Monday, April 11, 2011

ಅಂದು 1963 ನೇ ಇಸವಿಯಲ್ಲಿ ಕರಾವಳಿ ಕರ್ನಾಟಕದ "ನಮ್ಮ ಮಂಗಳೂರು" ಹೀಗಿತ್ತು.


ಬೆಂಗಳೂರಿನಲ್ಲಿದ್ದ ನಾಡಿನ ಹಿರಿಯ ಪತ್ರಕರ್ತ, ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ನಿವೃತ್ತ ಸ್ಥಾನಿಕ ಸಂಪಾದಕ ಶ್ರೀ. ಹೆಚ್.ಆರ್.ನಾಗೇಶರಾವ್ ಸಂಗ್ರಹದಲ್ಲಿ ಲಭ್ಯವಾದ ಶ್ರೀ. ಪದ್ಯಾಣ ಗೋಪಾಲಕೃಷ್ಣ ( ಪ.ಗೋ.) ಅವರ ಸಂಪಾದಕತ್ವದಲ್ಲಿ ಪ್ರಕಟವಾಗುತಿದ್ದ ಮಂಗಳೂರಿನ ಅಂದಿನ ಕನ್ನಡ ಸಂಜೆ ದಿನಪತ್ರಿಕೆ "ವಾರ್ತಾಲೋಕ" ದಿನಾಂಕ 14 ಡಿಸೆಂಬರ್ 1963 ರ ಆವೃತ್ತಿಯಿಂದ ತಿಳಿದುಬಂದ ಮಾಹಿತಿ.

1 .ಬ್ಯಾಂಕ್ ನ ಗ್ರಾಹಕರ ಜೊತೆಗೆ ಗ್ರಾಹಕರಲ್ಲದ ಬ್ಯಾಂಕ್ ನ ಬಳಿ ಬಂದ 'ದನ'ದ ಸೇವೆ ಮಾಡುವ ಅಂದಿನ ಬ್ಯಾಂಕ್ ಸಿಬ್ಬಂದಿಗಳು.

2 . ಊರಿನ ಕ್ರಿಕೆಟ್ ತಂಡಕ್ಕೆ ಕರಾವಳಿಯ ಗಂಡುಗಲೆ ಯಕ್ಷಗಾನದ ಸಹಾಯ.


ಚಿತ್ರ ಕೃಪೆ : ಶ್ರೀ. ಹಾಲ್ದೊಡ್ಡೇರಿ ಸುಧೀಂದ್ರ , ಬೆಂಗಳೂರು

Tuesday, March 22, 2011

ಪತ್ರಕರ್ತರಲ್ಲಿ ಸಕಾರಾತ್ಮಕ ಧೋರಣೆಯ ಅಗತ್ಯವಿದೆ- ಲಕ್ಷ್ಮೀ ಮಚ್ಚಿನ ಅವರಿಗೆ ಪ.ಗೋ.ಪ್ತಶಸ್ತಿ ಪ್ರದಾನಿಸಿ ಸಚಿವ ಆಚಾರ್ಯ

ಮಂಗಳೂರು: ಪತ್ರಕರ್ತರು ಸರಕಾರದ ಯಾವುದೇ ಯೋಜನೆಗಳ ಬಗ್ಗೆ ಸಾರ್ವಜನಿಕ ಅಭಿಪ್ರಾಯ ಮೂಡಿಸುವ ಮೊದಲು ವ್ಯಾಪಕ ಅಧ್ಯಯನ ನಡೆಸಬೇಕು ಎಂದು ರಾಜ್ಯ ಉನ್ನತ ಶಿಕ್ಷಣ ಹಾಗೂ ಮುಜರಾಯಿ ಸಚಿವ ವಿ.ಎಸ್.ಆಚಾರ್ಯ ಅವರು ಹೇಳಿದ್ದಾರೆ.

