Thursday, June 25, 2009

’ನೋ ಚೇಂಜ್ ಕಥೆಗಳು’-೨೩..ಅರ್ಜೆಂಟ್ ಅನ್ನೋದು ಆಗಲೂ ಇತ್ತು !
















ಹೊಸಸಂಜೆ ಪತ್ರಿಕೆಗಾಗಿ ಪತ್ರಕರ್ತ ಶ್ರೀ ಪದ್ಯಾಣ ಗೋಪಾಲಕೃಷ್ಣ (ಪ.ಗೋ.) ಅವರು ಬರೆದ ೨೪ ಅಂಕಣಗಳ ಕಂಕಣ" ನೋ ಚೇಂಜ್ ಕಥೆಗಳು". ಈ ಬರಹಗಳನ್ನು ಅವರ ಸ್ಮಾರಕಾರ್ಥವಾಗಿ ’ಗಲ್ಫ್ ಕನ್ನಡಿಗ’ ಪ್ರತಿ ಗುರುವಾರ ಪ್ರಕಟಿಸಲಾಗುತ್ತಿದ್ದು ಇದು ಇಪ್ಪತ್ಮೂರನೇ ಅಂಕಣ.

ಅರ್ಜೆಂಟ್ ಅನ್ನೋದು ಆಗಲೂ ಇತ್ತು !

ನೀವು ಹೀಗೆ ಅರ್ಜೆಂಟ್ ಮಾಡಿದರೆ ಹೇಗೆ ರಾಯರೆ ? ಕೆಲಸ ಮಾಡ್ಲಿಕ್ಕೆ ಕೊಟ್ಟಿದ್ದೇ ನಿನ್ನೆ. ಆಗಲೂ ನಿಮಗೆ ಹೇಳಿದ್ದೆ, ಈಗಲೂ ಅದನ್ನೇ ಹೇಳ್ತೇನೆ. ಇದು ಅರ್ಜೆಂಟಿಗೆ ಆಗುವ ಕೆಲಸ ಅಲ್ಲಾ....

ನಿನ್ನೆ ಹೇಳಿದಾಗ, ‘ಸ್ವಲ್ಪ ಕಷ್ಟ -ಆದರೂ ಹೇಗಾದರೂ ಮಾಡಿ ಕೊಡ್ತೇನೆ’ ಅಂತ ಹೇಳಿದ್ದೀರಲ್ಲ. ನಿಮ್ಮ ಮಾತಿನ ಮೇಲೆ ವಿಶ್ವಾಸ ಇಟ್ಟು ಈವತ್ತು ಬಂದಿದ್ದೇನೆ, ಈಗ ಹೀಗೆ ಹೇಳಿದರೆ ಹೇಗೆ ?

ಹೌದು ಹೇಳಿದ್ದೆ. ನೀವು ನನ್ನ ಖಾಯಂ ಗಿರಾಕಿ, ನಿಮ್ಮನ್ನು ಬಿಡ್ಲಿಕ್ಕೆ ಸಾಧ್ಯವಿಲ್ಲಾಂತ. ಆದ್ರೂ ನಿಮ್ಮ ಹಾಗೇ ಇನ್ನೂ ಇಬ್ಬರು ಬಂದ್ರು. ನಿಮಗೆ ಟ್ರಿಪ್ಪಿಗೆ ಹೋಗುವ ಅರ್ಜೆಂಟು -ಅವರಿಗೆ ಮದುವೆಗೆ ಹೋಗುವ ಅರ್ಜೆಂಟು ಇತ್ತು. ಯಾರ ಕೆಲಸವೂ ಆಗಿಲ್ಲ. ಏನು ಮಾಡೋದು ಹೇಳಿ !

ಅದೆಲ್ಲಾ ಈಗ ನನಗೆ ಗೊತ್ತಿಲ್ಲ. ನನಗೆ ಹೇಗಾದರೂ ಮಾಡಿ ಕೊಟ್ಟು ಬಿಡಿ ಮಾರಾಯ್ರೆ.... ನನ್ನ ಮರ್ಯಾದಿ ಪ್ರಶ್ನೆ. ಈ ಮಧ್ಯಾಹ್ನ ಅದು ಆಗಲೇ ಬೇಕು.

ಹಾಗಾದ್ರೆ ಅದನ್ನು ಕೊಡ್ಲಿಕ್ಕೆ ಇಷ್ಟು ದಿವಸ ತಡ ಯಾಕೆ ಮಾಡಿದ್ರಿ ? ಸ್ವಲ್ಪ ಮೊದಲೇ ಕೊಟ್ಟರೆ ಆಗಿ ಹೋಗ್ತಿತ್ತು. ನಿಮ್ಮ ಹಾಗೇ ಬೇರೆಯವರೂ ಅರ್ಜೆಂಟಿನಲ್ಲೇ ಇದ್ದಾರೆ. ಅವರ ಕೆಲಸ ನಾವು ಬಿಟ್ರೆ ನಮ್ಮ ದಿನ ಕಳಿಯೋದು ಹೇಗೆ ?

ಅದೆಲ್ಲ ನನಗೆ ಗೊತ್ತಿಲ್ಲ. ನಾನೇನು ಹೇಳ್ಲಿಕ್ಕೂ ಸಾಧ್ಯವಿಲ್ಲ. ನನಗೆ ಅದು ಈ ಮಧ್ಯಾಹ್ನಕ್ಕೆ ಆಗಲೇ ಬೇಕು. ಈಗ ಹತ್ತಿರ ಚರ್ಚೆ ಮಾಡಿ ಸುಮ್ಮನೆ ಸಮಯ ಕಳೆಯುವ ಬದಲು ಓ ಅವನ ಹತ್ತಿರ ಕೊಟ್ಟು ಬೇಗ ಕೆಲಸ ಮಾಡಿಸಿ. ಇನ್ನು ಅರ್ಧ ಗಂಟೆ ಒಳಗೆ ನನಗೆ ಅದು ಬೇಕೇ ಬೇಕು. ಅಷ್ಟರ ವರೆಗೂ ನಾನು ಇಲ್ಲೇ ಕೂತುಕೊಳ್ತೇನೆ.

ಹ್ಹಾ ! ಇದೊಳ್ಳೆ ಗ್ರಹಚಾರ ಆಯಿತು. ಬೇಡಬೇಡ - ನೀವು ಇಲ್ಲೇ ಕೂತುಕೊಂಡರೆ ನಮಗೆ ಮತ್ತೂ ತೊಂದರೆಯಾಗ್ತದೆ. ನಿಮ್ಮ ಬೇರೆ ಕೆಲಸ ಏನಾದರೂ ಇದ್ದರೆ, ಹೋಗಿ ಮಾಡಿ ಮುಗಿಸಿ ಬನ್ನಿ - ಇನ್ನು ಒಂದು ಗಂಟೆ ಬಿಟ್ಟು. ಅಷ್ಟೊತ್ತಿಗೆ ಹೇಗಾದರೂ ಮಾಡಿ ಇಡ್ತೇವೆ.
.............
ಅದು, ನಮ್ಮ ಬೀಡಿ ಅಂಗಡಿ (ನನ್ನ ಅಂಗಡಿಯಲ್ಲ, ನಾನು ಬೀಡಿ ತೆಗೆದುಕೊಳ್ಳುವ ಅಂಗಡಿ)ಯ ಪಕ್ಕದ ಟೈಲರ್ ಶಾಪ್‍ನಲ್ಲಿ ನಿನ್ನೆ ಅಲ್ಲ ಮೊನ್ನೆ-ನಡೆದ ಸಂಭಾಷಣೆ. ಬೀಡಿ ಅಂಗಡಿಯ ಬೂಬಣ್ಣನಿಗೂ, ಅಲ್ಲೇ ನಿಂತಿದ್ದ ನನಗೂ ಸ್ಪಷ್ಟವಾಗಿ ಕೇಳಿಸಿದ್ದು.

ಆ ಟೈಲರ್ ಅಂಗಡಿ ಒಳಗೆ ಹೊಕ್ಕರೆ, ಅದೇ ‘ಡೈಲಾಗ್’ ಯಾವಾಗಲೂ ಕೇಳುತ್ತದೆ. ಹೊರಗೆ ನಿಂತಿದ್ದವರಿಗೂ ಕೇಳಿಸುತ್ತದೆ. ಆದ್ದರಿಂದ ಅದು ನನಗೆ ಪರಿಚಿತ.

ಹಿಂದೆ ಒಮ್ಮೆ ನನ್ನ ಒಂದು ಶರ್ಟ್ ಹೊಲಿಗೆಗೆ ಕೊಟ್ಟಿದ್ದಾಗ, ನಾನೂ ಅಂಥದ್ದೇ ಮಾತು ಆಡಿದ್ದೆ. ನನಗೆ ಅಂಥದ್ದೇ‍ಉತ್ತರವೂ ಸಿಕ್ಕಿತ್ತು. ಹೇಳಿದ್ದ ಒಂದು ಗಂಟೆ ಹೊತ್ತಿನ ಬದಲು ಎರಡೂವರೆ ಗಂಟೆ ಹೊತ್ತು ಕಾಯಿಸಿದ ಮೇಲೆ ಶರ್ಟೂ ಸಿಕ್ಕಿತ್ತು. (ನಾನೊ, ಅದು ಸಿಕ್ಕದೆ ಬಿಡುವ ಗಿರಾಕಿ ? ಹೊಲಿಗೆ ಮಾತ್ರ ಹೇಗೇಗೋ ಆಗಿತ್ತು. ಅದು ಬೇರೆ ವಿಷಯ)

ಮೊನ್ನೆಯೂ ಅದೇ ‘ಟೇಪ್’ ಕೇಳಿಸಿದಾಗ,ಹಿಂದಿನ ಎಲ್ಲ ಅನುಭವಗಳೂ ನೆನಪಾದವು. ನಗು ಬಂತು.

ಇದ್ದಕ್ಕಿದ್ದ ಹಾಗೆ ಹ್ಹೆ ಹ್ಹೆ ಹ್ಹೆ ಎಂದ ನನ್ನನ್ನು ಗಾಬರಿಯಿಂದ ನೋಡಿದ ಬೂಬಣ್ಣ “ಏನು ರಾಯರೆ, ನಗಾಡಿದ್ದು?” ಎಂದು ಕೇಳಿಯೇ ಬಿಟ್ಟ. ಈ ಮುದುಕನಿಗೆಲ್ಲಾದರೂ ಗಿರ್ಮಿಟ್ ಶುರುವಾಗಿದೆಯೋ ಹೇಗೆ ಎಂದು ತಿಳಿಯುವ ಕುತೂಹಲ ಅವನಿಗೆ.

ಅಂಥಾದ್ದೇನೂ ಇಲ್ಲ ಬೂಬಣ್ಣ (ಅಂಥಾದ್ದು ಅಂದರೆ ಎಂಥಾದ್ದು ಅಂತ ಅವನಿಗೆ ಅರ್ಥವಾಗಿತ್ತು) ಎಂದೆ. ನಗುವಿನ ಹಿನ್ನೆಲೆ ವಿವರಿಸಿದೆ.

ಈ ಅರ್ಜೆಂಟಿನ ಕಿಟಿಪಿಟಿ ಎಲ್ಲ ಕಡೆಯೂ ಇದ್ದೇ ಇದೆ. ಯಾವಾಗಲೂ ಅದನ್ನು ನಾವು ಅನುಭವಿಸ್ತೇವೆ. ಮತ್ತೆ ಸುಮ್ಮನಾಗ್ತೇವೆ. ಅಲ್ವಾ ರಾಯ್ರೆ ? ಎಂದ ಬೂಬಣ್ಣನನ್ನು ಅಷ್ಟಕ್ಕೇ ಬಿಟ್ಟುಬಿಡಲು ಮನಸ್ಸಾಗಲಿಲ್ಲ.

ಅಂಥಾ ವಿಶೇಷ ಅನುಭವ ಯಾವುದಾದ್ರೂ ಆಗಿದೆಯಾ ನಿನಗೆ ? ಎಂದು (ಸುಮ್ಮನೆ ಇರಲಾರದೆ) ಕೇಳಿಯೇ ಕೇಳಿದೆ.

ಅಂಥದ್ದು ಒಂದಲ್ಲ - ನೂರು ಅನುಭವ ಇದೆ. ನಿಮಗೆ ಕೇಳುವ ಪುರುಸೊತ್ತು‍ಇದ್ದರೆ ಹೇಳ್ಲಿಕ್ಕೂ ನಾನು ರೆಡಿ, ಎಂದ. ಹೇಳಿಯೂ ಹೇಳಿದ.

ಅವನು ಹೇಳಿದ್ದನ್ನು ಅವನ ಮಾತಿನಲ್ಲೇ ವಿವರಿಸಿದರೆ ನಿಮ್ಮಲ್ಲಿ ಕೆಲವರಿಗಾದರೂ ಮುಜುಗರ ಮೂಡಬಹುದು. ಆದ್ದರಿಂದ, ಅದರ ಸಂಕ್ಷಿಪ್ತ ಸಾರ ಮಾತ್ರ ಕೊಡುತ್ತೇನೆ.........

ಸಣ್ಣಪುಟ್ಟ ರೀತಿಯಲ್ಲಿ ನಡೆಯುವ ಹೊಲಿಗೆ ಕೆಲಸ, ಚಿನ್ನದ ಕೆಲಸ ಅಥವಾ ಪ್ರಿಂಟಿಂಗ್ ಪ್ರೆಸ್ಸಿನಲ್ಲಿ ಇನ್ವಿಟೇಶನ್ ಪ್ರಿಂಟ್ ಮಾಡುವ ಕೆಲಸ - ಯಾವುದಾದರೂ ಸರಿ, ಗಿರಾಕಿಗಳು ಬಂದಾಗ ಮಾತ್ರವೇ ನಡೆಯುತ್ತದೆ. ಅಂಥವರಿಗೆ ಖಾಯಂಆಗಿ ಏನೂ ಕೆಲಸ ಇರುವುದಿಲ್ಲ. ಬಂದರೆ ಒಂದರ ಹಿಂದೆ ಇನ್ನೊಂದು - ಇಲ್ಲವಾದರೆ ಏನೂ ಇಲ್ಲ ಅಂತ ಇರುವುದು ಸರ್ವಸಾಮಾನ್ಯ ಪರಿಸ್ಥಿತಿ. ದೊಡ್ಡ ಬಿಸಿನೆಸ್‍ನವರಾದರೆ ಅದು ಬೇರೆ ಮಾತು.

