನು ಕಂಡೆ.

ಆದರೂ, “ಆ ಮಾತು ಬೇರೆ ಚಿದಣ್ಣ, ಅಲ್ಲಾದರೆ, ಮನರಂಜನೆಯ ವಾತಾವರಣ ಮೊದಲೇ ನಿರ್ಮಿತವಾಗಿದೆ. ಅಗತ್ಯವಿರುವಷ್ಟು ವೇಷಭೂಷಣ-ಮೇಕಪ್ ಎಲ್ಲಾ ಮಾಡಿಕೊಂಡಿರುವ ಹಾಸ್ಯಕಲಾವಿದರೇ ಇರುತ್ತಾರೆ. ನಾನು ಈಗ ವಿವರಿಸಿ ಹೇಳಲು ಪ್ರಯತ್ನಪಡುವ -ವಿಚಾರ ಅಂಥವರದಲ್ಲ...”

...ಅಣಕು, ವ್ಯಂಗ್ಯ ಇತ್ಯಾದಿಗಳನ್ನೆಲ್ಲಾ ಹದವರಿತು ಮಿಶ್ರ ಮಾಡಿ, ಯಾವುದೇ ರೀತಿಯ ‘ಮೇಕಪ್’ ಇಲ್ದೆ, ಸೇರಿದ ಜನರನ್ನು ತಮ್ಮ ಮಾತಿನ ಮೋಡಿಯಿಂದಲೇ ರಂಜಿಸುವ ಸಾಮರ್ಥ್ಯ ಇರುವವರದು.

“ಅಂದರೆ, ಈ ಮಿಮಿಕ್ರಿ ಅಂತಾ ಎಲ್ಲಾ ಮಾಡ್ತಾರಲ್ಲಾ. ಅಂಥವರಾ?” ಅವನ ಜೊತೆಗೆ ಬಂದವರು “ಚಿದಾ, ಅವರು ಹೇಳುವುದನ್ನು ಹೇಳಲಿಯಪ್ಪಾ!” ಎಂದು ಸೌಮ್ಯವಾಗಿ ಎಚ್ಚರಿಸಿದ ಕಾರಣ, ಚಿದಾ ಒಮ್ಮೆಗೆ ‘ಚಪ್ಪೆ’ಯಾದ. ಅವರ ಮುಖವನ್ನೇ ನೋಡುತ್ತಾ, ನನ್ನ ಕಡೆಗೂ ತಿರುಗದೆ ‘ಹೂಂ ಹೇಳಿ!’ ಎಂಬ ಅಪ್ಪಣೆ ದಯಪಾಲಿಸಿದ.

ಇಕೋ, ಒಬ್ಬಿಬ್ಬರ ಸುದ್ದಿ ಮಾತ್ರ ಹೇಳ್ತೇನೆ. ಎಸ್.ಆರ್. ಬಾಲಗೋಪಾಲ್ ಅಂತ ಒಂದು ಹೆಸರು ಕೇಳಿದ್ದಿಯಾ ?

ಅವರ ‘ಜಲ್ಸಿ’ನ ಕಾಲ ಒಂದಿತ್ತು. ೬೦ರ ದಶಕದಲ್ಲಿ, ತಮ್ಮ ಕಾರ್ಯಕ್ರಮಗಳಿಗೆ ಅವರನ್ನು ಕರೆಸಲೇ ಬೇಕು ಎಂದು ಹಟ ಹಿಡಿಯುವ ಜನರೂ ಮಂಗಳೂರಿನಲ್ಲಿ ಇದ್ದರು. ಸ್ಟೇಜಿನಲ್ಲಿ ಬಂದು ನಿಂತ ಮೇಲೆ ಅವರು ಯಾವ ಸುದ್ದಿ ತೆಗೆದರೂ, ಯಾವ ವಿಷಯ ಎತ್ತಿಕೊಂಡರೂ, ಹಾಸ್ಯದ ಲಾಸ್ಯ ಅವುಗಳಲ್ಲಿರುತ್ತಿತ್ತು. ಅವರ ನಟನೆಯೂ ಅಷ್ಟೇ ‘ಸ್ವಾಭಾವಿಕ’, ಭಾಷೆ ಗೊತ್ತಿಲ್ಲದವರಿಗೂ ಅರ್ಥವಾಗುವಂಥಾದ್ದು.

