Thursday, March 22, 2012

ಪ.ಗೋ.ಪ್ರಶಸ್ತಿಗೆ ಸ್ಟೀವನ್ ರೇಗೊ ಆಯ್ಕೆ


..ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನೀಡಲಾಗುವ .ಗೋ.ಗ್ರಾಮೀಣ ವರದಿಗಾರಿಕೆ ಪ್ರಶಸ್ತಿಗೆ ೨೦೧೧ನೇ ಸಾಲಿನಲ್ಲಿ ಪತ್ರಕರ್ತ ಸ್ಟೀವನ್ ರೇಗೊ ಆಯ್ಕೆಯಾಗಿದ್ದಾರೆ. ಅಕ್ಟೋಬರ್ 31,2011 ರಂದು ವಿಜಯಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾದ ಅವರನಂದಿನಿ ಮಾಯವಾಗುವ ಮುನ್ನ...’ ವರದಿಗೆ ಪ್ರಶಸ್ತಿ ಲಭಿಸಿದೆ

ಪ್ರಶಸ್ತಿ ಪ್ರದಾನ ಸಮಾರಂಭ 2012 ಮಾರ್ಚ್ 26ರ ಸೋಮವಾರ ಪೂವಾಹ್ನ 10.30 ಗಂಟೆಗೆ ಮಂಗಳೂರು ಪತ್ರಿಕಾ ಭವನದಲ್ಲಿ ನಡೆಯಲಿದೆ. ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಉಮಾನಾಥ ಕೋಟ್ಯಾನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ

ಪ್ರಶಸ್ತಿಯು ರೂ.5001/, ಪ್ರಶಸ್ತಿ ಪತ್ರ, ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ. ಪ್ರಶಸ್ತಿ ಮೊತ್ತವನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಪ್ರಾಯೋಜಿಸುತ್ತಿದ್ದಾರೆ ಎಂದು ..ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ನಾಯಕ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಸ್ಟೀವನ್ ರೇಗೊ ಕಳೆದ ಐದು ವರ್ಷಗಳಿಂದ ಮಂಗಳೂರು ವಿಜಯ ಕರ್ನಾಟಕ ಬ್ಯೂರೋದಲ್ಲಿ ಉಪಸಂಪಾದಕ ಹಾಗೂ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ. ಕೋಡಿಂಬಾಡಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣದ ಜತೆಗೆ ಸಂತ. ಫಿಲೋಮಿನಾ ಕಾಲೇಜು ಪದವಿ ಪೂರೈಸಿಕೊಂಡು ನಂತರ ಮಂಗಳೂರು ವಿವಿಯಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡಿದ್ದಾರೆ.

ಇವರು ಪುತ್ತೂರಿನ ದಾರಂದಕುಕ್ಕು ನಿವಾಸಿ ಇಗ್ನೇಶಿಯಸ್ ರೇಗೊ ಹಾಗೂ ಹಿಲ್ಡಾ ರೇಗೊ ದಂಪತಿಗಳ ಹಿರಿಯ ಪುತ್ರ. ಇವರ ಮತ್ತೊಬ್ಬ ಸಹೋದರ ಸುನೀಲ್ ರೇಗೊ ಭಾರತೀಯ ಭೂ ಸೇನೆಯಲ್ಲಿ ಕೆಲಸ ಮಾಡುತ್ತಿದ್ದಾರೆ.


Saturday, May 21, 2011

ದಕ್ಷಯಜ್ಞ ಯಕ್ಷಗಾನ ನೋಡಿ‌ ಖುದ್ದು ಕ್ರುಶ್ಚೇವ್ ಕೈಕುಲುಕಿದ್ದರು!




ಅಭಿನಯದ ಸಹಜತೆ, ಅರ್ಥಗಾರಿಕೆಯಲ್ಲಿನ ಪಾತ್ರೌಚಿತ್ಯಗಳನ್ನು ಸದಾ ಕಾಪಾಡಿಕೊಂಡು ಬಂದ ಅಜಾತಶತ್ರು, ಯಕ್ಷಗಾನ ಹಾಸ್ಯ ಕಲಾವಿದ ಪೆರುವೋಡಿ ನಾರಾಯಣ ಭಟ್ಟರದ್ದು ಯಕ್ಷಲೋಕದಲ್ಲಿ ದೊಡ್ಡ ಹೆಸರು.  ಕಡಲ ತೀರದ ಭಾರ್ಗವ ಡಾ.ಶಿವರಾಮ ಕಾರಂತರು ಚಿತ್ರೀಕರಿಸಿದ ಯಕ್ಷಗಾನ ಸಿನಿಮಾದಿಂದ ಹಿಡಿದು ಯಕ್ಷಗಾನದ ಯಾವುದೇ ಪ್ರಸಂಗಕ್ಕೂ ಸೈ ಎನ್ನುವ ಭಟ್ಟರನ್ನು ಹಲವು ಪ್ರಶಸ್ತಿ, ಪುರಸ್ಕಾರಗಳು ಅರಸಿಕೊಂಡು ಬಂದಿದೆ. ಈ ಯಕ್ಷರಂಗದ ದಿಗ್ಗಜ ಪತ್ರಿಕೋದ್ಯಮದ ಇನ್ನೋರ್ವ ದಿಗ್ಗಜ ಪ.ಗೋಪಾಲಕೃಷ್ಣರ ಕುರಿತು ಆತ್ಮೀಯತೆಯಿಂದ ಬರೆದ ಪ.ಗೋ ಕುರಿತಾದ ಭಟ್ಟರ ಮಾತುಗಳು ನಿಮಗಿಷ್ಟವಾದೀತು.


