Wednesday, July 21, 2010

ನೆನಪಿನಂಗಳದ ಉತ್ಖನನ

ನೆನಪಿನಂಗಳದ ಉತ್ಖನನ

ಮದುವೆಯ ಆಮಂತ್ರಣ ಪತ್ರಿಕೆ ತಲುಪಿದ ಕೂಡಲೇ ಮದುವೆಯ ಮುಹೂರ್ತದ ಸಮಯ ಮತ್ತು ಕಲ್ಯಾಣ ಮಂಟಪದ ವಿವರಗಳನ್ನು ತಮ್ಮ ಕ್ಯಾಲೆಂಡರ್ ನಲ್ಲಿ ದಾಖಲಿಸಿ ಆಮಂತ್ರಣ ಪತ್ರಿಕೆಯನ್ನು ಕ.ಬು.ಗೆ ತಳ್ಳಿ ಮದುವೆ ಕಾರ್ಯಕ್ರಮಕ್ಕೆ ಹೋಗುವವರು ಕೆಲವರು. ಮದುವೆಯ ಸಮಾರಂಭ ಮುಗಿಯುವವರೆಗೆ ಮದುವೆಯ ಆಮಂತ್ರಣ ಪತ್ರಿಕೆಯನ್ನು ಜೋಪಾನವಾಗಿ ಇಟ್ಟುಕೊಂಡು ಮದುವೆಯ ಸಮಾರಂಭ ಮುಗಿದ ಕೂಡಲೇ ಆಮಂತ್ರಣ ಪತ್ರಿಕೆಯನ್ನು ಕ.ಬು.ಗೆ ಕಳುಹಿಸಿಕೊಡುವವರು ಹಲವರು.

ಐವತ್ತೆರಡು ವರ್ಷಗಳ ಹಿಂದೆ ( 1958 ರಲ್ಲಿ), ಬೆಂಗಳೂರಿನಲ್ಲಿ ತಾಯಿನಾಡು ಪತ್ರಿಕೆಯಲ್ಲಿ ಮೊದಲು ತಮ್ಮ ಸಹೋದ್ಯೋಗಿಯಾಗಿದ್ದ ಹಾಗೂ ಮಡಿಕೇರಿಯಿಂದ ಪ್ರಕಟವಾಗುತ್ತಿದ್ದ "ಶಕ್ತಿ " ಪತ್ರಿಕೆಯ ಬೆಂಗಳೂರಿನ ವರದಿಗಾರ ಮಿತ್ರರ ವಿವಾಹದ ಆಮಂತ್ರಣ ಪತ್ರಿಕೆ ಹೆಚ್.ಆರ್.ನಾಗೇಶರಾವ್ ಅವರಿಗೆ ತಲುಪಿತು.

ಅಂದು ಬುಧವಾರ , ದಿನಾಂಕ 11 ಜೂನ್ 1958. ಕಾರಣಾಂತರದಿಂದ ನಾಗೇಶರಾಯರಿಗೆ ಬೆಂಗಳೂರು ನಗರದ ಮಾವಳ್ಳಿ ಸರ್ಕಲ್ ಬಳಿ ಇದ್ದ ಶ್ರೀ. ಭೋಗನಂಜುಡೇಶ್ವರ ದೇವಾಲಯದ ಕಲ್ಯಾಣ ಮಂಟಪದಲ್ಲಿ ನಡೆದ ತಮ್ಮ ಮಿತ್ರನ ವಿವಾಹ ಸಮಾರಂಭಕ್ಕೆ ಬರಲಾಗಲಿಲ್ಲ , ಅದರೂ ಮದುವೆ ಮುಗಿದ ಕೂಡಲೇ ತಮ್ಮ ಮಿತ್ರನ ಮದುವೆಯ ಆಮಂತ್ರಣ ಪತ್ರಿಕೆ ನಾಗೇಶರಾಯರ ಅಮೂಲ್ಯ ಸಂಗ್ರಹಕ್ಕೆ ಸೇರಿತು.

ನಾಡಿನ ಹಿರಿಯ ಪತ್ರಕರ್ತ ಸುದ್ದಿಜೀವಿ ಹೆಚ್.ಆರ್.ನಾಗೇಶರಾವ್ ಅವರ ಪುತ್ರ ಹಾಲ್ದೊಡ್ಡೇರಿ ಸುಧೀಂದ್ರ ತಮ್ಮ ತಂದೆಯವರ ಸಂಗ್ರಹಗಳ ಬಗ್ಗೆ ವ್ಯಕ್ತಪಡಿಸಿದ್ದು ಈ ರೀತಿಯಲ್ಲಿ-

ನಲವತ್ತು ವರ್ಷಗಳ ಪತ್ರಿಕಾ ಜೀವನದಲ್ಲಿ ನನ್ನಪ್ಪ ( ಸಂಯುಕ್ತ ಕರ್ನಾಟಕದ ನಿವೃತ್ತ ಸ್ಥಾನಿಕ ಸಂಪಾದಕ ಹೆಚ್.ಆರ್.ನಾಗೇಶರಾವ್) ಸಂಗ್ರಹಿಸಿದ ಪತ್ರಗಳು-ದಾಖಲೆಗಳು ಮಿಲಿಯಾಂತರ. ತಿಂಗಳಿಗೆ 10 ರುಪಾಯಿ ಬಾಡಿಗೆಯ ಶ್ರೀರಾಮಪುರದ ಬಾಡಿಗೆ ಮನೆಯಿಂದ ಇಂದು ನಾವಿರುವ ಮನೆಯ ತನಕ ಆ ಎಲ್ಲ ದಾಖಲೆಗಳೂ ಪರಿಸರದ ಹೊಡೆತಗಳನ್ನು ತಾಳಿಕೊಂಡು ಬಾಳಿವೆ.