ಒಮ್ಮೆ ನೆಹರೂ ಮೈದಾನಿನ ಒಂದು ಕಾರ್ಯಕ್ರಮಕ್ಕೆ ಬಂದಿದ್ದ ಇಗೊರ್ ಬೋನಿ ಎಂಬ ರಶ್ಯನ್ ರಾಜತಾಂತ್ರಿಕ, ಬಾಲಗೋಪಾಲರು ಕೆಲವರ ಬಾಯಿಯಿಂದ ಹೊರಬೀಳುವ ಕಫದ ಮಾಲೆಯನ್ನು ‘ಚಿತ್ರಿಸಿ’ ತೋರಿಸುತ್ತಿದ್ದಾಗ, ನಕ್ಕು ನಕ್ಕು ತನ್ನ ಹೊಟ್ಟೆ ಹಿಡಿದುಕೊಂಡ ಚಿತ್ರ ಈಗಲೂ ನೆನಪಾಗುತ್ತದೆ.(ಅಂಥಾದ್ದೇ ಬೇರೆ ಕೆಲವು ಸನ್ನಿವೇಶಗಳೂ ನೆನಪಿದೆ.)

ಅವರಂತೆ ಇನ್ನೊಬ್ಬರು ರಾಮಣ್ಣ ರೈಗಳು. ರೈಗಳದು ಹೆಚ್ಚು ಮಾತಿನ ಮೋಡಿ. ನ್ಯಾಯಮೂರ್ತಿ ಕೌಡೂರು ಸದಾನಂದ ಹೆಗ್ಡೆಯವರು ನ್ಯಾಯವಾದಿಗಳಾಗಿದ್ದಾಗ ಕೋರ್ಟಿನಲ್ಲಿ ವಾದ ಮಂಡಿಸುತ್ತಿದ್ದ ರೀತಿಯ ‘ಪ್ರತಿ ಮಾಡಿ’ರೈಗಳು ತೋರಿಸುತ್ತಿದ್ದುದನ್ನು ನೋಡಿ ಆನಂದಿಸಿದ ಪ್ರಸಿದ್ಧರು ಈಗಲೂ ಇದ್ದಾರೆ.

ಅವರಿಬ್ಬರಿಂದಲೂ ಸ್ಫೂರ್ತಿ ಪಡೆದು ಅವರನ್ನು ಅನುಕರಿಸಿದವರು ಸಾಧ್ಯವಿರುವಾಗಲೆಲ್ಲ ‘ತಮ್ಮತನ’ ತೋರಿಸಿ ವೈಶಿಷ್ಟ್ಯ ಸಾಧಿಸಿದವರು ಅನಂತರದ ದಶಕಗಳಲ್ಲಿ ಎಷ್ಟೋ ಮಂದಿ ಇದ್ದಾರೆ. ಅವಕಾಶ ಸಿಕ್ಕಿದರೆ,ಫಿಲ್ಮ್ ಟೀವಿಗಳಲ್ಲಿ ಕೂಡಾ ಮೆರೆಯುವಂಥ ಸಾಮರ್ಥ್ಯವೂ ಅವರಲ್ಲಿದೆ. (ಎಲ್ಲರ ಹೆಸರುಗಳನ್ನೂ ಹೇಳುವ ಅಗತ್ಯವಿಲ್ಲವಲ್ಲ ?)