ಅಂಥದ್ದೊಂದು ದೊಡ್ಡ ಪ್ರೆಸ್ ಮಂಗಳೂರಿನ ಕೊಡಿಯಾಲಬೈಲಿನಲ್ಲಿ ಇತ್ತು. “ಸ್ವಾಮೀ, ನಾಡಿದ್ದು ೩೦ನೇ ತಾರೀಕಿಗೆ ಮದುವೆ - ಇದು, ಎರಡು ಸಾವಿರ ಇನ್ವಿಟೇಶನ್ ಆಗಬೇಕಿತ್ತಲ್ಲ” ಎಂದು ಅವರಲ್ಲಿ ಹೋಗಿ ಹೇಳಿದರೆ ಮುಂದಿನ ೩ನೇ ತಾರೀಕಿಗೆ ಪ್ರಿಂಟ್ ಮಾಡಿ ಕೊಡ್ತೇವೆ. - ಬೇಕಾದರೆ ಮಾಡಿಸಿ, ಎನ್ನುವ ನೌಕರರೂ ಅಲ್ಲಿ ಇದ್ದರು. ಅಂಥಾದ್ದೆಲ್ಲ, ಚರಿತ್ರೆ -ಕಥೆ.

ಆದರೆ -“ಟಿಕೆಟ್ ಎಲ್ಲ ಖಾಲಿಯಾಗಿದೆ. ಮುಂದಿನ ಟ್ರಿಪ್ ಹೋಗಬೇಕಾದರೆ ಟಿಕೆಟ್ ಪ್ರಿಂಟ್ ಮಾಡಿಸಿ ಹಿಡ್ಕೊಂಡು ಬಾ ಅಂತ ಧನಿ ಹೇಳಿದ್ದಾರೆ. ನಾಲ್ಕು ಟಿಕೆಟ್ ಬುಕ್ಕಾದರೂ ಈಗ್ಲೆ ಕೊಡಿ” ಎಂದು ಖಾಯಂ ಆಗಿ ಬಂದು ಹೋಗುವ ಕಂಡಕ್ಟರ್‍ರ ನುಡಿ, ಕಂಕನಾಡಿಯ ಒಂದು ಪ್ರೆಸ್‍ನಲ್ಲಿ ಈಗಲೂ ಆಗಾಗ ಕೇಳಿಸುತ್ತದೆ. “ಕೆಲವು ಪುಸ್ತಕವಾದರೂ ಪ್ರಿಂಟ್ ಮಾಡಿ ಇಟ್ಟುಬಿಡಬಹುದಲ್ಲ -ರಗಳೆ ತಪ್ಪುತ್ತದೆ” ಎಂದು ಯಾರಾದರೂ ಸಲಹೆ ಕೊಟ್ಟರೆ, ಆ ಪ್ರೆಸ್‍ನ ಮಾಲಿಕರು ಬೇರೆಯೇ ಕಥೆ ಹೇಳುತ್ತಾರೆ.

ಚಿನ್ನದ ಕೆಲಸದಲ್ಲಿ ಹಾಗೆಲ್ಲ ಗಲಾಟೆ ಆಗುವ ಚಾನ್ಸ್ ಇಲ್ಲ ಅಂತ ತಿಳಿದಿದ್ದೀರಾ ? ಅಲ್ಲಿಯದ್ದೂ ಒಂದು ಸಣ್ಣ ಕಥೆ ನನ್ನ ಹತ್ತಿರ ಇದೆ. ನನ್ನ ತಂಗಿ ಮದುವೆ ನಿಶ್ಚಯ -ಏನೋ ಸಂಬಂಧ ಕೂಡಿ ಬಂತೂಂತ - ಅವಸರದಲ್ಲಿ ಆಯಿತು. ಅಷ್ಟೇ ಅವಸರದಲ್ಲಿ ಒಡವೆ ಮಾಡಿಸಲಿಕ್ಕೆ ಕೊಟ್ಟೂ ಆಯಿತು. ಮಾಡಿಸಲಿಕ್ಕೆ ಕೊಟ್ಟದ್ದು ಆರು ದಿನ ಮೊದಲು, ಅದು ಸಿಕ್ಕಿದ್ದು ಮಾತ್ರ ಮುಹೂರ್ತಕ್ಕೆ ಅರ್ಧ ಗಂಟೆ ಬಾಕಿ ಇರುವಾಗ.

ಇದೆಲ್ಲ ಮಾಮೂಲಿ ಅನುಭವ, ಅಲ್ವಾ ? ಅವರು ಮಾಡುವುದೂ ಒಂದು ಲೆಕ್ಕದಲ್ಲಿ ಸರಿ ಅಂತಲೇ ಕಾಣುತ್ತದೆ. ಅವರಿಗೆ ಒಂದು ಕ್ರಮದಲ್ಲಿ ಕೆಲಸ ಬರುವುದೂ ಇಲ್ಲ - ಬಂದ, ಬರುವ ಕೆಲಸವನ್ನು ಅವರು ಬಿಡುವ ಹಾಗೂ ಇಲ್ಲ. ಹಾಗೆ, ಇಂತಿಷ್ಟು ದಿವಸ ಕಳೆದು ಬನ್ನಿ ಅಂತ ಕೆಲಸ ಕೊಟ್ಟವರಿಗೆ ಹೇಳೋದಿಕ್ಕೆ ಅದೇನು ರಿಜಿಸ್ಟ್ರಿ ಆಫೀಸಾ ? ಅಥವಾ, ಕೆಲಸ ಮಾಡಿಸುವವರಿಗೆ ಮೊದಲೇ ಎಲ್ಲ ಲೆಕ್ಕಾಚಾರ ಹಾಕಿ ಕೆಲಸ ಮಾಡಿಸ್ಲಿಕ್ಕೆ ಸಾಧ್ಯವಾದರೂ ಆಗ್ತದಾ ?

ಇದೆಲ್ಲ ‘ಪಿರಾಕ್’ನಿಂದಲೂ ನಡೆದು ಬಂದ ರಿವಾಜು. ಅದು ಈಗ ಬದಲಾಗಬೇಕೂ ಅಂದರೆ ಹೇಗೆ ಸಾಧ್ಯ ? ಅಲ್ವೊ ರಾಯರೆ ?

“ನಿಜ ಬೂಬಣ್ಣ. ನೀನು ಈಗ ಹೇಳಿದ ಮಾತನ್ನೇ ನಾನೂ ಹೇಳುತ್ತಾ ಬಂದಿದ್ದೇನೆ. ಹಾಗೆ ನೋಡಿದರೆ, ಅಂಥಾ ಯಾವ ತೊಂದರೆಯೂ ಇಲ್ಲದೆ ನಡಿಯುವ ವ್ಯವಹಾರ ನಿನ್ನಂಥವರದು ಮಾತ್ರ ಅಂತ ಕಾಣುತ್ತದೆ. ಸರಿಯೋ?”

ನನ್ನ ವಹಿವಾಟಿನ ಕಥೆ ಕೇಳ್ಬೇಡಿ. ಅದನ್ನು ಇನ್ನೊಮ್ಮೆ ಹೇಳ್ತೇನೆ, ಈಗ ನೀವು ಮನೆಗೆ ಹೋಗಿ ಎಂದ ಬೂಬಣ್ಣ ನನ್ನನ್ನು ಕಳುಹಿಸಿದ.

-----




ಶ್ರೀ ಪದ್ಯಾಣ ಗೋಪಾಲಕೃಷ್ಣ ( ಪ.ಗೋ.)



ಶ್ರೀ ಪದ್ಯಾಣ ಗೋಪಾಲಕೃಷ್ಣ ( ಪ.ಗೋ. ೧೯೨೮ - ೧೯೯೭ ) - ಹುಟ್ಟೂರು ಗಡಿಯಂಚಿನಲ್ಲಿರುವ ಅಡ್ಯನಡ್ಕ. ೧೯೫೬ ರಿಂದ ೧೯೯೭ನೇ ಇಸವಿಯವರೆಗೆ ನಾಲ್ಕು ದಶಕಗಳಷ್ಟು ಧೀರ್ಘ ಕಾಲಾವಧಿಯಲ್ಲಿ ಹಲವು ಕನ್ನಡ ಪತ್ರಿಕೆಗಳ ಉಪಸಂಪಾದಕ, ವರದಿಗಾರರಾಗಿದ್ದ ಪ.ಗೋ.ರವರು ೧೯೬೩ರಿಂದ ಸುಮಾರು ಎರಡು ವರ್ಷಗಳ ಕಾಲ ಮಂಗಳೂರಿನಿಂದ ತಮ್ಮ ಸ್ವಂತ ಕನ್ನಡ ದಿನ ಪತ್ರಿಕೆ "ವಾರ್ತಾಲೋಕ"ದ ವರದಿಗಾರ, ಮುದ್ರಕ ಮತ್ತು ಪ್ರಕಾಶಕರಾಗಿ ನಡೆಸಿ ಪತ್ರಿಕೋದ್ಯಮದ ಎಲ್ಲಾ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದವರು. ಜೊತೆಗೆ ೧೩ ಪತ್ರಿಕೆಗಳಿಗೆ ಆಗಾಗ "ಕಾಲಂಕಾರ"ರಾಗಿ ಸುಮಾರು ನಾಲ್ಕು ಸಾವಿರ ಪುಟಗಳಿಗೂ ಮಿಕ್ಕಿದ ಕಾಲಂ ಸಾಹಿತ್ಯ ಪ್ರಸ್ತುತ ಪಡಿಸಿದ ಪ. ಗೋ. ಅವರಿಗೆ ಇದ್ದುದನ್ನು ಸರಳವಾಗಿ ಹೇಳುವ ರೂಢಿಯೇ ಇಲ್ಲ. ಅವರದೆಲ್ಲವೂ ವ್ಯಂಗ್ಯ ದಿಂದಲೇ ಪ್ರಾರಂಭ, ವ್ಯಂಗ್ಯದಿಂದಲೇ ಕೊನೆ! ಅವರು ಕೊಡುವ ಉದಾಹರಣೆಗಳು ಹಳೆಯ ನೀತಿ ಪದ್ಯಗಳನ್ನು ತಿರುಚಿಕೊಂಡು ಹುಟ್ಟಿಸುವ ವ್ಯಂಗ್ಯ ಮಾರ್ಮಿಕವಾದುದು.



ಪ. ಗೋಪಾಲಕೃಷ್ಣ ಸ್ಮಾರಕ ಸೇವಾ ಟ್ರಸ್ಟಿನ ವತಿಯಿಂದ ೨೦೦೨ನೆ ಇಸವಿಯಲ್ಲಿ ಮಂಗಳೂರಿನಿಂದ ಪ್ರಕಟಣೆಗೊಂಡ ಲೇಖನ ಮಾಲಿಕೆ "ನೋ ಚೇಂಜ್ ಕಥೆಗಳು". ಈ ೨೪ ಅಂಕಣಗಳ ಕಂಕಣವನ್ನು ಮರು ಪ್ರಕಟಿಸಲು ಅನುಮತಿಯನ್ನು ಇತ್ತ ಟ್ರಸ್ಟಿನ ಅಧ್ಯಕ್ಷರಾದ, ಪ.ಗೋ ರವರ ಸಹೋದ್ಯೋಗಿ, ಮಂಗಳೂರಿನ ಹಿರಿಯ ಪತ್ರಕರ್ತ ಶ್ರೀ. ಯು.ನರಸಿಂಹ ರಾವ್ ಮತ್ತು ಹುಟ್ಟೂರಿನ ಆಪ್ತ ಮಿತ್ರ, ಟ್ರಸ್ಟಿನ ಸ್ಥಾಪಕರಾದ ಬೆಂಗಳೂರಿನ ವೈದ್ಯ, ಲೇಖಕ ಡಾ. ಎಂ. ಬಿ. ಮರಕಿಣಿಯವರಿಗೆ ವಂದನೆಗಳು.

----

ಶೀರ್ಷಿಕೆಯ ೧೯೯೧ರ ವರ್ಣಚಿತ್ರ :

ಕುಟುಂಬದ ಸಮಾರಂಭದಲ್ಲಿ ಪಾಲ್ಗೊಂಡ ತಮ್ಮ ಭಾವ ನೆಂಟ ಶ್ರೀ.ನೂಜಿಬೈಲು ಗೋಪಾಲ್ ಭಟ್ ಜೊತೆ ಶ್ರೀ.ಪ.ಗೋ.

----

ಕೃಪೆ: ಗಲ್ಫ್ ಕನ್ನಡಿಗ

ಲಿಂಕ್ : http://www.gulfkannadiga.com/news-7943.html

Thursday, June 18, 2009

’ನೋ ಚೇಂಜ್ ಕಥೆಗಳು’ -೨೨... ಹಳೆ ಕಾಗದಗಳ ರಾಶಿಯಲ್ಲಿ













ಹೊಸಸಂಜೆ ಪತ್ರಿಕೆಗಾಗಿ ಪತ್ರಕರ್ತ ಶ್ರೀ ಪದ್ಯಾಣ ಗೋಪಾಲಕೃಷ್ಣ (ಪ.ಗೋ.) ಅವರು ಬರೆದ ೨೪ ಅಂಕಣಗಳ ಕಂಕಣ" ನೋ ಚೇಂಜ್ ಕಥೆಗಳು". ಈ ಬರಹಗಳನ್ನು ಅವರ ಸ್ಮಾರಕಾರ್ಥವಾಗಿ ’ಗಲ್ಫ್ ಕನ್ನಡಿಗ’ ಪ್ರತಿ ಗುರುವಾರ ಪ್ರಕಟಿಸಲಾಗುತ್ತಿದ್ದು ಇದು ಇಪ್ಪತ್ತೆರಡನೇ ಅಂಕಣ.


ಹಳೆ ಕಾಗದಗಳ ರಾಶಿಯಲ್ಲಿ

ಅಜ್ಜಾ -ಅಜ್ಜಾ, ಒಂದು ಪೇಪರ್ ಕೊಡಬೇಕಂತೆ,ಬೇಗ ಕೊಡಿ.

ಯಾವ ಪೇಪರ್ ಮಗೂ ? ಈವತ್ತಿನದ್ದಾ, ನಾನು ಇನ್ನೂ ಓದಿಲ್ಲ. ಓದಿ ಆದ ನಂತರ ಕೊಡ್ತೇನೆ ಅಂತ ನಿನ್ನ ತಂದೆಗೆ ಹೇಳು.

ಛಿ ! ಛಿ ! ಈವತ್ತಿಂದು ಅಲ್ಲಾ ನಾನು ಕೇಳಿದ್ದು, ಹಳೇ ಪೇಪರ್ ತರ್‍ಲಿಕ್ಕೆ ಹೇಳಿದ್ದಾರೆ ನನ್ನ ಮಮ್ಮಿ -ಡ್ಯಾಡ್ ಅಲ್ಲ. ಕೊಡಿ, ಕೊಡಿ ಬೇಗ.