ತಮಗೆ ಆತ್ಮೀಯರೆನಿಸಿದ್ದ ಪತ್ರಕರ್ತರೆಲ್ಲರ ವಿವಾಹ ಪತ್ರಿಕೆಗೆಳನ್ನು ಅಪ್ಪ ಸಂಗ್ರಹಿಸಿಟ್ಟಿದ್ದಾರೆ.


ಅರವತ್ತು ವರ್ಷಕ್ಕೂ ಹಳೆಯದಾದ ಅನೇಕ ದಾಖಲೆ-ಪತ್ರಗಳನ್ನು ಎಸೆಯಲು ನನಗೂ ಮನಸ್ಸು ಬರುತ್ತಿಲ್ಲ. ಒಂದೊಂದು ಕಾಗದದ ಹಿಂದೆಯೂ ಒಂದೊಂದು ವಿಶಿಷ್ಟ ಘಟನೆಗಳಿರಬೇಕು. ಕೊಂಚವಾದರೂ ಬಿಡುವು ಸಿಕ್ಕೀತೆ ?, ಎಂದು ಹಪಹಪಿಸುವ ಕೆಲಸ ಹಚ್ಚಿಕೊಂಡು ಈ ದಾಖಲೆಗಳ ಸಾಗರದಲ್ಲಿ ಕಳೆದು ಹೋಗುತ್ತಿದ್ದೇನೆ. ಇದು ಉತ್ಪ್ರೇಕ್ಷೆಯ ಮಾತಲ್ಲ.

ನನ್ನಪ್ಪ ನನಗೆ ಆಲದ ಮರದ ಬದಲು ಖನಿಜಭರಿತ ಗಣಿಯೊಂದನ್ನು ಬಿಟ್ಟು ಹೋಗಿದ್ದಾರೆ. ಅಕ್ರಮವೊ, ಸಕ್ರಮವೊ ಗೊತ್ತಿಲ್ಲ, ಉತ್ಖನನ ಮಾಡುತ್ತಿದ್ದೇನೆ. ಸಿಕ್ಕ ದಾಖಲೆಗಳನ್ನು ಯಾವುದೋ ಸಂದರ್ಭದಲ್ಲಿ ಅವರೊಂದಿಗೆ ನಡೆಸಿದ ಮಾತುಕತೆಯನ್ನು ನನ್ನ ನೆನಪಿನ ಗಣಿಯಿಂದ ಹೆಕ್ಕಿ ತೆಗೆದು ಜೋಡಣೆ ಮಾಡ ಹೊರಟಿದ್ದೇನೆ.

ನಾಗೇಶರಾಯರ ಖನಿಜಭರಿತ ಗಣಿಯ 2009ನೇ ಇಸವಿಯ ಪರಿಶೋಧನೆಯ ಅಂಗವಾಗಿ ಹಾಲ್ದೊಡ್ಡೇರಿ ಸುಧೀಂದ್ರ ಒಂದು ರಟ್ಟಿನ ಡಬ್ಬ ಬುಡಮೇಲು ಮಾಡಿದಾಗ ದೊರಕಿದ್ದು - ಒಂದು ಕವರಿನ ಮೇಲ್ಗಡೆ P.Gopalakrishna ಎಂಬ ಉಲ್ಲೇಖ. ಪರಿಶೋಧನೆಯನ್ನು ಮುಂದುವರಿಸಿ ಖನಿಜಕ್ಕಾಗಿ ಅವರು 2010 ನೇ ಇಸವಿಯಲ್ಲಿ ಉತ್ಖನನ ನಡೆಸಿದಾಗ ಲಭ್ಯವಾದದ್ದು ಬೆಂಗಳೂರು ನಗರದ ಮಾವಳ್ಳಿ ಸರ್ಕಲ್ ಬಳಿ ಶ್ರೀ. ಭೋಗನಂಜುಡೇಶ್ವರ ದೇವಾಲಯದ ಕಲ್ಯಾಣ ಮಂಟಪದಲ್ಲಿ ದಿನಾಂಕ 11 ಜೂನ್ 1958 ರಂದು ನಡೆದ ಕರಾವಳಿ ಕರ್ನಾಟಕದ ಹಿರಿಯ ಪತ್ರಕರ್ತ ಪದ್ಯಾಣ ಗೋಪಾಲಕೃಷ್ಣ ( ಪ. ಗೋ.) ಅವರ ವಿವಾಹದ ಆಮಂತ್ರಣ.


ತಮ್ಮ ತಂದೆಯ ಸಂಗ್ರಹದಲ್ಲಿದ್ದ ಐದು ದಶಕಗಳ ಹಿಂದಿನ ಕಾಲಗರ್ಭದಲ್ಲಿ ಹುದುಗಿದ್ದ ಪ.ಗೋ. ಅವರ ವಿವಾಹದ ಆಮಂತ್ರಣ ಪತ್ರಿಕೆಯನ್ನು ಹುಡುಕಿ ತೆಗೆದು ಪದ್ಯಾಣ ಗೋಪಾಲಕೃಷ್ಣರ ಮೊಮ್ಮಕ್ಕಳಿಗೆ ತೋರಿಸಲು ಅನುವು ಮಾಡಿಕೊಟ್ಟ ಹಾಲ್ದೊಡ್ಡೇರಿ ಸುಧೀಂದ್ರ ಅವರಿಗೆ ವಂದನೆಗಳು.

