Tuesday, March 31, 2009

ಗತ ಕಾಲದ ಕನ್ನಡ ಲೇಖನ ಮಾಲಿಕೆಯ ಮರುಪ್ರಕಟನೆ.














ಭವಿಷ್ಯಕ್ಕೆ ಬಾರದ ಗಂಟು

ನಮ್ಮಜ್ಜ ಹೇಳಿದ್ದ ಹಾಗೆ ಆ ಕಾಲದಿಂದಲೇ ಹಣ ಉಳಿಸಿ ಗಂಟು ಕೂಡಿಸಿ ಇಟ್ಟಿದ್ದರೆ, ಈಗ ನಿನ್ನಂಥವನ ಎದುರು ಕೈಚಾಚುವ ಅಗತ್ಯವಿತ್ತೇನೊ ಮೂರು ಕಾಸಿನವನೆ ?

(ಪ್ರಾಯ ಸಂದ ಧ್ವನಿಯ) ಕಿರುಚಾಟ ಕೇಳಿಸಿತು. ಹೊರಜಗಲಿಗೆ ಬಂದೆ. ಸ್ವರ ಕೇಳಿಬರುತ್ತಿದ್ದ ಆಚೆಮನೆ ಅಂಗಳದ ಕಡೆ ಕಣ್ಣು ಹಾಯಿಸಿದೆ.

“ಕೂಡಿಟ್ಟ ಗಂಟು ಒಟ್ಟು ಮಾಡಿ ನಿನ್ನ ಮಗಳ ಪಾದಕ್ಕೆ ಒಪ್ಪಿಸೂ ಅಂತಲೂ ನಿನ್ನಜ್ಜ ಹೇಳಿರಲಿಲ್ವಾ ?” ಪ್ರಾಯದ ಹುಮ್ಮಸ್ಸಿನಿಂದ ಬಿರುಸಾಗಿದ್ದ ಸ್ವರದಲ್ಲಿ ಕೊಟ್ಟ ಉತ್ತರವೂ ಕೇಳಿಸಿತು.

ಎರಡು ಸ್ವರಗಳೂ ನನ್ನ ಪರಿಚಯದವು. ಸ್ವರ ಹೊರಡಿಸಿದವರ ಸ್ವಭಾವವೂ ಪರಿಚಿತವೇ. ‘ಒಂದು ರಚ್ಚೆಯಾದರೆ ಇನ್ನೊಂದು ಗೂಂಜು’ ಎನ್ನುವ ಗ್ರಾಮ್ಯ ನುಡಿಯ ಅರ್ಥ ಗೊತ್ತಿದ್ದವರಿಗೆ, ಬೇರೆ ವರ್ಣನೆ ಬೇಡ. ಅಂಥ ಹೊಂತಕಾರಿ ಯುವಕ - ಸಣ್ಣ ಪ್ರಾಯದಲ್ಲಿ ಅವನ ಹಾಗೇ ಇದ್ದು ಮೆರೆದ ಅವನ ದೊಡ್ಡಪ್ಪ. ಅವರೇ ಆಚೆ ಮನೆಯ ನಿವಾಸಿ ಮುಖ್ಯರು.

ಹಾಗಾದರೆ, ಅವರಿಬ್ಬರಲ್ಲಿ ಅದೇನು ಯಾವಾಗಲೂ ಜಗಳ ? ಅದನ್ನು ಪಂಚಾಯಿತಿಕೆ ಮಾಡಿ ಪರಿಹರಿಸುವವರು ಯಾರೂ ಇರಲಿಲ್ಲವೆ? ಎಂದೆಲ್ಲ ಪ್ರಶ್ನೆ ಕೇಳಬೇಡಿ, ದುಡ್ಡಿನ ಮಹತ್ವದ ಬಗ್ಗೆ ತಪ್ಪು ಕಲ್ಪನೆ- ಅದರ ಮೇಲೆ ವಾದವಿವಾದ, ಆ ಮನೆಯ ಎಲ್ಲ ತಲೆಮಾರುಗಳಲ್ಲೂ ಬೆಳೆದು ಬಂದ ಅಭ್ಯಾಸ ಎಂದು ಹಳೆತಲೆಗಳು ಆಡಿಕೊಳ್ಳುವುದನ್ನು ನಾನೇ ಕೇಳಿ, ಕೆಲವು ವರ್ಷಗಳ ಹಿಂದೆಯೇ ನಾನು ಕೇಳಿದ್ದೆ.

