Wednesday, July 21, 2010

ನೆನಪಿನಂಗಳದ ಉತ್ಖನನ

ನೆನಪಿನಂಗಳದ ಉತ್ಖನನ

ಮದುವೆಯ ಆಮಂತ್ರಣ ಪತ್ರಿಕೆ ತಲುಪಿದ ಕೂಡಲೇ ಮದುವೆಯ ಮುಹೂರ್ತದ ಸಮಯ ಮತ್ತು ಕಲ್ಯಾಣ ಮಂಟಪದ ವಿವರಗಳನ್ನು ತಮ್ಮ ಕ್ಯಾಲೆಂಡರ್ ನಲ್ಲಿ ದಾಖಲಿಸಿ ಆಮಂತ್ರಣ ಪತ್ರಿಕೆಯನ್ನು ಕ.ಬು.ಗೆ ತಳ್ಳಿ ಮದುವೆ ಕಾರ್ಯಕ್ರಮಕ್ಕೆ ಹೋಗುವವರು ಕೆಲವರು. ಮದುವೆಯ ಸಮಾರಂಭ ಮುಗಿಯುವವರೆಗೆ ಮದುವೆಯ ಆಮಂತ್ರಣ ಪತ್ರಿಕೆಯನ್ನು ಜೋಪಾನವಾಗಿ ಇಟ್ಟುಕೊಂಡು ಮದುವೆಯ ಸಮಾರಂಭ ಮುಗಿದ ಕೂಡಲೇ ಆಮಂತ್ರಣ ಪತ್ರಿಕೆಯನ್ನು ಕ.ಬು.ಗೆ ಕಳುಹಿಸಿಕೊಡುವವರು ಹಲವರು.

ಐವತ್ತೆರಡು ವರ್ಷಗಳ ಹಿಂದೆ ( 1958 ರಲ್ಲಿ), ಬೆಂಗಳೂರಿನಲ್ಲಿ ತಾಯಿನಾಡು ಪತ್ರಿಕೆಯಲ್ಲಿ ಮೊದಲು ತಮ್ಮ ಸಹೋದ್ಯೋಗಿಯಾಗಿದ್ದ ಹಾಗೂ ಮಡಿಕೇರಿಯಿಂದ ಪ್ರಕಟವಾಗುತ್ತಿದ್ದ "ಶಕ್ತಿ " ಪತ್ರಿಕೆಯ ಬೆಂಗಳೂರಿನ ವರದಿಗಾರ ಮಿತ್ರರ ವಿವಾಹದ ಆಮಂತ್ರಣ ಪತ್ರಿಕೆ ಹೆಚ್.ಆರ್.ನಾಗೇಶರಾವ್ ಅವರಿಗೆ ತಲುಪಿತು.

ಅಂದು ಬುಧವಾರ , ದಿನಾಂಕ 11 ಜೂನ್ 1958. ಕಾರಣಾಂತರದಿಂದ ನಾಗೇಶರಾಯರಿಗೆ ಬೆಂಗಳೂರು ನಗರದ ಮಾವಳ್ಳಿ ಸರ್ಕಲ್ ಬಳಿ ಇದ್ದ ಶ್ರೀ. ಭೋಗನಂಜುಡೇಶ್ವರ ದೇವಾಲಯದ ಕಲ್ಯಾಣ ಮಂಟಪದಲ್ಲಿ ನಡೆದ ತಮ್ಮ ಮಿತ್ರನ ವಿವಾಹ ಸಮಾರಂಭಕ್ಕೆ ಬರಲಾಗಲಿಲ್ಲ , ಅದರೂ ಮದುವೆ ಮುಗಿದ ಕೂಡಲೇ ತಮ್ಮ ಮಿತ್ರನ ಮದುವೆಯ ಆಮಂತ್ರಣ ಪತ್ರಿಕೆ ನಾಗೇಶರಾಯರ ಅಮೂಲ್ಯ ಸಂಗ್ರಹಕ್ಕೆ ಸೇರಿತು.