ಚದರ ಅಂಗುಲ ಮಾಪನದಲ್ಲಿ ಮನೆಯ ವಿಸ್ತೀರ್ಣ ಅಳೆಯುವ ಕರ್ನಾಟಕದ ರಾಜಧಾನಿ ಬೆಂಗಳೂರು ನಗರದಲ್ಲಿ ನಾಗೇಶರಾವ್ ಅವರು ಸಂಗ್ರಹಿಸಿದ್ದ ಮಿಲಿಯಾಂತರ ಪತ್ರ -ದಾಖಲೆಗಳನ್ನು ಅಂದಿನಿಂದ ನಗ ನಾಣ್ಯಗಳಂತೆ ಕಾಪಾಡಿಕೊಂಡು ಪರಿಸರದ ಹೊಡೆತದಿಂದ ಇಂದಿನವರೆಗೆ ರಕ್ಷಿಸಲು ಮನಪೂರ್ವಕವಾಗಿ ಸಹಕರಿಸಿದ ನಾಗೇಶರಾಯರ ಪತ್ನಿ ಹಾಗೂ ಹಾಲ್ದೊಡ್ಡೇರಿ ಸುಧೀಂದ್ರ ಅವರ ತಾಯಿ ಶ್ರೀಮತಿ ಪ್ರೇಮಾ ನಾಗೇಶರಾವ್ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು.

-ಪ.ರಾಮಚಂದ್ರ, ಕತಾರ್

Thursday, July 1, 2010

ನಾಡು ಕಂಡ ಧೀಮಂತ ಪತ್ರಕರ್ತ ಪ.ಗೋ.



ಪ.ಗೋ. ಎಂದೇ ಪ್ರಸಿದ್ಧರಾಗಿದ್ದ ಪದ್ಯಾಣ ಗೋಪಾಲಕೃಷ್ಣ ಅವರು ನಾಡುಕಂಡ ಧೀಮಂತ ಪತ್ರಕರ್ತರಲ್ಲಿ ಒಬ್ಬರು. ಬೆಂಗಳೂರಿನಂಥ ಪಟ್ಟಣದಲ್ಲಿ ವೃತ್ತಿ ಬದುಕನ್ನು ರೂಪಿಸಿಕೊಂಡು ಮಂಗಳೂರಲ್ಲಿ ವ್ಯಕ್ತಿತ್ವವನ್ನು ಅರಳಿಸಿಕೊಂಡವರು. ಮಾತಿನಲ್ಲಿ ಮೊನಚಿದ್ದರೂ ಹೃದಯವಂತಿಕೆಗೇನೂ ಕೊರತೆ ಇರಲಿಲ್ಲ.

1990ರ ದಶಕದಲ್ಲಿ ಬೆಂಗಳೂರಿನಿಂದ ಪ್ರಕಟನೆಯಾಗುತ್ತಿದ್ದ ಪ್ರಜಾವಾಣಿ ಕನ್ನಡ ದಿನಪತ್ರಿಕೆಯ ಮಂಗಳೂರು ಪ್ರತಿನಿಧಿಯಾಗಿದ್ದ ಶ್ರೀ.ಜಿ.ಎನ್.ಮೋಹನ್ ಅವರು ಮಂಗಳೂರಿನ ಪತ್ರಕರ್ತರಿಬ್ಬರ ಬಗ್ಗೆ 2009 ನೇ ಇಸವಿಯಲ್ಲಿ ತಮ್ಮ ಲೇಖನದಲ್ಲಿ ವ್ಯಕ್ತಪಡಿಸಿದ್ದು ಈ ರೀತಿಯಲ್ಲಿ.

ಮಂಗಳೂರಿನಲ್ಲಿ ಒಂದು ಜೋಡಿ ಇತ್ತು. ‘ದಿ ಹಿಂದು’ವಿನ ನರಸಿಂಹರಾಯರು ಹಾಗು ಟೈಮ್ಸ್ ಆಪ್ ಇಂಡಿಯಾದ ಪದ್ಯಾಣ ಗೋಪಾಲಕೃಷ್ಣ ಅವರು. ಪ್ರೆಸ್ ಕಾನ್ಫರೆನ್ಸ್ ನಲ್ಲಿ ಈ ಇಬ್ಬರನ್ನು ಕಂಡರೆ ರಾಜಕಾರಣಿಗಳಿಗೆ ನಾಲಿಗೆಯೇ ಹೊರಳುತ್ತಿರಲಿಲ್ಲ. ‘ಕವರ್ ಜರ್ನಲಿಸಂ’ಗೆ ನಾಂದಿ ಹಾಕಿದ ಸ್ಟ್ರಿಂಗರ್ ಗಳನ್ನು ಬಗಲಲ್ಲಿಟ್ಟುಕೊಂಡೇ ಇವರು ಪತ್ರಿಕೋದ್ಯಮದ ಘನತೆಯನ್ನು ಉಳಿಸಿದರು. ಎಳೆಯ ಪತ್ರಕರ್ತರಿಗೆ ಅ ಆ ಇ ಈ ಕಲಿಸಿದರು. ಪತ್ರಿಕಾಗೋಷ್ಠಿಯಲ್ಲಿ ಕುಳಿತರಂತೂ ಇಬ್ಬರೂ ಹುಲಿಗಳೇ. ಇವರಿಬ್ಬರೂ ಇದ್ದಾರೆ ಎಂದರೆ ಪತ್ರಿಕಾ ಗೋಷ್ಠಿ ನಡೆಸುವವರಿಗೂ ಆತಂಕ. ಏಕೆಂದರೆ ಸುಳ್ಳು ಮಾತನಾಡುವಂತಿಲ್ಲ. ತಪ್ಪು ಅಂಕಿ ಸಂಖ್ಯೆ ಮುಂದಿಡುವಂತಿಲ್ಲ. ತಿಂಡಿ ಕಾಫಿ ಸಹಾ ಮುಟ್ಟುವುದಿಲ್ಲ. ಗಿಫ್ಟ್ ತೆಗೆದುಕೊಳ್ಳುವ ಮಾತೇ ಇಲ್ಲ. ದಕ್ಷಿಣ ಕನ್ನಡ ಕಂಡ ಇಬ್ಬರು ನಿಜಕ್ಕೂ ಮಹನೀಯ ಪತ್ರಕರ್ತರು ಇವರು. ‘ಪಾಕೀಟು ಪತ್ರಿಕೋದ್ಯಮ’ ದ ಜನಪ್ರಿಯವಾಗಿದ್ದ ದಿನಗಳಲ್ಲಿ ಪತ್ರಕರ್ತರ ನೀತಿ ಸಂಹಿತೆ ಉಳಿಯಲು ತಮ್ಮದೇ ಉದಾಹರಣೆಯ ಮೂಲಕ ಹೋರಾಟ ನಡೆಸಿದವರು .