ದಕ್ಷಯಜ್ಞ ಯಕ್ಷಗಾನ ನೋಡಿ‌ ಖುದ್ದು ಕ್ರುಶ್ಚೇವ್ ಕೈಕುಲುಕಿದ್ದರು


1955ನೇ ಇಸ್ವಿ ಸೆಪ್ಟೆಂಬರ್ ತಿಂಗಳಲ್ಲಿ ಒಂದು ದಿವಸ ಪದ್ಯಾಣ ಗೋಪಾಲಕೃಷ್ಣ ನಮ್ಮ ಮನೆಯಲ್ಲಿ ಪ್ರತ್ಯಕ್ಷನಾದ. ಆತ ಮೈಸೂರಿನಿಂದ ಬಂದಿದ್ದ. ಪ್ರಸಿದ್ಧ ದಸರಾ (ವಸ್ತು ಪ್ರದರ್ಶನ)ದಲ್ಲಿ ಒಂದು ಯಕ್ಷಗಾನ ಬಯಲಾಟ ಪ್ರದರ್ಶನವನ್ನು ಏರ್ಪಾಡು ಮಾಡುವ ಪೂರ್ವ ಸಿದ್ಧತೆಗಾಗಿ ಆತ ಬಂದಿದ್ದ. ಧರ್ಮಸ್ಥಳ ಮೇಳದ ವ್ಯವಸ್ಥಾಪಕ ಸ್ಥಾನದಲ್ಲಿದ್ದ ಹಿರಿಯ ಕಲಾವಿದ ಕುರಿಯ ವಿಠಲಶಾಸ್ತ್ರಿ ಮೊದಲಾದವರನ್ನೆಲ್ಲ ಭೇಟಿ ಮಾಡಿಕೊಂಡೇ, ಆ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ನನ್ನನ್ನು ಆಹ್ವಾನಿಸಲು ಬಂದಿದ್ದ.

 
ಗೆಜ್ಜೆ ಬಿಚ್ಚಿ ಇರಿಸಿದ ದಿನಗಳವು. ಎಂದರೆ ವಾರ್ಷಿಕ ತಿರುಗಾಟ ಮುಗಿಸಿಕೊಂಡು, 'ಪತ್ತನಾಜೆ'ಗೆ, ದೇವಸ್ಥಾನಕ್ಕೆ ಪೆಟ್ಟಿಗೆ ಸಹಿತ ಹಿಂದಿರುಗಿದ ಮೇಲೆ, ಮುಂದೆ 'ದೀಪಾವಳಿ' ತರುವಾಯವೇ ಆಟ-ತಿರುಗಾಟ ಪ್ರಾರಂಭವಾಗುವುದು ಮೇಳದ ಕಟ್ಟಳೆಯಾಗಿತ್ತು. ಈ ಸಂಪ್ರದಾಯವನ್ನು ಮೀರುವುದು ಸಾಧ್ಯವಿರಲಿಲ್ಲ. ಈ ವಿಚಾರ ತಿಳಿದಿದ್ದ ಗೋಪಾಲಕೃಷ್ಣ 'ಇದು ಮೇಳ ಅಲ್ಲ, ತಿರುಗಾಟವೂ ಅಲ್ಲ, ಕೆಲವು ಕಲಾವಿದರನ್ನು (ವೇಷಧಾರಿಗಳು) ವೇಷಭೂಷಣ- ಕಿರೀಟ ಇತ್ಯಾದಿ ಸಲಕರಣೆಗಳನ್ನು ಎರವಲು ಪಡೆದುಕೊಂಡು ಹೋಗುತ್ತಿರುವುದು' ಎಂದಿತ್ಯಾದಿಯಾಗಿ ವಿವರಣೆ ನೀಡಿ ಮೇಳದ ಕೃಪಾ ಪೋಷಕರಾದ ಧರ್ಮಾಧಿಕಾರಿಗಳ ಅಪ್ಪಣೆ ಪಡೆದುಕೊಂಡಿದ್ದ. ಇನ್ನೊಂದು ಪ್ರಬಲವಾದ ಕಾರಣವೆಂದರೆ, 'ಜಗದ್ವಿಖ್ಯಾತ ಮೈಸೂರು ದಸರಾ'ದಲ್ಲಿ ಆಟ ಆಡಲು ಮೈಸೂರು ಸರಕಾರದ ವತಿಯಿಂದ ಬಂದ ಆಹ್ವಾನವನ್ನು ಮಾನ್ಯ ಮಾಡದೆ ಇರುವುದು ಸೌಜನ್ಯವಲ್ಲ-200 ವರ್ಷಗಳ ಹಿಂದೊಮ್ಮೆ 'ಅರಮನೆ'ಯ ಆಮಂತ್ರಣದ ಮೇರೆಗೆ, ದರ್ಬಾರ್ ನಲ್ಲಿ ಆಡಿದ ಬಯಲಾಟದ ತರುವಾಯ ದೊರಕಿದ ಮೊದಲ ಆಹ್ವಾನ ಇದು. ಗೌರವಾಸ್ಪದ ಅಂಶ ಎಂದು ವಿವರಣೆ ನೀಡಿ, ಅವರ ಮನಒಲಿಸುವುದರಲ್ಲಿ ಪ.ಗೋ.ಯಶಸ್ವಿಯಾಗಿದ್ದ.




ಪ್ರಸಂಗವನ್ನು ಎರಡು ಗಂಟೆಗಳ ಮಿತಿಯಲ್ಲಿ ಪ್ರದರ್ಶಿಸಿದ್ದಾಯಿತು. ಆಟ ಚೆನ್ನಾಗಿ ಆಯಿತು. ಪ್ರೇಕ್ಷಕರ ಮನಸ್ಸನ್ನು ಸೂರೆಗೊಂಡಿತು-ಯಕ್ಷಗಾನದ ಭಾಷೆಯಲ್ಲೇ ಹೇಳುವುದಾದರೆ 'ಜಯಜಯಾ' ಎನ್ನಿಸಿತು.(ಆ ಪ್ರಸಂಗದಲ್ಲಿ ನಾನು ಹಾಸ್ಯ ಪಾತ್ರವಹಿಸಿದ್ದೆ) ಮರುದಿನ ಒಂದು ತಾಳಮದ್ದಲೆ ಕಾರ್ಯಕ್ರಮ. ಪಿಟೀಲು ಚೌಡಯ್ಯನವರ 'ಅಯ್ಯನಾರ್ ಕಲಾಶಾಲೆ'ಯಲ್ಲಿ ನಡೆಯಿತು. ಹಿರಿಯ ಕವಿ ಪ್ರೊ.ಗೋಪಾಲಕೃಷ್ಣ ಅಡಿಗರು ಅಧ್ಯಕ್ಷರಾಗಿದ್ದರು. ಆಗ ಮೈಸೂರಿನಲ್ಲಿ ವೈದ್ಯಕೀಯ ವಿದ್ಯಾಭ್ಯಾಸ ಮಾಡುತ್ತಿದ್ದ ಎಂ.ಬಿ.ಮರಕಿಣಿ ಮತ್ತು ಕೆ.ಆರ್.ಗೋಪಾಲ ಕೃಷ್ಣಯ್ಯ(ಕೀಲಾರು) ಇವರ ಕೋಣೆಯಲ್ಲಿ ಪ.ಗೋ.ತಾತ್ಕಾಲಿಕವಾಗಿ ಠಿಕಾಣಿ ಹೂಡಿದ್ದು ಈ ಎಲ್ಲ ಸಾಧನೆಗಳ ಹಿಂದೆ ಅವರ ಪೂರ್ಣ ಸಹಯೋಗವಿತ್ತು.