ಅವರು ಮಾ.೨೦ ರಂದು ಅಪರಾಹ್ಣ ಮಂಗಳೂರಿನ ಪತ್ರಿಕಾಭವನದಲ್ಲಿ ಉದಯವಾಣಿ ಪತ್ರಿಕೆಯ ಬೆಳ್ತಂಗಡಿ ತಾಲೂಕು ವರದಿಗಾರ,ಬೆಳ್ತಂಗಡಿ ತಾಲೂಕು ಪತ್ರಕರ್ತ ಸಂಘದ ಸದಸ್ಯ ಲಕ್ಷ್ಮೀ ಮಚ್ಚಿನ ಅವರಿಗೆ ಗ್ರಾಮೀಣ ವರದಿಗಾರಿಕೆಗೆ ಕೊಡಮಾಡುವ ಪ.ಗೋ.ಪ್ರಶಸ್ತಿಯನ್ನು ಪ್ರದಾನಿಸಿ ಮಾತನಾಡುತ್ತಿದ್ದರು.

ಸರಕಾರ ಎಷ್ಟೇ ಅಭಿವೃದ್ದಿ ಕಾರ್ಯಗಳನ್ನು ಕೈಗೆತ್ತಿಕೊಂಡರೂ ಅದರಲ್ಲಿ ಕಳಚುತ್ತಿರುವ ಕೊಂಡಿಗಳು ಇವೆ ಎಂಬುದನ್ನು ಮನವರಿಕೆ ಮಾಡಿಕೊಟ್ಟವರು ಪತ್ರಕರ್ತರು.ನನಗೆ ಪತ್ರಿಕಾರಂಗದ ಬಗ್ಗೆ ಅಪಾರ ಗೌರವವಿದೆ. ಆದರೆ ಇಂದಿನ ಫ್ರೀ ಪ್ರೆಸ್ ವರದಿಗಾರಿಕೆಯ ಸ್ವಾತಂತ್ರ್ಯ ಎಷ್ಟರ ಮಟ್ಟಿಗೆ ಎಲ್ಲಿಯವರೆಗೆ ಮುಟ್ಟಿದೆ ಎಂಬುದರ ಬಗ್ಗೆ ಚಿಂತೆಯಾಗುತ್ತದೆ. ಇಂದು ನಾವೊಂದು ವಿಕ್ಷಿಪ್ತ ವಾತಾವರಣದಲ್ಲಿದ್ದೇವೆ. ಸರಕಾರಗಳು ಇನ್ನೂ ಮೂಲಭೂತ ಸೌಕರ್ಯವನ್ನು ಅಭಿವೃದ್ದಿ ಪಡಿಸುವಲ್ಲಿ ಇನ್ನೂ ಹಿಂದೆ ಬಿದ್ದಿದೆ ಎಂದು ಆಚಾರ್ಯ ಹೇಳಿದರು.

ಪತ್ರಕರ್ತರು ಅಭಿವೃದ್ಧಿಯ ಬಗೆಗಿನ ಕಲ್ಪನೆಗಳನ್ನು ವಸ್ತುಸ್ಥಿತಿಗೆ ತಕ್ಕಂತೆ ಬಿಂಬಿಸಬೇಕು. ಸಕಾರಾತ್ಮಕ ಧೋರಣೆಯ ಅಗತ್ಯವಿದೆ. ಒಂದು ಸುದ್ದಿಗೆ ಅನೇಕ ಮಗ್ಗಲುಗಳು ಇರುತ್ತವೆ ಎಂಬುದನ್ನು ಗಮನಿಸಬೇಕು. ಸರಕಾರಕ್ಕೆ ಅಭಿವೃದ್ಧಿಗೆ ಅಪಾರ ಅವಕಾಶಗಳಿದ್ದರೂ ಆಡಳಿತಾತ್ಮಕ ಇತಿಮಿತಿಗಳಿವೆ ಮತ್ತು ಆದ್ಯತೆ ಮತ್ತು ಸಾಧ್ಯತೆಗಳ ಬಗ್ಗೆ ಆಲೋಚಿಸಬೇಕಾಗುತ್ತದೆ ಎಂದು ಆಚಾರ್ಯ ವಿವರಿಸಿದರು.