ಈ ಜೋಡಿಯ ನಿಷ್ಟುರವಾದಿ, ಯಾರ ಮುಲಾಜಿಗೂ ಒಳಗಾಗದ ಕಿರಿಯ ಪತ್ರಕರ್ತ ಪ.ಗೋಪಾಲಕೃಷ್ಣ .

ಅವಿಭಾಜಿತ ದಕ್ಷಿಣ ಕನ್ನಡ ಜಿಲ್ಲೆಯ ಅನೇಕ ಹಿರಿಯ ನಾಯಕರು, ರಾಜಕಾರಣಿಗಳ ಸಂಪರ್ಕವಿದ್ದರೂ ಹಾಗೂ ಕರಾವಳಿ ಕರ್ನಾಟಕ ಮೂಲದ ನಾಡಿನ ಮುಖ್ಯಮಂತ್ರಿಯಾಗಿ ಆಯ್ಕೆಗೊಂಡ ಇಬ್ಬರನ್ನು ವೈಯಕ್ತಿಕವಾಗಿ ಪರಿಚಯವಿದ್ದರೂ ಯಾರ ಬಳಿಯೂ ಸಹಾಯಕ್ಕಾಗಿ ಹಸ್ತ ಚಾಚಿದವರಲ್ಲ ಪ.ಗೋ.

ಇಂಗ್ಲೀಷ್ ದಿನಪತ್ರಿಕೆ ಇಂಡಿಯನ್ ಎಕ್ಷ್ ಪ್ರೆಸ್ ಮತ್ತು ಟೈಮ್ಸ್ ಆಪ್ ಇಂಡಿಯಾದ ವರದಿಗಾರರಾಗಿದ್ದರೂ ಕನ್ನಡ ಭಾಷಾ ಪ್ರೇಮಿ ಪ. ಗೋ. ಅವರು ತಮ್ಮ ಹಸ್ತಾಕ್ಷರವನ್ನು ಕನ್ನಡದಲ್ಲಿಯೇ ಮಾಡುತಿದ್ದರು. ಈಗ ರಾಷ್ಟ್ರೀಕರಣಗೊಂಡಿರುವ ಬ್ಯಾಂಕ್ ಒಂದರ ಮಂಗಳೂರಿನ ಶಾಖೆಯ ಮ್ಯಾನೇಜರ್ ಒಬ್ಬರು ಅಂದಿನ 1960ರ ದಶಕದಲ್ಲಿ ಇಂಗ್ಲಿಷ್ ನಲ್ಲಿ ಸಹಿ ಮಾಡಿದರೆ ಮಾತ್ರ ತಮ್ಮ ಬ್ಯಾಂಕ್ ನಲ್ಲಿ ವ್ಯವಹಾರ ಮಾಡಬಹುದು ಅಂತ ಹೇಳಿದಕ್ಕೆ ಪ್ರತಿಭಟಿಸಿ ಆ ಬ್ಯಾಂಕ್ ನಲ್ಲಿದ್ದ ತಮ್ಮ ಖಾತೆಯನ್ನು ತಕ್ಷಣ ಮುಚ್ಚಿದರು. ರಾಷ್ಟ್ರಕವಿ ಶ್ರೀ. ಮಂಜೇಶ್ವರ ಗೋವಿಂದ ಪೈ ಅವರಂತೆ ಕಾಸರಗೋಡು ಕನ್ನಡ ನಾಡಿಗೆ ಸೇರಬೇಕು ಎಂದು ಹಂಬಲಿಸಿದ್ದ ಪ.ಗೋ. ರವರು ಅಂದಿನ ಕೇರಳ ರಾಜ್ಯದ ಕಣ್ಣಾನೂರು ಜಿಲ್ಲೆಯ ತಾಲೂಕಾಗಿದ್ದ ಕಾಸರಗೋಡಿನಲ್ಲಿದ ತಮ್ಮ ಮಿತ್ರರು, ಸಂಬಂಧಿಕರಿಗೆ ಪತ್ರ ಬರೆಯುವಾಗ ವಿಳಾಸದಲ್ಲಿ ಕೇರಳ ರಾಜ್ಯದ ಉಲ್ಲೇಖ ಮಾಡದೆ ಕಾಸರಗೋಡು (ದಕ್ಷಿಣ ರೈಲ್ವೆ ) ಎಂದು ಬರೆಯುತಿದ್ದರು.