ದಸರೆಯ ಆಟದ ಯಶಸ್ಸಿನ ಸುದ್ದಿ ಬೆಂಗಳೂರಿಗೆ ತಲುಪುವುದು ತಡವಾಗಲಿಲ್ಲ. ಇಷ್ಟರಲ್ಲೇ ರಷ್ಯಾದೇಶದ (ಆಗಿನ ಯು.ಎಸ್.ಎಸ್.ಆರ್.) ಪ್ರಧಾನ ಮಾರ್ಶಲ್ ಬುಲ್ಗಾನಿನ್ ಮತ್ತು (ಸರ್ವೋಚ್ಛ ಮುಖಂಡ) ಕಾಮ್ರೇಡ್ ಕ್ರುಶ್ಚೇವ್ ಬೆಂಗಳೂರಿಗೆ ಭೇಟಿ ನೀಡುವ ಕಾರ್ಯಕ್ರಮವಿತ್ತು. ಆ ಸಂದರ್ಭದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಧರ್ಮಸ್ಥಳದ ಯಕ್ಷಗಾನ ಬಯಲಾಟವನ್ನು ಪ್ರದರ್ಶಿಸಲು ಆಹ್ವಾನ ಬರಲು ಮತ್ತೊಮ್ಮೆ ಪ.ಗೋ.ಚುರುಕಾಗಿ ಓಡಾಡಿದ. ಲಾಲ್ ಬಾಗ್ ನ ಗಾಜಿನ ಮನೆಯಲ್ಲಿ ನಡೆದ ಸಾಂಸ್ಕೃಕ ಸಂಜೆಯಲ್ಲಿ 'ದಕ್ಷಯಜ್ಞ' ಪ್ರಸಂಗವನ್ನು ಆಡಿ ತೋರಿಸುವುದಕ್ಕೆ 10 ನಿಮಿಷಗಳ ಕಾಲಾವಧಿಯನ್ನು ನಿಗದಿ ಮಾಡಿದ್ದರು! ( ಆ ರಸ ಸಂಜೆಯಲ್ಲಿನ ಕಾರ್ಯಕ್ರಮಗಳಲ್ಲಿ 10 ನಿಮಿಷದ ಕಾಲಾವಧಿ ವೀಣೆ ದೊರೆಸ್ವಾಮಿಯವರ ಪಂಚವೀಣಾವಾದನಕ್ಕೂ, ಜೌಡಯ್ಯನವರ ಪಿಟೀಲಿಗೂ ದೊರಕಿದ್ದು. ಮೂರನೇ 10 ನಿಮಿಷ ಅವಧಿಯ ಕಾರ್ಯಕ್ರಮವೆಂದರೆ ನಮ್ಮ ದಕ್ಷಯಜ್ಞ ಬಯಲಾಟವೇ).



ಗೋಪಾಲಕೃಷ್ಣನಿಗಿದ್ದ ಸಿನಿಮಾ ತಯಾರಿಕೆಯ ಅನುಭವದಿಂದ ಒಂದು ಕ್ಷಣವನ್ನೂ ವ್ಯರ್ಥಗೊಳಿಸದೆ ಹತ್ತೇ ನಿಮಿಷಗಳ ಕಾಲಾವಧಿಯಲ್ಲಿ 'ದಕ್ಷಯಜ್ಞ' ಕಥಾ ಭಾಗದ ಪ್ರಮುಖ ಘಟನೆಯನ್ನು ಆಡಿತೋರಿಸುವುದು ಸಾಧ್ಯವಾಯಿತು- ಅಷ್ಟೇ ಅಲ್ಲದೆ ಆಟದ ಪ್ರದರ್ಶನವನ್ನು ನೋಡಿ ವಿದೇಶೀ ಅತಿಥಿಗಳೂ, ಸಾವಿರಾರು ಪ್ರೇಕ್ಷಕರೂ ಸಂತೋಷ ಭರಿತರಾದರು. ವಿಠಲ ಶಾಸ್ತ್ರಿಗಳು ಈಶ್ವರನ ಪಾತ್ರದಲ್ಲಿ, ಕೋಳ್ಯೂರು ರಾಮಚಂದ್ರ ಪಾರ್ವತಿಯಾಗಿ, ಬಣ್ಣದ ಮಾಲಿಂಗ ವೀರಭದ್ರನಾಗಿ ನೀಡಿದ ಅಭಿನಯ, ಆ ಚೆಂಡೆಮದ್ದಲೆ, ತಾಳ-ಚಕ್ರತಾಳಗಳ ಹಿಮ್ಮೇಳ, ದೀವಟಿಗೆ, ದೊಂದಿ-ರಾಳದ ಹುಡಿಹಾರಿಸಿದ ಕುಣಿತ ಅದ್ಬುತವಾಗಿತ್ತು. ಅತಿಥಿ ಕ್ರುಶ್ಚೇವ್ ಕುಳಿತಲ್ಲಿಂದ ಎದ್ದು ರಂಗಸ್ಥಳದ ಮೇಲೆ ಬಂದು ಕಲಾವಿರ ಕೈಕುಲುಕಿ ಅಭಿನಂದಿಸಿದರು. ಫೋಟೋ ತೆಗೆಸಿದರು. ದಿನಾಂಕ 29-11-55ರ ತಾಯಿನಾಡು ದಿನ ಪತ್ರಿಕೆಯಲ್ಲಿ ಈ ಚಿತ್ರ ಪ್ರಕಟವಾಯಿತು.