ಲಕ್ಷ್ಮೀ ಮಚ್ಚಿನ ಅವರು ಸಣ್ಣ ವಯಸ್ಸಿನಲ್ಲೇ ತಮ್ಮ ಪ್ರತಿಭೆ ತೋರಿಸಿದ್ದಾರೆ. ಇತರ ಪತ್ರಕರ್ತರು ಇವರಿಂದ ಸ್ಪೂರ್ತಿ ಪಡೆಯಲಿ ಎಂದು ಸಚಿವರು ಹಾರೈಸಿದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಲಕ್ಷ್ಮೀ ಮಚ್ಚಿನ ಅವರು ವಿವಿಧ ಸಮಸ್ಯೆಗಳ ಬಗ್ಗೆ ವರದಿಗಾರರು ಪತ್ರಿಕೆಯ ಮೂಲಕ ಬರೆಯುತ್ತಾರೆ. ಇದನ್ನು ಸರಕಾರ ಗಂಭೀರವಾಗಿ ಪರಿಗಣಿಸಿ ಸ್ಪಂದಿಸಿ ಸಮಸ್ಯೆಗಳನ್ನು ಪರಿಹರಿಸಬೇಕು ಅಗ ಮಾತ್ರ ಈ ಪ್ರಶಸ್ತಿಗಳಿಗೆ ಗೌರವ ಬರುತ್ತದೆ ಎಂದರು.

ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಡೆದ ಈ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಹರ್ಷ,ಪ್ರಧಾನ ಕಾರ್ಯದರ್ಶಿ ಗುರುವಪ್ಪ ಟಿ.ಬಾಳೇಪುಣಿ, ಪ.ಗೋ.ಪ್ರಶಸ್ತಿ ಟ್ರಸ್ಟ್ ಸ್ಥಾಪಕ ಹಿರಿಯ ಪತ್ರಕರ್ತ ನರಸಿಂಹ ರಾವ್ ವೇದಿಕೆಯಲ್ಲಿದ್ದರು.
ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಆನಂದ ಶೆಟ್ಟಿ ಪ್ರಶಸ್ತಿ ಬಗ್ಗೆ ಪ್ರಸ್ತಾವಿಸಿದರು. ಸದಸ್ಯ ಪಿ.ಬಿ.ಹರೀಶ್ ರೈ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.

ಪದ್ಯಾಣ ಗೋಪಾಲಕೃಷ್ಣ ಭಟ್ ಹೆಸರಿನಲ್ಲಿ ನೀಡುತ್ತಿರುವ ಪ.ಗೋ ಪ್ರಶಸ್ತಿಯನ್ನು ಕಳೆದ ಹಲವಾರು ವರ್ಷಗಳಿಂದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ನೀಡುತ್ತಿದ್ದು ಪ್ರಶಸ್ತಿಯು ಸ್ಮರಣಿಕೆ ಹಾಗೂ ರೂ.೫೦೦೧ ನ್ನು ಒಳಗೊಂಡಿದೆ. ಪ್ರಶಸ್ತಿಯ ಮೊತ್ತವನ್ನು ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಪ್ರಾಯೋಜಿಸುತ್ತಿದ್ದಾರೆ. ಲಕ್ಷ್ಮೀ ಮಚ್ಚಿನ ಅವರಿಗೆ ಉದಯವಾಣಿ ಪತ್ರಿಕೆಯಲ್ಲಿ ಮುಖಪುಟದಲ್ಲಿ ಪ್ರಕಟಗೊಂಡ ಬಾಂಜಾರು ಮಲೆ ಅಭಿವೃದ್ಧಿ ಕನಸು- ಕಾಡಿನಲ್ಲಿ ಕಾಯುತ್ತಿವೆ ಕುಟುಂಬಗಳು ಎಂಬ ಅವರ ವರದಿಗೆ ಪ್ರಶಸ್ತಿ ಬಂದಿದೆ. ಪ್ರಶಸ್ತಿಯು ಇದೀಗ ಎರಡನೇ ಬಾರಿಗೆ ಬೆಳ್ತಂಗಡಿ ತಾಲೂಕಿನ ವರದಿಗಾರರಿಗೆ ಸಂದಿದೆ.