ವರದಿಗಳು ನಿಷ್ಪಕ್ಷಪಾತವಾಗಿರಬೇಕು ಎನ್ನುವ ದೋರಣೆ ಪ.ಗೋ. ಅವರದ್ದು. ಅವರ ವರದಿಗಳು ಯಾವುದೇ ಒಂದು ರಾಜಕೀಯ ಪಕ್ಷಕ್ಕೆ ಪರ ಅಥವಾ ವಿರೋದವಾಗಿ ಇರುತಿರಲ್ಲಿಲ್ಲ . ಆದರೆ ಪ.ಗೋ. ಅವರು 1950ರ ದಶಕದಲ್ಲಿ ಕಮ್ಯುನಿಸ್ಟ್ ಪಕ್ಷದ ‘ಕೆಂಪು ಕಾರ್ಡ್’ ಹೊಂದಿದ್ದ ಸದಸ್ಯರಾಗಿದ್ದರು ಎಂದು ಅವರ ಕುಟುಂಬದವರಿಗೂ ತಿಳಿದ್ದದ್ದು 1998ರಲ್ಲಿ , ಪ.ಗೋ.ರವರು ದಿವಂಗತರಾದ ಬಳಿಕ.

ಮೊದಲಿನ ಮಂಗಳೂರು ನಗರದ ಹೊರವಲಯದ ಗ್ರಾಮ “ಲೋವರ್ ಮರೋಳಿ”ಯಲ್ಲಿ 1979 ನೇ ಇಸವಿಯಲ್ಲಿ ನಲ್ಲಿ ನೀರಿನ ಸವಲತ್ತು ಹೊಂದಲು ಪತ್ರಕರ್ತರಾಗಿ ಪ.ಗೋ. ಅವರು ಮಾಡಿದ ಸಹಾಯಗಳನ್ನು ಲೋವರ್ ಮರೋಳಿಯ ಹಿರಿಯರು ಇಂದಿಗೂ ಪ್ರತೀ ಬೇಸಗೆ ಕಾಲದಲ್ಲಿ ಸ್ಮರಿಸುತ್ತಾರೆ.

ಪದ್ಯಾಣ ಎಂದೊಡನೆ ತಕ್ಷಣ ನೆನಪಿಗೆ ಬರುವುದು ಯಕ್ಷಗಾನ . ಮೈಸೂರಿನ ದಸರಾ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮೊದಲ ಬಾರಿಗೆ ಯಕ್ಷಗಾನ ಪ್ರದರ್ಶನದ ನೆಡೆದ್ದದ್ದು 1955 ನೇ ಇಸವಿಯಲ್ಲಿ ಪ.ಗೋ. ಅವರ ನೇತ್ರತ್ವದಲ್ಲಿ . 1955ರಲ್ಲಿ ಅಂದಿನ ರಷ್ಯಾ ದೇಶದ ಪ್ರಧಾನಿ ಮಾರ್ಷಲ್ ಬುಲ್ಗಾನಿನ್ ಮತ್ತು ಕಾಮ್ರೇಡ್ ಕ್ರುಶ್ನೇವ್ ಅವರ ತಂಡದ ಮೈಸೂರು ರಾಜ್ಯದ ಬೇಟಿಯ ಸಂದರ್ಭದಲ್ಲಿ ಬೆಂಗಳೂರಿನ ಲಾಲ್ ಭಾಗ್ ನ ಗಾಜಿನ ಮನೆಯಲ್ಲಿ ಕರಾವಳಿ ಕರ್ನಾಟಕದ ಗಂಡುಗಲೆ ಯಕ್ಷಗಾನದ ‘ದಕ್ಷ ಯಜ್ಞ’ ಪ್ರಸಂಗದ ಪ್ರದರ್ಶನ ಆಯೋಜಿಸಿ ಕನ್ನಡ ನಾಡಿನ ರಾಜಧಾನಿ ಬೆಂಗಳೂರು ನಗರದಲ್ಲಿ ಮೊದಲ ಬಾರಿಗೆ ಯಕ್ಷಗಾನದ ಕೇಳಿ ಬಡಿದವರು ಎಂದು ಗುರುತಿಸಿ ಕೊಂಡವರು ಪ.ಗೋ.

ಪ.ಗೋ. ಅವರ ಪತ್ರಿಕೋದ್ಯಮ ಕಿರಿಯರಿಗೆ ಆದರ್ಶ. ನಡೆ- ನುಡಿ ಬರವಣಿಗೆಯ ಶೈಲಿ ಅದು ಪ.ಗೋ. ವಿಶೇಷತೆ. ನಾಡು ಕಂಡ ಈ ಧೀಮಂತ ಪತ್ರಕರ್ತರನ್ನು ಸರ್ಕಾರಗಳು ಗುರುತಿಸದಿದ್ದರೂ ಜನರು ಮಾತ್ರ ಎಂದಿಗೂ ಮರೆಯಲಾರರು. ಅಂಥ ಹೆಜ್ಜೆಗುರುತುಗಳನ್ನು ಪ.ಗೋ.ಬಿಟ್ಟು ಹೋಗಿದ್ದಾರೆ.

Monday, May 10, 2010

ಕತ್ತೆ ಕಾಣದ ಜಿಲ್ಲೆ

ಕತ್ತೆ ಕಾಣದ ಜಿಲ್ಲೆ

1956ರ ಪ್ರಥಮ ರಾಜ್ಯೋತ್ಸವದಂದು ವಿಶೇಷ ಪುರವಣಿಯನ್ನು ಹೊರಡಿಸಿದ ಬೆಂಗಳೂರಿನ ದೈನಿಕವೊಂದು “ಕತ್ತೆಗಳಿಲ್ಲದ ಏಕೈಕ ಜಿಲ್ಲೆ” ಎಂದು ದಕ್ಷಿಣ ಕನ್ನಡವನ್ನು ಹೆಸರಿಸಿತು. ಮೇಲ್ನೋಟಕ್ಕೆ ಅದು ಲೇವಡಿಯಂತೆ ಕಂಡರೂ, ಮಾತು ನಿಜ. ದಕ್ಷಿಣ ಕನ್ನಡದಲ್ಲಿ ಕತ್ತೆಗಳಿಲ್ಲ. ಕತ್ತೆಯ ದುಡಿತ ಮಾಡಬಲ್ಲವರಿದ್ದರೆ.