ಜಗಳವಾಗುತ್ತಿದ್ದುದು ಹಣ ಕೂಡಿಡಬೇಕು ಅಥವಾ ಬೇಡ ಎನ್ನುವುದರ ಬಗ್ಗೆ ಅಲ್ಲ. ಹಿರಿಯವನು ಕೂಡಿಟ್ಟದ್ದನ್ನು ಕಿರಿಯವನಿಗೆ ಕೊಡಬೇಕೆ ಬೇಡವೆ ಎನ್ನುವುದರ ಮೇಲೆ. ಅವನು “ಕೊಡುವುದಿಲ್ಲ - ಕೇಳುವ ಹಕ್ಕೂ ನಿನಗಿಲ್ಲ” ಎಂದು ಪಟ್ಟು ಹಿಡಿಯುವುದೂ, ಇವನು “ಕೊಡಲೇಬೇಕು- ಕೇಳುವ ಹಕ್ಕುದಾರ ನಾನೇ” ಎಂದು ಸಾಧಿಸುವುದೂ ತಲೆತಲಾಂತರದಿಂದ ನಡೆದು ಬಂದ ವಿದ್ಯಮಾನವಂತೆ.

ಜಗಳವಾಡಿ ಹಣ ಕಿತ್ತುಕೊಂಡ ಕಿರಿಯ ಕೂಡಾ ಅದನ್ನು ದುಂದುವೆಚ್ಚ ಮಾಡದೆ, ತನ್ನ ಉಳಿತಾಯದ ನಿಧಿಗೇ ಸೇರಿಸುತ್ತಿದ್ದ. ಮುಂದೆ ತಾನೂ ಹಿರಿಯನಾದಾಗ, ಅದನ್ನು ಕದನ -ಕಾದಾಟಗಳು ಹುಟ್ಟಿಕೊಂಡ ಮೇಲಷ್ಟೇ ಹಸ್ತಾಂತರ ಮಾಡುತ್ತಿದ್ದ ಎಂಬ ಪ್ರತೀತಿಯೂ ಇತ್ತು.

ಹಾಗೆ ನೋಡಿದರೆ, ಆ ಹಳೆ ಕಾಲದ ಮನೆ, ದುಡ್ಡಿದ್ದ ದೊಡ್ಡಪ್ಪಗಳ ಹಾಗೆ ಕಾಣಿಸುತ್ತಿರಲಿಲ್ಲ. ಈಗಿನ ಕಾಲದವರೆಗೆ ಅತೀ ಅಗತ್ಯವಾಗುವ ಯಾವ ಭೋಗಸಾಮಗ್ರಿಯೂ ಅಲ್ಲಿರಲಿಲ್ಲ. ಅದೇಕೆ ? ಎಂಬ ಸಹಜ ಪ್ರಶ್ನೆ ನನ್ನಲ್ಲಿ ಹುಟ್ಟಿಕೊಂಡರೆ, ತಪ್ಪಲ್ಲವಲ್ಲ ?
ಪ್ರಶ್ನೆ ಅಂದೇ ಹುಟ್ಟಿತು - ಇನ್ನೊಮ್ಮೆ. ಕೂಡಲೇ ಉತ್ತರ ಪಡೆಯುವ ಆತುರವೂ ಹೆಚ್ಚಿತು. ದೊಡ್ಡಪ್ಪನನ್ನೂ ‘ಮಗ’ನನ್ನೂ ಅದೇ ದಿನ - ಬೇರೆಬೇರೆಯಾಗಿ ಭೇಟಿ ಮಾಡಿ, ಗುಟ್ಟು ಹೊರಡಿಸುವ ಪ್ರಯತ್ನ ನಡೆಸಿದೆ.

ದೊಡ್ಡಪ್ಪನಿಂದ ಸಿಕ್ಕಿದ್ದು ಅವನ ಹಳೆಕಾಲದ ಕಥೆ. ತಮ್ಮನ ಮಗನಿಂದ ದೊರಕಿದ್ದು ಇತ್ತೀಚಿನ ಕಥೆ. ದೊಡ್ಡಪ್ಪನ ತಮ್ಮ ಅಲ್ಲಿ ಇದ್ದಿದ್ದರೆ, ನಡುಗಾಲದ ಕಥೆಯೂ ಸಿಗುತ್ತಿತ್ತೋ ಏನೋ !