ಕೇಳಲು ಬಂದ ನೆರೆಮನೆಯ ಮಗುವಿನೊಂದಿಗೆ ಸಲಿಗೆ ಇತ್ತು. ಮಕ್ಕಳ ಮಾತು ಕೇಳುವುದರಲ್ಲಿ ಖುಷಿಯೂ ಇತ್ತು.

ಅವರನ್ನು ತಮಾಷೆಯಲ್ಲಿ ಸತಾಯಿಸುವ(ಇಳಿ?) ಪ್ರಾಯದ ಅಭ್ಯಾಸವೂ ಇತ್ತು.ಹಾಗಾಗಿ -

ನಿನ್ನ ಮಮ್ಮಿಗೆ ಈಗ ಯಾಕೋ ಹಳೇ ಪೇಪರ್ - ಏನಾದರೂ ಕಟ್ಟಲಿಕ್ಕೆ ಇದೆಯಾ ?

ಸರಿಯಾಗಲಿ ತಪ್ಪಾಗಲಿ - ನನ್ನ ಪ್ರಶ್ನೆಗಳಿಗೆ ಯಾವಾಗಲೂ ಸಟಕ್ಕಂತ ಉತ್ತರ ಕೊಡುತ್ತಾ ಇದ್ದ ಮಗು, ಸಾಯಿಲೆಂಟ್ ಯಾಕೆ ?

ನಾನೇ ಸ್ವಲ್ಪ ಹೊತ್ತು ಕಾದೆ. ಆಗಲೂ ಮಾತಿಲ್ಲ. ಏನಾಯಿತು ?

ಭಾರೀ ಅರ್ಜೆಂಟ್ ಆಗ ಮಾಡಿದಿ.ಈಗ ಯಾಕೋ ಮಾತಾಡೋದಿಲ್ಲ. ನಿನಗೆ ಪೇಪರ್ ಬೇಕೂಂತಾದ್ರೆ ಮಾತಾಡು, ಎಂದೆ.

ಮಗು ತಲೆ ಕೆಳಗೆ ಹಾಕಿತ್ತು. ಎಂದೂ ಇಲ್ಲದ ನಾಚಿಕೆ ತೋರಿತ್ತು. ಕೊನೆಗೂ ಕಷ್ಟಪಟ್ಟು ‘ಕಾಯಿ ಹೋಳಿಗೆ ಕಟ್ಟಿ ಕೊಡ್ಲಿಕ್ಕೆ’ ಎಂಬ ಗುಟ್ಟನ್ನು ಹೊರ ಬಿಟ್ಟಾಗ ಬಿಳೀಯ ಮುಖ ಕೆಂಪಾಗಿ ಹೋಗಿತ್ತು.

ಯಾವಾಗಿನ ಅಭ್ಯಾಸದ ಹಾಗೆ, ತಿಂಡಿಯ ಹೆಸರೆತ್ತಿದರೆ ನನಗೂ ಕೊಡ್ತೀಯಾ ಎನ್ನುತ್ತಾನೆ ಈ ಮುದುಕ. ಈಗೇನು ಮಾಡಲಿ ? ಎಂಬ ಯೋಚನೆಯೇ ಮಗುವಿನ ಮೌನಕ್ಕೆ ಕಾರಣ ಎಂದು ತಿಳಿದೆ) ಹ್ಹೊ ! ಅಷ್ಟೆಯಾ, ಈಗ ಕೊಡ್ತೇನೆ. ಬಾ ಎಂದೆ. ನಾವು ಪೇಪರ್ ರಾಶಿ ಹಾಕುತ್ತಿದ್ದ ಸಣ್ಣ ಕೋಣೆಗೆ ಕರೆದೊಯ್ದೆ.

ತನ್ನ ಎತ್ತರಕ್ಕಷ್ಟೇ ಬಿದ್ದಿದ್ದ ಪೇಪರ್ ರಾಶಿ ನೋಡಿದ ಮಗುವಿಗೆ, ನೆಲದಲ್ಲಿದ್ದ ಕೆಲವು ವರ್ಣಮಯ ಪತ್ರಿಕೆಗಳೂ ಕಾಣಿಸಿದವು. ಓ ಇದನ್ನು ತೆಗೀಲಾ ? ಎಂದು ಒಂದು ಪತ್ರಿಕೆಯನ್ನು ತೋರಿಸಿ ಮಗು ಕೇಳಿಯೂ ಬಿಟ್ಟಿತು. ಕೇಳಿ ಎತ್ತಿಕೊಂಡೂ ಬಿಟ್ಟಿತು.

ಪತ್ರಿಕೆಯಲ್ಲಿದ್ದ ಕಾಮಿಕ್ಸ್ ನೋಡುತ್ತಾ ನೆಲದಲ್ಲೇ ಕುಳಿತುಬಿಟ್ಟಿದ್ದ ಮಗಿವಿನ ಸಂತೋಷಕ್ಕೆ - ತಾಯಿಗೆ ಅರ್ಜೆಂಟಾಗಿ ಬೇಕಾದ ಪೇಪರಿನ ನೆನಪು ಮಾಡಿ - ಭಂಗ ತರಲು ಯಾಕೋ ಮನಸ್ಸಾಗಲಿಲ್ಲ. ಅದರ ಪ್ರಸ್ತಾಪ ಹೇಗೆ ಮಾಡಲಿ ಎಂದು ಯೋಚಿಸುತ್ತಾ ಇರುವಾಗ ‘ಇಷ್ಟು ಹೊತ್ತಾದರೂ ಬಾರದೆ ಇದ್ದ’ ಮಗುವನ್ನು ಹುಡಿಕಿಕೊಂಡು ಮಗುವಿನ ತಾಯಿಯೇ ಬಂದಳು.ನಮ್ಮ ಮಗು ಎಲ್ಲಿ ? ಎಂದು ಗೃಹಮಂತ್ರಿಯವರನ್ನು ಪ್ರಶ್ನಿಸಿ ನನ್ನ ಯೋಚನೆಗೇ ಭಂಗ ತಂದಳು.

ಅರ್ಜೆಂಟಿನಲ್ಲೂ ಅಷ್ಟು ಹೊತ್ತು ಆ ಕಿರುಕೋಣೆಯಲ್ಲಿ ಕಳೆದುದಕ್ಕೆ ನಮ್ಮಿಬ್ಬರನ್ನೂ -ಮಗುವನ್ನು ಜೋರಾಗಿ ನನ್ನನ್ನು ಸ್ವಲ್ಪ ಮೆಲ್ಲಗೆ - ದಬಾಯಿಸಿ ಒಂದು ಇಡೀ ಪೇಪರನ್ನೂ ಮಗುವನ್ನೂ ಒಟ್ಟಿಗೇ ಎಳೆದುಕೊಂಡು ಬಿರುಗಾಳಿಯ ಹಾಗೆ ಹೊರಟು ಹೋಗಲು, ಇಷ್ಟನ್ನು ಹೇಳುವ ಹೊತ್ತು ಕೂಡಾ ಆ ತಾಯಿಗೆ ತಗಲಲಿಲ್ಲ.

ನನ್ನ ಅಮೌಲ್ಯ (ಅಮೂಲ್ಯವಲ್ಲ,ನೆನಪಿರಲಿ) ಪೇಪರ್ ರಾಶಿಯನ್ನೇ ನೋಡುತ್ತಾ ನಿಂತಿದ್ದ ನನಗೆ ಅವಳ ದಬಾವಣೆಯ ಮಾತುಗಳ ಕಡೆಗೆ ಗಮನವೂ ಇರಲಿಲ್ಲ.

‘ಏನ್ರೀ ಸಂಗ್ತಿ ? ಯಾಕೆಹೀಗೆ ನಿಂತಿದ್ದೀರಿ ? ಹೊರಗೆ ಬರೋದಿಲ್ವಾ ?’ ಇತ್ಯಾದಿ ಇತ್ಯಾದಿ ಪ್ರಶ್ನೆಗಳು ನಮ್ಮ ಹೋಮ್ ಮಿನಿಸ್ಟರ್ರಿಂದ ಬರತೊಡಗಿದಾಗ ನಾನೆಲ್ಲಿದ್ದೇನೆ ಎಂಬುದು ನೆನಪಾಯಿತು. ‘ಏನು ನೆನಪಾಗ್ತಿದೆ?’ ಎಂದು ಯಜಮಾನಿಯ ಪ್ರಶ್ನೆ ಹೊರಟಾಗ ಹಳೇ ಕಾಗದ ಪುಸ್ತಕಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳುವವರ ನೆನಪುಗಳೂ ಮೂಡಿದವು.

‘ಏನು ನೆನಪಾಯಿತು ಅಂತ ಹೇಳ್ತೇನೆ ಬಾ’ ಎಂದೆ. ಕೋಣೆಯಿಂದ ಹೊರಗೆ ಬಂದು, ಆರಾಮವಾಗಿ ಕುಳಿತು, ನೆನಪಿನ ಕಥೆಗಳನ್ನು ಮನದಾಳದಿಂದ ಹೊರಗೆ ತೆಗೆದೆ.

(ನನ್ನ ಮನೆಯಾಕೆಗೆ ನಾನು ಕೇಳಿದ ಹಾಗೆ)

ಮುದ್ರಿಸಿದ ವಸ್ತುಗಳು ಸಿಗುವುದೇ ಅಪರೂಪವಾಗಿದ್ದ ಕಾಲದಲ್ಲಿ ಮುದ್ರಿತ ಸಾಮಗ್ರಿಗಳನ್ನೆಲ್ಲ ಸಂಗ್ರಹಿಸಿ ಇಡುವ ಅಭ್ಯಾಸ ಆರಂಭವಾಯಿತು. ಕೆಲವು ಗ್ರಂಥಗಳನ್ನಂತೂ ಉಳಿಸಿ ಇಟ್ಟುಕೊಳ್ಳಲೇ ಬೇಕಾಯಿತು. ಜೋಪಾನವಾಗಿಟ್ಟ ಗದುಗಿನ ಭಾರತ, ಭಗವದ್ಗೀತೆಗಳ ಪ್ರತಿಗಳನ್ನು ಕೆಲವು ಪತ್ರಿಕೆಗಳನ್ನು ಸಂಗ್ರಹಿಡುವ ಅಭ್ಯಾಸ ಬಂತು. ಆಗ ಪತ್ರಿಕೆಗಳ ಸಂಖ್ಯೆಯೂ ಕಡಿಮೆ. ಅವುಗಳಲ್ಲೂ ಹೆಚ್ಚಿನವು ವಾರಪತ್ರಿಕೆಗಳು, ಅದರಿಂದಾಗಿ ಸಂಗ್ರಹ ಬೆಳೆದು ದೊಡ್ಡ ರಾಶಿಯಾಗುವ ಯಾವ ಅಪಾಯವೂ ಇರಲಿಲ್ಲ. ಸಂಗ್ರಹಿಸಿದ್ದ ಹಳೆಯ ಪತ್ರಿಕೆಗಳ ಮಾರಾಟ(ಈಗಿನ ಹಾಗೆ) ಕಷ್ಟವಾಗಿರಲಿಲ್ಲ.

ಏನನ್ನಾದರೂ ಕಟ್ಟುವುದಕ್ಕೆ ಅಥವಾ ಸುತ್ತುವ ಕೆಲಸಕ್ಕೆ ದೊಡ್ಡ ಸೈಜಿನ ಕಾಗದವೇ ಬೇಕಾಗುತ್ತಿತ್ತು. ಅದರಿಂದ ಹಳೇ ಪೇಪರ್ ಕೊಳ್ಳುವವರ ತಂಡಗಳು ಎಲ್ಲ ಊರುಗಳಂತೆ ಮಂಗಳೂರಿನಲ್ಲೂ ಹುಟ್ಟಿಕೊಂಡವು. ಹಳೇ ಪೇಪರ್ ಮಾರುವವರ ಸಂಖ್ಯೆ ಹೆಚ್ಚಿದ ಹಾಗೆ ತಂಡಗಳು ಮೇಲುಗೈ ಸಾಧಿಸಿಕೊಂಡವು. ಒಂದೇ ರೀತಿಯ ಕಾಗದದಲ್ಲಿ ಮುದ್ರಣವಾಗಿದ್ದರೂ ಇಂಗ್ಲಿಷ್ ಪೇಪರಿಗೆ ಹೆಚ್ಚು ಬೆಲೆ -ಕನ್ನಡದ್ದಕ್ಕೆ ಕಡಿಮೆ ಎನ್ನುವ ಭೇದ ನೀತಿ ಜಾರಿಗೆ ಬಂತು. ಸಿಕ್ಕಿದಷ್ಟು ಸಾಕು ಎನ್ನುವವರು ಹೆಚ್ಚಾದರು. ರದ್ದಿ ಕಾಗದದ ಬೆಲೆಯನ್ನು ವ್ಯಾಪಾರಿಗಳು ಕುಗ್ಗಿಸುತ್ತಾ ಹೋದಾಗ ಬಾಯಿ ಬಡಿದುಕೊಂಡರು.

ಅಂಥ ಕಾಲದಲ್ಲೂ ಸಂಗ್ರಹಕ್ಕಾಗಿ ತಂದ ಯಾವ ಕಾಗದ ಚೂರನ್ನೂ ಮಾರುವುದಿಲ್ಲ ಎಂದು ಗಟ್ಟಿಯಾಗಿ ನಿಂತ ನಾಡಕರ್ಣಿ ಎಂಬ ಮಹಾಶಯರು ಮಂಗಳೂರಿನಲ್ಲಿ ಇದ್ದರು. ಮುದ್ರಣವಾದ ಪುಸ್ತಕ, ಪತ್ರಿಕೆ ಅಥವಾ ಬರೇ ಒಂದು ಕರಪತ್ರ( ಹ್ಯಾಂಡ್‍ಬಿಲ್) ಏನೇ ಇದ್ದರೂ ಅವರ ಸಂಗ್ರಹಕ್ಕೆ ಸೇರಿತೆಂದರೆ ಅವರ ಮನೆಯ ದೊಡ್ಡ ಕೋಣೆಯಿಂದ ಹೊರಬೀಳುವ ಪ್ರಶ್ನೆಯೇ ಇರಲಿಲ್ಲ. ಯಾವ ಅಪೂರ್ವ ದಾಖಲೆಯಾದರೂ ಅವರಲ್ಲಿ ಖಂಡಿತವಾಗಿಯೂ ಇದೆ ಎಂಬ ಪ್ರತೀತಿ ಇತ್ತು.