ಬರಗಾಲವನ್ನು ಕಂಡರಿಯದ ಜಿಲ್ಲೆ ಎನ್ನುತ್ತಾರೆ. ಅದು ನಿಜ. ದಕ್ಷಿಣ ಕನ್ನಡಕ್ಕೆ ಇದುವರೆಗೂ ಬರಗಾಲದ ಭೀತಿ ಸೋಕಿಲ್ಲ. ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ಮಾತ್ರ ಅದು ಎಂದಿಗೂ ‘ಡಿಫ಼ಿಸಿಟ್’. ಆದರೆ, ನೆರೆಯ ಶಿವಮೊಗ್ಗದಲ್ಲಿ ಅವರು ಉಣ್ಣದೆ ಇರುವ ಕುಸುಬಲು ಅಕ್ಕಿಯನ್ನು ದಕ್ಷಿಣ ಕನ್ನಡಕ್ಕೆ ಕಳುಹಿಸಲು ಸಾಧ್ಯವಿರುವವರೆಗೆ ಆಹಾರದ ಅಭಾವ ಇಲ್ಲಿಗೆ ಬರುವ ಕಾರಣವಿಲ್ಲ.

ಇತರರೆಲ್ಲ ಅಮ್ಮನನ್ನು ‘ಅಮ್ಮ’ ಎಂದೂ, ಅಪ್ಪನನ್ನು ‘ಅಪ್ಪ’ ಎಂದೂ ಕರೆದರೆ ದ.ಕ. ದ ಬಹ್ವಂಶ ಜನ ಅಮ್ಮನನ್ನು ‘ಅಪ್ಪೆ’ ಎಂದೂ ಅಪ್ಪನನ್ನು ‘ಅಮ್ಮೆ’ ಎಂದೂ ಕರೆಯುತ್ತಾರೆ - ಅವರ ತುಳು ಭಾಷೆಯಲ್ಲಿ ಅದು ಆ ಭಾಷೆಯ ಸೊಗಸು.

ಮಂಗಳೂರಿನ ಪ್ರಸಿದ್ದ ಛಾಯಾಗ್ರಹಕ ಎಸ್. ಆರ್. ಬಾಲಗೋಪಾಲರು ಹೇಳುವಂತೆ ತುಳು ಭಾಷೆಯನ್ನು ವಾಸ್ಕೋ ಡ ಗಾಮಾ ಮತ್ತು ಕೊಲಂಬಸರೂ ಕಲಿತಿದ್ದ ಕಾರಣ ‘ಅಪ್ಪೆರಿಕಾ’ವನ್ನು ಮತ್ತು ಅಮ್ಮೆರಿಕಾ’ವನ್ನು ಕಂಡು ಹಿಡಿದು ಅವುಗಳಿಗೆ ತಾಯಿ-ತಂದೆಯರ ಹೆಸರುಗಳ ಕೊಡುಗೆಯನ್ನಿತ್ತರು. ಪಾಪ, ಪರಂಗಿಗಳ ಉಚ್ಚಾರ ದೋಷದಿಂದ ಅವುಗಳು ಆಫ಼್ರಿಕಾ , ಅಮೇರಿಕಾಗಳಾದವು.

ಕಚ್ಚಾವಸ್ತುಗಳು ಎಲ್ಲವನ್ನೂ ಹೊರಗಿನಿಂದಲೇ ತರಿಸಿ, ಸಿದ್ದವಸ್ತುವಿನ ‘ಉತ್ಪಾದನೆ’ ಮಾಡಿ, ಅದನ್ನೇ ತಿರುಗಿ ಹೊರಗೆ ಮಾರಟಕ್ಕೆ ಕಳುಹಿಸುವ ‘ಜಪಾನಿ ಸಾಹಸ’ವೂ ದಕ್ಷಿಣ ಕನ್ನಡದಲ್ಲಿದೆ. ದಿನಕ್ಕೆ ಎಂಟು ಕೋಟಿಗಳಷ್ಟು ಬೀಡಿಯನ್ನು ಮನೆ ಮನೆಗಳಲ್ಲಿ ತಯಾರಿಸಲು ಅಗತ್ಯವಿರುವ ತಂಬಾಕು ನಿಪ್ಪಾಣಿಯತ್ತಣಿಯಿಂದ ಇಲ್ಲಿಗೆ ಬರಬೇಕು. ಬೀಡಿ ಕಟ್ಟಲು ಬೇಕಾದ ‘ಕೆಂಡು’ ಎಲೆಗಳ ಆಯಾತ ಒರಿಸ್ಸಾ, ಮಧ್ಯಪ್ರದೇಶ, ಮಹಾರಾಷ್ಟ್ರಗಳಿಂದ ಆಗಬೇಕು. ಕಟ್ಟಲು ಬೇಕಾದ ದಾರವು ಹಾಗೆಯೇ. ಎಲ್ಲವನ್ನೂ ಸಂಗ್ರಹಿಸಿ, ಇಲ್ಲಿ ತಯಾರಿಸಲಾದ ಬೀಡಿಗಳು ದೇಶದ ಹಲವು ರಾಜ್ಯಗಳಿಗೆ ನಿರ್ಯಾತವಾಗುತ್ತದೆ.

-ಪ.ಗೋಪಾಲಕೃಷ್ಣ.
















ಒಂದು ಹಿನ್ನೋಟ...