ಮರುದಿನ ಸಂಜೆ ಕನ್ನಡ ಸಾಹಿತ್ಯ ಪರಿಶತ್ತಿನಲ್ಲಿ ಪೆರ್ವೊಡಿ ಸಂಕಯ್ಯ ಭಾಗವತ ವಿರಚಿತ ಪ್ರಸಂಗವನ್ನೂ ರಾತ್ರೆ ಮಲ್ಲೇಶ್ವರದ ಕೆನರಾಹಾಲ್ ನಲ್ಲಿ ಕರ್ಣಾವಸಾನ ಪ್ರಸಂಗವ್ನೂ ಆಡಿ ತೋರಿಸುವ ಮೂಲಕ ಮೈಸೂರು ರಾಜ್ಯದ ರಾಜಧಾನಿ ಬೆಂಗಳೂರಲ್ಲಿ ದಕ್ಷಿಣ ಕನ್ನಡದ 'ಯಕ್ಷಗಾನ ಬಯಲಾಟ'ಕ್ಕೊಂದು ಸ್ಥಿರವಾದ ಸ್ಥಾನ ದೊರಕುವಂತಾಯಿತು. ಈ ರೀತಿ, ಬೆಂಗಳೂರು-ಮೈಸೂರಲ್ಲಿ ಯಕ್ಷಗಾನ ಬಯಲಾಟದ ಕೇಳಿ ಬಂಡಿದ ಮೊದಲಿಗ ಪ.ಗೋಪಾಲಕೃಷ್ಣ ಎಂಬುದೂ, ಆತ ನನ್ನ ಸಹೋದರ ಎಂಬೂದೂ ನನಗೊಂದು ಹೆಮ್ಮೆಯ ವಿಚಾರವಾಗಿರುತ್ತದೆ.

ಮುಂದೆ ಪ.ಗೋ. ನೇತೃತ್ವದಲ್ಲಿ, ಭಾರತ ಸರಕಾರದ ಆಹ್ವಾನದ ಮೇರೆಗೆ ದೆಹಲಿಯಲ್ಲಿ ಕೂಡ ಬಯಲಾಟ ಪ್ರದರ್ಶನ ನೆಡಯಿತು. ಸುಪ್ರಸಿದ್ಧ ಆಂಗ್ಲ ಸಾಪ್ತಾಹಿಕ 'ಇಲೆಸ್ಟ್ರೇಟೆಡ್ ವೀಕ್ಲಿ’ ಮೊದಲಾದ ಪತ್ರಿಕೆಗಳಲ್ಲಿ ವಿಸ್ತೃತವಾದ ಸಚಿತ್ರ ಬರಹಗಳೂ ಪ್ರಕಟವಾದವು. ಆಕಾಶವಾಣಿಯಲ್ಲಿ ಅನೇಕ ತಾಳಮದ್ದಳೆ ಕಾರ್ಯಕ್ರಮಗಳನ್ನು ಸಹ ಪ.ಗೋ.ಬಿತ್ತರಿಸಿದರು.

-ಪೆರುವೋಡಿ ನಾರಾಯಣ ಭಟ್ಟ
















ದಿವಂಗತ ಪದ್ಯಾಣ ಭೀಮ ಭಟ್ಟ ಮತ್ತು ಶ್ರೀಮತಿ ಗುಣವತಿ ಅಮ್ಮ ಅವರ ದ್ವಿತೀಯ ಪುತ್ರ 1927ರಲ್ಲಿ ಜನಿಸಿದ ಪೆರುವೋಡಿ ನಾರಾಯಣ ಭಟ್ಟರು ಹಿರಿಯ ಯಕ್ಷಾಗನ ಕಲಾವಿದ ಕೀರ್ತಿಶೇಷ ಕುರಿಯ ವಿಠಲ ಶಾಸ್ತ್ರಿಯವರಿಂದ ಪ್ರಭಾವಿತರಾಗಿ ಯಕ್ಷಗಾನ ರಂಗಕ್ಕೆ ಪಾದಾರ್ಪಣೆ ಮಾಡಿದರು. ಸುಮಾರು 49 ವರ್ಷಗಳ ಯಕ್ಷಗಾನ ಯಾತ್ರೆಯಲ್ಲಿ ಶ್ರೀ ಧರ್ಮಸ್ಥಳ ಮೇಳ, ಮೂಲ್ಕಿ ಮೇಳ, ಕೂಡ್ಲು ಮೇಳ, ಸುರತ್ಕಲ್ ಮೇಳ, ಬಡಗಿನ ಅಮೃತೇಶ್ವರೀ ಮೇಳ, ನಂದಾವರ ಮೇಳ, ಕದ್ರಿ ಮೇಳ, ಕುಂಬಳೆ ಮೇಳ, ಬಪ್ಪನಾಡು...ಹೀಗೆ ವಿವಿಧ ಯಕ್ಷಗಾನ ಮೇಳಗಳಲ್ಲಿ ಕಲಾವಿದರಾಗಿ ಸೇವೆ ಸಲ್ಲಿಸಿದ್ದಾರೆ.


ಶೇಣಿ ದತ್ತಿ ಪುರಸ್ಕಾರ, ಕುರಿಯ ಪ್ರಶಸ್ತಿ, ಉಡುಪಿ ಕಲಾರಂಗ ಪ್ರಶಸ್ತಿ, ಕರ್ಗಲ್ಲು ಸುಬ್ಬಣ್ಣ ಭಟ್ ಪ್ರಶಸ್ತಿ, ಪಾತಾಳ ಪ್ರಶಸ್ತಿಯಂತಹ ಪ್ರತಿಷ್ಠಿತ ಗೌರವಗಳ ಜೊತೆಗೆ ಪೆರುವೋಡಿ ನಾರಾಯಣ ಭಟ್ಟರು 2010 ರಲ್ಲಿ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ವಿಜೇತರು. ಲೇಖಕ , ಪತ್ರಕರ್ತ-ಯಕ್ಷಗಾನ ಪ್ರೇಮಿ ನಾ. ಕಾರಂತ ಪೆರಾಜೆಯವರು ಬರೆದು ಪುತ್ತೂರಿನ ಕರ್ನಾಟಕ ಸಂಘ ಪ್ರಕಟಿಸಿದ ನಾರಾಯಣ ಭಟ್ಟರ ಜೀವನಗಾಥೆ `ಹಾಸ್ಯಗಾರನ ಅಂತರಂಗ' .