ಆದರೆ ಅವರು ‘ಇನ್ನಿಲ್ಲ’ ಎಂದಾದ ಮೇಲೆ ಅವರ ಕುಟುಂಬದವರು ಸಂಗ್ರಹವನ್ನೆಲ್ಲ ಹಳೇಪೇಪರ್ ಖಾಲಿ ಬಾಟ್ಲಿಯವರಿಗೆ ಸಿಕ್ಕಿದಷ್ಟಕ್ಕೆ ಮಾರಿದರು ಎನ್ನುತ್ತಾರೆ. ಅವರು ಅದನ್ನು ಉಳಿಸಿಕೊಂಡಿದ್ದರೆ, ಮಹಾತ್ಮಾಗಾಂಧಿಯವರ ಭಗವದ್ಗೀತೆಗೆ ಸಿಕ್ಕಿದ ಹಾಗೆ ಏಲಂ ಹಣವೇನೂ ಸಿಕ್ಕಲಾರದು ಎಂದು ಅವರು ಭಾವಿಸಿರಬೇಕು. ಅದರಿಂದಾಗಿ ಲಾಭ ಕೆಲವರಿಗೆ ಆಯಿತು, ನಷ್ಟ ಸಮಾಜಕ್ಕಾಯಿತು.

ಅಂತಹದೇ ಇನ್ನೊಂದು ಪ್ರಸಂಗ ಇತ್ತೀಚಿನ ದಶಕಗಳಲ್ಲಿ ನಡೆಯಿತು. ರೆಡಿಮೇಡ್ ಬಟ್ಟೆಗಳ ವ್ಯಾಪಾರ ಮಾಡುತ್ತಿದ್ದರೂ ಸಾಹಿತ್ಯ -ಪತ್ರಿಕೋದ್ಯಮ ಇವುಗಳಲ್ಲಿ ಆಸಕ್ತಿ ಉಳಿಸಿ ಕೊಂಡಿದ್ದ ಮಾಜಿ ಉಪಾಧ್ಯಾಯರೊಬ್ಬರು ಬಹಳ ವರ್ಷಗಳ ಕಾಲ ಒಳ್ಳೆಯ ವಾರಪತ್ರಿಕೆ - ಮಾಸಪತ್ರಿಕೆಗಳನ್ನು ಸಂಗ್ರಹಿಸಿ ಇಟ್ಟಿದ್ದರು. ಆರಂಭದ ಸಂಚಿಕೆಯಿಂದ ಹಿಡಿದು ಇತ್ತೀಚಿನ ಸಂಚಿಕೆವರೆಗೂ ಅವರ ಸಂಗ್ರಹ ಬೆಳೆದಿತ್ತು. ಕ್ರಮವಾಗಿ ಇಟ್ಟುಕೊಂಡಿದ್ದ ಸಂಗ್ರಹಕ್ಕೆ ಇರುವ ಕಪಾಟುಗಳು ಸಾಲದೆನ್ನುವ ಸ್ಥಿತಿಗೆ ಬಂದಾಗ ಒಂದು ದಿನ ಇದ್ದಕ್ಕಿದ್ದಂತೆ ಅವರ ಸಂಗ್ರಹಕ್ಕೆ ಮನೆಯವರು ‘ಗಿರಾಕಿ’ ಹುಡುಕಿ, ಪತ್ರಿಕೆಗಳ ರಾಶಿಗಳನ್ನು ತೂಗಿಸಿ ಹೊರಹಾಕಿದರು. ಅವರು ಖರ್ಚು ಮಾಡಿದ್ದ ಒಟ್ಟು ಹಣದ ಹತ್ತನೇ ಒಂದಂಶವಾದರೂ ತಿರುಗಿ ಬಂತೋ ಇಲ್ಲವೋ - ಅದು ಬೇರೆ ಮಾತು.

ಈಗಿನ ನಮ್ಮ ಸಂಗ್ರಹದ ಪಾಡೇನು ? ಈಗ ಯಾವುದನ್ನು ಕಟ್ಟಲೂ ಕಾಗದ ಬೇಡ. ಇದು ಪ್ಲಾಸ್ಟಿಕ್ ಯುಗ. ಕೊಟ್ಟರೆ ತೆಕ್ಕೊಳ್ಳುವವರಿಲ್ಲ. ಇಟ್ಟುಕೊಳ್ಳಲು ಸಾಧ್ಯವಿಲ್ಲ. ಅಂಥಾದ್ರಲ್ಲಿ - ಹೋಳಿಗೆ ಕಟ್ಲಿಕ್ಕೆ ಕಾಗದ ಕೊಡಿ ಎಂದು ಆ ಮಗು ಕೇಳಿದಾಗ ಎಷ್ಟು ಸಂತೋಷವಾಯಿತು ಗೊತ್ತೆ ? ನಿಮಗೆ ಹೇಗೆ ಗೊತ್ತಾಗಬೇಕು ?






ಶ್ರೀ ಪದ್ಯಾಣ ಗೋಪಾಲಕೃಷ್ಣ ( ಪ.ಗೋ.)







ಶ್ರೀ ಪದ್ಯಾಣ ಗೋಪಾಲಕೃಷ್ಣ ( ಪ.ಗೋ. ೧೯೨೮ - ೧೯೯೭ ) - ಹುಟ್ಟೂರು ಗಡಿಯಂಚಿನಲ್ಲಿರುವ ಅಡ್ಯನಡ್ಕ. ೧೯೫೬ ರಿಂದ ೧೯೯೭ನೇ ಇಸವಿಯವರೆಗೆ ನಾಲ್ಕು ದಶಕಗಳಷ್ಟು ಧೀರ್ಘ ಕಾಲಾವಧಿಯಲ್ಲಿ ಹಲವು ಕನ್ನಡ ಪತ್ರಿಕೆಗಳ ಉಪಸಂಪಾದಕ, ವರದಿಗಾರರಾಗಿದ್ದ ಪ.ಗೋ.ರವರು ೧೯೬೩ರಿಂದ ಸುಮಾರು ಎರಡು ವರ್ಷಗಳ ಕಾಲ ಮಂಗಳೂರಿನಿಂದ ತಮ್ಮ ಸ್ವಂತ ಕನ್ನಡ ದಿನ ಪತ್ರಿಕೆ "ವಾರ್ತಾಲೋಕ"ದ ವರದಿಗಾರ, ಮುದ್ರಕ ಮತ್ತು ಪ್ರಕಾಶಕರಾಗಿ ನಡೆಸಿ ಪತ್ರಿಕೋದ್ಯಮದ ಎಲ್ಲಾ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದವರು. ಜೊತೆಗೆ ೧೩ ಪತ್ರಿಕೆಗಳಿಗೆ ಆಗಾಗ "ಕಾಲಂಕಾರ"ರಾಗಿ ಸುಮಾರು ನಾಲ್ಕು ಸಾವಿರ ಪುಟಗಳಿಗೂ ಮಿಕ್ಕಿದ ಕಾಲಂ ಸಾಹಿತ್ಯ ಪ್ರಸ್ತುತ ಪಡಿಸಿದ ಪ. ಗೋ. ಅವರಿಗೆ ಇದ್ದುದನ್ನು ಸರಳವಾಗಿ ಹೇಳುವ ರೂಢಿಯೇ ಇಲ್ಲ. ಅವರದೆಲ್ಲವೂ ವ್ಯಂಗ್ಯ ದಿಂದಲೇ ಪ್ರಾರಂಭ, ವ್ಯಂಗ್ಯದಿಂದಲೇ ಕೊನೆ! ಅವರು ಕೊಡುವ ಉದಾಹರಣೆಗಳು ಹಳೆಯ ನೀತಿ ಪದ್ಯಗಳನ್ನು ತಿರುಚಿಕೊಂಡು ಹುಟ್ಟಿಸುವ ವ್ಯಂಗ್ಯ ಮಾರ್ಮಿಕವಾದುದು.




ಪ. ಗೋಪಾಲಕೃಷ್ಣ ಸ್ಮಾರಕ ಸೇವಾ ಟ್ರಸ್ಟಿನ ವತಿಯಿಂದ ೨೦೦೨ನೆ ಇಸವಿಯಲ್ಲಿ ಮಂಗಳೂರಿನಿಂದ ಪ್ರಕಟಣೆಗೊಂಡ ಲೇಖನ ಮಾಲಿಕೆ "ನೋ ಚೇಂಜ್ ಕಥೆಗಳು". ಈ ೨೪ ಅಂಕಣಗಳ ಕಂಕಣವನ್ನು ಮರು ಪ್ರಕಟಿಸಲು ಅನುಮತಿಯನ್ನು ಇತ್ತ ಟ್ರಸ್ಟಿನ ಅಧ್ಯಕ್ಷರಾದ, ಪ.ಗೋ ರವರ ಸಹೋದ್ಯೋಗಿ, ಮಂಗಳೂರಿನ ಹಿರಿಯ ಪತ್ರಕರ್ತ ಶ್ರೀ. ಯು.ನರಸಿಂಹ ರಾವ್ ಮತ್ತು ಹುಟ್ಟೂರಿನ ಆಪ್ತ ಮಿತ್ರ, ಟ್ರಸ್ಟಿನ ಸ್ಥಾಪಕರಾದ ಬೆಂಗಳೂರಿನ ವೈದ್ಯ, ಲೇಖಕ ಡಾ. ಎಂ. ಬಿ. ಮರಕಿಣಿಯವರಿಗೆ ವಂದನೆಗಳು.
-----
ಶೀರ್ಷಿಕೆಯ ಛಾಯಚಿತ್ರ:




೧೯೭೦ರ ದಶಕದ ಮಂಗಳೂರಿನ ಕಾರ್ಯನಿರತ ಪತ್ರಕರ್ತರು: ನವಭಾರತ ಪತ್ರಿಕೆಯ ವರದಿಗಾರ ಶ್ರೀ. ಮಂಜುನಾಥ ಭಟ್ , ಪ್ರಜಾವಾಣಿ ಮಂಗಳೂರು ಪ್ರತಿನಿಧಿ ಶ್ರೀ.ಆರ್.ಪಿ.ಜಗದೀಶ್, ಪಿ. ಟಿ.ಐ ಮಂಗಳೂರು ಪ್ರತಿನಿಧಿ ಶ್ರೀ. ಟಿ.ಪಿ. ಶಂಕರ್, ಸಂಯುಕ್ತ ಕರ್ನಾಟಕ ಮಂಗಳೂರು ಪ್ರತಿನಿಧಿ ಶ್ರೀ. ಪ. ಗೋಪಾಲಕೃಷ್ಣ, "ದಿ.ಹಿಂದೂ" ಮಂಗಳೂರು ಪ್ರತಿನಿಧಿ ಶ್ರೀ.ಯು. ನರಸಿಂಹ ರಾವ್ ,ಉದಯವಾಣಿ ಮಂಗಳೂರು ವರದಿಗಾರ ಶ್ರೀ. ಎ.ವಿ.ಮಯ್ಯರು. ಚಿತ್ರದ ಬಲ ತುದಿಯಲ್ಲಿ ಹೊಸದಿಗಂತ ಪತ್ರಿಕೆಯ ಮಂಗಳೂರು ಪ್ರತಿನಿಧಿ ಶ್ರೀ. ಪಲಿಮಾರು ವಸಂತ ನಾಯಕ್.
----



ಕೃಪೆ: ಗಲ್ಫ್ ಕನ್ನಡಿಗ










Thursday, June 11, 2009

’ನೋ ಚೇಂಜ್ ಕಥೆಗಳು’ -- ೨೧... ಹೊಟ್ಟೆ ಹುಣ್ಣಾಗಿಸುವುದು ಅಂದರೆ..


















ಹೊಸಸಂಜೆ ಪತ್ರಿಕೆಗಾಗಿ ಹೆಸರಾಂತ ಪತ್ರಕರ್ತ ಶ್ರೀ ಪದ್ಯಾಣ ಗೋಪಾಲಕೃಷ್ಣ (ಪ.ಗೋ.) ಅವರು ಬರೆದ ೨೪ ಅಂಕಣಗಳ ಕಂಕಣ" ನೋ ಚೇಂಜ್ ಕಥೆಗಳು". ಈ ಬರಹಗಳನ್ನು ಅವರ ಸ್ಮಾರಕಾರ್ಥವಾಗಿ ’ಗಲ್ಫ್ ಕನ್ನಡಿಗ’ ಪ್ರತಿ ಗುರುವಾರ ಪ್ರಕಟಿಸಲಾಗುತ್ತಿದ್ದು ಇದು ಇಪ್ಪತ್ತೊಂದನೆ ಅಂಕಣ.


ಹೊಟ್ಟೆ ಹುಣ್ಣಾಗಿಸುವುದು ಅಂದರೆ..

ಹೊಟ್ಟೆಯೊಳಗೆ ಹೇಗೆ ಹುಣ್ಣಾಗುತ್ತದೆ? ಹುಣ್ಣು “ಆಗಿಸುತ್ತಾರೆ” ಅಂತಾರಲ್ಲಾ ಅದಾದರೂ ಹೇಗೆ ಸಾಧ್ಯ? ನಮ್ಮ ಹೊಟ್ಟೆಯೊಳಗೆ ಬೇರೆಯವರು ಹುಣ್ಣು ಉಂಟು ಮಾಡುತ್ತಾರೆ ಎಂದಾದರೆ, ಆ ವಿಧಾನವಾದರೂ ಯಾವುದು?

ಏನಿದು? ಒಂದರ ಮೇಲೊಂದು ಪ್ರಶ್ನೆ, ಅಂತ ಗಾಬರಿಯಾಗಬೇಡಿ.

ನಗಿಸಿ ನಗಿಸಿ ಹೊಟ್ಟೆ ಹುಣ್ಣು ಮಾಡಿಸಿಬಿಡುತ್ತಾ ಇದ್ದರೂ ಅಂತ ಮೊನ್ನೆ ನಾನು ಒಬ್ಬರ ಸುದ್ದಿಯನ್ನು ಮನೆಗೆ ಬಂದ ಇಬ್ಬರ ಎದುರು ವರ್ಣಿಸುತ್ತಾ ಇದ್ದಾಗ -

ಆ ಇಬ್ಬರಲ್ಲಿ ಒಬ್ಬ (ಚಿದಾನಂದಾಂತ ಹೆಸರು ಬೇರೆ ಹೇಳಬೇಕೆ?) ಕೇಳಿಯೇ ಬಿಟ್ಟ - ಪ್ರಶ್ನೆಗಳು ಅವು. ನೀನು ಹೇಳಿದ್ದು ಸರಿಯಲ್ಲ, ಅಥವಾ ಸತ್ಯವೆಂದು ಕಾಣುವ ಹಾಗೆ ವರ್ಣಿಸಲು ನೀನು ತಿಳಿದಿಲ್ಲ ಎನ್ನುವ ಆಪಾದನೆಗಳೆಲ್ಲ ಅವನ ಪ್ರಶ್ನೆಗಳಲ್ಲಿ ಅಡಕವಾಗಿದ್ದವು.