ನಾಡಿನ ಹಿರಿಯ ಪತ್ರಕರ್ತ ಸುದ್ದಿಜೀವಿ ಹೆಚ್.ಆರ್.ನಾಗೇಶರಾವ್ ಅವರ ಪುತ್ರ ಹಾಲ್ದೊಡ್ಡೇರಿ ಸುಧೀಂದ್ರ ತಮ್ಮ ತಂದೆಯವರ ಸಂಗ್ರಹಗಳ ಬಗ್ಗೆ ವ್ಯಕ್ತಪಡಿಸಿದ್ದು ಈ ರೀತಿಯಲ್ಲಿ-

ನಲವತ್ತು ವರ್ಷಗಳ ಪತ್ರಿಕಾ ಜೀವನದಲ್ಲಿ ನನ್ನಪ್ಪ ( ಸಂಯುಕ್ತ ಕರ್ನಾಟಕದ ನಿವೃತ್ತ ಸ್ಥಾನಿಕ ಸಂಪಾದಕ ಹೆಚ್.ಆರ್.ನಾಗೇಶರಾವ್) ಸಂಗ್ರಹಿಸಿದ ಪತ್ರಗಳು-ದಾಖಲೆಗಳು ಮಿಲಿಯಾಂತರ. ತಿಂಗಳಿಗೆ 10 ರುಪಾಯಿ ಬಾಡಿಗೆಯ ಶ್ರೀರಾಮಪುರದ ಬಾಡಿಗೆ ಮನೆಯಿಂದ ಇಂದು ನಾವಿರುವ ಮನೆಯ ತನಕ ಆ ಎಲ್ಲ ದಾಖಲೆಗಳೂ ಪರಿಸರದ ಹೊಡೆತಗಳನ್ನು ತಾಳಿಕೊಂಡು ಬಾಳಿವೆ.

ತಮಗೆ ಆತ್ಮೀಯರೆನಿಸಿದ್ದ ಪತ್ರಕರ್ತರೆಲ್ಲರ ವಿವಾಹ ಪತ್ರಿಕೆಗೆಳನ್ನು ಅಪ್ಪ ಸಂಗ್ರಹಿಸಿಟ್ಟಿದ್ದಾರೆ.


ಅರವತ್ತು ವರ್ಷಕ್ಕೂ ಹಳೆಯದಾದ ಅನೇಕ ದಾಖಲೆ-ಪತ್ರಗಳನ್ನು ಎಸೆಯಲು ನನಗೂ ಮನಸ್ಸು ಬರುತ್ತಿಲ್ಲ. ಒಂದೊಂದು ಕಾಗದದ ಹಿಂದೆಯೂ ಒಂದೊಂದು ವಿಶಿಷ್ಟ ಘಟನೆಗಳಿರಬೇಕು. ಕೊಂಚವಾದರೂ ಬಿಡುವು ಸಿಕ್ಕೀತೆ ?, ಎಂದು ಹಪಹಪಿಸುವ ಕೆಲಸ ಹಚ್ಚಿಕೊಂಡು ಈ ದಾಖಲೆಗಳ ಸಾಗರದಲ್ಲಿ ಕಳೆದು ಹೋಗುತ್ತಿದ್ದೇನೆ. ಇದು ಉತ್ಪ್ರೇಕ್ಷೆಯ ಮಾತಲ್ಲ.

ನನ್ನಪ್ಪ ನನಗೆ ಆಲದ ಮರದ ಬದಲು ಖನಿಜಭರಿತ ಗಣಿಯೊಂದನ್ನು ಬಿಟ್ಟು ಹೋಗಿದ್ದಾರೆ. ಅಕ್ರಮವೊ, ಸಕ್ರಮವೊ ಗೊತ್ತಿಲ್ಲ, ಉತ್ಖನನ ಮಾಡುತ್ತಿದ್ದೇನೆ. ಸಿಕ್ಕ ದಾಖಲೆಗಳನ್ನು ಯಾವುದೋ ಸಂದರ್ಭದಲ್ಲಿ ಅವರೊಂದಿಗೆ ನಡೆಸಿದ ಮಾತುಕತೆಯನ್ನು ನನ್ನ ನೆನಪಿನ ಗಣಿಯಿಂದ ಹೆಕ್ಕಿ ತೆಗೆದು ಜೋಡಣೆ ಮಾಡ ಹೊರಟಿದ್ದೇನೆ.