ಖರ್ಚಿಗಿಂತ ಹೆಚ್ಚು ಆದಾಯ ಇರಬೇಕು ಎನ್ನಬಾರದು. ಖರ್ಚು ಕಡಿಮೆ ಮಾಡಿದರೆ ಉಳಿದದ್ದೇ ಆದಾಯವಾಗುತ್ತದೆ. ಆ ಉಳಿತಾಯವನ್ನು ಪ್ರತಿ ತಿಂಗಳೂ ಕೂಡಿ ಹಾಕಿದರೆ, ಅದುವೆ ಹನಿ ಕೂಡಿ ದೊಡ್ಡ ಹಳ್ಳವಾಗುತ್ತದೆ ಎಂಬ ತತ್ವವನ್ನು ಮನೆಯಲ್ಲೂ ಶಾಲೆಯಲ್ಲೂ ಕಲಿತಿದ್ದ ದೊಡ್ಡ ಉಳಿತಾಯಗಾರ -

ಉಳಿಸಿದ್ದನ್ನು ಬೆಳೆಸಲೂ ಬೇಕು ಎಂದುಕೊಂಡು, ನಾಲ್ಕಾಣೆ ಪಿಗ್ಮಿ, ಅಂಚೆ ಕಚೇರಿ ಖಾತೆ ಇತ್ಯಾದಿಗಳಲ್ಲಿ ಹಣ ತೊಡಗಿಸಿದ್ದಲ್ಲದೆ (ಆಗಿನ ಕಾಲಕ್ಕೆ) ದೊಡ್ಡದಾಗಿದ್ದ ಒಂದು ಸಾವಿರ ರೂ. ಮೊತ್ತಕ್ಕೆ ಒಂದು ಜೀವವಿಮಾಪಾಲಿಸಿ ಕೂಡಾ ಪಡೆದಿದ್ದ. ಹೊಟ್ಟೆ-ಬಟ್ಟೆ ಕಟ್ಟಿಯಾದರೂ ಅವುಗಳಿಗೆಲ್ಲಾ ಹಣ ತುಂಬುತ್ತಲೂ ಇದ್ದನೆಂಬ (ಸತ್ಯ) ಕಥೆ ಹೊರಬಂತು.

ಅದರೊಂದಿಗೆ, ಭವಿಷ್ಯ ನಿಧಿ (ಪ್ರಾವಿಡೆಂಟ್ ಫಂಡ್) ಹೆಸರಿನಲ್ಲಿ ಪ್ರತಿ ತಿಂಗಳೂ ತನ್ನ ಸಂಬಳದಿಂದ ‘ಕಟಾವು’ ಮಾಡಿಸಿಕೊಳ್ಳುತ್ತಿದ್ದ ಅವನ ತಮ್ಮನ ಕತೆಯನ್ನೂ ತಿಳಿದುಕೊಂಡೆ.

ಅವರಿಬ್ಬರ ಉಳಿತಾಯ ಆಗಿದ್ದುದು ಹಣದ ರೂಪದಲ್ಲೇ ಬೇರೆ ಯಾವುದೇ ವಸ್ತುವಿನ ರೂಪದಲ್ಲಿ ಅಲ್ಲವೆಂಬ ಅಂಶ ಮನದಟ್ಟಾಯಿತು. ವಸ್ತು ಒಡವೆಗಳನ್ನು ಕೊಂಡುಕೊಳ್ಳುವ ಆಸೆ ಆಗಾಗ ಮೂಡುತ್ತಿದ್ದರೂ, ‘ಕೂಡಿಟ್ಟ ಹಣ ಮುಗಿಯುತ್ತದೆ’. ಎನ್ನುವ ಕಾರಣಕ್ಕೆ ಆಸೆಯನ್ನು ಅದುಮಿ ಇಡುವ ಪರಿಸ್ಥಿತಿ ಅವರದಾಗಿತ್ತು.

ಇರುವ ಹಣದಿಂದ ಬರುವ ಬಡ್ಡಿಯಲ್ಲಿ ದಿನ ಕಳೆಯುವ ಲೆಕ್ಕಾಚಾರದಲ್ಲಿ ನಿಶ್ಚಿಂತೆಯಾಗಿದ್ದ ಅವರಿಬ್ಬರಿಗೂ ಚಿಂತೆ ಹುಟ್ಟಿಸಿದ್ದು, ‘ನಮ್ಮ ಹಣವನ್ನೆಲ್ಲಾ ನನ್ನ ಕೈಗೆ ಕೊಡಿ’ ಎಂಬ ಕಿರಿಯವನ ಹಠಾತ್ ಬೇಡಿಕೆ.

