Saturday, September 5, 2009

ಕನ್ನಡ ಪ್ರಭದ ಪತ್ರಕರ್ತ ಹೃಷಿಕೇಶ್ ಗೆ ಪ.ಗೋ. ಪ್ರಶಸ್ತಿ: ಪಾಲೆಮಾರ್ ರಿಂದ ಪ್ರದಾನ











ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ನೀಡಲಾಗುವ ೨೦೦೮ರ ಪ.ಗೋ. (ಪದ್ಯಾಣ ಗೋಪಾಲಕೃಷ್ಣ) ಗ್ರಾಮೀಣ ವರದಿಗಾರಿಕೆ ಪ್ರಶಸ್ತಿಯನ್ನು ಕನ್ನಡ ಪ್ರಭದ ಉಜಿರೆ ವರದಿಗಾರ ಹೃಷಿಕೇಷ್ ಧರ್ಮಸ್ಥಳ ಅವರಿಗೆ ಮಂಗಳೂರಿನ ಪತ್ರಿಕಾ ಭವನದಲ್ಲಿ ದಿನಾಂಕ ೨೫ ಆಗಸ್ಟ್ ೨೦೦೯ರಂದು ನಡೆದ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಜೆ. ಕೃಷ್ಣ ಪಾಲೇಮಾರ್ ಅವರು ಪ್ರದಾನ ಮಾಡಿದರು.

ಹಿರಿಯ ಪತ್ರಕರ್ತ ಯು.ನರಸಿಂಹರಾವ್ ಅವರ ಸಮಕ್ಷಮದಲ್ಲಿ ಪ್ರಶಸ್ತಿ ಪ್ರದಾನ ಮಾಡಿದ ಬಳಿಕ ಸಚಿವ ಕೃಷ್ಣ ಪಾಲೇಮಾರ್ ಸಭೆಯನ್ನು ಉದ್ದೇಶಿಸಿ ಸಚಿವ ಪಾಲೇಮಾರ್ ಅವರು ಗ್ರಾಮೀಣ ಪತ್ರಿಕೋದ್ಯಮದ ಕೊಡುಗೆ ಕುರಿತು ಮಾತನಾಡಿದರು. ಹಿಂದಿನ ಪತ್ರಕರ್ತರಂತೆ ಇಂದಿನ ಯುವ ಪತ್ರಕರ್ತರೂ ನಿಷ್ಠುರವಾಗಿದ್ದು ಗ್ರಾಮೀಣ ಸಮಸ್ಯೆಗಳನ್ನು ಬೆಳಕಿಗೆ ತರಬೇಕು ಎಂದು ಕಿವಿಮಾತು ಹೇಳಿದರು.

ಗ್ರಾಮಗಳಲ್ಲಿ ಆಗುವಂತಹ ಸಮಸ್ಯೆಗಳನ್ನು ವರದಿಗಾರರು ಗಮನಕ್ಕೆ ತಂದಾಗ ಸರ್ಕಾರಕ್ಕೂ ತಿಳಿಯುತ್ತದೆ, ಆ ಮೂಲಕ ಅವುಗಳನ್ನು ಬಗೆಹರಿಸಬಹುದು ಹಾಗೂ ಪತ್ರಕರ್ತರು ಮತ್ತು ಪತ್ರಿಕೋದ್ಯಮದ ಮಹತ್ವವನ್ನು ಹೆಚ್ಚಿಸುವಂತೆ ಕರ್ತವ್ಯ ನಿರ್ವಹಿಸಲು ಕರೆ ನೀಡಿದ ಅವರು ನಿಷ್ಪಕ್ಷಪಾತ ಮತ್ತು ನಿಷ್ಠುರ ಪತ್ರಿಕೋದ್ಯಮದಿಂದ ಸಮಾಜಕ್ಕೆ ಲಾಭ ಎಂದರು.

ಹಿರಿಯ ಪತ್ರಕರ್ತ ನರಸಿಂಹ ರಾವ್ ಅವರು ಪದ್ಯಾಣ ಗೋಪಾಲಕೃಷ್ಣ (ಪ.ಗೋ) ಅವರ ಬಗ್ಗೆ ಹಾಗೂ ಸದರಿ ಪ್ರಶಸ್ತಿಯ ಬಗ್ಗೆ ಮಾಹಿತಿ ನೀಡಿದರು.