ನಾಗೇಶರಾಯರ ಖನಿಜಭರಿತ ಗಣಿಯ 2009ನೇ ಇಸವಿಯ ಪರಿಶೋಧನೆಯ ಅಂಗವಾಗಿ ಹಾಲ್ದೊಡ್ಡೇರಿ ಸುಧೀಂದ್ರ ಒಂದು ರಟ್ಟಿನ ಡಬ್ಬ ಬುಡಮೇಲು ಮಾಡಿದಾಗ ದೊರಕಿದ್ದು - ಒಂದು ಕವರಿನ ಮೇಲ್ಗಡೆ P.Gopalakrishna ಎಂಬ ಉಲ್ಲೇಖ. ಪರಿಶೋಧನೆಯನ್ನು ಮುಂದುವರಿಸಿ ಖನಿಜಕ್ಕಾಗಿ ಅವರು 2010 ನೇ ಇಸವಿಯಲ್ಲಿ ಉತ್ಖನನ ನಡೆಸಿದಾಗ ಲಭ್ಯವಾದದ್ದು ಬೆಂಗಳೂರು ನಗರದ ಮಾವಳ್ಳಿ ಸರ್ಕಲ್ ಬಳಿ ಶ್ರೀ. ಭೋಗನಂಜುಡೇಶ್ವರ ದೇವಾಲಯದ ಕಲ್ಯಾಣ ಮಂಟಪದಲ್ಲಿ ದಿನಾಂಕ 11 ಜೂನ್ 1958 ರಂದು ನಡೆದ ಕರಾವಳಿ ಕರ್ನಾಟಕದ ಹಿರಿಯ ಪತ್ರಕರ್ತ ಪದ್ಯಾಣ ಗೋಪಾಲಕೃಷ್ಣ ( ಪ. ಗೋ.) ಅವರ ವಿವಾಹದ ಆಮಂತ್ರಣ.


ತಮ್ಮ ತಂದೆಯ ಸಂಗ್ರಹದಲ್ಲಿದ್ದ ಐದು ದಶಕಗಳ ಹಿಂದಿನ ಕಾಲಗರ್ಭದಲ್ಲಿ ಹುದುಗಿದ್ದ ಪ.ಗೋ. ಅವರ ವಿವಾಹದ ಆಮಂತ್ರಣ ಪತ್ರಿಕೆಯನ್ನು ಹುಡುಕಿ ತೆಗೆದು ಪದ್ಯಾಣ ಗೋಪಾಲಕೃಷ್ಣರ ಮೊಮ್ಮಕ್ಕಳಿಗೆ ತೋರಿಸಲು ಅನುವು ಮಾಡಿಕೊಟ್ಟ ಹಾಲ್ದೊಡ್ಡೇರಿ ಸುಧೀಂದ್ರ ಅವರಿಗೆ ವಂದನೆಗಳು.

ಚದರ ಅಂಗುಲ ಮಾಪನದಲ್ಲಿ ಮನೆಯ ವಿಸ್ತೀರ್ಣ ಅಳೆಯುವ ಕರ್ನಾಟಕದ ರಾಜಧಾನಿ ಬೆಂಗಳೂರು ನಗರದಲ್ಲಿ ನಾಗೇಶರಾವ್ ಅವರು ಸಂಗ್ರಹಿಸಿದ್ದ ಮಿಲಿಯಾಂತರ ಪತ್ರ -ದಾಖಲೆಗಳನ್ನು ಅಂದಿನಿಂದ ನಗ ನಾಣ್ಯಗಳಂತೆ ಕಾಪಾಡಿಕೊಂಡು ಪರಿಸರದ ಹೊಡೆತದಿಂದ ಇಂದಿನವರೆಗೆ ರಕ್ಷಿಸಲು ಮನಪೂರ್ವಕವಾಗಿ ಸಹಕರಿಸಿದ ನಾಗೇಶರಾಯರ ಪತ್ನಿ ಹಾಗೂ ಹಾಲ್ದೊಡ್ಡೇರಿ ಸುಧೀಂದ್ರ ಅವರ ತಾಯಿ ಶ್ರೀಮತಿ ಪ್ರೇಮಾ ನಾಗೇಶರಾವ್ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು.

-ಪ.ರಾಮಚಂದ್ರ, ಕತಾರ್

Visitors to this page