ವರದಿ – ದೀಪಕ್ ಆಠವಳೆ

Wednesday, July 21, 2010

ನೆನಪಿನಂಗಳದ ಉತ್ಖನನ

ನೆನಪಿನಂಗಳದ ಉತ್ಖನನ

ಮದುವೆಯ ಆಮಂತ್ರಣ ಪತ್ರಿಕೆ ತಲುಪಿದ ಕೂಡಲೇ ಮದುವೆಯ ಮುಹೂರ್ತದ ಸಮಯ ಮತ್ತು ಕಲ್ಯಾಣ ಮಂಟಪದ ವಿವರಗಳನ್ನು ತಮ್ಮ ಕ್ಯಾಲೆಂಡರ್ ನಲ್ಲಿ ದಾಖಲಿಸಿ ಆಮಂತ್ರಣ ಪತ್ರಿಕೆಯನ್ನು ಕ.ಬು.ಗೆ ತಳ್ಳಿ ಮದುವೆ ಕಾರ್ಯಕ್ರಮಕ್ಕೆ ಹೋಗುವವರು ಕೆಲವರು. ಮದುವೆಯ ಸಮಾರಂಭ ಮುಗಿಯುವವರೆಗೆ ಮದುವೆಯ ಆಮಂತ್ರಣ ಪತ್ರಿಕೆಯನ್ನು ಜೋಪಾನವಾಗಿ ಇಟ್ಟುಕೊಂಡು ಮದುವೆಯ ಸಮಾರಂಭ ಮುಗಿದ ಕೂಡಲೇ ಆಮಂತ್ರಣ ಪತ್ರಿಕೆಯನ್ನು ಕ.ಬು.ಗೆ ಕಳುಹಿಸಿಕೊಡುವವರು ಹಲವರು.

ಐವತ್ತೆರಡು ವರ್ಷಗಳ ಹಿಂದೆ ( 1958 ರಲ್ಲಿ), ಬೆಂಗಳೂರಿನಲ್ಲಿ ತಾಯಿನಾಡು ಪತ್ರಿಕೆಯಲ್ಲಿ ಮೊದಲು ತಮ್ಮ ಸಹೋದ್ಯೋಗಿಯಾಗಿದ್ದ ಹಾಗೂ ಮಡಿಕೇರಿಯಿಂದ ಪ್ರಕಟವಾಗುತ್ತಿದ್ದ "ಶಕ್ತಿ " ಪತ್ರಿಕೆಯ ಬೆಂಗಳೂರಿನ ವರದಿಗಾರ ಮಿತ್ರರ ವಿವಾಹದ ಆಮಂತ್ರಣ ಪತ್ರಿಕೆ ಹೆಚ್.ಆರ್.ನಾಗೇಶರಾವ್ ಅವರಿಗೆ ತಲುಪಿತು.

ಅಂದು ಬುಧವಾರ , ದಿನಾಂಕ 11 ಜೂನ್ 1958. ಕಾರಣಾಂತರದಿಂದ ನಾಗೇಶರಾಯರಿಗೆ ಬೆಂಗಳೂರು ನಗರದ ಮಾವಳ್ಳಿ ಸರ್ಕಲ್ ಬಳಿ ಇದ್ದ ಶ್ರೀ. ಭೋಗನಂಜುಡೇಶ್ವರ ದೇವಾಲಯದ ಕಲ್ಯಾಣ ಮಂಟಪದಲ್ಲಿ ನಡೆದ ತಮ್ಮ ಮಿತ್ರನ ವಿವಾಹ ಸಮಾರಂಭಕ್ಕೆ ಬರಲಾಗಲಿಲ್ಲ , ಅದರೂ ಮದುವೆ ಮುಗಿದ ಕೂಡಲೇ ತಮ್ಮ ಮಿತ್ರನ ಮದುವೆಯ ಆಮಂತ್ರಣ ಪತ್ರಿಕೆ ನಾಗೇಶರಾಯರ ಅಮೂಲ್ಯ ಸಂಗ್ರಹಕ್ಕೆ ಸೇರಿತು.