ಮನುಷ್ಯನಲ್ಲಿರುವ ಹಾಸ್ಯ ಪ್ರವೃತ್ತಿಯನ್ನು ನೋವಾಗದಂತೆ ಕೆಣಕುವ ಅಭ್ಯಾಸ ಪುರಾಣಕಾಲದಿಂದಲೂ ಇದೆ. ಮುಂದೆಯೂ ಇರುತ್ತದೆ. ಅದು ಬದಲಾಗುವುದಿಲ್ಲ!

“ಹಾಗಾದರೆ,‘ಹೊಟ್ಟೆ ಹುಣ್ಣಾಗುವುದು’ ವ್ಯಂಗ್ಯಮಿಶ್ರಿತ ಉತ್ಪ್ರೇಕ್ಷೆಯ ನುಡಿ ಎನ್ನಿ”

“ಹೌದು. ಆ ಹೊಟ್ಟೆ ಹುಣ್ಣು ಅಲ್ಸರ್’ ಅಂತೂ ಅಲ್ಲ. ತಿಳಿಯಿತೇನಣ್ಣ...” ಎಂದು ರಾಗವೆಳೆದಾಗ, ನನ್ನಿಂದ ಎಷ್ಟೋ ವರ್ಷಗಳಿಗೆ ಕಿರಿಯವಾದ ಚಿದಾನಂದನಿಗೂ ‘ಅಣ್ಣಾ’ ಮಾತಿನ ಅರ್ಥವಾಗಿತ್ತು.

(ಅಂದ ಹಾಗೆ, ಅವನಿಗೆ ಸೌಮ್ಯಸೂಚನೆ ಇತ್ತು. ಅವನ ಪ್ರಶ್ನೆ ನಿಲ್ಲಿಸಿದವರು -ಅವನ ಭಾವೀ ಮಾವ, ಶ್ರೀಮಂತರೂ..............ಅಂತೆ.)


-----






ಶ್ರೀ ಪದ್ಯಾಣ ಗೋಪಾಲಕೃಷ್ಣ ( ಪ.ಗೋ. ೧೯೨೮ - ೧೯೯೭ ) - ಹುಟ್ಟೂರು ಗಡಿಯಂಚಿನಲ್ಲಿರುವ ಅಡ್ಯನಡ್ಕ. ೧೯೫೬ ರಿಂದ ೧೯೯೭ನೇ ಇಸವಿಯವರೆಗೆ ನಾಲ್ಕು ದಶಕಗಳಷ್ಟು ಧೀರ್ಘ ಕಾಲಾವಧಿಯಲ್ಲಿ ಹಲವು ಕನ್ನಡ ಪತ್ರಿಕೆಗಳ ಉಪಸಂಪಾದಕ, ವರದಿಗಾರರಾಗಿದ್ದ ಪ.ಗೋ.ರವರು ೧೯೬೩ರಿಂದ ಸುಮಾರು ಎರಡು ವರ್ಷಗಳ ಕಾಲ ಮಂಗಳೂರಿನಿಂದ ತಮ್ಮ ಸ್ವಂತ ಕನ್ನಡ ದಿನ ಪತ್ರಿಕೆ "ವಾರ್ತಾಲೋಕ"ದ ವರದಿಗಾರ, ಮುದ್ರಕ ಮತ್ತು ಪ್ರಕಾಶಕರಾಗಿ ನಡೆಸಿ ಪತ್ರಿಕೋದ್ಯಮದ ಎಲ್ಲಾ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದವರು. ಜೊತೆಗೆ ೧೩ ಪತ್ರಿಕೆಗಳಿಗೆ ಆಗಾಗ "ಕಾಲಂಕಾರ"ರಾಗಿ ಸುಮಾರು ನಾಲ್ಕು ಸಾವಿರ ಪುಟಗಳಿಗೂ ಮಿಕ್ಕಿದ ಕಾಲಂ ಸಾಹಿತ್ಯ ಪ್ರಸ್ತುತ ಪಡಿಸಿದ ಪ. ಗೋ. ಅವರಿಗೆ ಇದ್ದುದನ್ನು ಸರಳವಾಗಿ ಹೇಳುವ ರೂಢಿಯೇ ಇಲ್ಲ. ಅವರದೆಲ್ಲವೂ ವ್ಯಂಗ್ಯ ದಿಂದಲೇ ಪ್ರಾರಂಭ, ವ್ಯಂಗ್ಯದಿಂದಲೇ ಕೊನೆ! ಅವರು ಕೊಡುವ ಉದಾಹರಣೆಗಳು ಹಳೆಯ ನೀತಿ ಪದ್ಯಗಳನ್ನು ತಿರುಚಿಕೊಂಡು ಹುಟ್ಟಿಸುವ ವ್ಯಂಗ್ಯ ಮಾರ್ಮಿಕವಾದುದು.