ನೋಡಿ ಇವರೇ, ನಾವಿಬ್ಬರೂ, ಹಿರಿಯರು ಹೇಳಿಕೊಟ್ಟ ಹಾಗೆ, ಸರಕಾರ ಹೇಳಿದ ಹಾಗೆ, ಮಾಡಿಕೊಂಡು ಬಂದಿದ್ದ ಉಳಿತಾಯದ ಗಂಟನ್ನು ಇವನೀಗ ಕೇಳುವುದು ಯಾವ ನ್ಯಾಯ ? ಇದ್ದದ್ದನ್ನೆಲ್ಲ ಅವನ ಕೈಗೆ ಕೊಟ್ಟು ನಾವು ಭಿಕ್ಷೆ ಬೇಡಲಿಕ್ಕೆ ಹೋಗಬೇಕೊ ? ನೀವೇ ಹೇಳಿ.

ಎಂಬ ಮಾತಿಗೆ ಕೂಡಲೇ ಉತ್ತರ ಕೊಡುವ ಪರಿಸ್ಥಿತಿಯಲ್ಲಿ ನಾನಿರಲಿಲ್ಲ. ‘ಮತ್ತೆ ಮಾತನಾಡೋಣ’ ಎಂದಷ್ಟೇ ಹೇಳಿದೆ. ಸ್ವಲ್ಪ ಹೊತ್ತು ಕಳೆದು, ಕಿರಿಯ ಸದಸ್ಯನನ್ನು ಪ್ರತ್ಯೇಕವಾಗಿ ಭೇಟಿಯಾದೆ.

‘ಏನಂತೆ ಆ ಮುದುಕರಿಗೆ ? ನಿಮ್ಮ ಹತ್ತಿರ ದೂರು ತರುವ ಅಗತ್ಯ ಏನಿತ್ತು ಅವರಿಗೆ ? ನೀವಾದರೂ ಈಗ ಏನು ಮಾಡಲು ಸಾಧ್ಯ ?’ ಎಂದೆಲ್ಲಾ ಆಕ್ರಮಣಕಾರಿ ಪ್ರಶ್ನೆಗಳನ್ನು ಒಮ್ಮೆಗೆ ತಡೆದು-

ಹಿರಿಯರ ಭಯದ ಹಿನ್ನೆಲೆ ವಿವರಿಸಿದೆ. ಜೊತೆಗೆ ಅವನ ಡಿಮಾಂಡ್‍ನ ಕಾರಣವನ್ನೂ ಕೇಳಿದೆ.

ದೊಡ್ಡ ನಗು ಹೊರಡಿಸಿದ ಆ ಕಿರಿಯ , ‘ಸ್ವಾಮೀ ಅವರಿಂದ ಸೆಳೆದ ಹಣವನ್ನು ನುಂಗಿ ಹಾಕುವ ಆಸೆ ನನಗಿಲ್ಲ. ಅವರು ಮಾಡಿದ ತಪ್ಪನ್ನು ಸರಿ ಮಾಡುವ ಒಂದೇ ಆಸೆ ಇದೆ. ಅದಕ್ಕೆ ಅವರು ಒಪ್ಪದೆ ಇದ್ದಾಗ ಜಗಳವಾಡಿದೆ. ಇನ್ನೂ ಆಡುತ್ತೇನೆ ಅವರು ಒಪ್ಪುವವರೆಗೂ’ ಎಂದ.

ಅವರದೇನು ತಪ್ಪು ? ಎಂದು ಕೇಳಿದಾಗ -

ವಸ್ತುಗಳ ಬೆಲೆ ಏರಿದಾಗ ಹಣದ ಬೆಲೆ ಇಳಿಯುತ್ತದೆ. ಆಗ ಕೂಡಿಟ್ತ ಹಣದ ಮೊತ್ತ ದೊಡ್ಡದಾಗಿ ಕಂಡರೂ ಅರ್ಥವಿಲ್ಲದಾಗುತ್ತದೆ. ಹಣದುಬ್ಬರ, ಬೆಲೆ ಹೆಚ್ಚಳ ಇತ್ಯಾದಿ ಶಬ್ದಗಳನ್ನು ನೀವು ಕೇಳಿಲ್ಲವೆ ? ೩೦ ವರ್ಷಗಳ ಹಿಂದೆ ಇಳಿಸಿದ್ದ ಜೀವವಿಮೆಯ ಮೊತ್ತದ ಒಂದು ಸಾವಿರ ರೂಪಾಯಿಗೆ ಈಗ ಎಷ್ಟು ಅಕ್ಕಿ ಸಿಕ್ಕುತ್ತದೆ ನನ್ನ ದೊಡ್ಡಪ್ಪನನ್ನೇ ಕೇಳಿ. ಅದಕ್ಕೇ, ಹಣ ನನ್ನ ಕೈಯಲ್ಲಿ ಕೊಡಿ. ಈಗಲಾದರೂ ಅದನ್ನು ‘ಬೆಲೆ ಇಳಿಯದ’ ರೀತಿಯಲ್ಲಿ ವಿನಿಯೋಗಿಸುತ್ತೇನೆ, ಎಂದಿದ್ದೇನೆ. ಅವರು ಅರ್ಥ ಮಾಡಿಕೊಳ್ಳಲಿಲ್ಲದಿದ್ದರೆ ನಾನೇನು ಮಾಡಲಿ ? ಎಂದ. ನನ್ನ ಬಾಯಿ ಮುಚ್ಚಿಸಿದ.