ನಾಡಿನ ಹಿರಿಯ ಪತ್ರಕರ್ತ ’ಸುದ್ದಿಜೀವಿ’ ಹೆಚ್.ಆರ್.ನಾಗೇಶರಾವ್ ಅವರ ಪುತ್ರ ಹಾಲ್ದೊಡ್ಡೇರಿ ಸುಧೀಂದ್ರ ತಮ್ಮ ತಂದೆಯವರ ಸಂಗ್ರಹಗಳ ಬಗ್ಗೆ ವ್ಯಕ್ತಪಡಿಸಿದ್ದು ಈ ರೀತಿಯಲ್ಲಿ-

“ ನಲವತ್ತು ವರ್ಷಗಳ ಪತ್ರಿಕಾ ಜೀವನದಲ್ಲಿ ನನ್ನಪ್ಪ ( ಸಂಯುಕ್ತ ಕರ್ನಾಟಕದ ನಿವೃತ್ತ ಸ್ಥಾನಿಕ ಸಂಪಾದಕ ಹೆಚ್.ಆರ್.ನಾಗೇಶರಾವ್) ಸಂಗ್ರಹಿಸಿದ ಪತ್ರಗಳು-ದಾಖಲೆಗಳು ಮಿಲಿಯಾಂತರ. ತಿಂಗಳಿಗೆ 10 ರುಪಾಯಿ ಬಾಡಿಗೆಯ ಶ್ರೀರಾಮಪುರದ ಬಾಡಿಗೆ ಮನೆಯಿಂದ ಇಂದು ನಾವಿರುವ ಮನೆಯ ತನಕ ಆ ಎಲ್ಲ ದಾಖಲೆಗಳೂ ಪರಿಸರದ ಹೊಡೆತಗಳನ್ನು ತಾಳಿಕೊಂಡು ಬಾಳಿವೆ.

ತಮಗೆ ಆತ್ಮೀಯರೆನಿಸಿದ್ದ ಪತ್ರಕರ್ತರೆಲ್ಲರ ವಿವಾಹ ಪತ್ರಿಕೆಗೆಳನ್ನು ಅಪ್ಪ ಸಂಗ್ರಹಿಸಿಟ್ಟಿದ್ದಾರೆ.


ಅರವತ್ತು ವರ್ಷಕ್ಕೂ ಹಳೆಯದಾದ ಅನೇಕ ದಾಖಲೆ-ಪತ್ರಗಳನ್ನು ಎಸೆಯಲು ನನಗೂ ಮನಸ್ಸು ಬರುತ್ತಿಲ್ಲ. ಒಂದೊಂದು ಕಾಗದದ ಹಿಂದೆಯೂ ಒಂದೊಂದು ವಿಶಿಷ್ಟ ಘಟನೆಗಳಿರಬೇಕು. ಕೊಂಚವಾದರೂ ಬಿಡುವು ಸಿಕ್ಕೀತೆ ?, ಎಂದು ಹಪಹಪಿಸುವ ಕೆಲಸ ಹಚ್ಚಿಕೊಂಡು ಈ ದಾಖಲೆಗಳ ಸಾಗರದಲ್ಲಿ ಕಳೆದು ಹೋಗುತ್ತಿದ್ದೇನೆ. ಇದು ಉತ್ಪ್ರೇಕ್ಷೆಯ ಮಾತಲ್ಲ.

ನನ್ನಪ್ಪ ನನಗೆ ಆಲದ ಮರದ ಬದಲು ಖನಿಜಭರಿತ ಗಣಿಯೊಂದನ್ನು ಬಿಟ್ಟು ಹೋಗಿದ್ದಾರೆ. ಅಕ್ರಮವೊ, ಸಕ್ರಮವೊ ಗೊತ್ತಿಲ್ಲ, ಉತ್ಖನನ ಮಾಡುತ್ತಿದ್ದೇನೆ. ಸಿಕ್ಕ ದಾಖಲೆಗಳನ್ನು ಯಾವುದೋ ಸಂದರ್ಭದಲ್ಲಿ ಅವರೊಂದಿಗೆ ನಡೆಸಿದ ಮಾತುಕತೆಯನ್ನು ನನ್ನ ನೆನಪಿನ ಗಣಿಯಿಂದ ಹೆಕ್ಕಿ ತೆಗೆದು ಜೋಡಣೆ ಮಾಡ ಹೊರಟಿದ್ದೇನೆ.”