Monday, April 11, 2011

ಅಂದು 1963 ನೇ ಇಸವಿಯಲ್ಲಿ ಕರಾವಳಿ ಕರ್ನಾಟಕದ "ನಮ್ಮ ಮಂಗಳೂರು" ಹೀಗಿತ್ತು.


ಬೆಂಗಳೂರಿನಲ್ಲಿದ್ದ ನಾಡಿನ ಹಿರಿಯ ಪತ್ರಕರ್ತ, ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ನಿವೃತ್ತ ಸ್ಥಾನಿಕ ಸಂಪಾದಕ ಶ್ರೀ. ಹೆಚ್.ಆರ್.ನಾಗೇಶರಾವ್ ಸಂಗ್ರಹದಲ್ಲಿ ಲಭ್ಯವಾದ ಶ್ರೀ. ಪದ್ಯಾಣ ಗೋಪಾಲಕೃಷ್ಣ ( ಪ.ಗೋ.) ಅವರ ಸಂಪಾದಕತ್ವದಲ್ಲಿ ಪ್ರಕಟವಾಗುತಿದ್ದ ಮಂಗಳೂರಿನ ಅಂದಿನ ಕನ್ನಡ ಸಂಜೆ ದಿನಪತ್ರಿಕೆ "ವಾರ್ತಾಲೋಕ" ದಿನಾಂಕ 14 ಡಿಸೆಂಬರ್ 1963 ರ ಆವೃತ್ತಿಯಿಂದ ತಿಳಿದುಬಂದ ಮಾಹಿತಿ.

1 .ಬ್ಯಾಂಕ್ ನ ಗ್ರಾಹಕರ ಜೊತೆಗೆ ಗ್ರಾಹಕರಲ್ಲದ ಬ್ಯಾಂಕ್ ನ ಬಳಿ ಬಂದ 'ದನ'ದ ಸೇವೆ ಮಾಡುವ ಅಂದಿನ ಬ್ಯಾಂಕ್ ಸಿಬ್ಬಂದಿಗಳು.

2 . ಊರಿನ ಕ್ರಿಕೆಟ್ ತಂಡಕ್ಕೆ ಕರಾವಳಿಯ ಗಂಡುಗಲೆ ಯಕ್ಷಗಾನದ ಸಹಾಯ.


ಚಿತ್ರ ಕೃಪೆ : ಶ್ರೀ. ಹಾಲ್ದೊಡ್ಡೇರಿ ಸುಧೀಂದ್ರ , ಬೆಂಗಳೂರು

Tuesday, March 22, 2011

ಪತ್ರಕರ್ತರಲ್ಲಿ ಸಕಾರಾತ್ಮಕ ಧೋರಣೆಯ ಅಗತ್ಯವಿದೆ- ಲಕ್ಷ್ಮೀ ಮಚ್ಚಿನ ಅವರಿಗೆ ಪ.ಗೋ.ಪ್ತಶಸ್ತಿ ಪ್ರದಾನಿಸಿ ಸಚಿವ ಆಚಾರ್ಯ

ಮಂಗಳೂರು: ಪತ್ರಕರ್ತರು ಸರಕಾರದ ಯಾವುದೇ ಯೋಜನೆಗಳ ಬಗ್ಗೆ ಸಾರ್ವಜನಿಕ ಅಭಿಪ್ರಾಯ ಮೂಡಿಸುವ ಮೊದಲು ವ್ಯಾಪಕ ಅಧ್ಯಯನ ನಡೆಸಬೇಕು ಎಂದು ರಾಜ್ಯ ಉನ್ನತ ಶಿಕ್ಷಣ ಹಾಗೂ ಮುಜರಾಯಿ ಸಚಿವ ವಿ.ಎಸ್.ಆಚಾರ್ಯ ಅವರು ಹೇಳಿದ್ದಾರೆ.

ಅವರು ಮಾ.೨೦ ರಂದು ಅಪರಾಹ್ಣ ಮಂಗಳೂರಿನ ಪತ್ರಿಕಾಭವನದಲ್ಲಿ ಉದಯವಾಣಿ ಪತ್ರಿಕೆಯ ಬೆಳ್ತಂಗಡಿ ತಾಲೂಕು ವರದಿಗಾರ,ಬೆಳ್ತಂಗಡಿ ತಾಲೂಕು ಪತ್ರಕರ್ತ ಸಂಘದ ಸದಸ್ಯ ಲಕ್ಷ್ಮೀ ಮಚ್ಚಿನ ಅವರಿಗೆ ಗ್ರಾಮೀಣ ವರದಿಗಾರಿಕೆಗೆ ಕೊಡಮಾಡುವ ಪ.ಗೋ.ಪ್ರಶಸ್ತಿಯನ್ನು ಪ್ರದಾನಿಸಿ ಮಾತನಾಡುತ್ತಿದ್ದರು.

ಸರಕಾರ ಎಷ್ಟೇ ಅಭಿವೃದ್ದಿ ಕಾರ್ಯಗಳನ್ನು ಕೈಗೆತ್ತಿಕೊಂಡರೂ ಅದರಲ್ಲಿ ಕಳಚುತ್ತಿರುವ ಕೊಂಡಿಗಳು ಇವೆ ಎಂಬುದನ್ನು ಮನವರಿಕೆ ಮಾಡಿಕೊಟ್ಟವರು ಪತ್ರಕರ್ತರು.ನನಗೆ ಪತ್ರಿಕಾರಂಗದ ಬಗ್ಗೆ ಅಪಾರ ಗೌರವವಿದೆ. ಆದರೆ ಇಂದಿನ ಫ್ರೀ ಪ್ರೆಸ್ ವರದಿಗಾರಿಕೆಯ ಸ್ವಾತಂತ್ರ್ಯ ಎಷ್ಟರ ಮಟ್ಟಿಗೆ ಎಲ್ಲಿಯವರೆಗೆ ಮುಟ್ಟಿದೆ ಎಂಬುದರ ಬಗ್ಗೆ ಚಿಂತೆಯಾಗುತ್ತದೆ. ಇಂದು ನಾವೊಂದು ವಿಕ್ಷಿಪ್ತ ವಾತಾವರಣದಲ್ಲಿದ್ದೇವೆ. ಸರಕಾರಗಳು ಇನ್ನೂ ಮೂಲಭೂತ ಸೌಕರ್ಯವನ್ನು ಅಭಿವೃದ್ದಿ ಪಡಿಸುವಲ್ಲಿ ಇನ್ನೂ ಹಿಂದೆ ಬಿದ್ದಿದೆ ಎಂದು ಆಚಾರ್ಯ ಹೇಳಿದರು.