ಕಳೆದ ವರ್ಷವಾಗಿದ್ದರೆ, ಅವನ ಪ್ರಶ್ನೆಗಳಿಗೆ ಒಂದೇ ಮಾತಿನ ಒರಟು ಉತ್ತರ ಕೊಡುತ್ತಿದ್ದೆ. ಮೊನ್ನೆ ಅಂಥ ಧೈರ್ಯ ಇರಲಿಲ್ಲ.

“ಅಣ್ಣಾ, ನಾನು ವರ್ಣಿಸುತ್ತಾ ಇದ್ದದ್ದು ತಮ್ಮ ಹಾಸ್ಯಪ್ರವೃತ್ತಿಯಿಂದ ಜನರನ್ನು ನಗಿಸುತ್ತಾ ಇದ್ದವರ ಥಾಕತ್ತನ್ನು. ವಿಚಾರವಾದದ ವೈಜ್ಞಾನಿಕ ಅಸತ್ಯವನ್ನಲ್ಲ” ಎಂದೆ.

ಇವನ್ಯಾಕೆ ಮೆತ್ತಗಾಗಿದ್ದಾನೆ, ದಬಾಯಿಸುವುದು ಸರಿಯಲ್ಲ (ಪಾಪ ಬದುಕಿಕೊಳ್ಳಲಿ) ಎನ್ನುವ ಭಾವನೆ ಚಿದ್ದನಲ್ಲಿ ಮೂಡಿರಬೇಕು. “ಓಹೋ ಹಾಗೋ ! ಸಾವಿರ ಜನರ ಸಭೆಯಲ್ಲೂ ಹಾಸ್ಯದ ಮನೋರಂಜನೆ ಒದಗಿಸಿ, ಸೇರಿದ್ದವರೆಲ್ಲರನ್ನೂ ‘ಹೊಟ್ಟೆ ಹುಣ್ಣಾಗುವಷ್ಟು’ ನಗಿಸುವ ಸಮರ್ಥರ ಸುದ್ದಿಯೋ ನೀವು ಹೇಳುವುದು ?” ಎಂದ ಚಿದ್ದ ‘ದಾರಿಗೆ ಬಂದ’

ಸಾವಿರ -ಗೀವಿರ ಜನರ ಸಭೆಯ ವಿಷಯ ಗೊತ್ತಿಲ್ಲ. ಆದರೆ ಕೆಲವು ನೂರು ಜನರ ಸಭೆಯ ‘ಸ್ಟೇಜ್’ನ ಮೇಲೆ ಇದ್ದಷ್ಟೂ ಹೊತ್ತು ನಗಿಸುತ್ತಾ ಇದ್ದವರ ಸುದ್ದಿಯಪ್ಪ ನಾನು ಹೇಳುವುದು, ಎಂದೆ.

ಚಿದಾನಂದನಲ್ಲಿ ಮೂಡಿದ್ದ ಕರುಣೆ ಒಂದು ಕ್ಷಣ ಮಾಯವಾಯಿತೆ? “ಅದೇನು ಮಹಾ ! ಹತ್ತು ಸಾವಿರ ಪ್ರೇಕ್ಷಕರಿದ್ದರೂ ಅವರೆಲ್ಲರನ್ನೂ ಏಕಕಾಲಕ್ಕೆ ನಗಿಸುವ ಪ್ರಸಿದ್ಧ ಯಕ್ಷಗಾನ ಹಾಸ್ಯಪಟುಗಳು ಈಗಲೂ ಇದ್ದಾರಲ್ಲ” ಎಂದಾಗ ‘ನೀಡಿದ್ದ ಬೆಂಬಲವನ್ನು ಹಿಂತೆಗೆದುಕೊಳ್ಳುವ’ ರಾಜಕಾರಣಿಯನ್ನು ಅವನಲ್ಲಿ ನಾನು ಕಂಡೆ.

ಆದರೂ, “ಆ ಮಾತು ಬೇರೆ ಚಿದಣ್ಣ, ಅಲ್ಲಾದರೆ, ಮನರಂಜನೆಯ ವಾತಾವರಣ ಮೊದಲೇ ನಿರ್ಮಿತವಾಗಿದೆ. ಅಗತ್ಯವಿರುವಷ್ಟು ವೇಷಭೂಷಣ-ಮೇಕಪ್ ಎಲ್ಲಾ ಮಾಡಿಕೊಂಡಿರುವ ಹಾಸ್ಯಕಲಾವಿದರೇ ಇರುತ್ತಾರೆ. ನಾನು ಈಗ ವಿವರಿಸಿ ಹೇಳಲು ಪ್ರಯತ್ನಪಡುವ -ವಿಚಾರ ಅಂಥವರದಲ್ಲ...”

...ಅಣಕು, ವ್ಯಂಗ್ಯ ಇತ್ಯಾದಿಗಳನ್ನೆಲ್ಲಾ ಹದವರಿತು ಮಿಶ್ರ ಮಾಡಿ, ಯಾವುದೇ ರೀತಿಯ ‘ಮೇಕಪ್’ ಇಲ್ದೆ, ಸೇರಿದ ಜನರನ್ನು ತಮ್ಮ ಮಾತಿನ ಮೋಡಿಯಿಂದಲೇ ರಂಜಿಸುವ ಸಾಮರ್ಥ್ಯ ಇರುವವರದು.

“ಅಂದರೆ, ಈ ಮಿಮಿಕ್ರಿ ಅಂತಾ ಎಲ್ಲಾ ಮಾಡ್ತಾರಲ್ಲಾ. ಅಂಥವರಾ?” ಅವನ ಜೊತೆಗೆ ಬಂದವರು “ಚಿದಾ, ಅವರು ಹೇಳುವುದನ್ನು ಹೇಳಲಿಯಪ್ಪಾ!” ಎಂದು ಸೌಮ್ಯವಾಗಿ ಎಚ್ಚರಿಸಿದ ಕಾರಣ, ಚಿದಾ ಒಮ್ಮೆಗೆ ‘ಚಪ್ಪೆ’ಯಾದ. ಅವರ ಮುಖವನ್ನೇ ನೋಡುತ್ತಾ, ನನ್ನ ಕಡೆಗೂ ತಿರುಗದೆ ‘ಹೂಂ ಹೇಳಿ!’ ಎಂಬ ಅಪ್ಪಣೆ ದಯಪಾಲಿಸಿದ.

ಇಕೋ, ಒಬ್ಬಿಬ್ಬರ ಸುದ್ದಿ ಮಾತ್ರ ಹೇಳ್ತೇನೆ. ಎಸ್.ಆರ್. ಬಾಲಗೋಪಾಲ್ ಅಂತ ಒಂದು ಹೆಸರು ಕೇಳಿದ್ದಿಯಾ ?

ಅವರ ‘ಜಲ್ಸಿ’ನ ಕಾಲ ಒಂದಿತ್ತು. ೬೦ರ ದಶಕದಲ್ಲಿ, ತಮ್ಮ ಕಾರ್ಯಕ್ರಮಗಳಿಗೆ ಅವರನ್ನು ಕರೆಸಲೇ ಬೇಕು ಎಂದು ಹಟ ಹಿಡಿಯುವ ಜನರೂ ಮಂಗಳೂರಿನಲ್ಲಿ ಇದ್ದರು. ಸ್ಟೇಜಿನಲ್ಲಿ ಬಂದು ನಿಂತ ಮೇಲೆ ಅವರು ಯಾವ ಸುದ್ದಿ ತೆಗೆದರೂ, ಯಾವ ವಿಷಯ ಎತ್ತಿಕೊಂಡರೂ, ಹಾಸ್ಯದ ಲಾಸ್ಯ ಅವುಗಳಲ್ಲಿರುತ್ತಿತ್ತು. ಅವರ ನಟನೆಯೂ ಅಷ್ಟೇ ‘ಸ್ವಾಭಾವಿಕ’, ಭಾಷೆ ಗೊತ್ತಿಲ್ಲದವರಿಗೂ ಅರ್ಥವಾಗುವಂಥಾದ್ದು.

ಒಮ್ಮೆ ನೆಹರೂ ಮೈದಾನಿನ ಒಂದು ಕಾರ್ಯಕ್ರಮಕ್ಕೆ ಬಂದಿದ್ದ ಇಗೊರ್ ಬೋನಿ ಎಂಬ ರಶ್ಯನ್ ರಾಜತಾಂತ್ರಿಕ, ಬಾಲಗೋಪಾಲರು ಕೆಲವರ ಬಾಯಿಯಿಂದ ಹೊರಬೀಳುವ ಕಫದ ಮಾಲೆಯನ್ನು ‘ಚಿತ್ರಿಸಿ’ ತೋರಿಸುತ್ತಿದ್ದಾಗ, ನಕ್ಕು ನಕ್ಕು ತನ್ನ ಹೊಟ್ಟೆ ಹಿಡಿದುಕೊಂಡ ಚಿತ್ರ ಈಗಲೂ ನೆನಪಾಗುತ್ತದೆ.(ಅಂಥಾದ್ದೇ ಬೇರೆ ಕೆಲವು ಸನ್ನಿವೇಶಗಳೂ ನೆನಪಿದೆ.)

ಅವರಂತೆ ಇನ್ನೊಬ್ಬರು ರಾಮಣ್ಣ ರೈಗಳು. ರೈಗಳದು ಹೆಚ್ಚು ಮಾತಿನ ಮೋಡಿ. ನ್ಯಾಯಮೂರ್ತಿ ಕೌಡೂರು ಸದಾನಂದ ಹೆಗ್ಡೆಯವರು ನ್ಯಾಯವಾದಿಗಳಾಗಿದ್ದಾಗ ಕೋರ್ಟಿನಲ್ಲಿ ವಾದ ಮಂಡಿಸುತ್ತಿದ್ದ ರೀತಿಯ ‘ಪ್ರತಿ ಮಾಡಿ’ರೈಗಳು ತೋರಿಸುತ್ತಿದ್ದುದನ್ನು ನೋಡಿ ಆನಂದಿಸಿದ ಪ್ರಸಿದ್ಧರು ಈಗಲೂ ಇದ್ದಾರೆ.

ಅವರಿಬ್ಬರಿಂದಲೂ ಸ್ಫೂರ್ತಿ ಪಡೆದು ಅವರನ್ನು ಅನುಕರಿಸಿದವರು ಸಾಧ್ಯವಿರುವಾಗಲೆಲ್ಲ ‘ತಮ್ಮತನ’ ತೋರಿಸಿ ವೈಶಿಷ್ಟ್ಯ ಸಾಧಿಸಿದವರು ಅನಂತರದ ದಶಕಗಳಲ್ಲಿ ಎಷ್ಟೋ ಮಂದಿ ಇದ್ದಾರೆ. ಅವಕಾಶ ಸಿಕ್ಕಿದರೆ,ಫಿಲ್ಮ್ ಟೀವಿಗಳಲ್ಲಿ ಕೂಡಾ ಮೆರೆಯುವಂಥ ಸಾಮರ್ಥ್ಯವೂ ಅವರಲ್ಲಿದೆ. (ಎಲ್ಲರ ಹೆಸರುಗಳನ್ನೂ ಹೇಳುವ ಅಗತ್ಯವಿಲ್ಲವಲ್ಲ ?)

ಮನುಷ್ಯನಲ್ಲಿರುವ ಹಾಸ್ಯ ಪ್ರವೃತ್ತಿಯನ್ನು ನೋವಾಗದಂತೆ ಕೆಣಕುವ ಅಭ್ಯಾಸ ಪುರಾಣಕಾಲದಿಂದಲೂ ಇದೆ. ಮುಂದೆಯೂ ಇರುತ್ತದೆ. ಅದು ಬದಲಾಗುವುದಿಲ್ಲ!

“ಹಾಗಾದರೆ,‘ಹೊಟ್ಟೆ ಹುಣ್ಣಾಗುವುದು’ ವ್ಯಂಗ್ಯಮಿಶ್ರಿತ ಉತ್ಪ್ರೇಕ್ಷೆಯ ನುಡಿ ಎನ್ನಿ”

“ಹೌದು. ಆ ಹೊಟ್ಟೆ ಹುಣ್ಣು ಅಲ್ಸರ್’ ಅಂತೂ ಅಲ್ಲ. ತಿಳಿಯಿತೇನಣ್ಣ...” ಎಂದು ರಾಗವೆಳೆದಾಗ, ನನ್ನಿಂದ ಎಷ್ಟೋ ವರ್ಷಗಳಿಗೆ ಕಿರಿಯವಾದ ಚಿದಾನಂದನಿಗೂ ‘ಅಣ್ಣಾ’ ಮಾತಿನ ಅರ್ಥವಾಗಿತ್ತು.

(ಅಂದ ಹಾಗೆ, ಅವನಿಗೆ ಸೌಮ್ಯಸೂಚನೆ ಇತ್ತು. ಅವನ ಪ್ರಶ್ನೆ ನಿಲ್ಲಿಸಿದವರು -ಅವನ ಭಾವೀ ಮಾವ, ಶ್ರೀಮಂತರೂ..............ಅಂತೆ.)


-----






ಶ್ರೀ ಪದ್ಯಾಣ ಗೋಪಾಲಕೃಷ್ಣ ( ಪ.ಗೋ. ೧೯೨೮ - ೧೯೯೭ ) - ಹುಟ್ಟೂರು ಗಡಿಯಂಚಿನಲ್ಲಿರುವ ಅಡ್ಯನಡ್ಕ. ೧೯೫೬ ರಿಂದ ೧೯೯೭ನೇ ಇಸವಿಯವರೆಗೆ ನಾಲ್ಕು ದಶಕಗಳಷ್ಟು ಧೀರ್ಘ ಕಾಲಾವಧಿಯಲ್ಲಿ ಹಲವು ಕನ್ನಡ ಪತ್ರಿಕೆಗಳ ಉಪಸಂಪಾದಕ, ವರದಿಗಾರರಾಗಿದ್ದ ಪ.ಗೋ.ರವರು ೧೯೬೩ರಿಂದ ಸುಮಾರು ಎರಡು ವರ್ಷಗಳ ಕಾಲ ಮಂಗಳೂರಿನಿಂದ ತಮ್ಮ ಸ್ವಂತ ಕನ್ನಡ ದಿನ ಪತ್ರಿಕೆ "ವಾರ್ತಾಲೋಕ"ದ ವರದಿಗಾರ, ಮುದ್ರಕ ಮತ್ತು ಪ್ರಕಾಶಕರಾಗಿ ನಡೆಸಿ ಪತ್ರಿಕೋದ್ಯಮದ ಎಲ್ಲಾ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದವರು. ಜೊತೆಗೆ ೧೩ ಪತ್ರಿಕೆಗಳಿಗೆ ಆಗಾಗ "ಕಾಲಂಕಾರ"ರಾಗಿ ಸುಮಾರು ನಾಲ್ಕು ಸಾವಿರ ಪುಟಗಳಿಗೂ ಮಿಕ್ಕಿದ ಕಾಲಂ ಸಾಹಿತ್ಯ ಪ್ರಸ್ತುತ ಪಡಿಸಿದ ಪ. ಗೋ. ಅವರಿಗೆ ಇದ್ದುದನ್ನು ಸರಳವಾಗಿ ಹೇಳುವ ರೂಢಿಯೇ ಇಲ್ಲ. ಅವರದೆಲ್ಲವೂ ವ್ಯಂಗ್ಯ ದಿಂದಲೇ ಪ್ರಾರಂಭ, ವ್ಯಂಗ್ಯದಿಂದಲೇ ಕೊನೆ! ಅವರು ಕೊಡುವ ಉದಾಹರಣೆಗಳು ಹಳೆಯ ನೀತಿ ಪದ್ಯಗಳನ್ನು ತಿರುಚಿಕೊಂಡು ಹುಟ್ಟಿಸುವ ವ್ಯಂಗ್ಯ ಮಾರ್ಮಿಕವಾದುದು.