ನಾಗೇಶರಾಯರ ಖನಿಜಭರಿತ ಗಣಿಯ 2009ನೇ ಇಸವಿಯ ಪರಿಶೋಧನೆಯ ಅಂಗವಾಗಿ ಹಾಲ್ದೊಡ್ಡೇರಿ ಸುಧೀಂದ್ರ ಒಂದು ರಟ್ಟಿನ ಡಬ್ಬ ಬುಡಮೇಲು ಮಾಡಿದಾಗ ದೊರಕಿದ್ದು - ಒಂದು ಕವರಿನ ಮೇಲ್ಗಡೆ P.Gopalakrishna ಎಂಬ ಉಲ್ಲೇಖ. ಪರಿಶೋಧನೆಯನ್ನು ಮುಂದುವರಿಸಿ ಖನಿಜಕ್ಕಾಗಿ ಅವರು 2010 ನೇ ಇಸವಿಯಲ್ಲಿ ಉತ್ಖನನ ನಡೆಸಿದಾಗ ಲಭ್ಯವಾದದ್ದು ಬೆಂಗಳೂರು ನಗರದ ಮಾವಳ್ಳಿ ಸರ್ಕಲ್ ಬಳಿ ಶ್ರೀ. ಭೋಗನಂಜುಡೇಶ್ವರ ದೇವಾಲಯದ ಕಲ್ಯಾಣ ಮಂಟಪದಲ್ಲಿ ದಿನಾಂಕ 11 ಜೂನ್ 1958 ರಂದು ನಡೆದ ಕರಾವಳಿ ಕರ್ನಾಟಕದ ಹಿರಿಯ ಪತ್ರಕರ್ತ ಪದ್ಯಾಣ ಗೋಪಾಲಕೃಷ್ಣ ( ಪ. ಗೋ.) ಅವರ ವಿವಾಹದ ಆಮಂತ್ರಣ.


ತಮ್ಮ ತಂದೆಯ ಸಂಗ್ರಹದಲ್ಲಿದ್ದ ಐದು ದಶಕಗಳ ಹಿಂದಿನ ಕಾಲಗರ್ಭದಲ್ಲಿ ಹುದುಗಿದ್ದ ಪ.ಗೋ. ಅವರ ವಿವಾಹದ ಆಮಂತ್ರಣ ಪತ್ರಿಕೆಯನ್ನು ಹುಡುಕಿ ತೆಗೆದು ಪದ್ಯಾಣ ಗೋಪಾಲಕೃಷ್ಣರ ಮೊಮ್ಮಕ್ಕಳಿಗೆ ತೋರಿಸಲು ಅನುವು ಮಾಡಿಕೊಟ್ಟ ಹಾಲ್ದೊಡ್ಡೇರಿ ಸುಧೀಂದ್ರ ಅವರಿಗೆ ವಂದನೆಗಳು.

ಚದರ ಅಂಗುಲ ಮಾಪನದಲ್ಲಿ ಮನೆಯ ವಿಸ್ತೀರ್ಣ ಅಳೆಯುವ ಕರ್ನಾಟಕದ ರಾಜಧಾನಿ ಬೆಂಗಳೂರು ನಗರದಲ್ಲಿ ನಾಗೇಶರಾವ್ ಅವರು ಸಂಗ್ರಹಿಸಿದ್ದ ಮಿಲಿಯಾಂತರ ಪತ್ರ -ದಾಖಲೆಗಳನ್ನು ಅಂದಿನಿಂದ ನಗ ನಾಣ್ಯಗಳಂತೆ ಕಾಪಾಡಿಕೊಂಡು ಪರಿಸರದ ಹೊಡೆತದಿಂದ ಇಂದಿನವರೆಗೆ ರಕ್ಷಿಸಲು ಮನಪೂರ್ವಕವಾಗಿ ಸಹಕರಿಸಿದ ನಾಗೇಶರಾಯರ ಪತ್ನಿ ಹಾಗೂ ಹಾಲ್ದೊಡ್ಡೇರಿ ಸುಧೀಂದ್ರ ಅವರ ತಾಯಿ ಶ್ರೀಮತಿ ಪ್ರೇಮಾ ನಾಗೇಶರಾವ್ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು.

-ಪ.ರಾಮಚಂದ್ರ, ಕತಾರ್

Visitors to this page