ಪತ್ರಕರ್ತರು ಅಭಿವೃದ್ಧಿಯ ಬಗೆಗಿನ ಕಲ್ಪನೆಗಳನ್ನು ವಸ್ತುಸ್ಥಿತಿಗೆ ತಕ್ಕಂತೆ ಬಿಂಬಿಸಬೇಕು. ಸಕಾರಾತ್ಮಕ ಧೋರಣೆಯ ಅಗತ್ಯವಿದೆ. ಒಂದು ಸುದ್ದಿಗೆ ಅನೇಕ ಮಗ್ಗಲುಗಳು ಇರುತ್ತವೆ ಎಂಬುದನ್ನು ಗಮನಿಸಬೇಕು. ಸರಕಾರಕ್ಕೆ ಅಭಿವೃದ್ಧಿಗೆ ಅಪಾರ ಅವಕಾಶಗಳಿದ್ದರೂ ಆಡಳಿತಾತ್ಮಕ ಇತಿಮಿತಿಗಳಿವೆ ಮತ್ತು ಆದ್ಯತೆ ಮತ್ತು ಸಾಧ್ಯತೆಗಳ ಬಗ್ಗೆ ಆಲೋಚಿಸಬೇಕಾಗುತ್ತದೆ ಎಂದು ಆಚಾರ್ಯ ವಿವರಿಸಿದರು.

ಲಕ್ಷ್ಮೀ ಮಚ್ಚಿನ ಅವರು ಸಣ್ಣ ವಯಸ್ಸಿನಲ್ಲೇ ತಮ್ಮ ಪ್ರತಿಭೆ ತೋರಿಸಿದ್ದಾರೆ. ಇತರ ಪತ್ರಕರ್ತರು ಇವರಿಂದ ಸ್ಪೂರ್ತಿ ಪಡೆಯಲಿ ಎಂದು ಸಚಿವರು ಹಾರೈಸಿದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಲಕ್ಷ್ಮೀ ಮಚ್ಚಿನ ಅವರು ವಿವಿಧ ಸಮಸ್ಯೆಗಳ ಬಗ್ಗೆ ವರದಿಗಾರರು ಪತ್ರಿಕೆಯ ಮೂಲಕ ಬರೆಯುತ್ತಾರೆ. ಇದನ್ನು ಸರಕಾರ ಗಂಭೀರವಾಗಿ ಪರಿಗಣಿಸಿ ಸ್ಪಂದಿಸಿ ಸಮಸ್ಯೆಗಳನ್ನು ಪರಿಹರಿಸಬೇಕು ಅಗ ಮಾತ್ರ ಈ ಪ್ರಶಸ್ತಿಗಳಿಗೆ ಗೌರವ ಬರುತ್ತದೆ ಎಂದರು.

ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಡೆದ ಈ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಹರ್ಷ,ಪ್ರಧಾನ ಕಾರ್ಯದರ್ಶಿ ಗುರುವಪ್ಪ ಟಿ.ಬಾಳೇಪುಣಿ, ಪ.ಗೋ.ಪ್ರಶಸ್ತಿ ಟ್ರಸ್ಟ್ ಸ್ಥಾಪಕ ಹಿರಿಯ ಪತ್ರಕರ್ತ ನರಸಿಂಹ ರಾವ್ ವೇದಿಕೆಯಲ್ಲಿದ್ದರು.
ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಆನಂದ ಶೆಟ್ಟಿ ಪ್ರಶಸ್ತಿ ಬಗ್ಗೆ ಪ್ರಸ್ತಾವಿಸಿದರು. ಸದಸ್ಯ ಪಿ.ಬಿ.ಹರೀಶ್ ರೈ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.

ಪದ್ಯಾಣ ಗೋಪಾಲಕೃಷ್ಣ ಭಟ್ ಹೆಸರಿನಲ್ಲಿ ನೀಡುತ್ತಿರುವ ಪ.ಗೋ ಪ್ರಶಸ್ತಿಯನ್ನು ಕಳೆದ ಹಲವಾರು ವರ್ಷಗಳಿಂದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ನೀಡುತ್ತಿದ್ದು ಪ್ರಶಸ್ತಿಯು ಸ್ಮರಣಿಕೆ ಹಾಗೂ ರೂ.೫೦೦೧ ನ್ನು ಒಳಗೊಂಡಿದೆ. ಪ್ರಶಸ್ತಿಯ ಮೊತ್ತವನ್ನು ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಪ್ರಾಯೋಜಿಸುತ್ತಿದ್ದಾರೆ. ಲಕ್ಷ್ಮೀ ಮಚ್ಚಿನ ಅವರಿಗೆ ಉದಯವಾಣಿ ಪತ್ರಿಕೆಯಲ್ಲಿ ಮುಖಪುಟದಲ್ಲಿ ಪ್ರಕಟಗೊಂಡ ಬಾಂಜಾರು ಮಲೆ ಅಭಿವೃದ್ಧಿ ಕನಸು- ಕಾಡಿನಲ್ಲಿ ಕಾಯುತ್ತಿವೆ ಕುಟುಂಬಗಳು ಎಂಬ ಅವರ ವರದಿಗೆ ಪ್ರಶಸ್ತಿ ಬಂದಿದೆ. ಪ್ರಶಸ್ತಿಯು ಇದೀಗ ಎರಡನೇ ಬಾರಿಗೆ ಬೆಳ್ತಂಗಡಿ ತಾಲೂಕಿನ ವರದಿಗಾರರಿಗೆ ಸಂದಿದೆ.