ಪ. ಗೋಪಾಲಕೃಷ್ಣ ಸ್ಮಾರಕ ಸೇವಾ ಟ್ರಸ್ಟಿನ ವತಿಯಿಂದ ೨೦೦೨ನೆ ಇಸವಿಯಲ್ಲಿ ಮಂಗಳೂರಿನಿಂದ ಪ್ರಕಟಣೆಗೊಂಡ ಲೇಖನ ಮಾಲಿಕೆ "ನೋ ಚೇಂಜ್ ಕಥೆಗಳು". ಈ ೨೪ ಅಂಕಣಗಳ ಕಂಕಣವನ್ನು ಮರು ಪ್ರಕಟಿಸಲು ಅನುಮತಿಯನ್ನು ಇತ್ತ ಟ್ರಸ್ಟಿನ ಅಧ್ಯಕ್ಷರಾದ, ಪ.ಗೋ ರವರ ಸಹೋದ್ಯೋಗಿ, ಮಂಗಳೂರಿನ ಹಿರಿಯ ಪತ್ರಕರ್ತ ಶ್ರೀ. ಯು.ನರಸಿಂಹ ರಾವ್ ಮತ್ತು ಹುಟ್ಟೂರಿನ ಆಪ್ತ ಮಿತ್ರ, ಟ್ರಸ್ಟಿನ ಸ್ಥಾಪಕರಾದ ಬೆಂಗಳೂರಿನ ವೈದ್ಯ, ಲೇಖಕ ಡಾ. ಎಂ. ಬಿ. ಮರಕಿಣಿಯವರಿಗೆ ವಂದನೆಗಳು.
-----
ಶೀರ್ಷಿಕೆಯ ೧೯೮೦ರ ದಶಕದ ಛಾಯಚಿತ್ರ:

ಸಾಹಿತಿ,ರಾಜಕಾರಿಣಿ,ಕರ್ನಾಟಕ ವಿಧಾನ ಸಭೆಯ ವಿರೋಧ ಪಕ್ಷದ ನಾಯಕ ಶ್ರೀ. ಎಂ.ವೀರಪ್ಪ ಮೊಯ್ಲಿಯವರ ಜೊತೆ ಸಂವಾದದಲ್ಲಿ ಉದಯವಾಣಿ ವರದಿಗಾರರಾದ ಶ್ರೀ. ಎ. ವಿ. ಮಯ್ಯ, ಸಂಯುಕ್ತ ಕರ್ನಾಟಕ ಮಂಗಳೂರು ಪ್ರತಿನಿಧಿ ಶ್ರೀ. ಪ.ಗೋಪಾಲಕೃಷ್ಣ, ಹೊಸದಿಗಂತ ಪತ್ರಿಕೆಯ ಶ್ರೀ. ಪಲಿಮಾರು ವಸಂತ ನಾಯಕ್ ಮತ್ತು ನವಭಾರತ ಪತ್ರಿಕೆಯ ಶ್ರೀ. ಮಂಜುನಾಥ ಭಟ್.
-----
ಕೃಪೆ: ಗಲ್ಫ್ ಕನ್ನಡಿಗ

Thursday, June 4, 2009

’ನೋ ಚೇಂಜ್ ಕಥೆಗಳು’ -- ೨೦...ನಿಮ್ಮನ್ನೇ ರಿಪೇರಿ ಮಾಡುವವರು !














ಹೊಸಸಂಜೆ ಪತ್ರಿಕೆಗಾಗಿ ಹೆಸರಾಂತ ಪತ್ರಕರ್ತ ಶ್ರೀ ಪದ್ಯಾಣ ಗೋಪಾಲಕೃಷ್ಣ (ಪ.ಗೋ.) ಅವರು ಬರೆದ ೨೪ ಅಂಕಣಗಳ ಕಂಕಣ" ನೋ ಚೇಂಜ್ ಕಥೆಗಳು". ಈ ಬರಹಗಳನ್ನು ಅವರ ಸ್ಮಾರಕಾರ್ಥವಾಗಿ ’ಗಲ್ಫ್ ಪ್ರತಿ ಗುರುವಾರ ಪ್ರಕಟಿಸಲಾಗುತ್ತಿದ್ದು ಇದು ಇಪ್ಪತ್ತನೇ ಅಂಕಣ.

ನಿಮ್ಮನ್ನೇ ರಿಪೇರಿ ಮಾಡುವವರು !

ನಿನ್ನೆಯಲ್ಲ ಮೊನ್ನೆ, ಹೆದ್ದಾರಿ ಪೂರ್ತಿ ಇದ್ದ ಹೊಂಡಗಳನ್ನೆಲ್ಲ ತಪ್ಪಿಸಿಕೊಂಡು ನಡೆದು ಹೋಗಲು ಪ್ರಯತ್ನಿಸುತ್ತಾ ಇದ್ದೆ. ತಲೆ ಎತ್ತಿ ನಡೆಯಲು ಸಾಧ್ಯವಿರಲಿಲ್ಲ. ಮಾರ್ಗದಲ್ಲಿ ‘ಹಾರಾಡುವ’ ಬಸ್ಸು ಕಾರು, ಸ್ಕೂಟರ್, ಬೈಕುಗಳ ಎಡೆಯಲ್ಲಿ ಸಿಕ್ಕಿ ಹಾಕಿಕೊಳ್ಳದೆ ಜೀವಸಹಿತ ಮನೆಗೆ ಹಿಂದಿರುಗಬೇಕಾಗಿತ್ತು. ಹಾಗಾಗಿ, ನಿಧಾನವಾಗಿ ಹೋಗುತ್ತಾ ಇದ್ದೆ.

ಇದ್ದಕ್ಕಿದ್ದ ಹಾಗೆ ಬಹಳ ಸಮೀಪದಿಂದ ಕಿಲಕಿಲ ನಗು ಕೇಳಿಸಿತು. ನಕ್ಕದ್ದು ಖಂಡಿತವಾಗಿಯೂ ಯಾರೋ ಹುಡುಗಿ ಎಂದು ನನ್ನ ಮುದಿಕಿವಿ ಕೂಡಾ ಪತ್ತೆ ಹಚ್ಚಿತು. “ಯಾರಾದರೂ ಇರಲಿ, ನನಗೇನು?” ಎಂದುಕೊಂಡೆ: ಬಗ್ಗಿಸಿದ ಕತ್ತೆತ್ತದೆ ನಡಿಗೆ ಮುಂದುವರಿಸಿದೆ.

“ಏನು ಅಂಕಲ್, ಹಾಗೇ ಹೋಗ್ತಾ ಇದ್ದೀರಿ ?” ಪ್ರಶ್ನೆಯೂ ಬಂತು. ನನ್ನನ್ನೇ ಕೇಳಿರಬೇಕು. ನೋಡಿಯೇ ಬಿಡೋಣ ಎಂದೆ. ಕತ್ತು ಹೊರಳಿಸಿ ನೋಡಿಯೂ ನೋಡಿದೆ.

ಅರೆ! ಹೆಲ್ಮೆಟ್ಟಿನಿಂದ ಮುಚ್ಚಿದ್ದ ತಲೆಯ ಗುರುತಾಗಲಿಲ್ಲವಾದರೂ ಧರಿಸಿದ್ದ ಚೂಡಿದಾರ್ ಸ್ಟೈಲ್ ಎಲ್ಲೋ ನೋಡಿದ ಹಾಗಿತ್ತು. ಬಾಯಿಬಿಟ್ಟೆ. ಧೈರ್ಯವಾಗಿ “ಏನಮ್ಮಾ?” ಎಂದು ವಿಚಾರಿಸಿಯೂ ಬಿಟ್ಟೆ. ಹುಡುಗಿ ಯಾರಾಗಿರಬಹುದು ?

“ಗುರ್‍ತು ಸಿಕ್ಲೇ ಇಲ್ಲ, ಅಲ್ವಾ ಅಂಕಲ್?” ಎನ್ನುತ್ತಾ ಹುಡುಗಿ ಹೆಲ್ಮೆಟ್ ಕಳಚಿ ಇನ್ನೊಮ್ಮೆ ನಕ್ಕಾಗ ನೋಡುತ್ತೇನೆ -

ಅವಳೇ ! ನಮ್ಮ ನೆರೆಯ ಉದ್ಗಾರಿ ನಂ.೧ ಮಹನೀಯರ ಮೊಮ್ಮಗಳು! ದಿನಂಪ್ರತಿ ಭುರ್‍ರಂತ ಟಿ.ವಿ.ಎಸ್.ಹಾರಿ ಏರಿ ಕಾಲೇಜಿಗೆ ಓಡಿಸುತ್ತಾ ಇದ್ದವಳು- ಇಲ್ಲಿ, ಈ ದಾರಿ ಬದಿಯಲ್ಲಿ, ಅದೂ ಇಷ್ಟು ಹೊತ್ತಿಗೆ, ಯಾಕೆ ನಿಂತಿದ್ದಾಳೆ?

ಆಚೀಚೆ ಕಣ್ಣು ಹಾಯಿಸಿದೆ. ಅವಳ ಉರುಳುಬಂಡಿ ಎಲ್ಲೂ ಕಾಣಿಸಲಿಲ್ಲ. ಮತ್ತೆ ಹೆಲ್ಮೆಟ್ ಯಾಕೆ ತಲೆಯಲ್ಲಿ?

ನನ್ನಲ್ಲೆದ್ದ ಸಮಸ್ಯಾಪ್ರಶ್ನೆಗಳೆಲ್ಲವನ್ನೂ ಊಹಿಸಿದವಳ ಹಾಗೆ -

“ಬೈಕ್ ಇಲ್ಲ ಅಂಕಲ್.. ರಿಪೇರಿಗೆ ಕೊಟ್ಟು ನಾಲ್ಕು ದಿವಸ ಆಯ್ತು. ಇನ್ನೂ ಆಗಿಲ್ಲ-ಆಗಿಲ್ಲ ಅಂತ ಹೇಳ್ತಾನೇ ಇದ್ದಾನೆ. ಈವತ್ತು ನಾಳೇ ಅಂತ ಪ್ರತಿ ದಿವ್ಸವೂ ಬಂದು ಹೋಗುವುದೇ ಕೆಲಸ ಆಯ್ತು. ಈ ಹೆಲ್ಮೆಟ್ ಆದರೂ ಬಿಟ್ಟು ಹೋಗ್ತೇನೆ ಅಂದ್ರೆ ಅದಕ್ಕೂ ಒಪ್ಲಿಲ್ಲ. ಅದನ್ನೂ ಕಾಲೆಜಿಗೆ ತೆಕ್ಕೊಂಡು ಹೋಗಿ ಫ್ರೆಂಢ್ಸ್ ಎಲ್ಲಾ ತಮಾಷೆ ಮಾಡುವ ಹಾಗಾಗಿದೆ...” ವರ್ಣನೆ ಮುಂದುವರಿಯುತ್ತಿದ್ದ ಹಾಗೆ ನಗುಮುಖ ಅಳುಮೂಂಜಿ ಆಗುತ್ತಾ ಬಂತು. ಆದರೂ ಉಪಾಯವಿಲ್ಲದೆ-

“ಅದನ್ನು ತಲೆಯಲ್ಲೇ ಯಾಕೆ ಹೊರ್‍ತಿಯಮ್ಮಾ ಕೈಯಲ್ಲಿ ಹಿಡ್ಕೊಳ್ಬಾರ್‍ದಾ?” ಎನ್ನಲೇ ಬೇಕಾಯಿತು. “ಇದೂ.... ನನ್ನನ್ನು ಯಾರೂ ಗುರ್‍ತು ಹಿಡಿಯದ ಹಾಗೆ ಮಾಡಿದ ಉಪಾಯ” ಎಂಬ ಉತ್ತರವೂ ಸಿಕ್ಕಿತು. ಇನ್ನೀಗ ಏನು ಮಾಡುವುದು ಕಾಲೇಜಿಗೆ ಹೋಗ್ತೀಯೋ -ಅಲ್ಲ ಮನೆಗೋ? ಎಂದು ವಿಚಾರಿಸಿದೆ.

ಇಷ್ಟು ಲೇಟಾಗಿ ಕಾಲೇಜಿಗೆ ಹೋಗಿ ಮಾಡುವುದೇನಿದೆ, ಮಣ್ಣು !

ಮನೆಗೇ ಹೋಗ್ತೇನೆ ಎಂದವಳಿಗೆ -ನಡಿ ಹಾಗಾದ್ರೆ ನಾನೂ ನಿನ್ನ ಜೊತೆಗೆ ಬರುತ್ತೇನೆ ಎಂದಾಗ ಖುಷಿಯೋ ಖುಷಿ. ಒಳ್ಳೇದಾಯ್ತು... ಬನ್ನಿ ಹೋಗುವಾ ಎಂದು ಹೊರಟೇ ಬಿಟ್ಟಳು. ಪಯಣದ ದಿಕ್ಕು ಬದಲಾಯಿಸಿ “ಸ್ವಲ್ಪ ನಿಧಾನ ನಡಿಯಮ್ಮಾ. ನಿನ್ನಷ್ಟು ಬೇಗ ನಡೀಲಿಕ್ಕೆ ಆಗುವುದಿಲ್ಲ” ಎಂದು ಅವಳೊಂದಿಗೆ ಹೆಜ್ಜೆ ಹಾಕಿದೆ.