ದಿವಂಗತರಾಗಿರುವ ಹಿರಿಯ ಪತ್ರಕರ್ತ ಪದ್ಯಾಣ ಗೋಪಾಲಕೃಷ್ಣ ಅವರ ನೆನಪಿನಲ್ಲಿ ನೀಡುವ ಅತ್ಯುತ್ತಮ ಗ್ರಾಮೀಣ ವರದಿಗಾರಿಕೆ ಪ್ರಶಸ್ತಿಗೆ ಕನ್ನಡಪ್ರಭದಲ್ಲಿ ಅಕ್ಟೋಬರ್ ೩, ೨೦೦೮ ರಂದು ಪ್ರಕಟಗೊಂಡ ಹೃಷಿಕೇಷ್ ಧರ್ಮಸ್ಥಳ ಅವರ "ಬಾರದ ಸವಲತ್ತಿಗೆ ಕಾದಿದೆ ಜನತೆ" ಎಂಬ ವರದಿ ಪ್ರಶಸ್ತಿ ಗಳಿಸಿದೆ. ಗ್ರಾಮೀಣಮಟ್ಟದಲ್ಲಿ ಇರುವ ಅನೇಕ ಸಮಸ್ಯೆಗಳು, ಅಭಿವೃದ್ಧಿಗೆ ಗ್ರಾಮೀಣ ಭಾಗದಲ್ಲಿರುವ ಮಾದರಿಗಳು ಇತ್ಯಾದಿಗಳ ಬಗ್ಗೆ ಬರೆಯಲಾದ ಅತ್ಯುತ್ತಮ ವರದಿಗಳಿಗೆ ಈ ಪ್ರಶಸ್ತಿ ನೀಡಲಾಗುತ್ತದೆ.

ಪ.ಗೋ ಸ್ಮಾರಕಾರ್ಥವಾಗಿ ಟ್ರಸ್ಟಿನ ವತಿಯಿಂದ ೧೯೯೯ರಲ್ಲಿ ಪ್ರಾರಂಭಿಸಿದ ಉತ್ಕೃಷ್ಟ ಗ್ರಾಮೀಣ ವರದಿಗೆ ನೀಡುವ ಪ.ಗೋ. ಸಂಸ್ಮರಣ ಗ್ರಾಮೀಣ ವರದಿಗಾರಿಕೆ ಪ್ರಶಸ್ತಿ ಯನ್ನು ಈಗ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮುನ್ನಡೆ ಸುವ ನಿರ್ಣಯವನ್ನು ಹಮ್ಮಿಕೊಂಡಿದೆ. ಈ ವರ್ಷ ಮೊದಲ ಬಾರಿಗೆ ಪತ್ರಕರ್ತರ ಸಂಘ ಪ್ರಶಸ್ತಿ ನೀಡುತ್ತಿದೆ.೫ ಸಾವಿರ ರುಪಾಯಿ ನಗದು, ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆಯನ್ನು ಈ ಪ್ರಶಸ್ತಿ ಒಳಗೊಂಡಿದೆ.

೨೦೦೪ರಿಂದಲೇ ಪ್ರಶಸ್ತಿ ಮೊತ್ತವನ್ನು ಪ್ರಾಯೋಜಿಸುವ ಮೂಲಕ ಪ.ಗೋ ಟ್ರಸ್ಟ್ ಗೆ ನೆರವಾಗುತ್ತಿದ್ದ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರು ಈ ಬಾರಿ ಪ್ರಶಸ್ತಿ ಮೊತ್ತವನ್ನು ಹೆಚ್ಚಿಸುವಂತೆ ಜಿಲ್ಲಾ ಪತ್ರಕರ್ತರ ಸಂಘದ ಪದಾಧಿಕಾರಿಗಳ ಮನವಿಗೆ ಸ್ಪಂದಿಸಿ ಪ್ರಶಸ್ತಿ ಮೊತ್ತ ಕಡಮೆಯಾಗಿದ್ದು, ಅದನ್ನು ಏರಿಸುವುದೇ ಸೂಕ್ತ ಎಂದು ಅಭಿಪ್ರಾಯಪಟ್ಟ ಹೆಗ್ಗಡೆಯವರು ಪ್ರಶಸ್ತಿ ಮೊತ್ತವನ್ನು ೫ ಸಾವಿರ ರುಪಾಯಿಗೆ ಏರಿಕೆ ಮಾಡಿರುತ್ತಾರೆ.

ಕನ್ನಡ ಪ್ರಭ ಪತ್ರಿಕೆಯ ಮಡಿಕೇರಿ ಜಿಲ್ಲಾ ವರದಿಗಾರರಾದ ಶ್ರೀ. ಎಚ್. ಟಿ. ಅನಿಲ್ ಅವರು ೧೯೯೯ರಲ್ಲಿ ಪ್ರಾರಂಭಿಸಿದ ಪ.ಗೋ. ಸಂಸ್ಮರಣ ಗ್ರಾಮೀಣ ವರದಿಗಾರಿಕೆ ಪ್ರಶಸ್ತಿಯ ಮೊದಲ ವಿಜೇತರು.

ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಹರ್ಷ, ಪ್ರಧಾನ ಕಾರ್ಯದರ್ಶಿ ಗುರುವಪ್ಪ ಎನ್‌.ಟಿ ಬಾಳೆಪುಣಿ, ಪ್ರೆಸ್ ಕ್ಲಬ್ ಕಾರ್ಯದರ್ಶಿ ಹರೀಶ್ ರೈ, ಸಂಘದ ಖಜಾಂಚಿ ಯೋಗೀಶ ಹೊಳ್ಳ ಪಾಲ್ಗೊಂಡರು. ಪ.ಗೋ ಕುಟುಂಬದವರು, ನರಸಿಂಹರಾವ್ ಕುಟುಂಬಸ್ಥರೂ ಕಾರ್ಯಕ್ರಮದಲ್ಲಿ ಹಾಜರಿದ್ದರು

Visitors to this page