ವರದಿ – ದೀಪಕ್ ಆಠವಳೆ

Wednesday, July 21, 2010

ನೆನಪಿನಂಗಳದ ಉತ್ಖನನ

ನೆನಪಿನಂಗಳದ ಉತ್ಖನನ

ಮದುವೆಯ ಆಮಂತ್ರಣ ಪತ್ರಿಕೆ ತಲುಪಿದ ಕೂಡಲೇ ಮದುವೆಯ ಮುಹೂರ್ತದ ಸಮಯ ಮತ್ತು ಕಲ್ಯಾಣ ಮಂಟಪದ ವಿವರಗಳನ್ನು ತಮ್ಮ ಕ್ಯಾಲೆಂಡರ್ ನಲ್ಲಿ ದಾಖಲಿಸಿ ಆಮಂತ್ರಣ ಪತ್ರಿಕೆಯನ್ನು ಕ.ಬು.ಗೆ ತಳ್ಳಿ ಮದುವೆ ಕಾರ್ಯಕ್ರಮಕ್ಕೆ ಹೋಗುವವರು ಕೆಲವರು. ಮದುವೆಯ ಸಮಾರಂಭ ಮುಗಿಯುವವರೆಗೆ ಮದುವೆಯ ಆಮಂತ್ರಣ ಪತ್ರಿಕೆಯನ್ನು ಜೋಪಾನವಾಗಿ ಇಟ್ಟುಕೊಂಡು ಮದುವೆಯ ಸಮಾರಂಭ ಮುಗಿದ ಕೂಡಲೇ ಆಮಂತ್ರಣ ಪತ್ರಿಕೆಯನ್ನು ಕ.ಬು.ಗೆ ಕಳುಹಿಸಿಕೊಡುವವರು ಹಲವರು.

ಐವತ್ತೆರಡು ವರ್ಷಗಳ ಹಿಂದೆ ( 1958 ರಲ್ಲಿ), ಬೆಂಗಳೂರಿನಲ್ಲಿ ತಾಯಿನಾಡು ಪತ್ರಿಕೆಯಲ್ಲಿ ಮೊದಲು ತಮ್ಮ ಸಹೋದ್ಯೋಗಿಯಾಗಿದ್ದ ಹಾಗೂ ಮಡಿಕೇರಿಯಿಂದ ಪ್ರಕಟವಾಗುತ್ತಿದ್ದ "ಶಕ್ತಿ " ಪತ್ರಿಕೆಯ ಬೆಂಗಳೂರಿನ ವರದಿಗಾರ ಮಿತ್ರರ ವಿವಾಹದ ಆಮಂತ್ರಣ ಪತ್ರಿಕೆ ಹೆಚ್.ಆರ್.ನಾಗೇಶರಾವ್ ಅವರಿಗೆ ತಲುಪಿತು.

ಅಂದು ಬುಧವಾರ , ದಿನಾಂಕ 11 ಜೂನ್ 1958. ಕಾರಣಾಂತರದಿಂದ ನಾಗೇಶರಾಯರಿಗೆ ಬೆಂಗಳೂರು ನಗರದ ಮಾವಳ್ಳಿ ಸರ್ಕಲ್ ಬಳಿ ಇದ್ದ ಶ್ರೀ. ಭೋಗನಂಜುಡೇಶ್ವರ ದೇವಾಲಯದ ಕಲ್ಯಾಣ ಮಂಟಪದಲ್ಲಿ ನಡೆದ ತಮ್ಮ ಮಿತ್ರನ ವಿವಾಹ ಸಮಾರಂಭಕ್ಕೆ ಬರಲಾಗಲಿಲ್ಲ , ಅದರೂ ಮದುವೆ ಮುಗಿದ ಕೂಡಲೇ ತಮ್ಮ ಮಿತ್ರನ ಮದುವೆಯ ಆಮಂತ್ರಣ ಪತ್ರಿಕೆ ನಾಗೇಶರಾಯರ ಅಮೂಲ್ಯ ಸಂಗ್ರಹಕ್ಕೆ ಸೇರಿತು.

ನಾಡಿನ ಹಿರಿಯ ಪತ್ರಕರ್ತ ಸುದ್ದಿಜೀವಿ ಹೆಚ್.ಆರ್.ನಾಗೇಶರಾವ್ ಅವರ ಪುತ್ರ ಹಾಲ್ದೊಡ್ಡೇರಿ ಸುಧೀಂದ್ರ ತಮ್ಮ ತಂದೆಯವರ ಸಂಗ್ರಹಗಳ ಬಗ್ಗೆ ವ್ಯಕ್ತಪಡಿಸಿದ್ದು ಈ ರೀತಿಯಲ್ಲಿ-

ನಲವತ್ತು ವರ್ಷಗಳ ಪತ್ರಿಕಾ ಜೀವನದಲ್ಲಿ ನನ್ನಪ್ಪ ( ಸಂಯುಕ್ತ ಕರ್ನಾಟಕದ ನಿವೃತ್ತ ಸ್ಥಾನಿಕ ಸಂಪಾದಕ ಹೆಚ್.ಆರ್.ನಾಗೇಶರಾವ್) ಸಂಗ್ರಹಿಸಿದ ಪತ್ರಗಳು-ದಾಖಲೆಗಳು ಮಿಲಿಯಾಂತರ. ತಿಂಗಳಿಗೆ 10 ರುಪಾಯಿ ಬಾಡಿಗೆಯ ಶ್ರೀರಾಮಪುರದ ಬಾಡಿಗೆ ಮನೆಯಿಂದ ಇಂದು ನಾವಿರುವ ಮನೆಯ ತನಕ ಆ ಎಲ್ಲ ದಾಖಲೆಗಳೂ ಪರಿಸರದ ಹೊಡೆತಗಳನ್ನು ತಾಳಿಕೊಂಡು ಬಾಳಿವೆ.

ತಮಗೆ ಆತ್ಮೀಯರೆನಿಸಿದ್ದ ಪತ್ರಕರ್ತರೆಲ್ಲರ ವಿವಾಹ ಪತ್ರಿಕೆಗೆಳನ್ನು ಅಪ್ಪ ಸಂಗ್ರಹಿಸಿಟ್ಟಿದ್ದಾರೆ.