ಅವಳ ಖುಷಿಯ ಹಿನ್ನೆಲೆ ಹೇಗೂ ಗೊತ್ತಿತ್ತು. ನನ್ನಿಂದ ಹಳೆ ಕಥೆಗಳನ್ನು ಕೇಳಿಸಿಕೊಳ್ಳುವ ಚಪಲ ಅವಳಿಗೂ ಇತ್ತು. ಬಹಳ ಹುಷಾರಾಗಿ ನನ್ನನ್ನು ರಸ್ತೆ ದಾಟಿಸಿ, ವಾಹನಗಳ ಭರಾಟೆ ಅಷ್ಟೊಂದಿಲ್ಲದ ನಮ್ಮ ಓಣಿ ಬರುವವರೆಗೂ ತಾಳ್ಮೆಯಿಂದ ಕಾದು, “ಇನ್ನು ಹೇಳಿ ಅಂಕಲ್, ನಿಮ್ಮ ಕಾಲದ ಗರಾಜಿನವರ ಕಥೆ - ಒಂದೆರಡು” ಎಂದಳು. ಅವಕಾಶಕ್ಕಾಗಿಯೇ ಕಾದಿದ್ದ ನಾನು - ಕಥೆ ಪ್ರಾರಂಭಿಸಿದೆ.

ಈ ‘ಗೇರೇಜು’ - ವರ್ಕುಶೋಪು - ಮೆಕ್ಯೇನಿಕ್ಕುಗಳ ಕಥೆಯೋ, ಹೇಳಿ ಪ್ರಯೋಜನ ಇಲ್ಲ ಮಗೂ... ಹಿಂದೆ... ಅಂದ್ರೆ ನಮ್ಮ ಹಾಗಿರುವವರೆಲ್ಲಾ ಮಂಗಳೂರು ಸೇರುವ ಬಹಾಳ ಮೊದಲು... ವಾಹನಗಳೂ ಬಹಳ ಕಡಿಮೆ ಇದ್ದುವು........ ಡಾಮಾರು ರಸ್ತೆಗಳೂ ಇಲ್ಲದಿದ್ದಾಗ -

ಹಂಪನಕಟ್ಟೆ, ಮೈದಾನ ರಸ್ತೆ, ಕೊಡಿಯಾಲಬೈಲು, ಜೆಪ್ಪುಗಳಲ್ಲಿ ಮೂರ್‍ನಾಲ್ಕು ದೊಡ್ಡ ವರ್ಕ್‍ಶಾಪ್‍ಗಳೂ, ಬೇರೆ ಕೆಲವು ಕಡೆ ಒಬ್ಬಿಬ್ಬರು ಚಿಲ್ಲರೆ ಮೆಕ್ಯಾನಿಕ್‍ಗಳೂ ಇದ್ದವು - ಇದ್ದರು ಅಂತ ಹೇಳುತ್ತಾರೆ. ಆಗ ಕೂಡಾ, ಕೆಟ್ಟುಹೋದ ವಾಹನಗಳು ಸರಿಯಾಗಬೇಕಾದರೆ, ಅವರ ಮರ್ಜಿ ಕಾಯದೆ ಬೇರೆ ದಾರಿಯೇ ಇರಲಿಲ್ಲವಂತೆ. ಕೂಡ್ಲೆ ಜಟ್‍ಪಟ್ ಆಗಿ ರಿಪೇರಿ ಮಾಡಿ ಕೊಡಲು ಒಪ್ಪಿದ ಕೆಲಸಗಳಿಗೂ ವಾರಗಟ್ಟಲೆ ಸಮಯ ತೆಗೆದುಕೊಳ್ಳುವ ಅಭ್ಯಾಸ ಆಗಲೂ ಇತ್ತಂತೆ. ಅಭ್ಯಾಸ, ಹತ್ತೈವತ್ತರಷ್ಟಿದ್ದ ಕಾರ್ -ಬಸ್‍ಗಳಿಗೇ ಆಗಲಿ, ಇದ್ದ ನಾಲ್ಕೈದು ಮೋಟರ್ ಸೈಕಲಿಗಾಗಲಿ, ಸಮಪ್ರಮಾಣದಲ್ಲೇ ಅನ್ವಯವಾಗುತ್ತಿತ್ತಂತೆ. ವಾಹನ ರಿಪೇರಿ ಮಾಡಿ ಯಾವಾಗ ಕೊಡಬಹುದು ಎಂದು ಹೇಳುವುದೇ ಕಷ್ಟ, ಒಂದು ವೇಳೆ ಹೇಳಿದರೆ - ಹೇಳಿದ ದಿನ ಕೊಡದೆ ಇರುವುದಂತೂ ಗ್ಯಾರಂಟಿ ಎಂಬ ಪರಿಸ್ಥಿತಿಯಂತೆ.

ಆದರೆ, ಏನು ಮಾಡುವುದು ಬೇರೆ ಯಾವ ದಾರಿಯೂ ಇಲ್ಲದೆ ವಾಹನಗಳ ಮಾಲೀಕರು ಅದನ್ನು ಸೊಲ್ಲೆತ್ತದೆ ಸಹಿಸಿಕೊಂಡಿದ್ದರಂತೆ.

ನಾವು ಮಂಗಳೂರು ಸೇರುವ ಹೊತ್ತಿಗೆ, ಕಾಲ ಬದಲಿತ್ತು. ರಸ್ತೆಗಳು ‘ತಾರು’ ಕಂಡಿದ್ದವು. ಕಾರು,ಬಸ್ಸುಗಳೂ ಹೆಚ್ಚಾಗಿದ್ದವು.ಡಾಕ್ಟ್ರ ಸರ್ಕಲಿನಲ್ಲಿದ್ದ ಸುಬ್ರಾಯ ನಾಯಕರ ‘ರೋಯಲ್ ಎನ್‍ಫೀಲ್ಡ್’ ಮೋಟರ್ ಸೈಕಲ್‍ಗಳ ಜೊತೆಗೆ ಸಂಜೀವ ನಾಯಕರ ‘ಲ್ಯಾಂಬ್ರೆಟ್ಟಾ’ಗಳೂ ರಸ್ತೆಗಳಲ್ಲಿ ಸುತ್ತಾಡತೊಡಗಿದ್ದವು. ಅಂಬಾಸಿಡರ್, ಫಿಯೆಟ್, ಸ್ಟೆಂಡಾರ್ಡ್‍ಗಳ ಹೆಸರುಗಳೇ ರಾರಾಜಿಸುತ್ತಿದ್ದವು.

ಎಡ್ವಾನ್ಸ್ ಬುಕಿಂಗ್ ಇತ್ಯಾದಿ ತರಳೆ ಮುಗಿಸಿದ ಗಿರಾಕಿಗೆ ಹೊಸ ವಾಹನ ಮಾರುವಾಗ ಕೊಟ್ಟ ಸರ್ವಿಸ್ ಗ್ಯಾರಂಟಿ -ಗೀರಂಟಿಗಳ ಅವಧಿಯಲ್ಲಿದ್ದ ‘ಸಿಸ್ಟಂ’ಗಳು, ವಾಹನಗಳು ಮಾಲಿಕರ ಸ್ವಂತ ಖರ್ಚಿನಲ್ಲೇ ರಿಪೇರಿಯಾಗಬೇಕಾದ ಹೊತ್ತು ವಾಹನಗಳಿಂದ ಮಾಯವಾಗುತ್ತಿದ್ದ ಅನುಭವ ಎಷ್ಟೋ ಮಂದಿಯಿಂದ ಕೇಳಿ ಬರುತ್ತಿತ್ತು. ‘ಜಾಬ್‍ಕಾರ್ಡ್’ - ‘ಡ್ಯೂ ಡೇಟ್’ ಇತ್ಯಾದಿ ಶಬ್ದಗಳೆಲ್ಲ, ಇಂಗ್ಲಿಷ್ ಅರ್ಥ ತಿಳಿಯದ ಮರಿ ಮೆಕ್ಯಾನಿಕ್‍ಗಳಿಗೂ ಬಾಯಿಪಾಠವಾಗಿತ್ತು - ಆಚರಣೆ ಅನಗತ್ಯವಾದ ಕಾರಣ - ಬರಹೇಳಿದ್ದ ದಿನವೇ ಹೋದರೆ “ಇನ್ನೂ ಸಣ್ಣ ಚಿಲ್ಲರೆ ಕೆಲಸ ಮಾತ್ರ ಬಾಕಿ ಇದೆ.... ನಾಳೆ ಬರುತ್ತೀರಾ” ಎನ್ನುವ ಧ್ವನಿಮುದ್ರಿಕೆ ಎಲ್ಲ ಕಡೆಯಲ್ಲೂ ಕೇಳಿಸುತ್ತಿತ್ತು.

ಅನಂತರದ ದಿನಗಳಲ್ಲಿ,ವಾಹನಕ್ಕಾಗಿ ದುಡ್ಡುಕಟ್ಟಿ ವರ್ಷಗಟ್ಟಲೆ ಕಾಯಬೇಕಾದ ತೊಂದರೆ ತಪ್ಪಿತು. ಕಾಯಲು ತಾಳ್ಮೆಯಿಲ್ಲದವರು ‘ಬ್ಲೇಕಿನಲ್ಲಿ’ ಖರೀದಿಸಬೇಕಾದ ಪರಿಸ್ಥಿತಿ ಬದಲಿ, “ಕಾಸು ಕೊಡಿ, ಕೀ ತೆಗೆದುಕೊಳ್ಳಿ” ಹಂತಕ್ಕೆ ಬಂದಾಗ ವಾಹನಗಳ ಬಿಡಿಭಾಗದ ಅಂಗಡಿಗಳ ಮತ್ತು ಮೆಕ್ಯಾನಿಕ್ ಗರಾಜ್‍ಗಳ ಸಂಖ್ಯೆಯೂ - ಕುಲಗೆಟ್ಟ.... ರಸ್ತೆಗಳ ಹೊರತಾಗಿಯೂ- ಹೆಚ್ಚುಹೆಚ್ಚಾಗುತ್ತಾ ಹೋಯಿತು.

“ಮತ್ತೆ ಬಾ - ಹೋಗಿ ಬಾ - ನಾಳೆ ಬಾ” ಧ್ವನಿಗಳು ಮಾತ್ರ ಉಳಿದವು. ಎಷ್ಟು ಅರ್ಜೆಂಟ್ ಮಾಡಿದರೂ, “ನೋಡಿ, ಇದೊಂದು ಗಾಡಿ ದೂರದಿಂದ ಬಂದು ಒಂದು ವಾರ ಆಯಿತು.ಇದರ ಕೆಲಸ ಮಾಡದೆ ಉಪಾಯವೇ ಇಲ್ಲ. ನೀವು ಇಲ್ಲಿಯವರೇ ಅಲ್ವಾ? ನಾಳೆ ಬನ್ನಿ. ಖಂಡಿತವಾಗಿಯೂ ನಿಮ್ಮ ಗಾಡಿ ರೆಡಿ ಇರ್‍ತದೆ.” ಎಂಬ ‘ಟೇಪ್’ಗಳೂ ಉಳಿದುಕೊಂಡವು.

“ನಿನಗಾದ ಅನುಭವವೂ ಅದೇ ಅಲ್ವಾ ಮಗೂ..” ಮನೆ ಸಮೀಪಿಸಿತ್ತು.

“ಹೌದು ಅಂಕಲ್, ನಿಮ್ಮ ಲಟಾರಿ ಸ್ಕೂಟರಿಗೂ ಅದೇ - ನನಗೂ ಅದೇ. ನೋ ಚೇಂಜ್ ಎಟಾಲ್ ! .. ಟಾ ಟಾ..ಬರ್‍ತೇನೆ” ಎಂದು ಮನೆಗೋಡಿದ ಕಾಲೇಜ್ ಕನ್ಯೆಯ ಹೆಸರು ನಿಮಗ್ಯಾಕೆ?

-----
ಶ್ರೀ ಪದ್ಯಾಣ ಗೋಪಾಲಕೃಷ್ಣ ( ಪ.ಗೋ.)
ಶ್ರೀ ಪದ್ಯಾಣ ಗೋಪಾಲಕೃಷ್ಣ ( ಪ.ಗೋ. ೧೯೨೮ - ೧೯೯೭ ) - ಹುಟ್ಟೂರು ಗಡಿಯಂಚಿನಲ್ಲಿರುವ ಅಡ್ಯನಡ್ಕ. ೧೯೫೬ ರಿಂದ ೧೯೯೭ನೇ ಇಸವಿಯವರೆಗೆ ನಾಲ್ಕು ದಶಕಗಳಷ್ಟು ಧೀರ್ಘ ಕಾಲಾವಧಿಯಲ್ಲಿ ಹಲವು ಕನ್ನಡ ಪತ್ರಿಕೆಗಳ ಉಪಸಂಪಾದಕ, ವರದಿಗಾರರಾಗಿದ್ದ ಪ.ಗೋ.ರವರು ೧೯೬೩ರಿಂದ ಸುಮಾರು ಎರಡು ವರ್ಷಗಳ ಕಾಲ ಮಂಗಳೂರಿನಿಂದ ತಮ್ಮ ಸ್ವಂತ ಕನ್ನಡ ದಿನ ಪತ್ರಿಕೆ "ವಾರ್ತಾಲೋಕ"ದ ವರದಿಗಾರ, ಮುದ್ರಕ ಮತ್ತು ಪ್ರಕಾಶಕರಾಗಿ ನಡೆಸಿ ಪತ್ರಿಕೋದ್ಯಮದ ಎಲ್ಲಾ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದವರು. ಜೊತೆಗೆ ೧೩ ಪತ್ರಿಕೆಗಳಿಗೆ ಆಗಾಗ "ಕಾಲಂಕಾರ"ರಾಗಿ ಸುಮಾರು ನಾಲ್ಕು ಸಾವಿರ ಪುಟಗಳಿಗೂ ಮಿಕ್ಕಿದ ಕಾಲಂ ಸಾಹಿತ್ಯ ಪ್ರಸ್ತುತ ಪಡಿಸಿದ ಪ. ಗೋ. ಅವರಿಗೆ ಇದ್ದುದನ್ನು ಸರಳವಾಗಿ ಹೇಳುವ ರೂಢಿಯೇ ಇಲ್ಲ. ಅವರದೆಲ್ಲವೂ ವ್ಯಂಗ್ಯ ದಿಂದಲೇ ಪ್ರಾರಂಭ, ವ್ಯಂಗ್ಯದಿಂದಲೇ ಕೊನೆ! ಅವರು ಕೊಡುವ ಉದಾಹರಣೆಗಳು ಹಳೆಯ ನೀತಿ ಪದ್ಯಗಳನ್ನು ತಿರುಚಿಕೊಂಡು ಹುಟ್ಟಿಸುವ ವ್ಯಂಗ್ಯ ಮಾರ್ಮಿಕವಾದುದು.