ಕರಾವಳಿ ಕರ್ನಾಟಕದ ಹಿರಿಯ ಪತ್ರಕರ್ತರಾಗಿದ್ದು, ಆದರ್ಶ, ಸರಳ ಪತ್ರಕರ್ತರೆನಿಸಿಕೊಂಡಿದ್ದ ಶ್ರೀಯುತ ಪದ್ಯಾಣ ಗೋಪಾಲಕೃಷ್ಣ (ಪ.ಗೋ.1928 -1997) ಅವರು ದಿನಾಂಕ 7 ಆಗಸ್ಟ್ 1979 ರಂದು ಸಂಯುಕ್ತ ಕರ್ನಾಟಕ ಬೆಂಗಳೂರು ಆವೃತ್ತಿಯಲ್ಲಿ ಪ್ರಕಟಗೊಂಡ ಅಂದಿನ ಅವಿಭಾಜಿತ ದಕ್ಷಿಣ ಕನ್ನಡ ಜಿಲ್ಲೆಯ ಬಗ್ಗೆ ಬರೆದ ಲೇಖನ ಇದು.

ಶ್ರೀ.ಎಸ್.ಆರ್. ಬಾಲಗೋಪಾಲ್ ಅವರು ಮಂಗಳೂರಿನ ಹಿರಿಯ ಹಾಸ್ಯ ಕಲಾವಿದರು. ಅವರ ಬಗ್ಗೆ ಶ್ರೀ. ಪ. ಗೋ. ತಮ್ಮ ಅಂಕಣ ‘ನೋ ಚೇಂಜ್ ಕಥೆಗಳು’ 21 (ಹೊಟ್ಟೆ ಹುಣ್ಣಾಗಿಸುವುದು ಅಂದರೆ..) ಇದರಲ್ಲಿ ತಿಳಿಸಿದ್ದು ಈ ರೀತಿಯಲ್ಲಿ.

ಅವರ ‘ಜಲ್ಸಿ’ನ ಕಾಲ ಒಂದಿತ್ತು. 60 ರ ದಶಕದಲ್ಲಿ, ತಮ್ಮ ಕಾರ್ಯಕ್ರಮಗಳಿಗೆ ಶ್ರೀ.ಎಸ್.ಆರ್. ಬಾಲಗೋಪಾಲ್ ಅವರನ್ನು ಕರೆಸಲೇ ಬೇಕು ಎಂದು ಹಟ ಹಿಡಿಯುವ ಜನರೂ ಮಂಗಳೂರಿನಲ್ಲಿ ಇದ್ದರು. ಸ್ಟೇಜಿನಲ್ಲಿ ಬಂದು ನಿಂತ ಮೇಲೆ ಅವರು ಯಾವ ಸುದ್ದಿ ತೆಗೆದರೂ, ಯಾವ ವಿಷಯ ಎತ್ತಿಕೊಂಡರೂ, ಹಾಸ್ಯದ ಲಾಸ್ಯ ಅವುಗಳಲ್ಲಿರುತ್ತಿತ್ತು. ಅವರ ನಟನೆಯೂ ಅಷ್ಟೇ ‘ಸ್ವಾಭಾವಿಕ’, ಭಾಷೆ ಗೊತ್ತಿಲ್ಲದವರಿಗೂ ಅರ್ಥವಾಗುವಂಥಾದ್ದು.

Wednesday, March 31, 2010

ಹರೀಶ್ ಆದೂರು ಅವರಿಗೆ ಪ.ಗೋ.ಪ್ರಶಸ್ತಿ ಪ್ರದಾನ

ಮಂಗಳೂರು: 2009ರ ಪ.ಗೋ. ಗ್ರಾಮೀಣ ವರದಿಗಾರಿಕೆ ಪ್ರಶಸ್ತಿಯನ್ನು ಪತ್ರಕರ್ತ,ಪತ್ರಿಕೋದ್ಯಮ ಉಪನ್ಯಾಸಕ ಹರೀಶ್ ಕೆ.ಆದೂರು ಅವರಿಗೆ ರವಿವಾರ 21 ಮಾರ್ಚ್ 2010 ರಂದು ಮಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಪ್ರದಾನಿಸಿ ಗೌರವಿಸಲಾಯಿತು. ಮೇ 26, 2009ರ ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾದ ಮಳೆ ಬಿದ್ದ ಮೇಲೆ ಹೊರಜಗತ್ತಿಗಿವರು ಅಜ್ಞಾತ ವರದಿಗೆ ಪ್ರಶಸ್ತಿ ಲಭಿಸಿತ್ತು.ಕನ್ನಡ ಸಂಸ್ಕೃತಿ ಮತ್ತು ವಾರ್ತಾ ಇಲಾಖೆಯ ಕಾರ್ಯದರ್ಶಿ ಜಯರಾಮರಾಜೆ ಅರಸ್(ಭಾ.ಆ.ಸೇ) ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಪ್ರಶಸ್ತಿ ಪ್ರದಾನ ಮಾಡಿದರು.

ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಾಧ್ಯಮಗಳ ಪಾತ್ರ ಪ್ರಮುಖವಾದುದು. ವ್ಯಕ್ತಿನಿಷ್ಠೆ, ಪಕ್ಷನಿಷ್ಠೆಗಳಿಂದ ಹೊರತಾಗಿ ವೃತ್ತಿನಿಷ್ಠೆಯನ್ನು ಮಾಧ್ಯಮ ಪ್ರತಿನಿಧಿಗಳು ಪಾಲಿಸಬೇಕು. ಗ್ರಾಮೀಣ ಪ್ರದೇಶದ ವರದಿಗಾರರೂ ಅತ್ಯುತ್ತಮ ಕಾರ್ಯಗಳನ್ನು ಮಾಡುತ್ತಾರೆ. ಅಲ್ಲಿ ಗ್ರಾಮೀಣ ವರದಿಗಾರರು, ಜಿಲ್ಲಾ ವರದಿಗಾರರು, ರಾಜ್ಯ ಮಟ್ಟದ ವರದಿಗಾರರು ಎಂಬ ತಾರತಮ್ಯ ಬೇಧ ಭಾವಗಳು ಬೇಡ. ಜನತೆಯೆಡೆಗೆ ಮಾಧ್ಯಮ ಪ್ರತಿನಿಧಿಗಳು ಸಾಗಿ, ಪ್ರತ್ಯಕ್ಷ ವಿಚಾರಗಳನ್ನು ಪರಾಂಬರಿಸಿ ಸತ್ಯಾಸತ್ಯತೆಗಳನ್ನು ಜನತೆಗೆ, ಸರಕಾರಕ್ಕೆ ತಿಳಿಸುವ ಮಹತ್ತರ ಜವಾಬ್ದಾರಿಯನ್ನು ನಿರ್ವಹಿಸಬೇಕೆಂದು ಜಯರಾಮರಾಜೆ ಅರಸ್ ಅಭಿಪ್ರಾಯ ಪಟ್ಟರು.
ರಾಜ್ಯ ಸರಕಾರದಿಂದ ಪ್ರಶಸ್ತಿ

ಇಂದು ರಾಜ್ಯ ಸರಕಾರ ಮಾಡಬೇಕಾದ ಕಾರ್ಯಕ್ರಮವನ್ನು ದ.ಕ.ಜಿಲ್ಲಾ ಪತ್ರಕರ್ತರ ಸಂಘ ಮಾಡುತ್ತಿದೆ. ಗ್ರಾಮೀಣ ಪ್ರದೇಶದ ವರದಿಗಾರರನ್ನು ಗುರುತಿಸಿ ಅವರಿಗೆ ಪ್ರಶಸ್ತಿ ನೀಡುವ ಕಾರ್ಯವನ್ನು ಸಂಘ ನಡೆಸುತ್ತಿದೆ. ಇದೊಂದು ಮಾದರಿ ಕಾರ್ಯಕ್ರಮ. ಮುಂದಿನ ದಿನಗಳಲ್ಲಿ ಸರಕಾರದ ವತಿಯಿಂದ ಇಂತಹ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಜಿಲ್ಲಾ ಮಟ್ಟದಲ್ಲಿ ನಡೆಸಬೇಕಾಗಿದೆ. ಈ ಬಗ್ಗೆ ಸೂಕ್ತ ಮನವರಿಕೆಯನ್ನು ಸರಕಾರಕ್ಕೆ ಮಾಡಲಾಗುವುದು ಎಂದು ಅರಸ್ ಅಭಿಪ್ರಾಯಿಸಿದರು.

ಪಠ್ಯಪುಸ್ತಕಗಳಲ್ಲಿ ಬದಲಾವಣೆ ಬರಲಿ:

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪತ್ರಕರ್ತ ಹರೀಶ್ ಕೆ.ಆದೂರು ಅವರು ಇಂದು ಪತ್ರಿಕೋದ್ಯಮ ವಿಭಾಗದ ಪಠ್ಯಕ್ರಮಗಳಲ್ಲಿ ಸೂಕ್ತ ಬದಲಾವಣೆ ಆಗಬೇಕಾಗಿದೆ. ವಿ.ವಿ.ಗಳು ಈ ಬಗ್ಗೆ ಗಮನ ಹರಿಸಬೇಕಾಗಿದೆ. ಮಾಧ್ಯಮ ಜಗತ್ತು ಕ್ಷಿಪ್ರ ಪ್ರಗತಿಯನ್ನು ಕಾಣುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ ಪತ್ರಿಕೋದ್ಯಮ ಪಠ್ಯಕ್ರಮದಲ್ಲೂ ಅಂತಹುದೇ ಬದಲಾವಣೆ ಬರಬೇಕಾಗಿದೆ ಎಂದು ಅಭಿಪ್ರಾಯಿಸಿದರು.

ಹೆತ್ತವರಿಗೆ ಸಮರ್ಪಣೆ:

ಪ್ರತಿಷ್ಠಿತ ಪ.ಗೋ.ಪ್ರಶಸ್ತಿಗೆ ಭಾಜನರಾದ ಹರೀಶ್ ಕೆ.ಆದೂರು ಪ್ರಶಸ್ತಿಯನ್ನು ತನ್ನ ಹೆತ್ತವರಿಗೆ ಸಮರ್ಪಿಸಿದರು. ತನ್ನ ಇಂದಿನ ಈ ಸಾಧನೆಗೆ ಹೆತ್ತವರೇಕಾರಣ. ಆ ಕಾರಣಕ್ಕಾಗಿ ಪ್ರಶಸ್ತಿಯನ್ನು ಅವರಿಗೆ ಸಮರ್ಪಿಸುವುದಾಗಿ ಈ ಸಂದರ್ಭದಲ್ಲಿ ಘೋಷಿಸಿದರು.

ಪ್ರಶಸ್ತಿ ಮೊತ್ತ ರೂ.5001/- , ಪ್ರಶಸ್ತಿ ಪತ್ರ, ಹಾಗೂ ಸ್ಮರಣಿಕೆಗಳನ್ನು ಒಳಗೊಂಡಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಹರ್ಷ ವಹಿಸಿದ್ದರು. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಗುರುವಪ್ಪ ಎನ್,ಟಿ,ಬಾಳೇಪುಣಿ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.ಸಂಘದ ಸದಸ್ಯ ಪುಷ್ಪರಾಜ್ ವಂದಿಸಿದರು.

Visitors to this page