ಪ. ಗೋಪಾಲಕೃಷ್ಣ ಸ್ಮಾರಕ ಸೇವಾ ಟ್ರಸ್ಟಿನ ವತಿಯಿಂದ ೨೦೦೨ನೆ ಇಸವಿಯಲ್ಲಿ ಮಂಗಳೂರಿನಿಂದ ಪ್ರಕಟಣೆಗೊಂಡ ಲೇಖನ ಮಾಲಿಕೆ "ನೋ ಚೇಂಜ್ ಕಥೆಗಳು". ಈ ೨೪ ಅಂಕಣಗಳ ಕಂಕಣವನ್ನು ಮರು ಪ್ರಕಟಿಸಲು ಅನುಮತಿಯನ್ನು ಇತ್ತ ಟ್ರಸ್ಟಿನ ಅಧ್ಯಕ್ಷರಾದ, ಪ.ಗೋ ರವರ ಸಹೋದ್ಯೋಗಿ, ಮಂಗಳೂರಿನ ಹಿರಿಯ ಪತ್ರಕರ್ತ ಶ್ರೀ. ಯು.ನರಸಿಂಹ ರಾವ್ ಮತ್ತು ಹುಟ್ಟೂರಿನ ಆಪ್ತ ಮಿತ್ರ, ಟ್ರಸ್ಟಿನ ಸ್ಥಾಪಕರಾದ ಬೆಂಗಳೂರಿನ ವೈದ್ಯ, ಲೇಖಕ ಡಾ. ಎಂ. ಬಿ. ಮರಕಿಣಿಯವರಿಗೆ ವಂದನೆಗಳು.
-----
ಶೀರ್ಷಿಕೆಯ ೧೯೮೦ರ ದಶಕದ ಛಾಯಚಿತ್ರ:

ಸಾಹಿತಿ,ರಾಜಕಾರಿಣಿ,ಕರ್ನಾಟಕ ವಿಧಾನ ಸಭೆಯ ವಿರೋಧ ಪಕ್ಷದ ನಾಯಕ ಶ್ರೀ. ಎಂ.ವೀರಪ್ಪ ಮೊಯ್ಲಿಯವರ ಜೊತೆ ಸಂವಾದದಲ್ಲಿ ಉದಯವಾಣಿ ವರದಿಗಾರರಾದ ಶ್ರೀ. ಎ. ವಿ. ಮಯ್ಯ, ಸಂಯುಕ್ತ ಕರ್ನಾಟಕ ಮಂಗಳೂರು ಪ್ರತಿನಿಧಿ ಶ್ರೀ. ಪ.ಗೋಪಾಲಕೃಷ್ಣ, ಹೊಸದಿಗಂತ ಪತ್ರಿಕೆಯ ಶ್ರೀ. ಪಲಿಮಾರು ವಸಂತ ನಾಯಕ್ ಮತ್ತು ನವಭಾರತ ಪತ್ರಿಕೆಯ ಶ್ರೀ. ಮಂಜುನಾಥ ಭಟ್.
-----
ಕೃಪೆ: ಗಲ್ಫ್ ಕನ್ನಡಿಗ

No comments:

Visitors to this page