ಅರವತ್ತು ವರ್ಷಕ್ಕೂ ಹಳೆಯದಾದ ಅನೇಕ ದಾಖಲೆ-ಪತ್ರಗಳನ್ನು ಎಸೆಯಲು ನನಗೂ ಮನಸ್ಸು ಬರುತ್ತಿಲ್ಲ. ಒಂದೊಂದು ಕಾಗದದ ಹಿಂದೆಯೂ ಒಂದೊಂದು ವಿಶಿಷ್ಟ ಘಟನೆಗಳಿರಬೇಕು. ಕೊಂಚವಾದರೂ ಬಿಡುವು ಸಿಕ್ಕೀತೆ ?, ಎಂದು ಹಪಹಪಿಸುವ ಕೆಲಸ ಹಚ್ಚಿಕೊಂಡು ಈ ದಾಖಲೆಗಳ ಸಾಗರದಲ್ಲಿ ಕಳೆದು ಹೋಗುತ್ತಿದ್ದೇನೆ. ಇದು ಉತ್ಪ್ರೇಕ್ಷೆಯ ಮಾತಲ್ಲ.

ನನ್ನಪ್ಪ ನನಗೆ ಆಲದ ಮರದ ಬದಲು ಖನಿಜಭರಿತ ಗಣಿಯೊಂದನ್ನು ಬಿಟ್ಟು ಹೋಗಿದ್ದಾರೆ. ಅಕ್ರಮವೊ, ಸಕ್ರಮವೊ ಗೊತ್ತಿಲ್ಲ, ಉತ್ಖನನ ಮಾಡುತ್ತಿದ್ದೇನೆ. ಸಿಕ್ಕ ದಾಖಲೆಗಳನ್ನು ಯಾವುದೋ ಸಂದರ್ಭದಲ್ಲಿ ಅವರೊಂದಿಗೆ ನಡೆಸಿದ ಮಾತುಕತೆಯನ್ನು ನನ್ನ ನೆನಪಿನ ಗಣಿಯಿಂದ ಹೆಕ್ಕಿ ತೆಗೆದು ಜೋಡಣೆ ಮಾಡ ಹೊರಟಿದ್ದೇನೆ.

ನಾಗೇಶರಾಯರ ಖನಿಜಭರಿತ ಗಣಿಯ 2009ನೇ ಇಸವಿಯ ಪರಿಶೋಧನೆಯ ಅಂಗವಾಗಿ ಹಾಲ್ದೊಡ್ಡೇರಿ ಸುಧೀಂದ್ರ ಒಂದು ರಟ್ಟಿನ ಡಬ್ಬ ಬುಡಮೇಲು ಮಾಡಿದಾಗ ದೊರಕಿದ್ದು - ಒಂದು ಕವರಿನ ಮೇಲ್ಗಡೆ P.Gopalakrishna ಎಂಬ ಉಲ್ಲೇಖ. ಪರಿಶೋಧನೆಯನ್ನು ಮುಂದುವರಿಸಿ ಖನಿಜಕ್ಕಾಗಿ ಅವರು 2010 ನೇ ಇಸವಿಯಲ್ಲಿ ಉತ್ಖನನ ನಡೆಸಿದಾಗ ಲಭ್ಯವಾದದ್ದು ಬೆಂಗಳೂರು ನಗರದ ಮಾವಳ್ಳಿ ಸರ್ಕಲ್ ಬಳಿ ಶ್ರೀ. ಭೋಗನಂಜುಡೇಶ್ವರ ದೇವಾಲಯದ ಕಲ್ಯಾಣ ಮಂಟಪದಲ್ಲಿ ದಿನಾಂಕ 11 ಜೂನ್ 1958 ರಂದು ನಡೆದ ಕರಾವಳಿ ಕರ್ನಾಟಕದ ಹಿರಿಯ ಪತ್ರಕರ್ತ ಪದ್ಯಾಣ ಗೋಪಾಲಕೃಷ್ಣ ( ಪ. ಗೋ.) ಅವರ ವಿವಾಹದ ಆಮಂತ್ರಣ.


ತಮ್ಮ ತಂದೆಯ ಸಂಗ್ರಹದಲ್ಲಿದ್ದ ಐದು ದಶಕಗಳ ಹಿಂದಿನ ಕಾಲಗರ್ಭದಲ್ಲಿ ಹುದುಗಿದ್ದ ಪ.ಗೋ. ಅವರ ವಿವಾಹದ ಆಮಂತ್ರಣ ಪತ್ರಿಕೆಯನ್ನು ಹುಡುಕಿ ತೆಗೆದು ಪದ್ಯಾಣ ಗೋಪಾಲಕೃಷ್ಣರ ಮೊಮ್ಮಕ್ಕಳಿಗೆ ತೋರಿಸಲು ಅನುವು ಮಾಡಿಕೊಟ್ಟ ಹಾಲ್ದೊಡ್ಡೇರಿ ಸುಧೀಂದ್ರ ಅವರಿಗೆ ವಂದನೆಗಳು.

ಚದರ ಅಂಗುಲ ಮಾಪನದಲ್ಲಿ ಮನೆಯ ವಿಸ್ತೀರ್ಣ ಅಳೆಯುವ ಕರ್ನಾಟಕದ ರಾಜಧಾನಿ ಬೆಂಗಳೂರು ನಗರದಲ್ಲಿ ನಾಗೇಶರಾವ್ ಅವರು ಸಂಗ್ರಹಿಸಿದ್ದ ಮಿಲಿಯಾಂತರ ಪತ್ರ -ದಾಖಲೆಗಳನ್ನು ಅಂದಿನಿಂದ ನಗ ನಾಣ್ಯಗಳಂತೆ ಕಾಪಾಡಿಕೊಂಡು ಪರಿಸರದ ಹೊಡೆತದಿಂದ ಇಂದಿನವರೆಗೆ ರಕ್ಷಿಸಲು ಮನಪೂರ್ವಕವಾಗಿ ಸಹಕರಿಸಿದ ನಾಗೇಶರಾಯರ ಪತ್ನಿ ಹಾಗೂ ಹಾಲ್ದೊಡ್ಡೇರಿ ಸುಧೀಂದ್ರ ಅವರ ತಾಯಿ ಶ್ರೀಮತಿ ಪ್ರೇಮಾ ನಾಗೇಶರಾವ್ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು.

-ಪ.ರಾಮಚಂದ್ರ, ಕತಾರ್

Visitors to this page