ಕೂಡಿಟ್ಟ ದೊಡ್ಡ ಮೊತ್ತ ಭವಿಷ್ಯದಲ್ಲಿ ಸಣ್ಣದಾಗುವುದೆ ? (ಪ್ರಶ್ನೆ ನನ್ನಲ್ಲೇ ಉಳಿಯಿತು.)



--------------------------------

ಶ್ರೀ ಪದ್ಯಾಣ ಗೋಪಾಲಕೃಷ್ಣ ( ಪ.ಗೋ. ೧೯೨೮ - ೧೯೯೭ ) - ಹುಟ್ಟೂರು ಗಡಿಯಂಚಿ ನಲ್ಲಿರುವ ಅಡ್ಯನಡ್ಕ. ೧೯೫೬ ರಿಂದ ೧೯೯೭ನೇ ಇಸವಿಯವರೆಗೆ ನಾಲ್ಕು ದಶಕಗಳಷ್ಟು ಧೀರ್ಘ ಕಾಲಾವಧಿಯಲ್ಲಿ ಹಲವು ಕನ್ನಡ ಪತ್ರಿಕೆಗಳ ಉಪಸಂಪಾದಕ, ವರದಿಗಾರರಾ ಗಿದ್ದ ಪ.ಗೋ.ರವರು ೧೯೬೩ರಿಂದ ಸುಮಾರು ಎರಡು ವರ್ಷಗಳ ಕಾಲ ಮಂಗಳೂರಿ ನಿಂದ ತಮ್ಮ ಸ್ವಂತ ಕನ್ನಡ ದಿನ ಪತ್ರಿಕೆ "ವಾರ್ತಾಲೋಕ"ದ ವರದಿಗಾರ, ಮುದ್ರಕ ಮತ್ತು ಪ್ರಕಾಶಕರಾಗಿ ನಡೆಸಿ ಪತ್ರಿಕೋದ್ಯಮದ ಎಲ್ಲಾ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದವರು. ಜೊತೆಗೆ ೧೩ ಪತ್ರಿಕೆಗಳಿಗೆ ಆಗಾಗ "ಕಾಲಂಕಾರ"ರಾಗಿ ಸುಮಾರು ನಾಲ್ಕು ಸಾವಿರ ಪುಟಗಳಿಗೂ ಮಿಕ್ಕಿದ ಕಾಲಂ ಸಾಹಿತ್ಯ ಪ್ರಸ್ತುತ ಪಡಿಸಿದ ಪ. ಗೋ. ಅವರಿಗೆ ಇದ್ದುದನ್ನು ಸರಳವಾಗಿ ಹೇಳುವ ರೂಢಿಯೇ ಇಲ್ಲ. ಅವರದೆಲ್ಲವೂ ವ್ಯಂಗ್ಯ ದಿಂದಲೇ ಪ್ರಾರಂಭ, ವ್ಯಂಗ್ಯದಿಂದಲೇ ಕೊನೆ! ಅವರು ಕೊಡುವ ಉದಾಹರಣೆಗಳು ಹಳೆಯ ನೀತಿ ಪದ್ಯಗಳನ್ನು ತಿರುಚಿಕೊಂಡು ಹುಟ್ಟಿಸುವ ವ್ಯಂಗ್ಯ ಮಾರ್ಮಿಕವಾದುದು.



ಪ.ಗೋ. ಅವರು ಬರೆದ ೨೪ ಅಂಕಣಗಳ ಕಂಕಣ" ನೋ ಚೇಂಜ್ ಕಥೆಗಳು". ಈ ಬರಹಗಳನ್ನು ಅವರ ಸ್ಮಾರಕಾರ್ಥವಾಗಿ ’ಗಲ್ಫ್ ಕನ್ನಡಿಗ’ದಲ್ಲಿ ಪ್ರತಿ ಗುರುವಾರ ಪ್ರಕಟಿಸಲಾಗುತ್ತಿದ್ದು ಇದು ಹತ್ತನೇ ಅಂಕಣ.



http://www.gulfkannadiga.com/news-4233.html

Visitors to this page