ಪ. ಗೋಪಾಲಕೃಷ್ಣ ಸ್ಮಾರಕ ಸೇವಾ ಟ್ರಸ್ಟಿನ ವತಿಯಿಂದ ೨೦೦೨ನೆ ಇಸವಿಯಲ್ಲಿ ಮಂಗಳೂರಿನಿಂದ ಪ್ರಕಟಣೆಗೊಂಡ ಲೇಖನ ಮಾಲಿಕೆ "ನೋ ಚೇಂಜ್ ಕಥೆಗಳು". ಈ ೨೪ ಅಂಕಣಗಳ ಕಂಕಣವನ್ನು ಮರು ಪ್ರಕಟಿಸಲು ಅನುಮತಿಯನ್ನು ಇತ್ತ ಟ್ರಸ್ಟಿನ ಅಧ್ಯಕ್ಷರಾದ, ಪ.ಗೋ ರವರ ಸಹೋದ್ಯೋಗಿ, ಮಂಗಳೂರಿನ ಹಿರಿಯ ಪತ್ರಕರ್ತ ಶ್ರೀ. ಯು.ನರಸಿಂಹ ರಾವ್ ಮತ್ತು ಹುಟ್ಟೂರಿನ ಆಪ್ತ ಮಿತ್ರ, ಟ್ರಸ್ಟಿನ ಸ್ಥಾಪಕರಾದ ಬೆಂಗಳೂರಿನ ವೈದ್ಯ, ಲೇಖಕ ಡಾ. ಎಂ. ಬಿ. ಮರಕಿಣಿಯವರಿಗೆ ವಂದನೆಗಳು.

ಮಾಧ್ಯಮ ಮಿತ್ರ ಬೆಂಗಳೂರಿನ ವಿಜ್ಞಾನಿಯ ಪ್ರತಿಸ್ಪಂದನ



ಈಗ ಬರೆದಿದ್ದೇನೆ, ಏನು ವಿಶೇಷ?


ಗೆಳೆಯ ನಾಗೇಶರಾಯರಿಗೆ - ನಮಸ್ಕಾರಗಳು.



ಅತ್ತ ಕಡೆ ಬರಲೂ ಇಲ್ಲ - ಪತ್ರವನ್ನೂ ಬರೆಯಲಿಲ್ಲ ಎಂಬ ಸಿಟ್ಟು ಸಹಜವಾಗಿ ಇರಬಹುದು. ಈಗ ಬರೆದಿದ್ದೇನೆ, ಏನು ವಿಶೇಷ?




ವಾರ್ತಾಲೋಕ - ಇದೆ. ನಾನು ಇದ್ದೇನೆ. ಶ್ರೀ ಅನಂತಸುಬ್ಬರಾಯರಿಗೆ ನಮಸ್ಕಾರ ತಿಳಿಸಿ, ದಯವಿಟ್ಟು


ನಿಮ್ಮ



ಪ.ಗೋಪಾಲಕೃಷ್ಣ

10.4.64



ಇ-ಮೇಲ್, ಬ್ಲಾಗ್ ಯುಗದ ನಮ್ಮಂಥವರೂ ಸಹಾ ಕೇವಲ ಇಪ್ಪತ್ತು ವರ್ಷಗಳ ಹಿಂದೆ ಅಂಚೆಯ ಮೂಲಕವೇ communicate ಮಾಡುತ್ತಿದ್ದೆವು. ನಮ್ಮ ಹಿಂದಿನ ತಲೆಮಾರಿನವರು ಅಂಚೆ ಕಾರ್ಡಿನಲ್ಲಿ ಬರೆಯುತ್ತಿದ್ದರು. ಗೌಪ್ಯತೆಗೆ ಅಲ್ಲಿ ಅವಕಾಶವೇ ಇಲ್ಲ. ಕಚೇರಿ ಅಥವಾ ಮನೆಯ ವಿಳಾಸಕ್ಕೆ ಬಂದ ಕಾರ್ಡು ಕೈ ದಾಟಿದವರೆಲ್ಲರಿಂದಲೂ ಓದಿಸಿಕೊಳ್ಳುತ್ತಿತ್ತು. ಕೆಲವು ಪೋಸ್ಟ್ ಮನ್ ಗಳು ಅಂಚೆ ಕಾರ್ಡುಗಳನ್ನು ಓದುವುದು ತಮ್ಮ ಹಕ್ಕೆಂದೇ ಭಾವಿಸುತ್ತಿದ್ದರು.


ಆ ಮಾತು ಬದಿಗಿರಲಿ. ನನ್ನಪ್ಪ (ಸಂಯುಕ್ತ ಕರ್ನಾಟಕದ ನಿವೃತ್ತ ಸ್ಥಾನಿಕ ಸಂಪಾದಕ ಹೆಚ್.ಆರ್.ನಾಗೇಶರಾವ್) ನನಗೆ ಆಲದ ಮರದ ಬದಲು ಖನಿಜಭರಿತ ಗಣಿಯೊಂದನ್ನು ಬಿಟ್ಟು ಹೋಗಿದ್ದಾರೆ. ಅಕ್ರಮವೊ, ಸಕ್ರಮವೊ ಗೊತ್ತಿಲ್ಲ, ಉತ್ಖನನ ಮಾಡುತ್ತಿದ್ದೇನೆ. ಸಿಕ್ಕ ದಾಖಲೆಗಳನ್ನು ಯಾವುದೋ ಸಂದರ್ಭದಲ್ಲಿ ಅವರೊಂದಿಗೆ ನಡೆಸಿದ ಮಾತುಕತೆಯನ್ನು ನನ್ನ ನೆನಪಿನ ಗಣಿಯಿಂದ ಹೆಕ್ಕಿ ತೆಗೆದು ಜೋಡಣೆ ಮಾಡ ಹೊರಟಿದ್ದೇನೆ.


ಬೆಂಗಳೂರಿನ ಕನ್ನಡಪ್ರಭ, ಕಾರ್ಯನಿರ್ವಾಹಕ ಸಂಪಾದಕ ರವಿ ಹೆಗಡೆಯಂಥ ನನ್ನ ಮಾಜಿ ಕಂ ಹಾಲಿ ಮಿತ್ರರು (ಅವರ ಪ್ರಕಾರ ಆಲ್‍ಮೋಸ್ಟ್ ಮಾಜಿ, ನನ್ನ ಪ್ರಕಾರ ಇನ್ನೂ ಹಾಲಿ) ತಮ್ಮ Internet Inspectorಗಳ ನೆರವಿನಿಂದ ತನಿಖೆ ಆರಂಭಿಸಿ ಪತ್ತೆ ಹಚ್ಚುವ ಮೊದಲೇ ನನ್ನ ಆಸ್ತಿ declare ಮಾಡುತ್ತಿದ್ದೇನೆ!


ಹಿರಿಯ ಪತ್ರಕರ್ತ ಆತ್ಮೀಯ ಜಿ.ಎನ್.ಮೋಹನ್ ಪ.ಗೋ. ಬಗ್ಗೆ ಬರೆದಾಗಿನಿಂದ ಗುಂಗಿಹುಳವೊಂದು ನನ್ನನ್ನು ಕಾಡುತ್ತಿತ್ತು. ಪ.ಗೋ. ಬಗ್ಗೆ ನನ್ನ ತಂದೆ ಎಲ್ಲೋ, ಏನೋ ಹೇಳಿದ್ದ ನೆನಪು. ಡೀಟೇಲ್ಸ್, ರೆಫೆರೆಸ್ನ್ ಯಾವುದೂ ಸಿಕ್ತಾ ಇರ್ಲಿಲ್ಲ. ಜತೆಗೆ ಕಚೇರಿಯಲ್ಲಿ ಎಡೆಬಿಡದ ಕೆಲಸದ ಒತ್ತಡ, ಭಾನುವಾರವೂ ಸೇರಿದಂತೆ. ನಡುವೆ ಪಯಣದ ರೇಜಿಗೆ. ಒಂದು ಸಂಜೆ ಟ್ರಂಕಿನಲ್ಲಿ ಕಾಗದಗಳ ಬಂಚಿನ ನಡುವೆ ಸಿಕ್ಕದ್ದು ಪ.ಗೋ. ಅವರ ವಿವಾಹದ ಆಮಂತ್ರಣ ಪತ್ರಿಕೆ. ತಮಗೆ ಆತ್ಮೀಯರೆನಿಸಿದ್ದ ಪತ್ರಕರ್ತರೆಲ್ಲರ ವಿವಾಹ ಪತ್ರಿಕೆಗೆಳನ್ನು ಅಪ್ಪ ಸಂಗ್ರಹಿಸಿಟ್ಟಿದ್ದಾರೆ.


ನಿನ್ನೆ ಸಂಜೆ ಯಾವುದೋ ರಟ್ಟಿನ ಡಬ್ಬ ಬುಡಮೇಲು ಮಾಡುತ್ತಿದ್ದಾಗ ಸಿಕ್ಕ ಒಂದು ಕವರಿನ ಮೇಲ್ಗಡೆ P.Gopalakrishna ಎಂಬ ಉಲ್ಲೇಖವಿತ್ತು. ತೆಗೆದರೆ ಹತ್ತು ಹದಿನೈದು ಪತ್ರಗಳ ಸರಮಾಲೆ. ಕೆಲವು ಅಂಚೆ ಕಾರ್ಡುಗಳು - ಮತ್ತೆ ಕೆಲವು ಸುದೀರ್ಘ ಇನ್‍ಲೆಂಡ್ ಲೆಟರುಗಳು. ಬಾಕಿಯಿದ್ದ ಕಚೇರಿ ಕೆಲಸದ ನಡುವೆ ಎರಡು ಪತ್ರಗಳನ್ನು ಓದಿದೆ. ಹಾಗೆಯೇ ಒಂದೆರಡು ಚಿತ್ರಗಳನ್ನು ತೆಗೆದೆ. ಎಪ್ಪತ್ತರ ದಶಕದ ಆರಂಭದಲ್ಲಿನ ಪತ್ರಿಕೋದ್ಯಮದ ಬಗ್ಗೆ ಒಂದಷ್ಟು ಹೊಳಹು ಸಿಕ್ಕಿತು. ಕಣ್ಣೆಳೆಯುತ್ತಿತ್ತು ಮೇಜಿನ ಮೇಲೆ ಎಲ್ಲವನ್ನೂ ಹರಡಿ ಮಲಗಿದೆ.


ಕತ್ತಲೆ ಹರಿಯದ ಮುಂಜಾವು, ಕಚೇರಿಗೆ ಹೊರಡಲು ಅವಸರ. ತೋಚಿದಷ್ಟೇ ಗೀಚುತ್ತಿದ್ದೇನೆ.

ಸುದೀರ್ಘ ಪ್ರಸ್ತಾವನೆ, ಮುಂದೆ ಕಾದಿದೆ. ಪ.ಗೋ. ಪತ್ರಗಳಿಂದ ಹೆಕ್ಕಿ ತೆಗೆದ ಮಾಹಿತಿಯಿಂದ.

- ಹಾಲ್ದೊಡ್ಡೇರಿ ಸುಧೀಂದ್ರ, ಬೆಂಗಳೂರು.
















ಕನ್ನಡ ನಾಡಿನ ಹಿರಿಯ ಪತ್ರಕರ್ತ ’ಸುದ್ದಿಜೀವಿ’ ಶ್ರೀ. ಹೆಚ್.ಆರ್.ನಾಗೇಶರಾವ್ ಅವರ ಪುತ್ರ ಶ್ರೀ. ಹಾಲ್ದೊಡ್ಡೇರಿ ಸುಧೀಂದ್ರ. ಇಪ್ಪತ್ತೆರಡು ವರ್ಷಗಳ ಕಾಲ ಡಿ.ಆರ್.ಡಿ.ಓ.ದಲ್ಲಿ ವಿಜ್ಞಾನಿಯಾಗಿ ವಿಮಾನ ಎಂಜಿನ್‍ ಕ್ಷೇತ್ರದಲ್ಲಿ ಕಾರ್ಯಭಾರ.ಸಲ್ಲಿಸಿದ ಶ್ರೀಯುತರು ಪ್ರಸ್ತುತ ಎಚ್.ಎ.ಎಲ್.ನ ವಿಮಾನ ಸಂಧೋಧನೆ ಮತ್ತು ವಿನ್ಯಾಸ ಕೇಂದ್ರದಲ್ಲಿ ವಿಮಾನ ಎಂಜಿನ್ ಹಾಗೂ ಇಂಧನ ಪೂರೈಕೆ ವ್ಯವಸ್ಥೆ ವಿಭಾಗದ ಉಪ ಮಹಾಪ್ರಬಂಧಕ ಹಾಗೂ ಮುಖ್ಯಸ್ಥರು . ವಿಜ್ಞಾನ, ತಂತ್ರಜ್ಞಾನ ವಿಷಯಗಳ ಬಗ್ಗೆ ಲೇಖನ, ಅಂಕಣ ಅವರ ಹವ್ಯಾಸಗಳಲ್ಲಿ ಒಂದು.

ತಂತ್ರಜ್ಞಾನ ಕುರಿತು ಹಲವಾರು ಪ್ರಬಂಧಗಳನ್ನು ಮತ್ತು ಉಪನ್ಯಾಸಗಳನ್ನು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ವಿಜ್ಞಾನ ಸಮ್ಮೇಳನಗಳಲ್ಲಿ ಮಂಡಿಸಿದ ಶ್ರೀಯುತರು ಕನ್ನಡ ಭಾಷೆಯಲ್ಲಿ ವಿಜ್ಞಾನ-ತಂತ್ರಜ್ಞಾನ ಕುರಿತು ಪ್ರಜಾವಾಣಿ, ಸುಧಾ, ವಿಜಯ ಕರ್ನಾಟಕ ಮೊದಲಾದ ಕನ್ನಡ ಪತ್ರಿಕೆಗಳಲ್ಲಿ ಹಲವಾರು ಲೇಖನಗಳನ್ನು ಬರೆದಿದ್ದಾರೆ.



ಶೀರ್ಷಿಕೆಯ ೧೯೬೦ರ ದಶಕದ ಛಾಯಚಿತ್ರ:


ನಾಡಿನ ಹಿರಿಯ ಪತ್ರಕರ್ತ ಶ್ರೀ. ಹೆಚ್.ಆರ್.ನಾಗೇಶರಾವ್ ಅವರ ಸಂಗ್ರಹದಲ್ಲಿ ಲಭ್ಯವಾದ ಶ್ರೀ. ಪ. ಗೋ.ಬರೆದ ದಿನಾಂಕ ೧೦ ಏಪ್ರಿಲ್ ೧೯೬೪ರ ಪತ್ರ.
---

ಕೃಪೆ: ಗಲ್ಫ್ ಕನ್ನಡಿಗ

Visitors to this page